Sydney Diary : ‘ಹೀಗೆ ನನಗೆ ಪ್ರತಿ ರಾತ್ರಿ ಎಂಬತೈದು ಸಾರಿ ಎಚ್ಚರವಾಗುತ್ತಿತ್ತು!‘

Sleepiness : ಮರುದಿನ ಮದುವೆಯಲ್ಲಿ ನಾವೆಲ್ಲಾ ಅಕ್ಕಿಕಾಳು ಹಾಕಲು ಸುತ್ತ ನಿಂತಿದ್ದರೆ ‘ಮದುಲಿಂಗ’ ತೂಕಡಿಸುತ್ತಾ ಮದುವಣಗಿತ್ತಿಗೆ ತಾಳಿ ಕಟ್ಟುತ್ತಿದ್ದ. ಇಡಿಯ ಹೋಮ, ಪೂಜೆ, ಸಪ್ತಪದಿಗಳೆಲ್ಲ ತೂಕಡಿಕೆಯಲ್ಲೆ ಕಳೆದಿದ್ದ ಆತ. ಪ್ರತೀ ಸಾರಿ ಆತ ತೂಕಡಿಸಿದಾಗ ಜನ ಆತನನ್ನು ಚಪ್ಪಾಳೆ ತಟ್ಟಿ ಎಬ್ಬಿಸಿ ನಗುತ್ತಿರಲು ಆತ ಅವಮಾನ ತಡೆಯಲಾರದೆ ಮುಖ ಕೆಂಪು ಮಾಡಿಕೊಂಡು ನನ್ನ ಕಡೆಗೆ ನೋಡುತ್ತಿದ್ದ.

Sydney Diary : ‘ಹೀಗೆ ನನಗೆ ಪ್ರತಿ ರಾತ್ರಿ ಎಂಬತೈದು ಸಾರಿ ಎಚ್ಚರವಾಗುತ್ತಿತ್ತು!‘
ಸೌಜನ್ಯ : ಅಂತರ್ಜಾಲ
Follow us
|

Updated on:Sep 19, 2021 | 2:16 PM

ಸಿಡ್ನಿ ಡೈರಿ – Sydney Diary – 3 : ಅವರು ಹೇಳಿದ ಫಲಿತಾಂಶ ಊಹಿಸಲೂ ಆಗದಷ್ಟು ಆಘಾತಕಾರಿಯಾಗಿತ್ತು, ನನಗೆ ರಾತ್ರಿ ನಿದ್ದೆ ಮಾಡುವಾಗ ನನಗೆ ಗೊತ್ತಾಗದಂತೆ ಉಸಿರುಗಟ್ಟುತ್ತಿತ್ತು. ಇದರಿಂದಾಗಿ ಮಿದುಳಿಗೆ ನಿದ್ದೆಯ ಸಮಯದಲ್ಲಿ ಸರಿಯಾದ ಆಮ್ಲಜನಕ ಪೂರೈಕೆಯಾಗುತ್ತಿರಲಿಲ್ಲ. ಪೂರೈಕೆ ನಿಂತಾಗೆಲ್ಲ ಮಿದುಳಿಗೆ ಎಚ್ಚರವಾಗುತ್ತಿತ್ತು. ಹೀಗೆ ನನಗೆ ಪ್ರತಿ ರಾತ್ರಿ ಎಂಬತೈದು ಸಾರಿ ಎಚ್ಚರವಾಗುತ್ತಿತ್ತು! ಈ ಪದೇಪದೆ ಎಚ್ಚರವಾಗುವಿಕೆಯಿಂದಾಗಿ ನಾನು ಹತ್ತು ತಾಸು ನಿದ್ದೆ ಮಾಡಿದರೆ ಸರಿಯಾದ ನಿದ್ದೆ ಆಗುತ್ತಿದ್ದುದು ಐದೂವರೆ ತಾಸು ಮಾತ್ರ! ಇದೇ ಕಾರಣದಿಂದಲೇ ನನಗೆ ದಿನವಿಡೀ ಆ ಪರಿ ನಿದ್ದೆ ಬರುತ್ತಿದ್ದುದು. ರೋಜರ್ ನನಗೆ ನಿದ್ದೆ ಸರಿಯಾಗಿ ಬರಲು ಹೊಸದೊಂದು ಯಂತ್ರವನ್ನು ಕೊಟ್ಟರು. ಅದು ನನ್ನ ಉಸಿರಾಟದ ಕ್ರಿಯೆಯನ್ನು ಏರಿಳಿತಗಳನ್ನು ಮಾದರಿಯನ್ನು ಗಮನಿಸಿ ತಕ್ಕಂತೆ ನನ್ನ ಶ್ವಾಸಕೋಶದೊಳಗೆ ಗಾಳಿಯನ್ನು ನೂಕುತ್ತಿತ್ತು. ಶ್ರೀಹರ್ಷ ಸಾಲಿಮಠ

ಒಮ್ಮೆ ಗೆಳೆಯನ ಮನೆಗೆ ಹೋಗಿದ್ದೆ. ಆತನ ಜೊತೆ ಹಾಗೇ ಮಾತಾಡುತ್ತಾ ನಿದಾನಕ್ಕೆ ನಿದ್ದೆ ಹತ್ತಿತು. ಎದ್ದಕೂಡಲೇ ನನ್ನ ಗೆಳೆಯ “ಗುರುವೇ ನನ್ನ ಮೊಬೈಲ್ ನಲ್ಲಿ ಒಂದು ವಿಡಿಯೋ ಇದೆ ನಾನು ಬರೀ ಅದರ ಆಡಿಯೋ ಮಾತ್ರಿ ಕೇಳಿಸ್ತಿನಿ. ಅದು ಏನು ಸೌಂಡು ಅಂತ ಗೆಸ್ ಮಾಡಬೇಕು” ಅಂದ. ನಾನು ಒಪ್ಪಿಕೊಂಡೆ. ಆತ ಮೊಬೈಲ್ ಫೋನಿನ ಪರದೆಯನ್ನ ತನ್ನ ಕಡೆಗ ತಿರುಗಿಸಿಕೊಂಡು ವಿಡಿಯೋ ಪ್ಲೇ ಮಾಡಿದ. ಕರ್ಕಶವಾದ ಸದ್ದು ಕೇಳುತ್ತಿದ್ದಂತೆ ನಾನು “ನಿಲ್ಸು ಮಾರಾಯ. ಯಾವುದೋ ಸೈಲೆನ್ಸರ್ ರಿಪೇರಿಗೆ ಬಂದಿರೋ ಆಟೋ ಸದ್ದಿನ ತರಾ ಇದೆ” ಅಂದೆ. ಆತ ಒಂದೇ ಒಂದು ಮಾತನಾಡುವ ತೊಂದರೆಯನ್ನೇ ತೆಗೆದುಕೊಳ್ಳದೆ ನಸುನಗುತ್ತಾ ಮೊಬೈಲ್ ಪರದೆಯನ್ನು ನನ್ನೆಡೆಗೆ ತಿರುಗಿಸಿದ. ವಿಡಿಯೋದಲ್ಲಿ ನಾನು ನಿದ್ದೆ ಮಾಡುತ್ತಿದ್ದೆ. ಆ ಸದ್ದು ನನ್ನ ಗೊರಕೆಯದಾಗಿತ್ತು! ವಿಡಿಯೋ ನೋಡಿ ಮುಕ್ಕಾಲು ತಾಸು ಇಬ್ಬರೂ ಬಿದ್ದು ಬಿದ್ದು ನಕ್ಕಿದ್ದೆವು.

ನನ್ನ ಗೊರಕೆ ಬಹುಷಃ ಜಗತ್ತಿನ ಅತ್ಯಂತ ಶ್ರೇಷ್ಠ ಗೊರಕೆಯ ಸದ್ದು ಎನ್ನಿಸುತ್ತದೆ. ಏಕೆಂದರೆ ನಾನು ರೈಲಿನಲ್ಲಿ ಸ್ಲೀಪರ್ ಕ್ಲಾಸಿನಲ್ಲಿ ಪ್ರಯಾಣ ಮಾಡುವಾಗಲೂ ಅನೇಕರು ನನ್ನನ್ನು ಎಬ್ಬಿಸಿದ್ದಿದೆ. ಒಮ್ಮೆ ಬೆಂಗಳೂರಿನಿಂದ ಧಾರವಾಡಕ್ಕೆ ಗೆಳೆಯನ ಮದುವೆಗೆ ಅಂತ ಹೋಗುವಾಗ ಮದುಮಗನ ದುರಾದೃಷ್ಟಕ್ಕೆ ನನ್ನ ಪಕ್ಕದಲ್ಲೇ ಅವನ ಸೀಟು ನಿಗದಿಯಾಗಿತ್ತು. ಆ ದಿನ ರಾತ್ರಿ ಏನಿಲ್ಲವೆಂದರೂ ನನ್ನನ್ನು ಆತ ಏಳೆಂಟು ಸಾರಿ ನಿದ್ದೆಯಿಂದ ಎಬ್ಬಿಸಿದ. ನಾನು ಎಬ್ಬಿಸಿದ ಎರಡೇ ಸೆಕೆಂಡಿಗೆ ಮತ್ತೆ ನಿದ್ದೆ ಹೋಗುತ್ತಿದ್ದರೆ ಆತ ಎದ್ದವನು ಮತ್ತೆ ಮಲಗಲು ಅರೆತಾಸು ತೆಗೆದುಕೊಳ್ಳುತ್ತಿದ್ದ. ಆತನಿಗೆ ಮತ್ತೆ ನನ್ನ ಗೊರಕೆಯಿಂದ ಎಚ್ಚರವಾಗುತ್ತಿತ್ತು. ಮರುದಿನ ಮದುವೆಯಲ್ಲಿ ನಾವೆಲ್ಲಾ ಅಕ್ಕಿಕಾಳು ಹಾಕಲು ಸುತ್ತ ನಿಂತಿದ್ದರೆ ‘ಮದುಲಿಂಗ’ ತೂಕಡಿಸುತ್ತಾ ಮದುವಣಗಿತ್ತಿಗೆ ತಾಳಿ ಕಟ್ಟುತ್ತಿದ್ದ. ಇಡಿಯ ಹೋಮ, ಪೂಜೆ, ಸಪ್ತಪದಿಗಳೆಲ್ಲ ತೂಕಡಿಕೆಯಲ್ಲೆ ಕಳೆದಿದ್ದ ಆತ. ಪ್ರತೀ ಸಾರಿ ಆತ ತೂಕಡಿಸಿದಾಗ ಜನ ಆತನನ್ನು ಚಪ್ಪಾಳೆ ತಟ್ಟಿ ಎಬ್ಬಿಸಿ ನಗುತ್ತಿರಲು ಆತ ಅವಮಾನ ತಡೆಯಲಾರದೆ ಮುಖ ಕೆಂಪು ಮಾಡಿಕೊಂಡು ನನ್ನ ಕಡೆಗೆ ನೋಡುತ್ತಿದ್ದ. ನನಗೆ ಒಳಗೊಳಗೆ ಬಹಳ ಹೆಮ್ಮೆಯೆನಿಸುತ್ತಿತ್ತಾದರೂ ಒಂದೆರಡು ಬಾರಿ ಔಪಚಾರಿಕವಾಗಿ ವಿಷಾದ ವ್ಯಕ್ತಪಡಿಸಿ ಆಮೇಲೆ ಕಣ್ಣು ತಪ್ಪಿಸತೊಡಗಿದೆ. ಆತ ಮದುವೆ ಆದಂದಿನಿಂದ ಮತ್ತೆಂದೂ ನನ್ನನ್ನು ಮಾತನಾಡಿಸಲಿಲ್ಲ. ಆ ಮದುವೆಗೆ ಬಂದಿದ್ದ ಇತರ ಗೆಳೆಯರಾರೂ ನನ್ನನ್ನು ತಮ್ಮ ಮದುವೆಗೆ ಕರೆಯಲಿಲ್ಲ!

ಮೈಸೂರಿನಲ್ಲಿ ನಾವೆಲ್ಲ ಒಂದ್ಹತ್ತು ಜನ ಗೆಳೆಯರು ಒಬ್ಬ ಗೆಳೆಯನ ಮನೆಯಲ್ಲಿ ಉಳಿದುಕೊಂಡಿದ್ದೆವು. ಎಲ್ಲರಿಗೂ ಪಡಸಾಲೆಯಲ್ಲಿ ಮಲಗಲು ವ್ಯವಸ್ಥೆಯಾಗಿತ್ತು. ಎಂದಿನಂತೆ ನಾನು ಎಲ್ಲರಿಗಿಂತ ಕೊನೆಯಲ್ಲಿ ಮಲಗಿದೆ. ಮರುದಿನ ನಾನು ಎದ್ದು ನಿತ್ಯಕರ್ಮ ಮುಗಿಸಿ ಕಾಫಿ ಎಲ್ಲರೊಡನೆ ಕಾಫಿ ಕುಡಿಯುತ್ತಾ ಕುಳಿತಿದ್ದಾಗ ಗೆಳೆಯನ ತಂದೆ ಬಂದು “ಅಯ್ಯಾ ನಿನ್ ಮುಖಾ ಬಿಸಿ ಎಣ್ಣೆಯಾಗೆ ಹಾಕಿ ಕರಿಯಾ… ಅದೆಂಥಾ ಗೊರಕೆ ಮಾರಾಯಾ? ಅರವತ್ತು ವರ್ಷದ ಜೀವನದಾಗೆ ನೋಡಿರ್ಲಿಲ್ಲ. ಇಷ್ಟು ದಿನ ಯಾರಾದರೂ ಗೊರಕೆ ಹೊಡಿತಿದ್ರೆ ಹೋಗಿ ಅವರನ್ನ ಬದಿಗೆ ತಿರುಗಿಸಿ ಮಲಗಿಸ್ತಿದ್ದೆ ಗೊರಕೆ ಕಡಿಮೆ ಆಗಿರೋದು. ಇವನ್ನ ಹಾಗೆ ಬದಿಗೆ ತಿರುಗಿಸೋಣ ಅಂತಾ ಬಂದರೆ ಬದಿಗೆ ತಿರುಗಿನೆ ಗೋರಕೆ ಹೊಡಿತಿದಾನೆ! ಬದಿಗೆ ತಿರುಗಿ ಗೊರಕೆ ಹೊಡೆಯೋ ಜಗತ್ತಿನ ಏಕೈಕ ಪ್ರಾಣಿ ಇವನು” ಅಂತ ಕೂಗಾಡಿದರು. ನನಗೇನೂ ಅಂತಹ ಬೇಸರ ಎನಿಸಲಿಲ್ಲ. ಬದಲಾಗಿ ಅತ್ಯಪರೂಪದ ಗುಣವೊಂದು ನನ್ನಲ್ಲಿ ಅಡಕವಾಗಿದೆಯೆಂದು ಬಹಳ ಹೆಮ್ಮೆಯೇ ಅನ್ನಿಸಿತು!

ಮದುವೆಗಳಲ್ಲಿ ಹತ್ತು ಊರುಗಳಿಂದ ನೂರಾರು ಬೀಗರು ಬರುವುದರಿಂದ ಗೊರಕೆಯ ಜುಗಲ್​ಬಂದಿ  ಕೇಳಿಬರುವುದು ಸಾಮಾನ್ಯ. ನನ್ನ ಗೊರಕೆ ವಂಶಪರಂಪರಾಗತವಾಗಿ ಬಂದದ್ದು. ನನ್ನ ಅಜ್ಜಿ ಅಂದರೆ ನನ್ನ ತಂದೆಯ ತಂದೆ ಗೊರಕೆಯಲ್ಲಿ ದೊಡ್ಡ ಮಾಸ್ಟರ್ ಆಗಿದ್ದರು. ಯಾವುದಾದರೂ ಮದುವೆಯಲ್ಲಿ ನಮ್ಮ ಅಜ್ಜಿಯ ಏಳೂ ಜನ ಅಕ್ಕತಂಗಿಯರು ಸಾಲಾಗಿ ಮಲಗಿ ಒಬ್ಬರ ನಂತರ ಒಬ್ಬರು ಸರದಿಯಂತೆ ಗೊರಕೆ ಹೊಡೆಯುತ್ತಿದ್ದರೆ ಮುರುಡೇಶ್ವರದ ಸಮುದ್ರದಂಡೆಯ ಅಲೆಗಳಂತೆ ಸುಶ್ರಾವ್ಯ ಧ್ವನಿ ಬರುತ್ತಿತ್ತು. ಅವರ ಗೊರಕೆಯ ಟೈಮಿಂಗ್ ಎಷ್ಟು ಕರಾರುವಾಕ್ಕಾಗಿರುತ್ತಿತ್ತೆಂದರೆ ಒಬ್ಬರ ಗೊರಕೆ ಲ್ಯಾಂಡ್ ಆಗುತ್ತಿದ್ದಂತೆ ಇನ್ನೊಬ್ಬರ ಗೊರಕೆ ಟೇಕ್ ಆಫ್ ಆಗುತ್ತಿತ್ತು. ಈ ಲ್ಯಾಂಡಿಂಗ್ ಮತ್ತು ಟೇಕಾಫ್​ನ ಸದ್ದಿನ ನಡುವಿನ ಸಮಯದ ಅಂತರ ಕೂಡ ಒಮ್ಮೆಯೂ ವ್ಯತ್ಯಾಸವಾಗುತ್ತಿರಲಿಲ್ಲ! ಅಕ್ಕತಂಗಿಯರು ಜೀವನದಲ್ಲಿ ಎಷ್ಟು ಹೊಂದಾಣಿಕೆ ಮಾಡಿಕೊಂಡಿದ್ದರೋ ತಿಳಿಯದು ಆದರೆ ನಿದ್ದೆಯಲ್ಲಿ ಮಾತ್ರ ಹೊಂದಾಣಿಕೆ ಅನುರೂಪವಾಗಿತ್ತು.

Sydney Diary Sriharsha Salimat

ಸೌಜನ್ಯ : ಅಂತರ್ಜಾಲ

ನಮ್ಮ ಇಡಿಯ ಸಂಬಂಧಿಗಳ ನಡುವೆ ಇದರ ನಂತರ ಅತ್ಯಂತ ಪ್ರಸಿದ್ಧವಾಗಿದ್ದೆಂದರೆ ನನ್ನ ತಂದೆಯ ಗೊರಕೆ. ಅಜ್ಜಿಯರು ಮತ್ತು ತಂದೆ ಸಾಮಾನ್ಯವಾಗಿ ಸಂಬಂಧಿಕರೆಲ್ಲರ ಕಾರ್ಯಕ್ರಮಗಳಿಗೆ ಹೋಗುತ್ತಿದ್ದುದರಿಂದ ಮತ್ತು ನಾನು ಬಹುತೇಕ ಶಾಲೆ ಪರೀಕ್ಷೆಯ ಕಾರಣಗಳಿಂದ ಹೋಗುತ್ತಿರಲಿಲ್ಲವಾಗಿ ಉಳಿದವರಷ್ಟು ನನ್ನ ಗೊರಕೆ ಸಂಬಂಧಿಕರ ನಡುವೆ ಜನಜನಿತವಾಗಿರಲಿಲ್ಲ. ಆದರೆ ಗೆಳೆಯರ ನಡುವೆ ಮಾತ್ರ ನಾನು ಈ ವಿಷಯವಾಗಿ ವಿಶೇಷ ಖ್ಯಾತಿಗೆ ಈಡಾಗಿದ್ದೆ. ವರ್ಷಗಟ್ಟಲೆ ನನ್ನ ರೂಮ್​ಮೇಟುಗಳಾಗಿ ನನ್ನನ್ನು ಸಹಿಸಿಕೊಂಡ ಗೆಳೆಯರಿಗೆ ಎಷ್ಟು ಕೃತಜ್ಞತೆಗಳನ್ನು ಸಲ್ಲಿಸಿದರೂ ಸಾಲದು! ಅಪರೂಪಕ್ಕೊಮ್ಮೆ ತಮಾಷೆ ಮಾಡುತ್ತಿದ್ದುದು ಬಿಟ್ಟರೆ ಯಾರೂ ಸಹ ಬೇಸರ ಮಾಡಿಕೊಂಡದ್ದಾಗಲಿ ಸಿಟ್ಟು ಮಾಡಿಕೊಂಡದ್ದಾಗಲಿ ಇಲ್ಲ. ಹಾಗಾಗಿ ನನ್ನ ಗೊರಕೆ ಅಂತಹ ಭಯಾನಕವಾಗಿದೆ ಎಂಬುದರ ಅರಿವು ನನಗರಿವಿರಲಿಲ್ಲ. ಮೊದಲು ಹೇಳಿದ ಪ್ರಸಂಗದಲ್ಲಿ ಗೆಳೆಯ ರೆಕಾರ್ಡ್ ಮಾಡಿ ತೋರಿಸಿದ ದಿನದಿಂದ ನನಗೆ ನನ್ನ ಗೆಳೆಯರ ಬಗ್ಗೆ ಗೌರವ ಇನ್ನೂ ಹೆಚ್ಚಾಯಿತು!

ಗೊರಕೆಗೆ ಅನೇಕ ಕಾರಣಗಳಿವೆ ಅದರಲ್ಲೊಂದು ಉಸಿರಿನ ನಾಳ ವಕ್ರವಾಗಿರುವುದು. ಗೊರಕೆಯ ವಿಷಯವಾಗಿ ಸಾಕಷ್ಟು ಇಂಟರ್​ನೆಟ್​ ಬರಹಗಳು ಮತ್ತು ವಿಡಿಯೋಗಳಿರುವುದರಿಂದ ಹೆಚ್ಚನ ಆಳಕ್ಕೆ ನಾನು ಹೋಗುವುದಿಲ್ಲ. ಆದರೆ ನನಗೆ ಗೊರಕೆಯ ಹಿಂದೆ ಇದ್ದ ಅತಿ ದೊಡ್ಡ ಕಾರಣವೆಂದರೆ “Sleep Apnea” ಎಂಬ ದೈಹಿಕ ಕಟ್ಟುಪಾಡು. ಸ್ಲೀಪ್ ಆಪ್ನಿಯಾ ಅಂದರೆ ನಿದ್ದೆಯಲ್ಲಿ ಉಸಿರುಗಟ್ಟುವುದು. ನಾನು ಕಲಿಕೆಯಲ್ಲಿ ಸಾಕಷ್ಟು ಚುರುಕುತನ ತೋರಿದ್ದರೂ ವೃತ್ತಿ ಬೆಳವಣಿಗೆಯಲ್ಲಿ ಅತಿ ದೊಡ್ಡ ಅಡ್ಡಗಾಲಾಗಿದ್ದು ಈ ಸ್ಲೀಪ್ ಆಪ್ನಿಯಾ! ನನಗೆ ಎಲ್ಲರಿಗಿಂತ ಹೆಚ್ಚಿನ ಮಟ್ಟಿಗೆ ತಡೆಯಲಾರದ ನಿದ್ದೆ ಬರೋದು. ನಿದ್ದೆ ಮಾಡಿ ಎದ್ದರೂ ಸಹ ಇಡಿಯ ದಿನ ಒಂತರಾ ಮಬ್ಬು ಮಬ್ಬು. ಆಗಾಗ ಕಣ್ಣೆಳೆಯುವುದು.

ಕಾಲೇಜಿನಲ್ಲಿ ಪಾಠ ಕೇಳುವಾಗ ಮೊದಲನೆಯ ಅವಧಿಯಲ್ಲೇ ನಿದ್ದೆ ಹೋಗಿಬಿಡುತ್ತಿದ್ದೆ. ನನಗೆ ಕ್ಲಾಸಿನಲ್ಲಿ ನಿದ್ದೆಯ ಅದ್ಯಾವ ಪರಿಯ ಅಭ್ಯಾಸ ಆಗಿಹೋಗಿತ್ತೆಂದರೆ ನಾನು ಕಣ್ಣುಮುಚ್ಚುವುದು ಗೊತ್ತಾಗದಿರಲು ಯಾವ ಕೋನದಲ್ಲಿ ಕೂರಬೇಕು, ಕಣ್ಣು ಮುಚ್ಚಿರುವುದು ಪುಸ್ತಕದ ಕಡೆ ನೋಡುತ್ತಿರುವಂತೆ ಭಾಸವಾಗುವಂತೆ ಕೂರುವುದು, ನಿದ್ದೆ ಮಾಡುತ್ತಲೇ ಪೆನ್ನನ್ನು ಅಲ್ಲಾಡಿಸುವುದು, ಯೋಚನೆ ಮಾಡುತ್ತಿರುವಂತೆ ಭಾಸವಾಗುವಂತೆ ಕೂರುವುದನ್ನೆಲ್ಲ ಅಭ್ಯಾಸ ಮಾಡಿಕೊಂಡಿದ್ದೆ. ಇದು ಮುಂದ ವೃತ್ತಿಜೀವನದಲ್ಲೂ ಮೀಟಿಂಗ್​ಗಳಲ್ಲಿ ಬಹಳ ಮಟ್ಟಿಗೆ ಅನುಕೂಲವಾಯಿತು. ಎಲ್ಲರೂ ಸಹ ಕೆಲ ಕ್ಲಾಸ್​ಗಳಲ್ಲಿ ತಮಗೆ ನಿದ್ದೆ ಬರುವ ಬಗ್ಗೆ ತಮಾಷೆ ಮಾಡಿಕೊಳ್ಳುತ್ತಿದ್ದುದರಿಂದ ನನಗೆ ನನಗಿದ್ದ ಆಪ್ನಿಯಾದ ತೀವ್ರತೆ ಗೊತ್ತಾಗಿರಲಿಲ್ಲ. ನನ್ನ ಅತಿಯಾದ ನಿದ್ದೆ ಒಮ್ಮೊಮ್ಮೆ ಹತ್ತು ಹನ್ನೆರಡು ತಾಸುಗಳವರೆಗೆ ಹೋಗಿಬಿಡೋದು. ಒಮ್ಮೆ ಗೆಳೆಯರೊಬ್ಬರಿಗೆ “ನನಗೆ ಹಿಂಗೆ ಅತಿಯಾಗಿ ನಿದ್ದೆ ಬರುತ್ತದೆ ನೋಡಿ” ಅಂತ ದೂರಿದೆ. ಅದಕ್ಕೆ ಅವರು “ರೀ ಸ್ವಾಮಿ.. ಜಗತ್ತಲ್ಲಿ ಶೇ. 75 ರಷ್ಟು ಜನ ನಿದ್ದೆಯೇ ಬರಲ್ಲ ಅಂತ ಒದ್ದಾಡ್ತಾರೆ. ಅದರಲ್ಲಿ ನಾನೂ ಒಬ್ಬ. ನೀವು ಪುಣ್ಯವಂತರು ದೇವರ ಕೃಪೆ ಇದೆ. ಆರಾಮಾಗಿ ನಿದ್ದೆಮಾಡಿ” ಅಂದುಬಿಟ್ಟರು. ನನಗೆ ಪಡಬಾರದ ವಿಷಯಕ್ಕೆಲ್ಲ ಹೆಮ್ಮೆಪಟ್ಟುಕೊಳ್ಳುವ ಚಟ ಇರುವುದರಿಂದ ಪಾಪಪ್ರಜ್ಞೆಯನ್ನು ಮೂಲೆಗೆಸೆದು ನಿದ್ದೆ ಮಾಡತೊಡಗಿದೆ.

ಕಾಲೇಜು ಮುಗಿಯುವವರೆಗೇನೋ ಇದು ಸರಿ ಆದರೆ ಕೆಲಸಕ್ಕೆ ಸೇರಿದ ಮೇಲೆ ಆಫೀಸಿನಲ್ಲೂ ಸಹ ಹೊತ್ತು ಗೊತ್ತು ಇಲ್ಲದೇ ಕಣ್ಣು ಎಳೆಯತೊಡಗಿಬಿಡೋದು. ತೀವ್ರ ಸೋಮಾರಿತನ ಆಲಸ್ಯ. ಕಾಲೇಜು ಸಮಯದಲ್ಲಿ ಮದ್ಯಾಹ್ನ ನಿದ್ದೆ ಸಿಗುತ್ತಿದ್ದುದರಿಂದ ಅಷ್ಟೊಂದು ತೊಂದರೆಯಾಗಿರಲಿಲ್ಲ. ಆಫೀಸಿನಲ್ಲಿ ಆ ಅನುಕೂಲ ಇಲ್ಲವಲ್ಲ. ಎಲ್ಲರೂ ಅತ್ಯಂತ ಚುರುಕಾಗಿ ಕೆಲಸದಲ್ಲಿ ತೊಡಗಿರುತ್ತಿದ್ದರೆ ನಾನು ಮಂದಮತಿಯಂತೆ ಕೂತಿರುತ್ತಿದ್ದೆ. ನಿದ್ದೆ ತಡೆಯಲು ಕಾಫಿ, ಬ್ಲಾಕ್ ಟೀ ಇತ್ಯಾದಿಗಳ ಮೊರೆ ಹೋಗಿದ್ದಲ್ಲದೇ ಕೂತು ಮಾಡುವ ಕೆಲಸವಾದ್ದರಿಂದ ದೈಹಿಕ ಶ್ರಮವಿಲ್ಲದೇ ದೇಹದ ತೂಕ ಸಹ ಹೆಚ್ಚಾಗತೊಡಗಿತ್ತು. ತೂಕ ಹೆಚ್ಚಾದ್ದರಿಂದ ಆಪ್ನಿಯಾ ಸಹ ಹೆಚ್ಚಿತು. ಒಂದು ಹಂತದಲ್ಲಿ ರಾತ್ರಿ ಹತ್ತಕ್ಕೆ ಮಲಗಿ ಬೆಳಗ್ಗೆ ಎಂಟಕ್ಕೆ ಅಂದರೆ ಹತ್ತು ತಾಸು ನಿದ್ದೆ ಮಾಡಿದರೂ ಮತ್ತೆ ಕಚೇರಿಯಲ್ಲಿ ಕಣ್ಣು ಎಳೆಯತೊಡಗುತ್ತಿತ್ತು. ಮೊದಮೊದಲು ಇದು ಎಲ್ಲರಿಗೂ ಆಗುತ್ತದೆ ಎಂದುಕೊಂಡಿದ್ದೆ. ಉಳಿದವರು ಚುರುಕಾಗಿರುವುದಕ್ಕೂ ನಾನು ಮಂದವಾಗಿರುವುದಕ್ಕೂ ಬಹುಷಃ ನನ್ನ ಮೈಗಳ್ಳತನ ಕಾರಣ ಇರಬಹುದು ಅಂದುಕೊಂಡಿದ್ದೆ.

ಆಸ್ಟ್ರೇಲಿಯಾಕ್ಕೆ ಬಂದು ಒಂದು ವರ್ಷದ ವರೆಗೆ ನನ್ನದು ಇದೇ ಸ್ಥಿತಿ. ಒಂದು ದಿನ ಅದಾವುದೋ ಕಾರಣಕ್ಕಾಗಿ ವೈದ್ಯರ ಬಳಿ ಹೋದಾಗ ಅದ್ಯಾಕೆ ಅವರಿಗೆ ಹಾಗನ್ನಿಸಿತೊ ಗೊತ್ತಿಲ್ಲ ವೈದ್ಯರು,

“ನಿನಗೆ ಬೆಳಗ್ಗೆ ಇದ್ದಾಗ ಸಣ್ಣ ತಲೆನೋವು ಬರುತ್ತದೆಯೇ?” ಅಂತ ಕೇಳಿದರು, ಹೌದೆಂದೆ.’ “ಇಡಿಯ ದಿನ ನಿದ್ದೆ, ಆಲಸ್ಯ ಇರುತ್ತದೆಯೇ?” “ಗೊರಕೆ ಹೊಡೆಯುತ್ತೀಯಾ?” “ಎದ್ದಾಗ ಬಾಯಿ ಒಣಗಿರುತ್ತದೆಯೇ?” “ಮಲಗಿದಾಗ ಒಮ್ಮೊಮ್ಮೆ ಕೆಮ್ಮಿ ಎಚ್ಚರವಾಗುತ್ತದೆಯೇ?” ಎಲ್ಲದಕ್ಕೂ ನನ್ನ ಉತ್ತರ ಹೌದೆಂದಾಗಿತ್ತು.

ಹಾಗಿದ್ದರೆ ನೀನೊಮ್ಮೆ ನಿದ್ದೆ ತಜ್ಞರನ್ನು ಕಾಣು ಅಂತ ಹೇಳಿ ಶಿಫಾರಸು ಪತ್ರ ಬರೆದುಕೊಟ್ಟರು. ನನ್ನ ನಿದ್ದೆ ತಜ್ಞರ ಹೆಸರು “ರೋಜರ್” ಅಂತ. ರೋಜರ್ ಮತ್ತು ನಾನು ಒಳ್ಳೆಯ ಗೆಳೆಯರಾಗಲು ಕಾರಣ ನಮಗಿಬ್ಬರಿಗೂ ಇರುವ ಪುಸ್ತಕ ಓದುವ ಹವ್ಯಾಸ. ಪ್ರತಿ ಸಾರಿ ನೋಡಲು ಹೋದಾಗೆಲ್ಲ ಒಂದಲ್ಲ ಒಂದು ಪುಸ್ತಕದ ಬಗ್ಗೆ ಮಾತಾಡಿಕೊಳ್ಳುವುದು ನಮ್ಮ ವಾಡಿಕೆ. ರೋಜರ್ ನನಗೆ ಮಶೀನೊಂದನ್ನು ಕೊಟ್ಟು ಅದನ್ನು ರಾತ್ರಿ ಧರಿಸಿಕೊಂಡು ಮಲಗಬೇಕೆಂದೂ ಅದನ್ನು ಹೇಗೆ ಬಳಸುವುದು ಎಂಬುದನ್ನೂ ಹೇಳಿಕೊಟ್ಟರು. ರಾತ್ರಿ ಅದನ್ನು ಧರಿಸಿ ಮಲಗಿಕೊಂಡು ಮರುದಿನ ಮಶೀನನ್ನು ಅವರಿಗೆ ತಲುಪಿಸಿ ಬಂದೆ.

Sydney Diary Sriharsha Salimat

ಸೌಜನ್ಯ : ಅಂತರ್ಜಾಲ

ಅವರು ಹೇಳಿದ ಫಲಿತಾಂಶ ಊಹಿಸಲೂ ಆಗದಷ್ಟು ಆಘಾತಕಾರಿಯಾಗಿತ್ತು, ನನಗೆ ರಾತ್ರಿ ನಿದ್ದೆ ಮಾಡುವಾಗ ನನಗೆ ಗೊತ್ತಾಗದಂತೆ ಉಸಿರುಗಟ್ಟುತ್ತಿತ್ತು. ಇದರಿಂದಾಗಿ ಮಿದುಳಿಗೆ ನಿದ್ದೆಯ ಸಮಯದಲ್ಲಿ ಸರಿಯಾದ ಆಮ್ಲಜನಕ ಪೂರೈಕೆಯಾಗುತ್ತಿರಲಿಲ್ಲ. ಪೂರೈಕೆ ನಿಂತಾಗೆಲ್ಲ ಮಿದುಳಿಗೆ ಎಚ್ಚರವಾಗುತ್ತಿತ್ತು. ಹೀಗೆ ನನಗೆ ಪ್ರತಿ ರಾತ್ರಿ ಎಂಬತೈದು ಸಾರಿ ಎಚ್ಚರವಾಗುತ್ತಿತ್ತು! ಈ ಪದೇಪದೆ ಎಚ್ಚರವಾಗುವಿಕೆಯಿಂದಾಗಿ ನಾನು ಹತ್ತು ತಾಸು ನಿದ್ದೆ ಮಾಡಿದರೆ ಸರಿಯಾದ ನಿದ್ದೆ ಆಗುತ್ತಿದ್ದುದು ಐದೂವರೆ ತಾಸು ಮಾತ್ರ! ಇದೇ ಕಾರಣದಿಂದಲೇ ನನಗೆ ದಿನವಿಡೀ ಆ ಪರಿ ನಿದ್ದೆ ಬರುತ್ತಿದ್ದುದು. ರೋಜರ್ ನನಗೆ ನಿದ್ದೆ ಸರಿಯಾಗಿ ಬರಲು ಹೊಸದೊಂದು ಯಂತ್ರವನ್ನು ಕೊಟ್ಟರು. ಅದು ನನ್ನ ಉಸಿರಾಟದ ಕ್ರಿಯೆಯನ್ನು ಏರಿಳಿತಗಳನ್ನು ಮಾದರಿಯನ್ನು ಗಮನಿಸಿ ತಕ್ಕಂತೆ ನನ್ನ ಶ್ವಾಸಕೋಶದೊಳಗೆ ಗಾಳಿಯನ್ನು ನೂಕುತ್ತಿತ್ತು.

ಈ ಯಂತ್ರವನ್ನು ಮೊದಲ ಸಲ ಬಳಸಿ ಮರುದಿನ ಮೇಲೆದ್ದಾಗ ನೋಡುತ್ತೇನೆ, ಜಗತ್ತು ಸುಂದರ ಅಂದರೆ ಅತಿ ಸುಂದರ! ಪ್ರತಿದಿನ ಸರಿಯಾಗಿ ನಿದ್ದೆ ಮಾಡುವವರು ಇಷ್ಟೊಂದು ಸುಖವಾಗಿರುತ್ತಾರಾ? ಅಂತ ಅನ್ನಿಸಿತು. ಇಡಿಯ ದಿನ ಯಾವುದೆ ನಿದ್ದೆಯ ಎಳೆತ ಇಲ್ಲ ತೂಕಡಿಕೆ ಇಲ್ಲ! ಎಲ್ಲರಂತೆ ಅಥವಾ ಅವರಿಗಿಂತ ಚುರುಕಾಗಿ ನಡೆದ ಕೆಲಸಗಳು. ಮೀಟಿಂಗ್​ಗಳಲ್ಲಿ ನಿದ್ದೆ ಇಲ್ಲ. ಆ ದಿನ ರಾತ್ರಿ ಮಲಗಿದ್ದು ಹನ್ನೆರಡು ಗಂಟೆಗೆ ಮರುದಿನ ಬೆಳಿಗ್ಗೆ ಆರೂವರೆಗೆ ಎಚ್ಚರ. ಆದರೂ ದಿನ ಪೂರ್ತಿ ತೂಕಡಿಗೆ ಕಣ್ಣೆಳೆತ ನಿದ್ದೆ ಇಲ್ಲ!

ನನ್ನ ಬದುಕೆ ಅವತ್ತು ಬದಲಾಗಿ ಹೋಗಿತ್ತು. ರೋಜರ್ ನನಗೆ ಹೊಸ ಜೀವನವನ್ನು ಕಲ್ಪಿಸಿಕೊಟ್ಟಿದ್ದ. ಮತ್ತೆ ಅವನ ಬಳಿ ಹೋದಾಗ ನನ್ನ ಜೀವನಕ್ಕೆ ಹೊಸ ತಿರುವು ಕೊಟ್ಟಿದ್ದಕ್ಕೆ ಅನೇಕ ಧನ್ಯವಾದಗಳನ್ನು ಅರ್ಪಿಸಿದೆ. ಪ್ರತಿ ಸಾರಿ ಅವನ ಬಳಿ ಚೆಕಪ್​ಗೆ ಹೋದಾಗಲೂ ನಾನು ನನ್ನ ಬದುಕನ್ನು ಬದಲಿಸಿದ ಕಡವರಾಳು ನೀನು ಅಂತ ಒಮ್ಮೆಯಾದರೂ ಹೇಳುವುದನ್ನು ಮರೆಯುವುದಿಲ್ಲ.

ಈಗ ನನಗೆ ಗೊರಕೆ ಇಲ್ಲ. ಆರೂವರೆ ಅಥವಾ ಹೆಚ್ಚೆಂದರೆ ಏಳು ತಾಸುಗಳ ನಿದ್ದೆ ಸಾಕು. ರೋಜರ್ ಕೊಟ್ಟ ಮಶೀನು ನನ್ನ ದೇಹದ ಒಂದು ಭಾಗವೇ ಆಗಿದೆ. ಕಳೆದ ನಾಲ್ಕು ವರ್ಷಗಳಿಂದ ಹಿಮಾಲಯದಿಂದ ಮರಳುಗಾಡಿನವರೆಗೆ ನನ್ನ ಎಲ್ಲಾ ಪ್ರವಾಸಗಳ ಸಂಗಾತಿಯಾಗಿದೆ. ಇದೇನು ಮಶೀನು ಅಂತ ಯಾರಾದರೂ ಕೇಳಿದಾಗ ನನಗೆ ಹೊಸ ಹುಟ್ಟು ಕೊಟ್ಟ ಮಶೀನಿನ ಬಗ್ಗೆ ಬೇಸರವಿಲ್ಲದೇ ತಾಸುಗಟ್ಟಲೆ ಕೊರೆಯುತ್ತೇನೆ. ಮಶೀನನ್ನು ತಯಾರು ಮಾಡುವ ಅನೇಕ ಕಂಪನಿಗಳಿವೆ. ಮುಖ್ಯವಾದದ್ದು ಮತ್ತು ನಾನು ಬಳಸುವ ಮಶೀನಿನ ಕಂಪೆನಿ ನನ್ನ ಮನೆಯಿಂದ ಇಪ್ಪತೈದು ನಿಮಿಷಗಳ ದೂರದಲ್ಲಿ ಈ ಕಂಪನಿಯ ಕಚೇರಿಯಿದೆ. ಆ ದಾರಿಯಲ್ಲಿ ಹೋಗುವಾಗಲೆಲ್ಲ ಪುಣ್ಯಕ್ಷೇತ್ರವನ್ನು ಕಂಡವನಂತೆ ಕೈ ಮುಗಿಯುತ್ತೇನೆ.

ಪ್ರತಿಕ್ರಿಯೆಗಳಿಗಾಗಿ : tv9kannadadigital@gmail.com

ಹಿಂದಿನ ಕಂತು :Sydney Diary : ‘ಈ ಕೀಳು ಸಂಸ್ಕೃತಿಯ ದೇಶಕ್ಕೇಕಪ್ಪಾ ಬಂದಿರಿ, ಇಲ್ಲಿಯ ಪೌರತ್ವಕ್ಕಾಗಿ ಅದ್ಯಾಕೆ ಅಷ್ಟು ತಿಣುಕಾಡಿದಿರಿ?’

Published On - 2:07 pm, Sun, 19 September 21

ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಅಮೆಜಾನ್ ವಿಶೇಷ ಆಫರ್ ಸೇಲ್ ಮುಂದಿನ ವಾರವೇ ಆರಂಭ!
ಅಮೆಜಾನ್ ವಿಶೇಷ ಆಫರ್ ಸೇಲ್ ಮುಂದಿನ ವಾರವೇ ಆರಂಭ!
ಭಾವ್​ನಗರದಲ್ಲಿ ಗುಜರಾತ್​ನ ಮೊಟ್ಟಮೊದಲ ಧಾನ್ಯಗಳ ಎಟಿಎಂ ಸ್ಥಾಪನೆ
ಭಾವ್​ನಗರದಲ್ಲಿ ಗುಜರಾತ್​ನ ಮೊಟ್ಟಮೊದಲ ಧಾನ್ಯಗಳ ಎಟಿಎಂ ಸ್ಥಾಪನೆ