ಏಸೊಂದು ಮುದವಿತ್ತು : ‘ನೀವು ಮೋದಿ ಪರವೆಂದು ತಿಳಿಯಿತು ನಿಮ್ಮೊಂದಿಗೆ ಸಂಪರ್ಕ ಕಡಿದುಕೊಳ್ಳುತ್ತಿದ್ದೇನೆ’

‘ಸಂಕ್ರಾಂತಿಯೆಂದರೆ ಸಲಾಮನ ಗಾಡಿಯಿಲ್ಲದೆ ನಮಗೆ ಸಾಗುತ್ತಲೇ ಇರಲಿಲ್ಲ. ನಮಗೆ ಹುಷಾರಿಲ್ಲದಾಗ ಅವನು ಮಸೀದಿಗೆ ಕರೆದುಕೊಂಡು ಹೋಗಿ ನವಿಲುಗರಿಯ ಕಟ್ಟನ್ನು ತಲೆಗೆ ತಾಗಿಸಿ ದುವಾ ಮಾಡಿಕೊಂಡು ಕರೆತರುತ್ತಿದ್ದ. ಯಾವುದೋ ಹಬ್ಬದ ದಿನ ಮಸೀದಿಯಲ್ಲಿ ಸಕ್ಕರೆಯನ್ನು ನೈವೇದ್ಯ ಮಾಡಿಸಿಕೊಂಡು ತರುತ್ತಿದ್ದ.’ ಟಿ. ಎಸ್. ಶ್ರವಣಕುಮಾರಿ

ಏಸೊಂದು ಮುದವಿತ್ತು : ‘ನೀವು ಮೋದಿ ಪರವೆಂದು ತಿಳಿಯಿತು ನಿಮ್ಮೊಂದಿಗೆ ಸಂಪರ್ಕ ಕಡಿದುಕೊಳ್ಳುತ್ತಿದ್ದೇನೆ’
ಲೇಖಕಿ ಟಿ. ಎಸ್. ಶ್ರವಣಕುಮಾರಿ

ಈ ಔಷಧ ಎಲ್ಲಿಂದ ಬಂದಿತು, ಯಾರು ಫಾರ್ಮ್ಯುಲಾ ಬರೆದರು, ಈ ಸೂಜಿ, ಕತ್ತರಿ, ನಳಿಕೆ, ಉಪಕರಣ, ದ್ರಾವಣ, ಆಮ್ಲಜನಕ ಯಾರು ತಯಾರಿಸಿದರು, ಹೊತ್ತು ಸಾಗಿಸಿದರು, ನಮ್ಮನ್ನು ಉಪಚರಿಸುವವರ ಮೂಲವೇನು ಹಿನ್ನೆಲೆಯೇನು, ಇಂಥ ಸ್ವಾರ್ಥಪರ ಆಲೋಚನೆಗಳು ಬರುವುದುಂಟೆ? ಜೀವವೇ ಬಾಯಿಗೆ ಬಂದಾಗ ಉಳಿಯುವುದೇನು; ಮೌನ-ಪ್ರಾರ್ಥನೆ. ಎಲ್ಲ ಸ್ವಾರ್ಥ-ಪ್ರಭಾವಗಳ ತಂತು ಕತ್ತರಿಸಿಕೊಂಡು ನಾವೆಂಬ ನಾವಷ್ಟೇ ಶುದ್ಧಾನುಶುದ್ಧವಾಗಿ ಉಳಿಯಲು ಆತ್ಮಾವಲೋಕನದ ಮಹಾಸಂದರ್ಭ ಸೃಷ್ಟಿಯಾಗಿರುವ ಈ ಹೊತ್ತಿನಲ್ಲಾದರೂ ಅರಿವು-ಅನುಕಂಪ ಶಾಶ್ವತವಾಗಿ ನಮ್ಮಲ್ಲಿ ಮನೋಗತವಾಗುವುದೆ? ಯೋಚಿಸಿ, ನರನಾಡಿಗಳಲ್ಲಿ ರಕ್ತವೇರಿಸಿಕೊಳ್ಳುವಾಗ, ಅಂಗಗಳನ್ನು ಕಸಿ ಮಾಡಿಸಿಕೊಳ್ಳುವಾಗ, ಪ್ಲಾಸ್ಮಾ ನಮ್ಮ ದೇಹ ಸೇರುವಾಗ ಹೆಣ್ಣು-ಗಂಡು-ಜಾತಿ-ಮತ-ಪಂಥ-ಗಡಿ-ಪಕ್ಷಗಳೆಂಬ ವಿಷಬೀಜಗಳು ನಮ್ಮನ್ನು ತಾಕಿದ್ದಿದೆಯೇ? ಮನೆಓಣಿಗಳಿಂದ ಹಿಡಿದು ಸಾಮಾಜಿಕ ಜಾಲತಾಣಗಳವರೆಗೆ ಈತನಕವೂ ನಮ್ಮ ‘ಅಸ್ತಿತ್ವ’ ಎನ್ನುವುದಕ್ಕೆ ಎಷ್ಟೆಲ್ಲ ರೂಪದಲ್ಲಿ ಕೃತ್ರಿಮ ಮತ್ತು ಪೊಳ್ಳುತನದ ಎಳೆಗಳನ್ನು ಜೋಡಿಸಿಕೊಳ್ಳುತ್ತಿದ್ದೇವೆ? ಇವೆಲ್ಲವೂ ದಾಖಲೆಯರೂಪದಲ್ಲಿ ಜಗದ್ವ್ಯಾಪಿಯಾಗಿ ನಮ್ಮನ್ನು ಮತ್ತಷ್ಟು ಬೆತ್ತಲೆಗೊಳಿಸುತ್ತವೆ ಎನ್ನುವ ಕನಿಷ್ಟ ಪ್ರಜ್ಞೆಯೂ ಇಲ್ಲದಂತೆ ವರ್ತಿಸುತ್ತಿರುವ ನಾವುಗಳು ಆತ್ಮಸಾಕ್ಷಿಯನ್ನು ಮಾರಿಕೊಂಡು ಹೊರಟಿದ್ದಾದರೂ ಎಲ್ಲಿಗೆ? ಸಹಜವಾಗಿ ನಾವೆಲ್ಲ ಬದುಕಿದ್ದೆವು. ಆದರೆ ಬರುಬರುತ್ತ ಅದು ಸಾಧ್ಯವಾಗುತ್ತಿಲ್ಲವೇಕೆ, ಸಮತೋಲನ ತಪ್ಪಿದ್ದೆಲ್ಲಿ? ನಿಜವಾದ ಜ್ಞಾನವರಸಿ ಹೊರಟಲ್ಲೆಲ್ಲ ರಾಜಕಾರಣದ ಕಮಟು. ಪ್ರೀತಿ-ಸಹಬಾಳ್ವೆಯ ಹಾದಿಯಲ್ಲೆಲ್ಲ ಅನುಮಾನ, ಪ್ರತಿಷ್ಠೆಯ ಅಡ್ಡಗೋಡೆ. ಹೀಗಿರುವಾಗ ಕಂಗೆಡಿಸುತ್ತಿರುವ ವಾಸ್ತವಕ್ಕೆ, ಪರಿಸ್ಥಿತಿಯ ಅಸಹಾಯಕತೆಗೆ ನೆನಪುಗಳೇ ನೇವರಿಕೆ, ಜೀವಕ್ಕೆ ಗುಟುಕು.  

ಇದೋ ‘ಟಿವಿ9 ಕನ್ನಡ ಡಿಜಿಟಲ್ : ಏಸೊಂದು ಮುದವಿತ್ತು’ ಸರಣಿ ನಿಮ್ಮ ಓದಿಗೆ. ನಿಮ್ಮನ್ನು ವಿಚಲಿತಗೊಳಿಸುತ್ತಿರುವ ವರ್ತಮಾನದ ಯಾವ ಸಂಗತಿಗಳೂ ನಿಮ್ಮ ಬಾಲ್ಯವನ್ನು, ಕಳೆದ ಪರಿಸರವನ್ನು, ಪ್ರವಾಸಕ್ಕೆ ಹೋದ ಊರುಗಳ ವಾತಾವರಣವನ್ನು, ಇದಿರಾದ ವ್ಯಕ್ತಿಗಳ ಒಡನಾಟವನ್ನು, ಪ್ರಸಂಗಗಳನ್ನು ನೆನಪಿಸುತ್ತಿರಬಹುದು. ತಡ ಯಾಕೆ? ನಿಮ್ಮ ಬರಹದೊಂದಿಗೆ ಆಲ್ಬಮ್ಮಿಗಂಟಿರುವ ಫೋಟೋಗಳನ್ನು ಮೆಲ್ಲಗೆ ಹಾಳೆಗಳಿಂದ ಬಿಡಿಸಿ ಇಲ್ಲಿ ತೂರಿಬಿಡಿ ಇ ಮೇಲ್ : tv9kannadadigital@gmail.com

ಟಿ.ಎಸ್. ಶ್ರವಣಕುಮಾರಿ ಸ್ಟೇಟ್​ ಬ್ಯಾಂಕ್ ಆಫ್ ಇಂಡಿಯಾದ ನಿವೃತ್ತ ಉದ್ಯೋಗಿ. ಸಾಹಿತ್ಯ ಇವರ ಆಸಕ್ತಿ ವಿಷಯ. ‘ಅಸ್ಪಷ್ಟ ತಲ್ಲಣಗಳು’ ಇವರ ಮೊದಲ ಕಥಾ ಸಂಕಲನ. ಬಾಲ್ಯಯೌವನದ ಲೆಕ್ಕವೆಲ್ಲ ಸಹಜವಾಗಿಯೇ ಇತ್ತು. ಆದರೆ ನಡುವೆ ತಾಳ ತಪ್ಪಿದ್ದೆಲ್ಲಿ, ನೆನಪಿನಾಳಕ್ಕೆ ಜಾರುತ್ತಲೇ ಅವರಿಗೆ ಉತ್ತರವೇನಾದರೂ ಸಿಕ್ಕಿತೆ? ಓದಿ.

*

ಹೀಗೇ ಸುಮ್ಮನೆ ನೆನಪಿನ ಯಾನದಲ್ಲಿ ಹಿಂತಿರುಗಿ ನನ್ನ ಬಾಲ್ಯದ ದಿನಗಳಿಗೆ ಸಾಗಿದರೆ ನಿರಾತಂಕವಾಗಿ ರಸ್ತೆಯಲ್ಲಿ ಜೊತೆಯವರೊಡನೆ ಆಡುತ್ತಿದ್ದ ಸಂಭ್ರಮದ ಚಿತ್ರ ಮನದ ತೆರೆಯಲ್ಲಿ ಕಂಡಾಗ ಈಗಲೂ ಅಂದಿನಷ್ಟೇ ಖುಷಿಯಾಗುತ್ತದೆ. ನಮ್ಮ ರಸ್ತೆಯಲ್ಲಿ ಓಡಾಡುತ್ತಿದ್ದ ಏಕೈಕ ಮೋಟಾರು ವಾಹನವೆಂದರೆ ಎದುರುಮನೆಯವರ ಕಾರು. ಅದು ಬೆಳಗ್ಗೆ ಮನೆ ಬಿಟ್ಟರೆ ಹಿಂತಿರುಗುತ್ತಿದ್ದುದು ಮತ್ತೆ ರಾತ್ರಿಗೆ. ಇಡೀ ಊರಿಗೆಲ್ಲಾ ಇದ್ದುದು ಎಣಿಸುವಷ್ಟು ಕಾರುಗಳು ಮತ್ತು ಸ್ಕೂಟರ್‌ಗಳು. ಬಣ್ಣ ನೋಡಿ ಇದು ಇಂಥವರದೇ ಕಾರು ಎಂದು ಗುರುತುಹಿಡಿಯಬಹುದಿತ್ತು. ಶಿವಮೊಗ್ಗ ಸಣ್ಣ ಊರೇನಲ್ಲ; ಜಿಲ್ಲಾ ಕೇಂದ್ರವೇ. ಆದರೂ ಬಿ. ಹೆಚ್. ರಾಜ್ಯ ಹೈವೇ ಬಿಟ್ಟರೆ ಇನ್ನೆಲ್ಲೂ ಬಸ್ಸುಗಳ, ಲಾರಿಗಳ ಹಾವಳಿಯಿರಲಿಲ್ಲ. ಹಾಗಾಗಿ ನಾವೆಲ್ಲಾ ಮಕ್ಕಳು ರಸ್ತೆಯಲ್ಲಿ ಕುಣಿಯುತ್ತಿದ್ದರೆ ಅಮ್ಮಂದಿರಿಗೆ ಆತಂಕಗೊಳ್ಳಬೇಕಾದ ಪ್ರಮೇಯವೇ ಇರಲಿಲ್ಲ. ಹಾಗಾಗಿ ನಿರಾತಂಕವಾಗಿ ಮುಸ್ಸಂಜೆ ರಾತ್ರಿಗೆ ತಿರುಗುವಾಗ ಅಮ್ಮ ಕೂಗು ಹಾಕುವವರೆಗೆ ಮನೆಯೊಳಗೆ ಕಾಲಿಡಬೇಕೆಂಬ ನಿಯಮವೇ ಇರಲಿಲ್ಲ.

ಅದೆಷ್ಟು ವೈವಿಧ್ಯಮಯ ಆಟಗಳು, ಜೂಟಾಟ, ಶರಾಫ್‌ ಆಟ, ಕುಂಟುಮುಟ್ಟುವ ಆಟ, ಕುಂಟೇಪಿಲ್ಲೆ, ಕಣ್ಣಾಮುಚ್ಚಾಲೆ, ಹುಡುಗರಾದರೆ ಕಬಡ್ಡಿ, ಫುಟ್ಬಾಲು, ಕ್ರಿಕೆಟ್ಟು (ಮರದ ರಿಪೀಸ್‌ ಪಟ್ಟಿಗಳೇ ಬ್ಯಾಟು, ವಿಕೆಟ್ಟು), ಮರಳು ರಾಶಿಯಿದ್ದರೆ ಕಪ್ಪೆಗೂಡು, ದೇವಸ್ಥಾನ ಕಟ್ಟುವುದು… ಕಡೆಗೆ ಬಳೆಚೂರನ್ನೂ ಬಿಡದೆ ನಿಧಿ ಹುಡುಕುವ ಆಟವನ್ನು ಸೃಷ್ಟಿಸಿಕೊಳ್ಳುತ್ತಿದ್ದೆವು. ಹೀಗೆ ಸಿಗುವ ಪರಿಕರಗಳಲ್ಲೇ ಹಲವು ಹತ್ತು ಆಟಗಳನ್ನು ನಾವೇ ಸೃಷ್ಟಿಸಿ ಸಂಭ್ರಮಿಸುತ್ತಿದ್ದೆವು. ರಸ್ತೆಯಲ್ಲದಿದ್ದರೆ ನಮ್ಮ ಮನೆಯ ಮುಂದಿನ ತೋಟದಲ್ಲಿದ್ದ ಸೀಬೇಮರದ ಮೇಲೆ ನಾವೆಲ್ಲರೂ ಕಪಿಗಳನ್ನೂ ನಾಚಿಸುವಂತೆ ಹತ್ತಿ ಮರದ ಯಾವುದೇ ಕಾಯಿಯೂ ಹಣ್ಣಾಗಲು ಬಿಡಬಾರದೆಂಬ ಪ್ರತಿಜ್ಞೆ ಮಾಡಿದವರಂತೆ ಹೀಚುಕಾಯಿಗಳನ್ನೂ ತಿಂದು ಬಿಸಾಕುತ್ತಿದ್ದೆವು. ಅಷ್ಟರ ಮಧ್ಯದಲ್ಲಿ ಅದು ಹೇಗೋ ನಮ್ಮ ಕಣ್ಣು ತಪ್ಪಿಸಿ, ಯಾವುದೋ ಕೊಂಬೆಯ ಎಲೆಗಳ ಮರೆಯಲ್ಲಿ ಬಚ್ಚಿಟ್ಟುಕೊಂಡು ಹಣ್ಣಾಗಿದ್ದ ಯಾವುದೋ ಒಂದು ಸೀಬೆಹಣ್ಣು ನಮ್ಮ ಕಣ್ಣಿಗೆ ಬಿದ್ದರೆ ಅದನ್ನು ಕಾಗೆ ಎಂಜಲು ಮಾಡಿ (ಬಟ್ಟೆಯನ್ನು ಮುಚ್ಚಿ ಕಡಿದು ತುಂಡು ಮಾಡಿ) ಎಲ್ಲರೂ ಹಂಚಿಕೊಂಡು ತಿನ್ನುತ್ತಿದ್ದ ಸಂಭ್ರಮವೆಷ್ಟು! ಎಷ್ಟೋ ಬಾರಿ ಅದು ಅಳಿಲೋ ಗಿಳಿಯೋ ಕಚ್ಚಿದ್ದ ಹಣ್ಣಾಗಿರುತ್ತಿತ್ತು. ಸೋಂಕಿನ ಭಯವೇ ಇಲ್ಲದೆ, ಹಾಗೆ ಕಚ್ಚಿದ ಹಣ್ಣು ಇನ್ನೂ ರುಚಿ ಎಂದು ಒಂದಿಷ್ಟೂ ಎಗ್ಗುಸಿಗ್ಗಿಲ್ಲದೆ ತಿನ್ನುತ್ತಿದ್ದೆವು. ಪುಣ್ಯಕ್ಕೆ ಹೂವನ್ನೊಂದು ತಿನ್ನದೆ ಬಿಟ್ಟಿರುತ್ತಿದ್ದೆವು; ಅದು ಮರದ ಪುಣ್ಯ! ಅಷ್ಟೆಲ್ಲಾ ಬೀದಿಯಲ್ಲಿ, ಮಣ್ಣಲ್ಲಿ, ಮರದಲ್ಲಿ ಆಡಿ ಬಂದ ಮೇಲೆ ಕೈಕಾಲನ್ನೇನೋ ತೊಳೆಯುತ್ತಿದ್ದೆವು. ಆದರೆ ಲೈಫ್‌ಬಾಯ್‌, ಡೆಟಾಲ್ ಇವುಗಳ ಪರಿಚಯವೇ ಇರಲಿಲ್ಲ. ಸೋಪೇನಿದ್ದರೂ ಸ್ನಾನ ಮಾಡುವಾಗ ಬಳಸಲು ಮಾತ್ರಾ.

ಶಾಲೆಗೊಂದು ಯೂನಿಫಾರ್ಮ್‌ ಎಂದು ಇತ್ತಾದರೂ ಹೆಚ್ಚಿನ ಶಾಲೆಗಳಲ್ಲಿ ಅದನ್ನು ಪಾಲಿಸುವವರೇ ಇರಲಿಲ್ಲ. ನಾನಂತೂ ಯೂನಿಫಾರ್ಮನ್ನು ಕಂಡಿದ್ದು ಹೈಸ್ಕೂಲಿನಲ್ಲೇ. ಅದರ ವಿನ್ಯಾಸಕ್ಕೂ ಯಾವುದೇ ನಿರ್ಬಂಧವಿರಲಿಲ್ಲ. ಮೇಲೆ ಹಾಕುವ ಅಂಗಿ/ರವಿಕೆ ಬಿಳಿಯದಾಗಿರಬೇಕು; ಕೆಳಗಿನ ಸ್ಕರ್ಟು/ಲಂಗ ಆ ಸ್ಕೂಲು ವಿಧಿಸಿರುವ ಬಣ್ಣದ್ದಾಗಿರಬೇಕು ಅಷ್ಟೇ. ಅದರಲ್ಲೂ ಹಸಿರೆಂದರೆ ಅಚ್ಚ ಹಸಿರು, ಎಲೆಹಸಿರು… ಈ ರೀತಿ ಹಸಿರಿನ ಒಂದು ಛಾಯೆ, ನೀಲಿಯೆಂದರೆ ಆಕಾಶ ನೀಲಿಯಿಂದ ಗಾಢನೀಲಿಯವರೆಗೆ ಯಾವುದಾದರೂ ಛಾಯೆಯಷ್ಟೇ. ಅಕ್ಕಂದಿರದ್ದೋ, ಅಣ್ಣಂದಿರದ್ದೋ ಬಣ್ಣಗೆಟ್ಟ, ತೇಪೆಹಾಕಿದ ಬಟ್ಟೆಗಳನ್ನು ಹಾಕಿಕೊಂಡು ಬರುತ್ತಿದ್ದ ಮಕ್ಕಳೇ ಹೆಚ್ಚು. ಸ್ಕೂಲಿನ ಫೀಸನ್ನು ಕಟ್ಟಲು ಸಹಾ ಕಷ್ಟಪಡುತ್ತಿರುವಾಗ, ಇನ್ನು ಯೂನಿಫಾರಮ್ಮನ್ನು ಎಲ್ಲಿಂದ ಕೊಂಡುಕೊಟ್ಟಾರು?! ಪೂರಾ ವರ್ಷಕ್ಕೆಲ್ಲಾ ಇದ್ದ ಹತ್ತೋ, ಹನ್ನೆರಡೋ ರೂಪಾಯಿ ಕೂಡಾ ಕೆಲವರಿಗೆ ದುಬಾರಿಯಾಗಿತ್ತು. ಇನ್ನು ಷೂ ಹಾಕುತ್ತಿದ್ದವರು ವಿಪರೀತ ಶ್ರೀಮಂತರ ಮಕ್ಕಳಷ್ಟೇ. ಬರಿಗಾಲಿನಲ್ಲಿ ಬರುತ್ತಿದ್ದವರೇ ಜಾಸ್ತಿ, ಹೆಚ್ಚೆಂದರೆ ಒಂದು ಚಪ್ಪಲಿ. ಪುಸ್ತಕವಂತೂ ದೊಡ್ಡಮಕ್ಕಳ ಕೈದಾಟಿ ಬರುತ್ತಿದ್ದದ್ದೇ ಹೆಚ್ಚು. ಎಲ್ಲೋ ಕೆಲವರು ಹೊಸ ಪುಸ್ತಕಗಳನ್ನು ಕೊಳ್ಳುತ್ತಿದ್ದರು. ಪ್ರೈಮರಿ ಸ್ಕೂಲ್‌ ಮುಗಿಯುವ ತನಕ ಸ್ಲೇಟು, ಬಳಪ ಮತ್ತು ಒಂದು ಕನ್ನಡ ಪುಸ್ತಕ ಮಾತ್ರ. ಮಿಡಲ್‌ ಸ್ಕೂಲಲ್ಲಿ ಇಂಗ್ಲಿಷ್‌, ಗಣಿತ, ಸಮಾಜ ಪರಿಚಯ ಮತ್ತು ವಿಜ್ಞಾನ ಸೇರಿಕೊಳ್ಳುತ್ತಿತ್ತು. ಶಾಲೆಯ ಬ್ಯಾಗೆಂದರೆ ಒಂದು ಬಟ್ಟೆಯ ಹೆಗಲು ಚೀಲ ಅಷ್ಟೇ. ಒಂದೆರಡು ಪುಸ್ತಕ, ಒಂದು ಬರೆಯುವ ಪುಸ್ತಕ, ಪೆನ್ಸಿಲ್‌, ರಬ್ಬರ್‌ ಇಟ್ಟುಕೊಂಡರೆ ಸ್ಕೂಲಿನ ಸಾಮಗ್ರಿ ಮುಗಿಯಿತು.

ಶಾಲೆಗೆ ಹೋಗಿ ಬರುವುದು ಕೂಡಾ ನಡೆದುಕೊಂಡೇ. ಎಲ್ಲೋ ಕೈಬೆರೆಳೆಣಿಕೆಯಷ್ಟು ಜನ ಚೀಲದ ಬದಲು ಅಲ್ಯುಮಿನಿಯಂ ಟ್ರಂಕನ್ನಿಟ್ಟುಕೊಂಡು, ಯೂನಿಫಾರಂ, ಷೂ ಎಲ್ಲವನ್ನೂ ಹಾಕಿಕೊಂಡು ಕುದುರೆ ಗಾಡಿಯಲ್ಲಿ ಬರುತ್ತಿದ್ದರು. ನನಗಂತೂ ಅವರನ್ನು ನೋಡಿದರೆ ಯಾವಾಗಲೂ ಅಯ್ಯೋ ಅನ್ನಿಸುತ್ತಿತ್ತು. ಆರಾಮಾಗಿ ಜೊತೆಯವರೊಡನೆ ಮಾತಾಡಿಕೊಂಡು, ಜೊತೆಗೆ ಸಣ್ಣ ಪುಟ್ಟ ಜಗಳಗಳು, ʻಠೂʼ ಬಿಡುವುದು, ನಿನ್ನೆ ಬಿಟ್ಟಿದ್ದರೆ ಇವತ್ತು ʻಸೇʼ ಮಾಡಿಕೊಂಡು ಮತ್ತೆ ಒಂದಾಗುವುದು, ಶಾಲೆಯ ಮುಂದೆ ಕುಳಿತಿದ್ದ ಅಜ್ಜಿಯ ಹತ್ತಿರ ಕೊಂಡಿದ್ದ ನೆಲ್ಲಿಕಾಯಿ, ಬೋರೆ, ಪರಿಗಿ, ಮಾವುಗಳನ್ನು ಹಂಚಿಕೊಂಡು ತಿನ್ನುವುದು ಇವೆಲ್ಲಾ ಈಗ ನೆನಪಿಸಿಕೊಂಡರೂ ಅಂದಿನ ಖುಷಿಯೇ! ಮಳೆ ಬಂದರೆ ನೆನೆಯುತ್ತಾ, ದಾರಿಯಲ್ಲಿ ಸಿಕ್ಕಿದ ಹಣ್ಣು ಕಾಯಿಗಳನ್ನು ಹೆಕ್ಕಿ, ತಿನ್ನುತ್ತಾ (ತೊಳೆಯುವ ಪ್ರಶ್ನೆಯೇ ಇಲ್ಲ ಬಿಡಿ, ಬಟ್ಟೆಗೆ ಒರೆಸಿಕೊಂಡು ತಿಂದರೆ ಅದೇ ಪುಣ್ಯ), ಶಾಲೆಯ ತಿರುವಿನಲ್ಲಿದ್ದ ವಸ್ತು ಸಂಗ್ರಹಾಲಯದ ಮುಂದಿದ್ದ ಒಡೆದ ಶಿಲ್ಪಗಳನ್ನೆಲ್ಲಾ ಮಾತನಾಡಿಸಿಕೊಂಡು ಸವರುತ್ತಾ, ಒಳಗಿರುವ ಲೈಬ್ರರಿಯಲ್ಲಿ ಓದುತ್ತಿರುವವರನ್ನು ಕುತೂಹಲದಿಂದ ಹಣಿಕಿ ನೋಡುತ್ತಾ, ಮುಂದಿದ್ದ ದೊಡ್ಡ ಘಂಟೆಯನ್ನು ಬಾರಿಸಿ ಯಾರ ಕಣ್ಣಿಗಾದರೂ ಬೀಳುವ ಮುನ್ನ ಅಲ್ಲಿಂದ ನಗರಸಭೆಯ ಮುಂದಿದ್ದ ಕಲ್ಲಿನ ಬಸವನ ಬಳಿಗೆ ಓಟ. ಸುತ್ತಮುತ್ತಲ ಮರದಿಂದ ಬಿದ್ದಿದ್ದ ಹೂಗಳನ್ನೆಲ್ಲಾ ತಂದು ಅದರ ಪಾದಕ್ಕೆ ಸುರಿದು ನಮಸ್ಕರಿಸಿ, ಹೋಗುವ ದಾರಿಯಲ್ಲಿ ಎಲ್ಲಾದರೂ ಹುಳದ ಗೂಡು ಕಂಡರೆ ಅದರಲ್ಲಿ ಬಳಪದ ತುಂಡು ಸಿಗಿಸುತ್ತಾ (ಹಾಗೆ ಮಾಡಿದರೆ ಇಡಿಯ ಬಳಪ ಸಿಗತ್ತೆ ಎನ್ನುವ ನಂಬಿಕೆ) ಹಕ್ಕಿ ಪುಕ್ಕಗಳನ್ನೂ, ಹೂವುಗಳನ್ನೂ, ಚಾಕ್‌ಲೇಟಿನ ಕವರನ್ನು, ಖಾಲಿ ಸಿಗರೇಟ್‌ ಪ್ಯಾಕು, ಬೆಂಕಿಪೊಟ್ಟಣ ಇವೆಲ್ಲವನ್ನೂ ಚೀಲದಲ್ಲಿ ತುಂಬಿಕೊಂಡು ಆಟವಾಡುತ್ತಾ ಬರುವ ಆನಂದವನ್ನು ಬಿಟ್ಟು ಮನೆ ಬಿಟ್ಟರೆ ಸ್ಕೂಲು, ಸ್ಕೂಲು ಬಿಟ್ಟರೆ ಮನೆ ಎಂದು ಕುದುರೆಗಾಡಿಯಲ್ಲಿ ಓಡುವುದರಲ್ಲಿ ಏನು ಸ್ವಾರಸ್ಯ?

ಹಾಗೆ ಶಾಲೆಗೆ ಹೋಗುತ್ತಿದ್ದ ಕಾಲದಲ್ಲಿ ನಮಗೆ ಈ ಜಾತಿ, ಮತಗಳ ಜಂಜಾಟವೇ ಇರಲಿಲ್ಲ. ಶಾಲೆಯಲ್ಲಿ, ಮೇರಿಯೂ ಇರುತ್ತಿದ್ದಳು, ಅಬ್ದುಲ್ಲನೂ ಇರುತ್ತಿದ್ದ, ಶಿವ ಗಂಗೆಯೂ ಇರುತ್ತಿದ್ದಳು, ಮೋಹನ ಲಾಲನೂ, ಮಾನ್‌ ಸಿಂಗನೂ ಇರುತ್ತಿದ್ದರು. ಅವೆಲ್ಲಾ ಹೆಸರುಗಳೇ ಹೊರತು ನಮ್ಮ ಮಧ್ಯೆ ಯಾವ ಗೋಡೆಯನ್ನೂ ಕಟ್ಟುತ್ತಿರಲಿಲ್ಲ. ಹಾಗೆಂದು ಪಾಠಗಳಲ್ಲಿ ಎಲ್ಲ ಧರ್ಮ ಪ್ರವರ್ತಕರ ಬಗೆಗೂ ಪಾಠವಿದ್ದು ಅದರ ಬಗ್ಗೆ ಅಲ್ಪ ಸ್ವಲ್ಪ ತಿಳುವಳಿಕೆಯಿದ್ದರೂ, ಅದು ತಿಳುವಳಿಕೆಗಾಗಿ ಮಾತ್ರಾ, ಯಾವುದೇ ಅಂತರಕ್ಕಾಗಿ ಅಲ್ಲ. ಒಂದು ಘಟನೆ ಚೆನ್ನಾಗಿ ನೆನಪಿದೆ. ಒಂದು ಸಲ ಪ್ರಾಯಶಃ ಮೂರನೆಯ ಕ್ಲಾಸಿನಲ್ಲಿದ್ದಾಗ ಮೇಷ್ಟ್ರು “ಮನೆಗೆ ಬಂದ ಅತಿಥಿಗಳು ಹೊರಡುವಾಗ ನಾವು ಏನನ್ನು ಕೊಡುತ್ತೇವೆ?” ಎಂದು ಕೇಳಿದ್ದರು. ನನ್ನನ್ನೂ ಸೇರಿಕೊಂಡು ಎಲ್ಲರೂ ಕಾಫಿ, ಟೀ, ಉಪ್ಪಿಟ್ಟು, ಅವಲಕ್ಕಿ… ನೂರೆಂಟನ್ನು ಹೇಳಿದ್ದರು. ಒಬ್ಬ ಮುಸ್ಲಿಂ ಹುಡುಗ ಮಾತ್ರ ಕುಂಕುಮ, ಎಲೆಯಡಿಕೆ ಎಂದಿದ್ದ. ಬೇರೆ ಧರ್ಮದವರ ಒಂದು ಸಂಸ್ಕೃತಿಯನ್ನು ಅವನು ಎಷ್ಟು ಚೆನ್ನಾಗಿ ಅರಿತುಕೊಂಡಿದ್ದನೆಂದು ಮೇಷ್ಟ್ರಿಗೆ ಭಾರೀ ಖುಷಿಯಾಗಿತ್ತು. ಮುಲ್ಲಾನ ಕೂಗೇ ನಮ್ಮ ಬೆಳಗಿನ ಅಲಾರಾಂ ಆಗಿತ್ತು. ಕ್ರಿಸ್‌ಮಸ್‌ ಮರುದಿನ ಮಿರಿಯಂ, ಎಲಿಜಬತ್‌ ಇವರೆಲ್ಲಾ ತರುತ್ತಿದ್ದ ಕೇಕು, ಇನ್ನೇನೇನೋ ಕ್ರಿಸ್‌ಮಸ್‌ ತಿಂಡಿಗಳಿಗೆ ಕಾದು ಕೂತಿರುತ್ತಿದ್ದೆವು. ಅವರೂ ಅಷ್ಟೇ ಗೋಕುಲಾಷ್ಟಮಿಯ ತಿಂಡಿಗಳಿಗೆ ಹಾತೊರೆಯುತ್ತಿದ್ದರು. ಸಂಕ್ರಾಂತಿಯೆಂದರೆ ಸಲಾಮನ ಗಾಡಿಯಿಲ್ಲದೆ ನಮಗೆ ಸಾಗುತ್ತಲೇ ಇರಲಿಲ್ಲ. ನಮಗೆ ಹುಷಾರಿಲ್ಲದಾಗ ಅವನು ಮಸೀದಿಗೆ ಕರೆದುಕೊಂಡು ಹೋಗಿ ನವಿಲುಗರಿಯ ಕಟ್ಟನ್ನು ತಲೆಗೆ ತಾಗಿಸಿ ದುವಾ ಮಾಡಿಕೊಂಡು ಕರೆತರುತ್ತಿದ್ದ. ಯಾವುದೋ ಹಬ್ಬದ ದಿನ ಮಸೀದಿಯಲ್ಲಿ ಸಕ್ಕರೆಯನ್ನು ನೈವೇದ್ಯ ಮಾಡಿಸಿಕೊಂಡು ತರುತ್ತಿದ್ದ ನೆನಪಿದೆ. ಜಾತಿಯೆಂಬುದು ಮನೆಯೊಳಗಿನ ಆಚಾರಕ್ಕೆ ಮಾತ್ರಾ ಸೀಮಿತವಾಗಿತ್ತು, ಅದಕ್ಕಿಂತ ಹೆಚ್ಚಿನ ಮಹತ್ವ ಅದಕ್ಕಿರಲಿಲ್ಲ. ಅಂತರ್ಜಾತೀಯ, ಅಂತರ್ಧರ್ಮೀಯ ಮದುವೆಗಳು ಮಾತ್ರಾ ಊರಿನಲ್ಲಿ ಒಂದಷ್ಟು ಸದ್ದು ಮಾಡುತ್ತಿದ್ದವು. ಅಂತರ್ಧರ್ಮೀಯ ಎನ್ನುವುದನ್ನು ಈಗ ಹೇಳುತ್ತಿದ್ದೇನೆ, ಆಗ ಅದೂ ಬರಿಯ ಜಾತಿಯಷ್ಟೇ ಆಗಿತ್ತು.

Yesondu mudavittu

ಸೌಜನ್ಯ : ಟ್ರೈವ್ ಗ್ಲೋಬಲ್

ಚಿಕ್ಕವಳಿದ್ದಾಗಿನಿಂದಲೂ ನನ್ನ ಜೊತೆಯವರನ್ನು ಯಾವ ಜಾತಿಯವರೆಂದು ಕೇಳಿದ್ದೇ ನನಗೆ ನೆನಪಿಲ್ಲ. ಆಗಿದ್ದದ್ದು ಸ್ನೇಹಿತರೆಂಬ ಒಂದೇ ಜಾತಿ. ಯಾವುದೋ ಸಂದರ್ಭದಲ್ಲೋ, ಯಾವುದೋ ಕಾರಣಕ್ಕಾಗಿ ಅವರು ತಮ್ಮ ಜಾತಿಯನ್ನು ಹೇಳಿಕೊಂಡರೆ ತಿಳಿಯುತ್ತಿತ್ತಷ್ಟೆ. ಅದಕ್ಕೆ ಹೆಚ್ಚಿನ ಮಹತ್ವವೇನಿರಲಿಲ್ಲ. ಅದು ಜಾತಿಯ ಹೆಸರಷ್ಟೆ. ಕಾಲೇಜಿನಲ್ಲಿ ಓದುತ್ತಿರುವಾಗ ಮುಸ್ಲಿಂ ಗೆಳೆಯನೊಬ್ಬ ಧರ್ಮದ ಸಂಘರ್ಷಗಳ ಬಗ್ಗೆ ಹೇಳುತ್ತಿರುವಾಗ ಅಚ್ಚರಿಯೆನಿಸುತ್ತಿತ್ತು. ಅವನಿಗೆ ಹಿಂದೂ ಹುಡುಗಿಯೊಬ್ಬಳು ಮುಸ್ಲಿಂ ಹುಡುಗನನ್ನು ‘ಗೆಳೆಯ’ ಎಂದು ಕರೆದಿದ್ದೇ ಒಂದು ಅಚ್ಚರಿಯ ಸಂಗತಿಯೆನಿಸಿತ್ತು. ಸ್ನೇಹದಲ್ಲಿ ಒಂದು ಅಂತರದ ಭಾವನೆ ಅಂದೂ ಇರಲಿಲ್ಲ; ಇಂದೂ ಇಲ್ಲ. ನಾನು ಬ್ಯಾಂಕಿಗೆ ಸೇರಿದ ಮೇಲೂ ಹಲವು ಮುಸ್ಲಿಂ ಸಹೋದ್ಯೋಗಿಗಳು ಒಳ್ಳೆಯ ಸ್ನೇಹ ವಲಯದಲ್ಲಿದ್ದರು. ಅದರಲ್ಲಿ ಒಬ್ಬರು ಪ್ರಖ್ಯಾತ ಸಾಹಿತಿ ಕೂಡಾ. ತೀರಾ ಇತ್ತೀಚಿನವರೆಗೂ ನನ್ನೊಂದಿಗೆ ಉತ್ತಮ ಸ್ನೇಹ ಬಾಂಧವ್ಯವನ್ನಿಟ್ಟುಕೊಂಡಿದ್ದವರು, ಅಯೋಧ್ಯೆಯ ತೀರ್ಪು ಬಂದ ನಂತರ ದಿನದಿನವೂ ಹಿಂದೂಗಳ ಬಗ್ಗೆ, ಪ್ರಧಾನಿ ಮೋದಿಯ ಬಗ್ಗೆ ಅವಹೇಳನಕಾರಿಯಾದ ಸಂದೇಶಗಳನ್ನು ಕಳಿಸುತ್ತಿದ್ದರು. ದಿನವೂ ಇದನ್ನೇ ನೋಡಿ ನೋಡಿ ಸಾಕಾಗಿ ಕಡೆಗೆ ಒಂದು ದಿನ ನಾನು “ನಾನು ಯಾರ ಪರವಾಗಿಯೂ ಇಲ್ಲ; ವಿರೋಧವಾಗಿಯೂ ಇಲ್ಲ.  ಯಾವುದೇ ರಾಜಕೀಯ ಪಕ್ಷದ ಪರವಾಗಿಯೂ ಇಲ್ಲ. ತಪ್ಪು ಯಾರು ಮಾಡಿದರೂ ತಪ್ಪೇ. ಒಳ್ಳೆಯ ಕೆಲಸವಾಗಿದ್ದರೆ ಭೇಷ್‌ ಎನ್ನುತ್ತೇನೆ, ಇಲ್ಲವಾದರೆ ಟೀಕಿಸುತ್ತೇನೆ. ಅಷ್ಟರಮಟ್ಟಿಗೆ ಸ್ವತಂತ್ರವಾಗಿ ನನ್ನ ನಿಲುವನ್ನು ಇಟ್ಟುಕೊಳ್ಳಲು ಇಷ್ಟಪಡುತ್ತೇನೆ. ಈ ರೀತಿಯಾದ ಕೋಮು ಸೌಹಾರ್ದವನ್ನು ಕದಡುವಂತಹ ಸಂದೇಶಗಳನ್ನು ನನಗೆ ಕಳಿಸಬೇಡಿ. ಇಂತಹ ಸಂದೇಶಗಳನ್ನು ನೋಡಿ ನನ್ನ ನಿಲುವು ಬದಲಾಗುವುದಿಲ್ಲ. ನನಗೆ ನಿಮ್ಮ ಸ್ನೇಹ ಅಮೂಲ್ಯ; ಅದನ್ನು ಕಳೆದುಕೊಳ್ಳಲು ಇಷ್ಟವಿಲ್ಲ” ಎಂದು ಒಂದು ಸಂದೇಶ ಕಳಿಸಿದ ತಕ್ಷಣ ಅವರಿಗೆ ಕೋಪ ಬಂದು “ನೀವು ಮೋದಿ ಪರವೆಂದು ತಿಳಿಯಿತು. ನಿಮ್ಮೊಂದಿಗೆ ಸಂಪರ್ಕ ಕಡಿದುಕೊಳ್ಳುತ್ತಿದ್ದೇನೆ” ಎಂದು ಮರುಸಂದೇಶ ಕಳಿಸಿದರು. ನಿಜಕ್ಕೂ ನೋವಾಯಿತು. ಎಷ್ಟೊಂದು ಓದಿಕೊಂಡವರು, ಸೂಫಿ ಸಂತರ ಬಗ್ಗೆ ಬರೆಯುತ್ತಿದ್ದವರು, ನಾನು ತುಂಬಾ ಗೌರವಿಸುತ್ತಿದ್ದ ವ್ಯಕ್ತಿ ಹೀಗೇಕೆ ಬದಲಾದರು? ಸುಮಾರು ನಲವತ್ತು ವರ್ಷಗಳು ಸ್ನೇಹದಲ್ಲಿದ್ದೂ ಈಗ ಹೀಗೇಕೆ ಯೋಚಿಸುತ್ತಿದ್ದಾರೆ ಎಂದು ಅರ್ಥವಾಗಲಿಲ್ಲ. ಕಾಲೇಜಿನ ದಿನಗಳಲ್ಲಿ ಇತರರಂತೆ ಡ್ರೆಸ್‌ ಮಾಡಿಕೊಂಡು ಬರುತ್ತಿದ್ದ ಆ ಮುಸ್ಲಿಂ ಸ್ನೇಹಿತ, ಈಗ ಮೂರ್ನಾಲ್ಕು ವರ್ಷಗಳ ಹಿಂದೆ ಸಿಕ್ಕಾಗ ಪಕ್ಕಾ ಕಟ್ಟರ್‌ವಾದಿ ಮುಸ್ಲಿಂನ ವೇಷದಲ್ಲಿದ್ದ. ಮಾತನಾಡುವಾಗ ಅಂದಿನ ಸ್ನೇಹ ಭಾವ ಒಸರಲಿಲ್ಲ. ಯಾಕೋ ಇದೆಲ್ಲವನ್ನೂ ನೋಡುವಾಗ ಅಂದಿನ ದಿನಗಳಲ್ಲೇ ಏಸೊಂದು ಮುದವಿತ್ತಾ ಅನ್ನಿಸದೇ ಇರುತ್ತದೆಯೇ?

ಆದರೂ ನನಗೊಂದು ಆಶಾ ಭಾವನೆಯಿದೆ. ಈಗ ನಮ್ಮ ಮನೆಯ ರಸ್ತೆಯ ಪಕ್ಕದ ಅಡ್ಡ ರಸ್ತೆಯಲ್ಲಿ ಗಂಗಮ್ಮ ದೇವಿಯ ದೇವಸ್ಥಾನವಿದೆ. ಅದರ ಹಿಂದಿನ ರಸ್ತೆಯಲ್ಲಿ ಮಸೀದಿಯಿದೆ. ಅದರ ಸುತ್ತ ಮುತ್ತಲೂ ಮುಸ್ಲಿಂ ಬಾಂಧವರಿದ್ದಾರೆ. ಮನೆಯ ಪಕ್ಕದಲ್ಲಿ ಅಣ್ಣಮ್ಮ ದೇವಿಯ ಉತ್ಸವದ ಕಚೇರಿಯಿದೆ. ವರ್ಷಕ್ಕೊಮ್ಮೆ ಮೂರು ದಿನ ಅಣ್ಣಮ್ಮ ದೇವಿ ನಮ್ಮ ಮನೆಯ ಪಕ್ಕದಲ್ಲಿ ಕೂತು ಉತ್ಸವ ನಡೆಸಿಕೊಂಡು ಹೋಗುತ್ತಾಳೆ. ಮನೆಯ ಹಿಂದೆ ವೆಂಕಟರಮಣದ ದೇವಸ್ಥಾನವಿದೆ. ಉತ್ಸವಗಳು ನಮ್ಮ ಬೀದಿಯಲ್ಲೂ ಬರುತ್ತಿರುತ್ತವೆ. ಅಂತೆಯೇ ಮುಸ್ಲಿಮರ ಹಬ್ಬದ ಮೆರವಣಿಗೆಗಳೂ ಬರುತ್ತಿರುತ್ತವೆ. ನಮ್ಮ ಉತ್ಸವಗಳನ್ನು ನೋಡಲು ಹೋಗುವಂತೆ ಅವರ ಉತ್ಸವ ಬಂದಾಗಲೂ ಮನೆಯ ಮುಂದೆ ನಿಂತು ನೋಡುತ್ತಿರುತ್ತೇವೆ. ಬೀದಿಯಲ್ಲಿ ಗಣೇಶನನ್ನು ಕೂರಿಸಿ ಏನಾದರೂ ಕಾರ್ಯಕ್ರಮಗಳು ನಡೆಯುತ್ತಿದ್ದರೆ ಮುಸ್ಲಿಂ ಮಹಿಳೆಯರು, ಹುಡುಗರು ಮಕ್ಕಳೊಂದಿಗೆ ಬಂದು ಕೂತು ಕಾರ್ಯಕ್ರಮವನ್ನು ನೋಡುತ್ತಾ ಪ್ರಸಾದವನ್ನು ಆಸ್ವಾದಿಸಿ ಹೋಗುತ್ತಾರೆ. ಮಸೀದಿಯಲ್ಲಿ ಮೆಡಿಕಲ್‌ ಕ್ಯಾಂಪ್‌ ಆದಾಗ ಹಿಂದೂಗಳು ಅಲ್ಲಿಗೆ ಹೋಗುತ್ತಾರೆ. ನಾಲ್ಕು ಮನೆಯಾಚೆಗೆ ಕ್ರಿಶ್ಚಿಯನ್ನರ ಮನೆಯಿದೆ. ಈ ಹತ್ತು ವರ್ಷಗಳಲ್ಲಿ ಈ ಬೀದಿಯಲ್ಲಿ ಒಂದು ಕೋಮು ಸಂಘರ್ಷವೂ ನಡೆದಿಲ್ಲ. ಎಲ್ಲ ಧರ್ಮದವರೂ ಅವರವರ ಪಾಡಿಗೆ, ಇನ್ನೊಬ್ಬರಿಗೆ ತೊಂದರೆ ಕೊಡದಂತೆ ತಂತಮ್ಮ ಆಚರಣೆಗಳನ್ನು ನಡೆಸಿಕೊಂಡು ಹೋಗುತ್ತಿದ್ದೇವೆ. ಇನ್ನೊಬ್ಬರ ಸಂಭ್ರಮವನ್ನೂ ಹಂಚಿಕೊಳ್ಳುತ್ತಿದ್ದೇವೆ. ಎಲ್ಲ ಕಡೆಯೂ ಹೀಗೇ ಇದ್ದರೆ ಎಷ್ಟು ಚೆನ್ನ…

ಇದನ್ನೂ ಓದಿ : ಏಸೊಂದು ಮುದವಿತ್ತು : ಮುಂದಿನ ಜನ್ಮ ಅಂತೊಂದಿದ್ದರೆ ಪ್ರೊಜೆಕ್ಟರ್ ಮ್ಯಾನ್ ಆಗುವೆ