Personal loan: ವೈಯಕ್ತಿಕ ಸಾಲ ತೆಗೆದುಕೊಳ್ಳುವಾಗ ಈ ತಪ್ಪನ್ನು ಅಪ್ಪಿತಪ್ಪಿಯೂ ಮಾಡಬೇಡಿ
ವೈಯಕ್ತಿಕ ಸಾಲವನ್ನು ತೆಗೆದುಕೊಳ್ಳಬೇಕು ಅಂತಿದ್ದೀರಾ? ಹಾಗಿದ್ದಲ್ಲಿ ಅಪ್ಪಿತಪ್ಪಿ ಕೂಡ ಈ ತಪ್ಪುಗಳನ್ನು ಮಾಡಬೇಡಿ. ಗೊತ್ತಿದ್ದೂ ಗೊತ್ತಿದ್ದು ಸಿಕ್ಕಿಹಾಕಿಕೊಂಡರೆ ಕಷ್ಟಕ್ಕೆ ಸಿಲುಕಿಕೊಳ್ಳುತ್ತೀರಿ.
ಸಾಲ ಮಾಡಿಯಾದರೂ ತುಪ್ಪ ತಿನ್ನು ಎಂಬ ಮಾತು ನಮ್ಮಲ್ಲಿದೆ. ಕೈಯಲ್ಲಿ ದುಡ್ಡಿಲ್ಲದಿದ್ದರೆ ಸಾಲಕ್ಕೆ ಮೊರೆ ಹೋಗುವವರೇ ಹೆಚ್ಚು. ಆದರೆ ಯಾವ ಬ್ಯಾಂಕ್ ಕೂಡ ಪುಕ್ಕಟೆಯಾಗಿ ಸಾಲ ನೀಡುವುದಿಲ್ಲ. ಕೆಲವು ಬ್ಯಾಂಕ್‌ಗಳು ಇಲ್ಲವೇ ಬ್ಯಾಂಕೇತರ ಹಣಕಾಸು ಸಂಸ್ಥೆಗಳು ನಿಮಗೆ ಫೋನ್ ಮಾಡಿ ಸಾಲ ಕೊಡುತ್ತಿದ್ದರೆ, ಅದು ಖಂಡಿತವಾಗಿಯೂ ಉಚಿತವಾಗಿ ಇರುವುದಿಲ್ಲ. ತೆಗೆದುಕೊಂಡ ಸಾಲಕ್ಕೆ ಭಾರಿ ಮೊತ್ತದ ಬಡ್ಡಿ ಪಾವತಿಸಬೇಕಾಗುತ್ತದೆ. ನಿಮಗೆ ಸಾಲದ ಒಳಸುಳಿಯ ಲೆಕ್ಕಾಚಾರಗಳು ತಿಳಿಯದಿದ್ದಲ್ಲಿ ಅಪಾಯ ಕಟ್ಟಿಟ್ಟ ಬುತ್ತಿ. ಉದಾಹರಣೆಗೆ, ಸಂಗೀತಾ ಈ ಹಿಂದೆ ಪರ್ಸನಲ್ ಲೋನ್ ತೆಗೆದುಕೊಂಡಿದ್ದರು. ಇತ್ತೀಚೆಗಷ್ಟೇ ತಮ್ಮ ಲೋನ್ ಸ್ಟೇಟ್‌ಮೆಂಟ್ ಕಂಡು ಹೌಹಾರಿದ್ದರು. ಯಾಕೆಂದರೆ, ಕಳೆದ ಎರಡೂವರೆ ವರ್ಷಗಳಿಂದ ಅವರು ಮರುಪಾವತಿ ಮಾಡುತ್ತಿದ್ದ ಸಾಲದ ಮೇಲಿನ ಬಡ್ಡಿಯು ಫ್ಲ್ಯಾಟ್ ಬೇಸಿಸ್ ಆಧಾರದ ಮೇಲಿತ್ತೇ ಹೊರತು ತಿಂಗಳ ಕಂತಿನ ಪಾವತಿ ನಂತರ ಕಡಿಮೆಯಾಗುವ ಸಾಲದ ಅಸಲಿನ ಮೊತ್ತಕ್ಕೆ ಬಡ್ಡಿ ವಿಧಿಸಲಾಗುತ್ತಿರಲಿಲ್ಲ. ಹೀಗಾಗಿ ಸಾಲದ ಅಸಲು ಕಡಿಮೆ ಆಗುತ್ತಿದ್ದರೂ ಸಾಲ ತಗೆದುಕೊಂಡ ಮೊದಲ ಕಂತಿನಿಂದಲೂ ಇದ್ದ ಬಡ್ಡಿಯ ಸ್ವರೂಪವೇ ಕೊನೆ ಕಂತಿನವರೆಗೂ ಉಳಿದಿತ್ತು.
ಇದು ಸಂಗೀತಾ ಅವರೊಬ್ಬರ ಕಥೆ ಅಲ್ಲ. ಬಹುಪಾಲು ಜನರು ಸಾಲ ಪಡೆಯುವ ತವಕದಲ್ಲಿ ದಾಖಲೆಗಳನ್ನು ಸರಿಯಾಗಿ ಓದದೇ ಸಹಿ ಹಾಕಿ, ಆಮೇಲೆ ಕೈಕೈ ಹಿಸುಕಿಕೊಳ್ಳುವುದುಂಟು. ಒಂದೋ ಸಾಲ ಪಡೆವ ಗ್ರಾಹಕ ದಾಖಲೆಗಳನ್ನು ಓದಿರುವುದಿಲ್ಲ ಅಥವಾ ಏಜೆಂಟ್ ಅವರಿಗೆ ಇಂತಹ ಸೂಕ್ಷ್ಮ ಸಂಗತಿಗಳನ್ನು ವಿವರಿಸಿರುವುದಿಲ್ಲ. ಸಾಲದ ದಾಖಲೆ ಪತ್ರಗಳಲ್ಲಿ ಅತಿ ಸಣ್ಣ ಅಕ್ಷರಗಳಲ್ಲಿ ಬರೆಯಲಾಗಿರುವ ಷರತ್ತು ಮತ್ತು ನಿಬಂಧನೆಗಳನ್ನು ಓದಿ, ಅರಿತುಕೊಳ್ಳುವ ಹೊತ್ತಿಗೆ ಕಾಲ ಮಿಂಚಿರುತ್ತದೆ. ಸಂಗೀತಾ ಅವರಿಗೆ ಏನಾಯಿತೋ ಹಾಗೆ. ಆದ್ದರಿಂದ ನೀವು ಸಾಲ ತೆಗೆದುಕೊಳ್ಳುವಾಗ ಎಷ್ಟು ಜಾಗೃತರಾಗಿರಬೇಕು ಎಂಬ ಬಗ್ಗೆ ತಿಳಿಯಿರಿ.
ಇದೆಲ್ಲಕ್ಕೂ ಮೊದಲು ತಿಳಿದುಕೊಳ್ಳಬೇಕಾಗಿ ಇರುವುದೇನೆಂದರೆ, ನೀವು ವೈಯಕ್ತಿಕ ಸಾಲವನ್ನು ಬ್ಯಾಂಕ್ ಅಥವಾ ಬ್ಯಾಂಕೇತರ ಹಣಕಾಸು ಸಂಸ್ಥೆಗಳಿಂದ (ಎನ್‌ಬಿಎಫ್‌ಸಿ) ಪಡೆದುಕೊಳ್ಳಬಹುದು. ಈಗ ಇವರೆಡರ ನಡುವಿನ ವ್ಯತ್ಯಾಸವೇನು ಎಂಬ ಪ್ರಶ್ನೆ ನಿಮ್ಮ ಮನದಲ್ಲಿ ಮೂಡಿರಬಹುದು. ಸರಳವಾಗಿ ಹೇಳುವುದಾದರೆ, ಯಾರಿಗೆ ಬ್ಯಾಂಕ್‌ಗಳಿಂದ ಸಾಲ ಪಡೆಯಲು ಸಾಧ್ಯವಾಗುವುದಿಲ್ಲವೋ ಅಂಥವರು ಎನ್‌ಬಿಎಫ್‌ಸಿಗಳ ಮೊರೆ ಹೋಗುತ್ತಾರೆ. ಕಾರಣ ಇಷ್ಟೆ, ನೀವು ಎನ್‌ಬಿಎಫ್‌ಸಿಯಿಂದ ಹೆಚ್ಚು ದಾಖಲೆಗಳ ಪರಿಶೀಲನೆ ತಾಪತ್ರಯವಿಲ್ಲದೇ ಸುಲಭದಲ್ಲಿ ಹಾಗೂ ಶೀಘ್ರವಾಗಿ ಸಾಲ ಪಡೆಯಬಹುದು. ಬ್ಯಾಂಕ್‌ಗಳಲ್ಲಿ ಸಾಲ ಅನುಮೋದನೆ ಪ್ರಕ್ರಿಯೆ ಕಠಿಣವಾಗಿದ್ದರೆ ಎನ್‌ಬಿಎಫ್‌ಸಿಗಳು ಈ ವಿಚಾರದಲ್ಲಿ ಉದಾರತೆ ತೋರುತ್ತವೆ. ಹೀಗಾಗಿಯೇ ಬ್ಯಾಂಕ್‌ಗಳಿಗೆ ಹೋಲಿಸಿದರೆ ಎನ್‌ಬಿಎಫ್‌ಸಿಗಳು ಸಾಲದ ಮೊತ್ತಕ್ಕೆ ವಿಧಿಸುವ ಬಡ್ಡಿ ದರವು ಅಧಿಕವಾಗಿರುತ್ತದೆ.
ಹಾಗಾದರೆ ಈಗ ಪ್ರಶ್ನೆ ಏನೆಂದರೆ, ನೀವು ಯಾರಿಂದ ಸಾಲ ಪಡೆಯಬೇಕು? ಸಾಲದ ಅವಶ್ಯಕತೆ ಇರುವ ಗ್ರಾಹಕರು ಮೊದಲು ತಮ್ಮ ಖಾತೆ ಇರುವ ಬ್ಯಾಂಕ್ ಅನ್ನು ಸಂಪರ್ಕಿಸಬೇಕು ಎನ್ನುತ್ತಾರೆ ಸರ್ಟಿಫೈಡ್ ಫೈನಾನ್ಷಿಯಲ್ ಪ್ಲಾನರ್ ಜಿತೇಂದ್ರ ಸೋಲಂಕಿ. ಏಕೆಂದರೆ ಈಗಾಗಲೇ ಅಂತಹ ಬ್ಯಾಂಕ್ ಬಳಿ ನಿಮ್ಮ ಕ್ರೆಡಿಟ್ ಹಿಸ್ಟರಿ ಇರುತ್ತದೆ. ನಿಮ್ಮ ವಹಿವಾಟಿನ ಆಧಾರದಲ್ಲಿ ಕಡಿಮೆ ಬಡ್ಡಿ ದರದೊಂದಿಗೆ ಅತಿ ಕಡಿಮೆ ಸಮಯದಲ್ಲಿ ಸಾಲ ಪಡೆಯಲು ಸಾಧ್ಯವಾಗುತ್ತದೆ. ಅದರಲ್ಲೂ ಕೆಲವು ಬ್ಯಾಂಕ್‌ಗಳು ಉತ್ತಮ ಕ್ರೆಡಿಟ್ ಸ್ಕೋರ್ ಹೊಂದಿರುವ ಗ್ರಾಹಕರಿಗೆ ಪೂರ್ವ-ಅನುಮೋದಿತ ಸಾಲಗಳನ್ನೂ ನೀಡುತ್ತವೆ. ಇಂತಹ ಸಾಲವನ್ನು ನೀವು ಬೇಕಾದಂತೆ ಪಡೆದುಕೊಳ್ಳಬಹುದು. ಒಂದು ವೇಳೆ ನೀವು ಈಗಾಗಲೇ ಬ್ಯಾಂಕೇತರ ಹಣಕಾಸು ಸಂಸ್ಥೆಯಲ್ಲಿ ಸಾಲದ ಖಾತೆ ಹೊಂದಿದ್ದರೆ ಅಲ್ಲಿಂದಲೂ ಹೆಚ್ಚುವರಿ ಸಾಲಕ್ಕೆ ಪ್ರಯತ್ನಿಸಬಹುದು. ಸರಿ ಹಾಗದರೆ, ನಾವೀಗ ಬಡ್ಡಿ ದರಗಳ ವಿಚಾರಕ್ಕೆ ಬರೋಣ
ಗ್ರಾಹಕರು ತಿಳಿದುಕೊಳ್ಳಬೇಕಾದ ಮತ್ತೊಂದು ವಿಷಯವೆಂದರೆ ಬಡ್ಡಿ ದರವನ್ನು ಹೇಗೆ ವಿಧಿಸಲಾಗುತ್ತದೆ ಎಂಬುದು. ಸಾಲದ ಮೊತ್ತಕ್ಕೆ ಫ್ಲ್ಯಾಟ್ ಬೇಸಿಸ್ ಆಧಾರದಲ್ಲಿ ಬಡ್ಡಿ ವಿಧಿಸಲಾಗುತ್ತದೋ ಅಥವಾ ಸಾಲದ ಕಂತು ಕಡಿಮೆಯಾದಂತೆ ಇಳಿಕೆಯಾಗುವ ಸಾಲದ ಅಸಲಿಗೆ ಬಡ್ಡಿ ವಿಧಿಸಲಾಗುತ್ತದೋ ಎಂಬುದನ್ನು ಗಮನಿಸಬೇಕಾಗುತ್ತದೆ. ಇದಲ್ಲದೇ ಬಡ್ಡಿ ದರವು ಫ್ಲೋಟಿಂಗ್ ಅಥವಾ ಫಿಕ್ಸೆಡ್ ಎಂಬುದನ್ನೂ ಖಚಿತಪಡಿಸಿಕೊಳ್ಳಿ. ಫ್ಲಾಟ್ ಬೇಸಿಸ್ ಆಧಾರದಲ್ಲಿ ಮರುಪಾವತಿ ಅವಧಿಯುದ್ದಕ್ಕೂ ಸಾಲದ ಅಸಲಿಗೆ ಒಂದೇ ರೀತಿಯ ಬಡ್ಡಿ ವಿಧಿಸಲಾಗುತ್ತದೆ. ಅಂದರೆ ಇಲ್ಲಿ ಸಾಲದ ಅವಧಿ ಪೂರ್ತಿಯೂ ಆರಂಭದಲ್ಲಿ ಅಸಲಿಗೆ ವಿಧಿಸಲಾಗುತ್ತಿದ್ದ ಬಡ್ಡಿಯನ್ನೇ ಮುಂದುವರಿಸಲಾಗುತ್ತದೆ. ಇನ್ನು ರೆಡ್ಯೂಸಿಂಗ್ ಬ್ಯಾಲೆನ್ಸ್ ಇಂಟರೆಸ್ಟ್ ಲೋನ್ ಪದ್ಧತಿಯಲ್ಲಿ ಕಂತಿನ ಮರುಪಾವತಿ ಬಳಿಕ ಕಡಿಮೆಯಾಗುತ್ತಾ ಬರುವ ಸಾಲದ ಅಸಲಿನ ಮೊತ್ತಕ್ಕೆ ಬಡ್ಡಿ ವಿಧಿಸಿಕೊಂಡು ಬರಲಾಗುತ್ತದೆ. ಫ್ಲೋಟಿಂಗ್ ಬಡ್ಡಿ ದರವು ರೆಪೊ ದರದ ಏರಿಳಿತದ ಮೇಲೆ ಅವಲಂಬಿತವಾಗಿದ್ದು, ಹೆಚ್ಚು ಅಥವಾ ಕಡಿಮೆ ಆಗುತ್ತಿರುತ್ತದೆ. ಇಲ್ಲಿ ಬಹುತೇಕ ಗ್ರಾಹಕರಿಗೆ ಸಾಲದ ಮೇಲಿನ ಬಡ್ಡಿ ದರ ಇಳಿಕೆಯ ಲಾಭವಾಗಿರುವುದು ಸ್ಪಷ್ಟವಾಗಿದೆ.
ನಮ್ಮ ಸಲಹೆ – ಸಾಧ್ಯವಾದಷ್ಟೂ ನಿಮ್ಮ ಅಗತ್ಯಗಳಿಗೆ ವೈಯಕ್ತಿಕ ಸಾಲದ ಮೊರೆ ಹೋಗಬೇಡಿ – ಬ್ಯಾಂಕೇತರ ಹಣಕಾಸು ಸಂಸ್ಥೆಗಳ ಬದಲಿಗೆ ಬ್ಯಾಂಕ್‌ಗಳಿಂದ ಸಾಲ ಪಡೆಯಲು ಪ್ರಯತ್ನಿಸಿ – ನೀವು ಪಡೆದುಕೊಳ್ಳುವ ಸಾಲದ ಬಡ್ಡಿ ಸ್ವರೂಪ ಹಾಗೂ ಬಡ್ಡಿ ದರ ತಪ್ಪದೇ ತಿಳಿದುಕೊಳ್ಳಿ
ಕೊನೆ ಮಾತು ಪರ್ಸನಲ್ ಲೋನ್‌ನಲ್ಲಿ ಅಡಗಿರುವ ಹಿಡನ್ ಚಾರ್ಜಸ್ ಯಾವುವು ಎಂದು ತಿಳಿಯಬೇಕೆ? ಹಾಗಿದ್ದರೆ ನಮ್ಮ ಲೇಖನಗಳನ್ನು ಗಮನಿಸುತ್ತಾ ಇರಿ
(ಲೇಖಕರು: ಪವನ್ ಜಯಸ್ವಾಲ್)
ಇದನ್ನೂ ಓದಿ: Personal loan: ಟೇಕ್ ಇಟ್ ಈಸಿ ಧೋರಣೆ ಬೇಡ; ಯಾವತ್ತಿಗೂ ಈ ಕಾರಣಗಳಿಗಾಗಿ ವೈಯಕ್ತಿಕ ಸಾಲ ತಗೋಬೇಡಿ