ಕಾರುಗಳ ಹೆಡ್ಲೈಟ್ ಬೆಳಕಲ್ಲಿ ಪರೀಕ್ಷೆ ಬರೆದ 400 ವಿದ್ಯಾರ್ಥಿಗಳು; ಪರೀಕ್ಷಾ ಕೇಂದ್ರದಲ್ಲಿ ಇದೆಂಥಾ ಅವ್ಯವಸ್ಥೆ !
ಎಲ್ಲವೂ ಸರಿಯಾಗಿ 4.30ರ ನಂತರ ಪರೀಕ್ಷೆ ಶುರುವಾಗಿ ಅದು ಮುಗಿಯಲು 8ಗಂಟೆಯಾಯಿತು. ಆ ಕಟ್ಟಡಕ್ಕೆ ಸೂಕ್ತ ವಿದ್ಯುತ್ ವ್ಯವಸ್ಥೆಯಿಲ್ಲ ಎಂಬುದು ಕತ್ತಲಾದ ಬಳಿಕವೇ ಗೊತ್ತಾಗಿದೆ. ಇದು ಮತ್ತೊಂದಷ್ಟು ಪ್ರಕ್ಷುಬ್ಧತೆಗೆ ಕಾರಣವಾಯಿತು.
12ನೇ ತರಗತಿ ವಿದ್ಯಾರ್ಥಿಗಳು ಕಾರಿನ ಹೆಡ್ಲೈಟ್ ಬೆಳಕಲ್ಲಿ ಕುಳಿತು ಪರೀಕ್ಷೆ ಬರೆದ ವಿಚಿತ್ರ ಘಟನೆ ಬಿಹಾರದ ಮೋತಿಹಾರ್ನಲ್ಲಿ ನಡೆದಿದೆ. ಇದರ ವಿಡಿಯೋಗಳು ವೈರಲ್ ಆಗಿದೆ. ಬಿಹಾರದಲ್ಲಿ ಯಾವಾಗಲೂ ಪರೀಕ್ಷೆ ವಿಚಾರದಲ್ಲಿ ಅವ್ಯವಹಾರ, ಮೋಸದ ಬಗ್ಗೆ ವರದಿಯಾಗುತ್ತಲೇ ಇರುತ್ತದೆ. ಅದರ ನಡುವೆ ಈಗ ಇಂಥದ್ದೊಂದು ವಿಡಿಯೋ ವೈರಲ್ ಆಗಿದ್ದು ತೀವ್ರ ಟೀಕೆಗೆ ಗುರಿಯಾಗಿದೆ. ಹೀಗೆ ಕಾರಿನ ಹೆಡ್ಲೈಟ್ನಲ್ಲಿ ಪರೀಕ್ಷೆ ಬರೆದವರು ಬರೋಬ್ಬರಿ 400 ವಿದ್ಯಾರ್ಥಿಗಳು.
ಅಂಥದ್ದೇನಾಯ್ತು? ಬಿಹಾರದ ಮಹಾರಾಜಾ ಹರೇಂದ್ರ ಕಿಶೋರ್ ಕಾಲೇಜಿನಲ್ಲಿ 12ನೇ ತರಗತಿ ಪರೀಕ್ಷೆ ನಡೆಯುತ್ತಿತ್ತು. ಪರೀಕ್ಷೆಯ ಎರಡನೇ ಹಂತ ಮಧ್ಯಾಹ್ನ 1.45ರಿಂದ ಪ್ರಾರಂಭವಾಗಿ ಸಂಜೆ 5ಗಂಟೆವರೆಗೆ ನಡೆಯಬೇಕಿತ್ತು. 1.45ಕ್ಕೆ ಪರೀಕ್ಷೆ ಶುರುವಾದರೂ ಕೂಡ ಸಂಜೆ 4.30ರವರೆಗೂ ಪರೀಕ್ಷಾರ್ಥಿಗಳಿಗೆ ಉತ್ತರ ಬರೆಯಲು ಪೇಪರ್ ಸಿಗಲಿಲ್ಲ. ಹೀಗಾಗಿ ಪರೀಕ್ಷೆ ಮುಗಿಯುವುದು ವಿಳಂಬವಾಗಿ ಸಂಜೆ 8ಗಂಟೆಯಾಯಿತು. ಪರೀಕ್ಷೆ ಕೇಂದ್ರದಲ್ಲಿ ಮಾಡಲಾದ ಆಸನ ವ್ಯವಸ್ಥೆಯ ವಿಚಾರದಲ್ಲಿ ಉಂಟಾದ ಅವ್ಯವಸ್ಥೆಯಿಂದಾಗಿ 4.30ರವರೆಗೂ ವಿದ್ಯಾರ್ಥಿಗಳಿಗೆ ಉತ್ತರ ಪತ್ರಿಕೆ ಸಿಗಲಿಲ್ಲ. ಬಳಿಕವಂತೂ ಅಲ್ಲಿ ಪ್ರತಿಭಟನೆ, ಗಲಾಟೆಗಳೂ ಶುರವಾಗಿದ್ದವು. ಸ್ಥಳಕ್ಕೆ ಪೊಲೀಸರೂ ಕೂಡ ಆಗಮಿಸಿದ್ದರು. ಪರಿಸ್ಥಿತಿ ನಿಯಂತ್ರಣಕ್ಕೆ ತರಲು ಹಿರಿಯ ಪೊಲೀಸ್ ಅಧಿಕಾರಿಗಳೂ ಕೂಡ ಸ್ಥಳಕ್ಕೆ ಆಗಮಿಸಿದ್ದರು.
ಎಲ್ಲವೂ ಸರಿಯಾಗಿ 4.30ರ ನಂತರ ಪರೀಕ್ಷೆ ಶುರುವಾಗಿ ಅದು ಮುಗಿಯಲು 8ಗಂಟೆಯಾಯಿತು. ಆ ಕಟ್ಟಡಕ್ಕೆ ಸೂಕ್ತ ವಿದ್ಯುತ್ ವ್ಯವಸ್ಥೆಯಿಲ್ಲ ಎಂಬುದು ಕತ್ತಲಾದ ಬಳಿಕವೇ ಗೊತ್ತಾಗಿದೆ. ಇದು ಮತ್ತೊಂದಷ್ಟು ಪ್ರಕ್ಷುಬ್ಧತೆಗೆ ಕಾರಣವಾಯಿತು. ಬಳಿಕ ಜನರೇಟರ್ ಆನ್ ಮಾಡಲಾಯಿತು. ವಿದ್ಯಾರ್ಥಿಗಳಿಗೆ ಕೇಂದ್ರದ ಕಾರಿಡಾರ್ನಲ್ಲಿ ಕುಳಿತು ಪರೀಕ್ಷೆ ಬರೆಯಲು ಅನುವು ಮಾಡಲಾಯಿತು. ಪಾಲಕರು ತಮ್ಮ ಕಾರಿನ ಹೆಡ್ಲೈಟ್ ಆನ್ ಮಾಡುವ ಮೂಲಕ ಬೆಳಕಿನ ವ್ಯವಸ್ಥೆ ಮಾಡಿದರು. ಈ ಅವ್ಯವಸ್ಥೆಯ ವಿಡಿಯೋ ವೈರಲ್ ಆಗುತ್ತಿದ್ದಂತೆ ಸಿಕ್ಕಾಪಟೆ ಅಸಮಾಧಾನ ವ್ಯಕ್ತವಾಗಿದೆ. ಸೂಕ್ತ ತನಿಖೆ ನಡೆಸುವಂತೆ ಜಿಲ್ಲಾಡಳಿತವೂ ಆದೇಶ ನೀಡಿದೆ.
ರೈಲ್ವೆ ನೇಮಕಾತಿ ಮಂಡಳಿ ನಡೆಸುವ ಎನ್ಟಿಪಿಸಿ ಮೊದಲ ಹಂತದ ಪರೀಕ್ಷೆಯಲ್ಲಿ ಅವ್ಯವಹಾರ ನಡೆದಿದೆ ಎಂದು ಆರೋಪಿಸಿ ಬಿಹಾರದಲ್ಲಿ ಉದ್ಯೋಗಾಕಾಂಕ್ಷಿಗಳು ಪ್ರತಿಭಟನೆ ನಡೆಸಿದ್ದರು. ಪಾಟ್ನಾ ಸೇರಿ ಹಲವೆಡೆ ರೈಲ್ವೆ ಹಳಿಗಳನ್ನು ಬಂದ್ ಮಾಡಿದ್ದರು. ರೈಲುಗಳಿಗೆ ಬೆಂಕಿ ಹಚ್ಚಿದ್ದರು. ಕಲ್ಲು ತೂರಾಟ ನಡೆಸಿದ್ದರು. ಪ್ರತಿಭಟನಾಕಾರರನ್ನು ನಿಯಂತ್ರಿಸಲು ಪೊಲೀಸರು ಅಶ್ರುವಾಯು ಪ್ರಯೋಗ ನಡೆಸಿದ್ದರು.
ಇದನ್ನೂ ಓದಿ: ನನ್ನ ವಿರುದ್ಧ ಬಿಜೆಪಿ ವರಿಷ್ಠರಿಗೆ ದೂರು ಕೊಟ್ಟಿದ್ದಾರೆ, ಅರುಣ್ ಸಿಂಗ್ ಫೋನ್ ಮಾಡಿದ್ದರು: ರೇಣುಕಾಚಾರ್ಯ