ಪಾಕಿಸ್ತಾನದಲ್ಲಿ 125 ವರ್ಷ ಹಳೆಯ ಹಿಂದೂ ದೇವಾಲಯದ ಧ್ವಂಸಕ್ಕೆ ಭಾರತ ಆಕ್ರೋಶ

ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿ ಮದರಸಾ ನಿರ್ಮಾಣಕ್ಕಾಗಿ 125 ವರ್ಷ ಹಳೆಯ ಹಿಂದೂ ದೇವಾಲಯವೊಂದನ್ನು ಕಳೆದ ವಾರ ಧ್ವಂಸಗೊಳಿಸಲಾಗಿದೆ. ಈ ಕೃತ್ಯವು ಅಲ್ಪಸಂಖ್ಯಾತರ ಹಕ್ಕುಗಳ ಸಂಘಟನೆ ಮತ್ತು ಧಾರ್ಮಿಕ ಆಸ್ತಿಗಳ ಉಸ್ತುವಾರಿ ವಹಿಸಿರುವ ಮಂಡಳಿಯ ನಡುವೆ ತೀವ್ರ ವಿವಾದಕ್ಕೆ ಕಾರಣವಾಗಿದೆ. ಅಲ್ಪಸಂಖ್ಯಾತ ಸಮುದಾಯದ ಪ್ರತಿಭಟನೆಗಳ ನಡುವೆ, ಭಾರಿ ಮಳೆಯಿಂದಾಗಿ ದೇವಾಲಯದ ಒಂದು ಭಾಗ ಮಾತ್ರ ಕುಸಿದುಬಿದ್ದಿದೆ ಎಂದು ಪಾಕಿಸ್ತಾನ ಸರ್ಕಾರ ಸ್ಪಷ್ಟನೆ ನೀಡಿದೆ. ಆದರೆ, ಪಾಕಿಸ್ತಾನ ಉದ್ದೇಶಪೂರ್ವಕವಾಗಿ ಈ ಕೃತ್ಯ ಎಸಗಿದೆ ಎಂದು ಭಾರತ ಆಕ್ರೋಶ ವ್ಯಕ್ತಪಡಿಸಿದೆ.

ಪಾಕಿಸ್ತಾನದಲ್ಲಿ 125 ವರ್ಷ ಹಳೆಯ ಹಿಂದೂ ದೇವಾಲಯದ ಧ್ವಂಸಕ್ಕೆ ಭಾರತ ಆಕ್ರೋಶ
ಪಾಕಿಸ್ತಾನದ ಹಿಂದೂ ದೇವಾಲಯ ಧ್ವಂಸ
Image Credit source: x

Updated on: Sep 02, 2026 | 10:47 PM

ಇಸ್ಲಮಾಬಾದ್, ಸೆಪ್ಟೆಂಬರ್ 2: ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿ 125 ವರ್ಷ ಹಳೆಯ ಹಿಂದೂ ದೇವಾಲಯವನ್ನು ಧ್ವಂಸಗೊಳಿಸಿರುವುದಕ್ಕೆ ಭಾರತ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಇದನ್ನು ಅಲ್ಪಸಂಖ್ಯಾತರ ಪ್ರಾರ್ಥನಾ ಮಂದಿರದ ಮೇಲಿನ ವಿಧ್ವಂಸಕ ಕೃತ್ಯ ಎಂದು ಖಂಡಿಸಿದೆ. ನರೋವಾಲ್‌ನಲ್ಲಿರುವ ದೇವಾಲಯವನ್ನು ರಕ್ಷಿಸುವಲ್ಲಿ ಅಧಿಕಾರಿಗಳ ಸ್ಪಷ್ಟ ನಿರ್ಲಕ್ಷ್ಯ ಮತ್ತು ವೈಫಲ್ಯ ಕಳವಳಕಾರಿಯಾಗಿದೆ ಎಂದು ಭಾರತದ ವಿದೇಶಾಂಗ ಸಚಿವಾಲಯ ಹೇಳಿದೆ.

ಈ ವಿಷಯದ ಕುರಿತು ತಕ್ಷಣವೇ ಪಾರದರ್ಶಕ ತನಿಖೆ ನಡೆಸಿ ಅಪರಾಧಿಗಳನ್ನು ಹೊಣೆಗಾರರನ್ನಾಗಿ ಮಾಡಬೇಕೆಂದು ಭಾರತ ಸರ್ಕಾರ ಆಗ್ರಹಿಸಿದೆ. ಅಲ್ಲದೆ, ಅಪವಿತ್ರಗೊಳಿಸಲಾದ ದೇವಾಲಯವನ್ನು ಪುನಃಸ್ಥಾಪಿಸಲು ತಕ್ಷಣದ ಪರಿಹಾರ ಕ್ರಮಗಳನ್ನು ಕೈಗೊಳ್ಳಬೇಕು ಮತ್ತು ಅಲ್ಪಸಂಖ್ಯಾತರ ಕ್ಷೇಮಾಭಿವೃದ್ಧಿಯನ್ನು ಖಚಿತಪಡಿಸಿಕೊಳ್ಳುವ ತನ್ನ ಪ್ರಾಥಮಿಕ ಕರ್ತವ್ಯವನ್ನು ಪೂರೈಸಬೇಕು ಎಂದು ಪಾಕಿಸ್ತಾನಕ್ಕೆ ಕರೆ ನೀಡಿದೆ.

ಇದನ್ನೂ ಓದಿ: ಮದರಸಾ ವಿಸ್ತರಣೆಗೆ ಪಾಕಿಸ್ತಾನದಲ್ಲಿ 125 ವರ್ಷ ಹಳೆಯ ಹಿಂದೂ ದೇವಾಲಯ ಧ್ವಂಸ: ಮಳೆಯಿಂದ ಕುಸಿದಿದೆ ಎಂದ ಸರ್ಕಾರದ ವಿರುದ್ಧ ಆಕ್ರೋಶ

ಏನಿದು ಘಟನೆ?:

ಲಾಹೋರ್‌ನಿಂದ ಸುಮಾರು 130 ಕಿ.ಮೀ ದೂರದಲ್ಲಿರುವ ನರೋವಾಲ್ ಜಿಲ್ಲೆಯ ಸಿರಾಜ್ ಗ್ರಾಮದಲ್ಲಿರುವ 125 ವರ್ಷ ಹಳೆಯ ಈ ದೇವಾಲಯವು ಸುಮಾರು 1,000 ಚದರ ಮೀಟರ್ ಜಾಗವನ್ನು ಹೊಂದಿತ್ತು. ಪಕ್ಕದಲ್ಲೇ ಇರುವ ಮದರಸಾವನ್ನು ವಿಸ್ತರಿಸುವ ಉದ್ದೇಶದಿಂದ ಧಾರ್ಮಿಕ ತೀವ್ರಗಾಮಿಗಳ ಗುಂಪೊಂದು ಆಗಸ್ಟ್ 21ರಂದು ಈ ದೇವಾಲಯವನ್ನು ಕೆಡವಿದೆ ಎಂದು ಸ್ಥಳೀಯ ನಿವಾಸಿಗಳು ಆರೋಪಿಸಿದ್ದಾರೆ.


ಇದನ್ನೂ ಓದಿ: ಎಸ್​ಸಿಒ ಶೃಂಗಸಭೆಯ ಗ್ರೂಪ್ ಫೋಟೋದಿಂದ ಪ್ರಧಾನಿ ಮೋದಿಯ ಫೋಟೋ ಕಟ್ ಮಾಡಿದ ಪಾಕಿಸ್ತಾನ!

ಪಾಕಿಸ್ತಾನ ಸರ್ಕಾರದ ಸ್ಪಷ್ಟನೆಯೇನು?:

ಪಾಕಿಸ್ತಾನದ ಪಂಜಾಬ್ ಪ್ರಾಂತೀಯ ಸರ್ಕಾರವು ಈ ಘಟನೆ ಬಗ್ಗೆ ಸ್ಪಷ್ಟನೆ ನೀಡಿದ್ದು, ದೇವಾಲಯವನ್ನು ಕೆಡವಿಲ್ಲ, ಭಾರಿ ಮಳೆಯಿಂದಾಗಿ ಅದು ಕುಸಿದುಬಿದ್ದಿದೆ ಎಂದಿದೆ. ಮಳೆಯಿಂದಾಗಿ ದೇವಾಲಯದ ಒಂದು ಭಾಗ ಮಾತ್ರ ಕುಸಿದಿರುವುದು ಕಂಡುಬಂದಿದೆ. ಅದನ್ನು ಸರ್ಕಾರವೇ ಪುನರ್ನಿರ್ಮಾಣ ಮಾಡಲಿದೆ ಎಂದು ತಿಳಿಸಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Published On - 10:46 pm, Wed, 2 September 26

ಸುಷ್ಮಾ ಚಕ್ರೆ

ಸುಷ್ಮಾ ಚಕ್ರೆ ಮೂಲತಃ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದವರು. ಬೆಂಗಳೂರಿನಲ್ಲಿ ವಾಸ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. 10 ವರ್ಷಗಳಿಂದ ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡ, ಟಿವಿ9 ಡಿಜಿಟಲ್ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿದೆ. ಸಾಹಿತ್ಯ, ಸಂಗೀತ, ಸಿನಿಮಾ, ಬರವಣಿಗೆಯಲ್ಲಿ ಆಸಕ್ತಿ ಹೊಂದಿದ್ದಾರೆ.

Read More
Loading...
Unable to load recommendations.
Follow Us