Zika Virus: ಕೇರಳದಲ್ಲಿ 14 ಜನರಲ್ಲಿ ಝಿಕಾ ವೈರಸ್​ ಪತ್ತೆ; ರಾಜ್ಯ ಸರ್ಕಾರದ ಸಹಾಯಕ್ಕೆ ಆಗಮಿಸಿದ ಕೇಂದ್ರ ತಜ್ಞರ ತಂಡ

ಝಿಕಾ ವೈರಸ್​ ಎಂಬುದು ಈಡಿಸ್​ ಎಂಬ ಸೊಳ್ಳೆಯಿಂದ ಹುಟ್ಟುವ ಸೋಂಕು ಆಗಿದ್ದು, ಮೊದಲು ಪತ್ತೆಯಾಗಿದ್ದು 1947ರಲ್ಲಿ ಉಗಾಂಡಾದಲ್ಲಿ. ಮೊದಲು ಮಂಗಗಳಲ್ಲಿ ಕಾಣಿಸಿಕೊಂಡ ಕಾಯಿಲೆ ನಂತರ 1952ರಲ್ಲಿ ಉಗಾಂಡಾ ಮತ್ತು ಯುನೈಟೆಡ್​ ರಿಪಬ್ಲಿಕ್​ ಆಫ್​ ಟಾಂಜಾನಿಯಾದಲ್ಲಿ ಮಾನವರಲ್ಲಿಯೂ ಪತ್ತೆಯಾಯ್ತು.

Zika Virus: ಕೇರಳದಲ್ಲಿ 14 ಜನರಲ್ಲಿ ಝಿಕಾ ವೈರಸ್​ ಪತ್ತೆ; ರಾಜ್ಯ ಸರ್ಕಾರದ ಸಹಾಯಕ್ಕೆ ಆಗಮಿಸಿದ ಕೇಂದ್ರ ತಜ್ಞರ ತಂಡ
ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: Lakshmi Hegde

Updated on: Jul 10, 2021 | 9:34 AM

ಕೊರೊನಾ ಎರಡನೇ ಅಲೆಯ ವಿರುದ್ಧ ಹೋರಾಟವೇ ಇನ್ನು ಮುಗಿದಿಲ್ಲ. ಆದರೆ ಅದಾಗಲೇ ಕೇರಳದಲ್ಲಿ ಝಿಕಾ ವೈರಸ್ ಕಾಟ ಶುರುವಾಗಿದೆ. ಮೊನ್ನೆ ಮಹಿಳೆಯೊಬ್ಬರಲ್ಲಿ ಈ ವೈರಸ್ ಕಾಣಿಸಿಕೊಂಡು ಆತಂಕ ಸೃಷ್ಟಿಸಿತ್ತು. ಇದೀಗ ಕೇರಳದಲ್ಲಿ ಬರೋಬ್ಬರಿ 14 ಝಿಕಾ ವೈರಸ್ ಕೇಸ್​ಗಳು ಪತ್ತೆಯಾಗಿವೆ. ಇದನ್ನು ಕೇಂದ್ರ ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಝಿಕಾ ವೈರಸ್​ ಗಂಭೀರತೆ ಎಷ್ಟಿದೆ ಎಂಬುದನ್ನು ಪರಿಶೀಲಿಸಲು ಮತ್ತು ರಾಜ್ಯ ಸರ್ಕಾರಕ್ಕೆ ಸಹಾಯ ಕೇಂದ್ರ ಆರೋಗ್ಯ ಇಲಾಖೆ ಮುಂದಾಗಿದೆ. ಈಗಾಗಲೇ 6 ಜನ ತಜ್ಞರ ತಂಡವನ್ನು ಕೇರಳಕ್ಕೆ ಕಳಿಸಲಾಗಿದೆ ಎಂದು ಆರೋಗ್ಯ ಇಲಾಖೆ ಜಂಟಿ ಕಾರ್ಯದರ್ಶಿ ಲವ​ ಅಗರ್​ವಾಲ್​ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಲವ ಅಗರ್​ವಾಲ್​, ಏಮ್ಸ್​​​ನ ವೈದ್ಯರು, ತಜ್ಞರ ತಂಡ ಈಗಾಗಲೇ ಕೇರಳಕ್ಕೆ ತೆರಳಿದೆ. ಅಲ್ಲಿನ ಝಿಕಾ ವೈರಸ್​ ಪರಿಸ್ಥಿತಿಯ ವರದಿ ನೀಡುವಂತೆ ಹೇಳಲಾಗಿದೆ ಮತ್ತು ಈ ತಜ್ಞರು ರಾಜ್ಯ ಸರ್ಕಾರಕ್ಕೆ ಸಹಕಾರ ನೀಡಲಿದ್ದಾರೆ ಎಂದೂ ಲವ ಅಗರ್​ವಾಲ್​ ಹೇಳಿದ್ದಾರೆ.

ಕೇರಳದಲ್ಲಿ ಒಟ್ಟು 14 ಜನರಲ್ಲಿ ಝಿಕಾ ವೈರಸ್ ಕಾಣಿಸಿಕೊಂಡಿದ್ದು, ಅದರಲ್ಲಿ ಒಬ್ಬರು 24ವರ್ಷದ ಗರ್ಭಿಣಿ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕೇರಳ ಆರೋಗ್ಯ ಸಚಿವರಾದ ವೀಣಾ ಜಾರ್ಜ್​, ಈಡಿಸ್ ಸೊಳ್ಳೆಯಿಂದ ಹರಡುವ ಈ ರೋಗ ನಿಯಂತ್ರಣಕ್ಕೆ ಎಲ್ಲ ರೀತಿಯ ಕ್ರಮಗಳನ್ನೂ ಕೈಗೊಳ್ಳಲಾಗಿದೆ. ಪ್ರತಿ ಜಿಲ್ಲೆಗಳಲ್ಲೂ ಎಚ್ಚರಿಕೆ ವಹಿಸಲಾಗಿದೆ ಎಂದು ತಿಳಿಸಿದ್ದಾರೆ.

ಏನಿದು ಝಿಕಾ ವೈರಸ್​? ಝಿಕಾ ವೈರಸ್​ ಎಂಬುದು ಈಡಿಸ್​ ಎಂಬ ಸೊಳ್ಳೆಯಿಂದ ಹುಟ್ಟುವ ಸೋಂಕು ಆಗಿದ್ದು, ಮೊದಲು ಪತ್ತೆಯಾಗಿದ್ದು 1947ರಲ್ಲಿ ಉಗಾಂಡಾದಲ್ಲಿ. ಮೊದಲು ಮಂಗಗಳಲ್ಲಿ ಕಾಣಿಸಿಕೊಂಡ ಕಾಯಿಲೆ ನಂತರ 1952ರಲ್ಲಿ ಉಗಾಂಡಾ ಮತ್ತು ಯುನೈಟೆಡ್​ ರಿಪಬ್ಲಿಕ್​ ಆಫ್​ ಟಾಂಜಾನಿಯಾದಲ್ಲಿ ಮಾನವರಲ್ಲಿಯೂ ಪತ್ತೆಯಾಯ್ತು. 1960ರಿಂದ 1980ರ ಸುಮಾರಿಗೆ ಆಫ್ರಿಕಾ, ಏಷ್ಯಾ, ಅಮೆರಿಕಾಗಳಿಗೆ ಕಾಲಿಟ್ಟಿತು. ಸಾಮಾನ್ಯ ಜ್ವರ, ಮೈಮೇಲೆ ಕೆಂಪು ಕಲೆ, ಕೆಂಪು ಕಣ್ಣುಗಳು, ಸಂಧಿವಾತ, ಸ್ನಾಯು ನೋವು ಇತ್ಯಾದಿಗಳು ರೋಗ ಲಕ್ಷಣಗಳಾಗಿವೆ. ಝಿಕಾ ವೈರಸ್​ ದೇಹವನ್ನು ಪ್ರವೇಶಿಸಿದ ಮೂರನೇ ದಿನದಿಂದ 12 ದಿನಗಳಲ್ಲಿ ಕಾಯಿಲೆಯ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಕೆಲವರಿಗೆ ಇದು ತೀವ್ರವಾಗಿ ಬಾಧಿಸುವುದಿಲ್ಲ.

ಇದನ್ನೂ ಓದಿ: Karnataka Dams: ಮುಂಗಾರು ಮಳೆ ಮತ್ತೆ ಅಬ್ಬರಿಸತೊಡಗಿದೆ; ರಾಜ್ಯದ 12 ಪ್ರಮುಖ ಜಲಾಶಯಗಳಲ್ಲಿ ನೀರಿನ ಮಟ್ಟ ಹೀಗಿದೆ

(14 Zika virus cases reported in Kerala)