ಪ್ರಾಂಶುಪಾಲರಿಂದ ಕಿರುಕುಳ ತಾಳಲಾರದೆ ಶಾಲೆಯಲ್ಲೇ ನೇಣು ಹಾಕಿಕೊಂಡ 15 ವರ್ಷದ ಬಾಲಕಿ
ಛತ್ತೀಸ್‌ಗಢದ ಜಶ್ಪುರದಲ್ಲಿ 9ನೇ ತರಗತಿಯ ವಿದ್ಯಾರ್ಥಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡು ಸಾವನ್ನಪ್ಪಿದ್ದು, ಶಾಲೆಯ ಪ್ರಾಂಶುಪಾಲರು ಆಕೆಯೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆ ಎಂದು ಆರೋಪಿಸಿ ಸೂಸೈಡ್ ನೋಟ್ ಬರೆದಿದ್ದಾಳೆ. ಶಾಲಾ ಆವರಣದಲ್ಲಿರುವ ಅಧ್ಯಯನ ಕೊಠಡಿಯಲ್ಲಿ ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಶಾಲಾ ಆವರಣದಲ್ಲಿ ಹಾಸ್ಟೆಲ್ ಅನ್ನು ಅಕ್ರಮವಾಗಿ ನಡೆಸಲಾಗುತ್ತಿದೆ ಎಂದು ತನಿಖೆಯಲ್ಲಿ ತಿಳಿದುಬಂದಿದೆ. ಹಾಸ್ಟೆಲ್ ಅನ್ನು ನಿರ್ವಹಿಸಲು ಅಗತ್ಯವಾದ ಅನುಮತಿಯನ್ನು ಪಡೆಯಲಾಗಿಲ್ಲ.

ಜಶ್‌ಪುರ, ನವೆಂಬರ್ 25: ಛತ್ತೀಸ್‌ಗಢದ (Chhattisgarh) ಜಶ್‌ಪುರ ಜಿಲ್ಲೆಯಲ್ಲಿ 15 ವರ್ಷದ ಬಾಲಕಿಯೊಬ್ಬಳು ಖಾಸಗಿ ಶಾಲೆಯ ಅಧ್ಯಯನ ಕೊಠಡಿಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. 9ನೇ ತರಗತಿಯ ವಿದ್ಯಾರ್ಥಿನಿ ಭಾನುವಾರ ಸಂಜೆ ಸೀಲಿಂಗ್‌ನ ರಾಡ್‌ಗೆ ಸೀರೆಯಿಂದ ನೇಣು ಬಿಗಿದುಕೊಂಡಿದ್ದಾಳೆ. ಆಕೆ ಬರೆದಿಟ್ಟ ಸೂಸೈಡ್ ನೋಟ್ನಲ್ಲಿನ ಆರೋಪದ ಮೇಲೆ ಪ್ರಾಂಶುಪಾಲರನ್ನು ಬಂಧಿಸಲಾಗಿದೆ.
ಈ ಶಾಲೆಯು ಬಗಿಚಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ಹಳ್ಳಿಯಲ್ಲಿದೆ. ಆ ಬಾಲಕಿ ನೆರೆಯ ಸುರ್ಗುಜಾ ಜಿಲ್ಲೆಯ ಸೀತಾಪುರ ಪ್ರದೇಶದ ನಿವಾಸಿಯಾಗಿದ್ದಾಳೆ. ಪೊಲೀಸರಿಗೆ ಸ್ಥಳದಲ್ಲೇ ಸೂಸೈಡ್ ನೋಟ್ ಕೂಡ ಸಿಕ್ಕಿದೆ. ಅದರಲ್ಲಿ ಶಾಲೆಯ ಪ್ರಾಂಶುಪಾಲರಾದ ಕುಲ್ದಿಪನ್ ಟೋಪ್ನೋ ಆಕೆಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಆರೋಪ ಹೊರಿಸಲಾಗಿದೆ. ಇದಾದ ನಂತರ ಅವರನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಇದನ್ನೂ ಓದಿ: Viral Video: 6 ವರ್ಷದ ಮಗುವಿನ ಮೇಲೆ ದಾಳಿ ಮಾಡಿ ಕಿವಿ ಕಚ್ಚಿದ ಪಿಟ್‌ಬುಲ್
ಈಗಾಗಲೇ ಪ್ರಕರಣ ದಾಖಲಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ. ಈ ಘಟನೆಯ ನಂತರ ಶಿಕ್ಷಣ, ಬುಡಕಟ್ಟು ಮತ್ತು ಪೊಲೀಸ್ ಇಲಾಖೆಗಳ ಅಧಿಕಾರಿಗಳನ್ನು ಒಳಗೊಂಡ ಜಂಟಿ ತಂಡವು ತನಿಖೆ ನಡೆಸಿದೆ. ಶಾಲಾ ಆವರಣದಲ್ಲಿರುವ ಹಾಸ್ಟೆಲ್ ಅನಧಿಕೃತವಾಗಿದೆ ಎಂದು ಪ್ರಾಥಮಿಕ ಸಂಶೋಧನೆಗಳು ಬಹಿರಂಗಪಡಿಸಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
“ಶಾಲೆಯಲ್ಲಿ 6 ರಿಂದ 12ನೇ ತರಗತಿಯವರೆಗೆ ದಾಖಲಾಗಿರುವ 124 ವಿದ್ಯಾರ್ಥಿಗಳಲ್ಲಿ ಒಟ್ಟು 22 ಹುಡುಗರು ಮತ್ತು 11 ಹುಡುಗಿಯರು ಹಾಸ್ಟೆಲ್‌ನಲ್ಲಿ ತಂಗಿದ್ದರು. ಇದನ್ನು ಅನುಮತಿಗಳಿಲ್ಲದೆ ನಡೆಸಲಾಗುತ್ತಿತ್ತು ಎಂದು ಆರೋಪಿಸಲಾಗಿದೆ. ಎಲ್ಲಾ ಸಂಬಂಧಿತ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ” ಎಂದು ಬುಡಕಟ್ಟು ಇಲಾಖೆಯ ಸಹಾಯಕ ಆಯುಕ್ತ ಸಂಜಯ್ ಸಿಂಗ್ ಹೇಳಿದ್ದಾರೆ.
ಇದನ್ನೂ ಓದಿ: ಪ್ರಿಯಕರನಿಗಾಗಿ ಗಂಡನನ್ನು ಕೊಂದು ಡ್ರಮ್ನಲ್ಲಿರಿಸಿದ್ದ ಮುಸ್ಕಾನ್ಗೆ ಹೆಣ್ಣು ಮಗು ಜನನ
ಈ ಪ್ರಕರಣದಲ್ಲಿ ಮ್ಯಾಜಿಸ್ಟೀರಿಯಲ್ ತನಿಖೆಗೆ ಆದೇಶಿಸಲಾಗಿದೆ. ಈ ಘಟನೆಯ ಹಿಂದಿನ ನಿಖರವಾದ ಕಾರಣ ತನಿಖೆಯ ನಂತರ ತಿಳಿಯಲಿದೆ ಎಂದು ಪೊಲೀಸರು ಹೇಳಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




