ನೆಹರೂ ಕುಂಭಮೇಳಕ್ಕೆ ಭೇಟಿ ನೀಡಿದ್ದಾಗಲೂ ನಡೆದಿತ್ತು ದುರಂತ; ಕಾಲ್ತುಳಿತದಿಂದ 1000 ಜನರ ಸಾವಾಗಿತ್ತು!
ಉತ್ತರ ಪ್ರದೇಶದ ಪ್ರಯಾಗರಾಜ್ನಲ್ಲಿ 144 ವರ್ಷಗಳ ಬಳಿಕ ನಡೆಯುತ್ತಿರುವ ಮಹಾಕುಂಭದಲ್ಲಿ ಮೌನಿ ಅಮಾವಾಸ್ಯೆಯಾದ ನಿನ್ನೆ (ಜನವರಿ 29) ಕಾಲ್ತುಳಿತ ಉಂಟಾಗಿ 30ಕ್ಕೂ ಹೆಚ್ಚು ಜನ ಮೃತಪಟ್ಟಿದ್ದರು, 60 ಭಕ್ತರು ಗಾಯಗೊಂಡಿದ್ದರು. ಆದರೆ, ಈ ಮೊದಲು ಸ್ವತಂತ್ರ ಭಾರತದ ಮೊದಲ ಕುಂಭಮೇಳ ನಡೆದಾಗಲೂ 1000 ಜನರು ಕಾಲ್ತುಳಿತದಿಂದ ಮೃತಪಟ್ಟಿದ್ದರು. 1954ರಲ್ಲಿ ಪ್ರಯಾಗ್ನಲ್ಲಿ ನಡೆದ ಕುಂಭಮೇಳದಲ್ಲಿ ಕಾಲ್ತುಳಿತ ಉಂಟಾಗಿತ್ತು. ಆಗಿನ ಪ್ರಧಾನಿಯಾಗಿದ್ದ ಜವಹರಲಾಲ್ ನೆಹರೂ ಅವರ ಭೇಟಿಯ ಸಮಯದಲ್ಲಿ ಕುಂಭಮೇಳದಲ್ಲಿ ಕಾಲ್ತುಳಿತದಿಂದ ಸುಮಾರು 1000 ಜನರು ಪ್ರಾಣ ಕಳೆದುಕೊಂಡಿದ್ದರು.

ಪ್ರಯಾಗರಾಜ್: ಉತ್ತರ ಪ್ರದೇಶದ ಪ್ರಯಾಗರಾಜ್ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳದಲ್ಲಿ ಕಾಲ್ತುಳಿತ ಉಂಟಾಗಿ 30 ಜನರು ಮೃತಪಟ್ಟಿದ್ದಾರೆ. ಮಹಾ ಕುಂಭಮೇಳದ ಅತ್ಯಂತ ಪವಿತ್ರ ದಿನಗಳಲ್ಲಿ ಒಂದಾದ ಮೌನಿ ಅಮವಾಸ್ಯೆಯಂದು ಬೆಳಿಗ್ಗೆ ಜನದಟ್ಟಣೆಯಿಂದಾಗಿ ಕಾಲ್ತುಳಿತ ಸಂಭವಿಸಿ ದುರಂತ ಸಂಭವಿಸಿತ್ತು. ಕುಂಭಮೇಳ ಈ ಹಿಂದೆಯೂ ಸಹ ಕಾಲ್ತುಳಿತಗಳಿಗೆ ಸಾಕ್ಷಿಯಾಗಿತ್ತು. 1954ರಲ್ಲಿ ಸ್ವತಂತ್ರ ಭಾರತದ ಮೊದಲ ಕುಂಭಮೇಳ ನಡೆದಾಗಲೂ ಕಾಲ್ತುಳಿತ ಉಂಟಾಗಿತ್ತು. ಈ ವೇಳೆ ಸುಮಾರು 1000 ಜನರು ಮೃತಪಟ್ಟಿದ್ದರು.
1954ರಲ್ಲಿ ಭಾರತ ಸ್ವತಂತ್ರವಾದ ಬಳಿಕ ಮೊದಲ ಬಾರಿ ನಡೆದ ಕುಂಭಮೇಳದ ಸಮಯದಲ್ಲಿ ಕಾಲ್ತುಳಿತ ಉಂಟಾಗಿ, ಸುಮಾರು 1000 ಜನರನ್ನು ಬಲಿ ತೆಗೆದುಕೊಂಡಿತು. ಅಲಹಾಬಾದ್ (ಈಗ ಪ್ರಯಾಗ್‌ರಾಜ್)ನಲ್ಲಿ ನಡೆದ ಈ ಕುಂಭ ಮೇಳದಲ್ಲಿ ಫೆಬ್ರವರಿ 3ರಂದು ಮೌನಿ ಅಮವಾಸ್ಯೆಯ ಸಮಯದಲ್ಲಿ ಲಕ್ಷಾಂತರ ಭಕ್ತರು ಸಂಗಮದಲ್ಲಿ ಪವಿತ್ರ ಸ್ನಾನಕ್ಕಾಗಿ ಸೇರಿದ್ದರು. ಭಾರೀ ಮಳೆಯಿಂದ ಈ ಪ್ರದೇಶದಲ್ಲಿ ಕೆಸರು ಉಂಟಾಗಿತ್ತು. ಇದರಿಂದ ಅವ್ಯವಸ್ಥೆ ಉಂಟಾಗಿತ್ತು.
ಆಗಿನ ಪ್ರಧಾನಿಯಾಗಿದ್ದ ಪ್ರಧಾನಿ ಜವಾಹರಲಾಲ್ ನೆಹರು ಕುಂಭ ಮೇಳಕ್ಕೆ ಬರುತ್ತಿದ್ದಾರೆ ಎಂಬ ಸುದ್ದಿ ಕೇಳಿದ ಜನರು ಅವರನ್ನು ನೋಡಲು ಗುಂಪು ಗುಂಪಾಗಿ ಸೇರತೊಡಗಿದರು. ನೆಹರು ಅವರನ್ನು ಭೇಟಿಯಾಗಲು ಜನರು ಬಂದಾಗ ನೂಕುನುಗ್ಗಲು ಉಂಟಾಗಿ ಕಾಲ್ತುಳಿತಕ್ಕೆ ಕಾರಣವಾಯಿತು. ಜನರು ಕೆಲಸರಿನಲ್ಲಿ ಜಾರಿ ಕೆಳಗೆ ಬಿದ್ದ ನಂತರ ಅವರು ಎದ್ದೇಳಲು ಸಾಧ್ಯವಾಗಲಿಲ್ಲ.
ಇದನ್ನೂ ಓದಿ: ಕುಂಭಮೇಳ: ಪ್ರಯಾಗ್‌ರಾಜ್ ಯಾತ್ರೆ ಮುಗಿಸಿ ವಾಪಸಾಗುತ್ತಿದ್ದ ಕರ್ನಾಟಕದ ಯುವಕರು ಅಪಘಾತದಲ್ಲಿ ಸಾವು
ಈ ಕಾಲ್ತುಳಿತವು ಸುಮಾರು 45 ನಿಮಿಷಗಳ ಕಾಲ ನಡೆಯಿತು. ವಿವಿಧ ಮಾಧ್ಯಮಗಳು ಈ ದುರಂತದ ಬಗ್ಗೆ ವಿಭಿನ್ನ ಅಂಕಿ-ಅಂಶಗಳನ್ನು ಒದಗಿಸಿವೆ. 800ರಿಂದ 1000ಕ್ಕೂ ಹೆಚ್ಚು ಜನರು ಈ ಕಾಲ್ತುಳಿತದಲ್ಲಿ ಸಾವನ್ನಪ್ಪಿದ್ದಾರೆ ಮತ್ತು 100ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ದಿ ಗಾರ್ಡಿಯನ್ ವರದಿ ಮಾಡಿದೆ.
ಕುಂಭ ಮೇಳದಲ್ಲಿ ನೆಹರು ಪವಿತ್ರಸ್ನಾನ:
1954ರ ಕುಂಭಮೇಳದಲ್ಲಿ ಪ್ರಧಾನಿ ಜವಾಹರಲಾಲ್ ನೆಹರು ಕೂಡ ಭಾಗವಹಿಸಿದ್ದರು. ಆದರೆ, ಮೌನಿ ಅಮವಾಸ್ಯೆಯಂದು ಅಲ್ಲ. ಅವರು ಮೌನಿ ಅಮಾವಾಸ್ಯೆಗೂ ಒಂದು ದಿನ ಮೊದಲು ಕುಂಭ ಮೇಳಕ್ಕೆ ಆಗಮಿಸಿ ತ್ರಿವೇಣಿ ಸಂಗಮದಲ್ಲಿ ಸ್ನಾನ ಮಾಡಿದ್ದರು. ಕುಂಭಮೇಳದ ವ್ಯವಸ್ಥೆಗಳನ್ನು ಪರಿಶೀಲಿಸಿದ ನಂತರ, ಅವರು ಅದೇ ದಿನ ವಾಪಾಸ್ ಹೊರಟರು. ಈ ದುರಂತದ ನಂತರ, ಜವಾಹರಲಾಲ್ ನೆಹರು ನ್ಯಾಯಮೂರ್ತಿ ಕಮಲ್ ಕಾಂತ್ ವರ್ಮಾ ಅಧ್ಯಕ್ಷತೆಯಲ್ಲಿ ತನಿಖಾ ಸಮಿತಿಯನ್ನು ರಚಿಸಿದರು. ಕುಂಭಮೇಳದಲ್ಲಿ ಪವಿತ್ರಸ್ನಾನದ ದಿನಗಳಲ್ಲಿ ಕುಂಭಕ್ಕೆ ಹಾಜರಾಗದಂತೆ ಅವರು ರಾಜಕೀಯ ನಾಯಕರಿಗೆ ಮನವಿ ಮಾಡಿದ್ದರು.
ಇದನ್ನೂ ಓದಿ: ಮಹಾಕುಂಭ ಮೇಳದಲ್ಲಿ ಉಂಟಾದ ಕಾಲ್ತುಳಿತದಲ್ಲಿ 30 ಭಕ್ತರು ಸಾವು, 60 ಜನರಿಗೆ ಗಾಯ
ಭಾರತ ಸ್ವಾತಂತ್ರ್ಯ ಪಡೆದ ನಂತರ ರಾಜಕಾರಣಿಗಳು ಸಾರ್ವಜನಿಕರೊಂದಿಗೆ ಸಂಪರ್ಕ ಸಾಧಿಸಲು 1954ರ ಕುಂಭಮೇಳವು ಮಹತ್ವದ ಸಂದರ್ಭವಾಯಿತು. ಸ್ವತಂತ್ರ ಭಾರತದಲ್ಲಿ ನಡೆದ ಮೊದಲ ಕುಂಭಮೇಳಕ್ಕೆ ಹಲವಾರು ಪ್ರಮುಖ ರಾಜಕೀಯ ನಾಯಕರು ಭೇಟಿ ನೀಡಿದ್ದರು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




