11 ಸಾವಿರ ವೋಲ್ಟೇಜ್ ವಿದ್ಯುತ್ ಇರುವ ವೈರ್ ಸ್ಪರ್ಶಿಸಿ ಇಬ್ಬರು ಸೋದರರು ದುರ್ಮರಣಕ್ಕೀಡಾದ ಘಟನೆ ದೆಹಲಿಯ ರೋಹಿಣಿ ಏರಿಯಾದಲ್ಲಿ ನಡೆದಿದೆ. ವಿದ್ಯುತ್ ತಂತಿಯನ್ನು ಸ್ಪರ್ಶಿಸಿ ಶಾಕ್ಗೆ ಒಳಗಾಗಿದ್ದ ಇವರಿಬ್ಬರನ್ನೂ ರಕ್ಷಿಸಲು ಇವರ ಇನ್ನೊಬ್ಬ ಸೋದರ ಪ್ರಯತ್ನಿಸಿದಾಗ ಅವರಿಗೂ ಶಾಕ್ ತಗುಲಿದೆ. ಅದೃಷ್ಟವಶಾತ್ ಅಪಾಯದಿಂದ ಪಾರಾಗಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಮೃತರನ್ನು ಗೋವಿಂದ್ ಮತ್ತು ದೇವೇಂದ್ರ ಎಂದು ಗುರುತಿಸಲಾಗಿದೆ. ಬೇಗಂಪುರದಲ್ಲಿ ಒಂದು ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು.
ಮನೆಯ ಟೆರೇಸ್ನಲ್ಲಿ ಇದ್ದ ವಿದ್ಯುತ್ ತಂತಿ ಸ್ಪರ್ಶಿಸಿದ್ದರಿಂದ ಈ ಅವಘಡ ನಡೆದಿದೆ. ಮೊದಲು ಒಬ್ಬಾತನಿಗೆ ಶಾಕ್ ತಗುಲಿದೆ. ಆತ ಕೂಗಿದ್ದನ್ನು ಕೇಳಿ ಬಂದ ಇನ್ನೊಬ್ಬಾತ ರಕ್ಷಿಸುವ ಸಲುವಾಗಿ ಅವನನ್ನು ಹಿಡಿದುಕೊಂಡಿದ್ದಾನೆ. ಆಗ ಅವನಿಗೂ ವಿದ್ಯುತ್ ಶಾಕ್ ತಗುಲಿದೆ. ಇವರಿಬ್ಬರ ಗಲಾಟೆ ಕೇಳಿ ಬಂದ ಮೂರನೇಯವನು ಇವರಿಬ್ಬರ ರಕ್ಷಣೆ ಮಾಡಲು ಮುಂದಾಗಿದ್ದಾನೆ. ಆದರೆ ಅವನಿಗೂ ಶಾಕ್ ಹೊಡೆದು ಬಿದ್ದಿದ್ದಾನೆ. ಉಳಿದವರಿಬ್ಬರ ಜೀವ ಹೋಗಿದ್ದು, ಮೂರನೇಯವನು ಪಾರಾಗಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಸದ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಶುರು ಮಾಡಿದ್ದಾರೆ.