- Kannada News National 2020 year in review | ಎರಡನೇ ತ್ರೈಮಾಸಿಕದಲ್ಲಿ ನೋವಿನ ಸರಮಾಲೆ, ಕಳೆದು ಬಂದೆವು ನಾವು ಇನ್ನಷ್ಟು ದಿವಸ
2020 year in review | ಎರಡನೇ ತ್ರೈಮಾಸಿಕದಲ್ಲಿ ನೋವಿನ ಸರಮಾಲೆ, ಕಳೆದು ಬಂದೆವು ನಾವು ಇನ್ನಷ್ಟು ದಿವಸ
ಅಂದು, ಮೇ 8ರಂದು ಔರಂಗಾಬಾದ್ ಸಮೀಪ ಗೂಡ್ಸ್ ರೈಲಿನ ಗಾಲಿಗಳಿಗೆ ಸಿಲುಕಿ ಜೀವಬಿಟ್ಟವರು 16 ಮಂದಿ. ರೈಲು ಹಳಿಗಳ ನಡುವೆ ಚೆಲ್ಲಾಡಿದ್ದ ಈ ಕಾರ್ಮಿಕರ ಬುತ್ತಿಯಲ್ಲಿದ್ದ ರೊಟ್ಟಿ ದೇಶದ ಜನರ ಮನಸ್ಸನ್ನು ಅಕ್ಷರಶಃ ಕಲಕಿತ್ತು. ಈ ಚಿತ್ರದ ವಿಶೇಷ ಉಲ್ಲೇಖದೊಂದಿಗೇ ಏಪ್ರಿಲ್, ಮೇ ಮತ್ತು ಜೂನ್ ತಿಂಗಳುಗಳ ಬದುಕು ಕಟ್ಟಿಕೊಡುವ ಪ್ರಾತಿನಿಧಿಕ ಚಿತ್ರಗಳನ್ನು ಇಲ್ಲಿ ನೀಡುತ್ತಿದ್ದೇವೆ.
Updated on:Apr 06, 2022 | 11:09 PM

ಮೇ 7ರಂದು ವಿಶಾಖಪಟ್ಟಣಂನ ಎಲ್ಜಿ ಪಾಲಿಮರ್ಸ್ ಕೆಮಿಕಲ್ ಪ್ಲಾಂಟ್ನಲ್ಲಿ ಅನಿಲ ದುರಂತ ಸಂಭವಿಸಿತು.

ವಿಶಾಖಪಟ್ಟಣಂ ಅನಿಲ ದುರಂತದಿಂದ 11 ಮಂದಿ ಮೃತಪಟ್ಟರು. ಸಾವಿರಕ್ಕೂ ಹೆಚ್ಚು ಜನರಲ್ಲಿ ಆರೋಗ್ಯ ಸಮಸ್ಯೆಗಳು ಕಂಡುಬಂದವು.

ಅನಿಲ ದುರಂತದಲ್ಲಿ ಸಾಕಷ್ಟು ಮಂದಿ ಅಸ್ವಸ್ಥರಾದದ್ದು, ರಸ್ತೆ ಬದಿಯಲ್ಲಿ ಅಲ್ಲಲ್ಲೇ ಕುಸಿದು ಹೋದದ್ದು ನಡೆಯಿತು. ಜನರ ಪರಿಸ್ಥಿತಿ ಕರುಣಾಜನಕವಾಗಿತ್ತು.

ಅಂಫಾನ್ ಚಂಡಮಾರುತ ಮೇ 16ರಂದು ಒಡಿಶಾ ಮತ್ತು ಪಶ್ಚಿಮ ಬಂಗಾಳದ ಕಡಲ ತೀರಕ್ಕೆ ಅಪ್ಪಳಿಸಿತು. ಸುಮಾರು 85 ಮಂದಿ ಮೃತಪಟ್ಟರು. ಅಭೂತಪೂರ್ವ ರೀತಿಯಲ್ಲಿ ಜನರನ್ನು ಸುರಕ್ಷಿತ ಸ್ಥಳಾಂತರಿಸಿ, ಮುನ್ನೆಚ್ಚರಿಕೆ ವಹಿಸಲಾಗಿತ್ತು.

ಕೊವಿಡ್-19 ನಿಯಂತ್ರಣಕ್ಕೆಂದು ಲಾಕ್ಡೌನ್ ಹೇರಿದ್ದರಿಂದ ಕಾರ್ಮಿಕರು ಕೆಲಸ ಕಳೆದುಕೊಂಡರು. ಸಾರಿಗೆ ವ್ಯವಸ್ಥೆ ಸ್ಥಗಿತಗೊಳಿಸಿದ್ದರಿಂದ ಊರು ಸೇರಲು ಪರದಾಡಿದರು. ಕಾರ್ಮಿಕರ ದೊಡ್ಡ ಮಟ್ಟದ ವಲಸೆಗೆ ದೇಶ ಸಾಕ್ಷಿಯಾಯಿತು.

ಕೊರೊನಾ ತಂದೊಡ್ಡಿದ ವಲಸೆ ಕಾರ್ಮಿಕರ ಸಮಸ್ಯೆಗಳನ್ನು ಜನರ ಮನಕಲಕುವಂತೆ ಮಾಡಿದ ಚಿತ್ರವಿದು. ಮೇ 8ರಂದು ಮಹಾರಾಷ್ಟ್ರದ ಔರಂಗಾಬಾದ್ನಲ್ಲಿ ಗೂಡ್ಸ್ ರೈಲು ವಲಸೆ ಕಾರ್ಮಿಕರ ಮೇಲೆ ಹರಿದು 16 ಮಂದಿ ಮೃತಪಟ್ಟರು.

ಕೊರೊನಾ ನಡುವೆ ವಲಸಿಗರ ಪರಿಸ್ಥಿತಿ ಹೀಗಿತ್ತು.

ಹಲವು ಮಂದಿ ವಲಸಿಗರು ಕೆಲಸ ಇಲ್ಲದೆ ಪರವೂರಲ್ಲಿ ತಂಗಲು ಬಯಸಲಿಲ್ಲ. ಏನೇ ಆದರೂ ತಮ್ಮೂರಿಗೆ ಮರಳಿ ಹೋಗುವೆವು ಎಂದು ಕಾಲ್ನಡಿಗೆಯಲ್ಲೇ ಊರಿಗೆ ಹೊರಟರು.

ಜೂನ್ 25ರಂದು ಲಡಾಖ್ನ ಗಾಲ್ವಾನ್ ಕಣಿವೆಯಲ್ಲಿ ನಡೆದ ಸಂಘರ್ಷದಲ್ಲಿ ಕಮಾಂಡಿಂಗ್ ಆಫೀಸರ್ ಸಂತೋಷ್ ಸೇರಿ 20 ಭಾರತೀಯ ಯೋಧರು ಹುತಾತ್ಮರಾದರು. ಪ್ರತೀಕಾರದ ಮಾತುಗಳು ಕೇಳಿಬಂದವು. ಪ್ರಧಾನಿ ಮೋದಿ ಚೀನಾ ಗಡಿಗೆ ಭೇಟಿ ನೀಡಿ, ಯೋಧರಲ್ಲಿ ಧೈರ್ಯ ತುಂಬಿದರು.

ಉತ್ತರ ಭಾರತದ ಹಲವೆಡೆಗಳಲ್ಲಿ ಮಿಡತೆಗಳ ದಾಳಿ ಭಾರೀ ಸುದ್ದಿ ಮಾಡಿತು. ಹಲವು ರಾಜ್ಯಗಳಲ್ಲಿ ಗಂಭೀರ ತೊಂದರೆ ಮಾಡುವುದರ ಜೊತೆಗೆ ಹಲವು ತಮಾಷೆ, ಗಾಳಿಸುದ್ದಿಗಳಿಗೂ ಕಾರಣವಾಯಿತು.

ಲೋಕಸ್ಟ್ ಅಥವಾ ಮಿಡತೆ ದಾಳಿಯನ್ನು ತಪ್ಪಿಸಲು ರೈತರು, ಹೊಲದ ತುಂಬೆಲ್ಲಾ ತಟ್ಟೆ ಬಾರಿಸಿಕೊಂಡು ಓಡಾಡಿದರು.

ವಲಸಿಗರಿಗೆ ಸಹಾಯಹಸ್ತ ಚಾಚಿ, ಅವರಿಗೆ ಬಸ್ ವ್ಯವಸ್ಥೆ ಕಲ್ಪಿಸಿ, ಮರಳಿ ತಮ್ಮೂರಿಗೆ ತೆರಳಲು ನಟ ಸೋನು ಸೂದ್ ನೆರವಾದರು.

ಸಿನಿಮಾ ವಿಲನ್ ಸೋನು ಸೂದ್, ನಿಜಜೀವನದ ಹೀರೋ ಅನಿಸಿಕೊಂಡರು.

ಬಾಲಿವುಡ್ ನಟ ಸುಶಾಂತ್ ಸಿಂಗ್ ಸಾವು ಸಿನಿ ಅಭಿಮಾನಿಗಳ ಮನಕಲುಕಿತು. ತಮ್ಮ ಸಿನಿಮಾದಲ್ಲಿ ಬದುಕಿನ ಸ್ಪೂರ್ತಿ ಸಾರಿದ್ದ ನಟನ ದುರಂತ ಅಂತ್ಯ ಹಲವು ವಿವಾದಗಳಿಗೂ ಕಾರಣವಾಯಿತು. ಸುಶಾಂತ್ ಸಿಂಗ್ ರಜಪೂತ್ ಸಾವಿನ ತನಿಖೆ ನಡೆಸಬೇಕೆಂದು ಅಭಿಮಾನಿಗಳು ಒತ್ತಾಯಿಸಿದರು. ಸುಶಾಂತ್ ಸಿಂಗ್ಗೆ ಶ್ರದ್ಧಾಂಜಲಿ ಕೋರಿದರು.
Published On - 9:54 pm, Wed, 30 December 20



















