ಅಸ್ಸಾಂನ ಕಾಜಿರಂಗ್ ರಾಷ್ಟ್ರೀಯ ಉದ್ಯಾನವನ (Kaziranga National Park) ಮತ್ತು ಹುಲಿ ಸಂರಕ್ಷಿತ ಪ್ರದೇಶ ಪ್ರವಾಹಕ್ಕೆ ತುತ್ತಾಗಿದ್ದು, ಹಲವು ವನ್ಯಜೀವಿಗಳು ಮೃತಪಟ್ಟಿವೆ ಎಂದು ಉದ್ಯಾನವನ ಪ್ರಾಧಿಕಾರ ಹೇಳಿದೆ. ಕಾಜಿರಂಗ ನ್ಯಾಶನಲ್ ಪಾರ್ಕ್ನಲ್ಲಿ ನೀರಿನ ಮಟ್ಟ ಏರಿಕೆಯಾಗಿ ಸುಮಾರು ಶೇ.30ರಷ್ಟು ಭಾಗ ಸಂಪೂರ್ಣ ಮುಳುಗಿದೆ. ಒಟ್ಟು 223 ಪ್ರಾಣಿ ಬೇಟೆ ವಿರೋಧಿ ಶಿಬಿರಗಳು ಇಲ್ಲಿವೆ. ಅವುಗಳಲ್ಲೀಗ 21 ಶಿಬಿರಗಳು ಜಲಾವೃತಗೊಂಡಿವೆ. ಇತ್ತೀಚೆಗೆ ಒಟ್ಟು 24 ಪ್ರಾಣಿಗಳು ಇಲ್ಲಿ ಮೃತಪಟ್ಟಿವೆ ಎಂದೂ ಅಲ್ಲಿನ ಅಧಿಕಾರಿಗಳು ತಿಳಿಸಿದ್ದಾರೆ.
ಪ್ರವಾಹ ಪರಿಸ್ಥಿತಿಯಿಂದ, ಒಂದು ರೈನೋ, ಮೂರು ಜಿಂಕೆ ಮರಿಗಳು, ಒಂದು ಕಾಡುಕೋಣ, ಒಂದು ಜೌಗು ಜಿಂಕೆ ಸಾವನ್ನಪ್ಪಿವೆ. ಅವುಗಳನ್ನು ಹೊರತುಪಡಿಸಿದರೆ 11 ಪ್ರಾಣಿಗಳು ವಾಹನಕ್ಕೆ ಡಿಕ್ಕಿ ಹೊಡೆದು ಮೃತಪಟ್ಟಿವೆ. ಪ್ರಾಣಿಗಳು ರಾಷ್ಟ್ರೀಯ ಹೆದ್ದಾರಿ 37ನ್ನು ದಾಟುವಾಗ ಹೀಗೆ ಡಿಕ್ಕಿ ಹೊಡೆದು ಸಾವನ್ನಪ್ಪಿವೆ. ಅದರಲ್ಲೂ ಹೆಚ್ಚು ಅಂದರೆ 9 ಜಿಂಕೆಗಳು ಸತ್ತಿವೆ ಎಂದು ಹೇಳಲಾಗಿದೆ. ಹೀಗೆ ನಿರಂತರ ನೀರಿನಿಂದ ಕೆಲವು ಪ್ರಾಣಿಗಳು ಅನಾರೋಗ್ಯಕ್ಕೀಡಾಗುತ್ತಿವೆ ಎಂದೂ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಸ್ವಲ್ಪಮಟ್ಟಿಗೆ ಸುಧಾರಿಸಲ್ಪಟ್ಟಿದೆ ಪ್ರವಾಹ ಪರಿಸ್ಥಿತಿ ಈ ಮಧ್ಯೆ ಅಸ್ಸಾಂನಲ್ಲಿ ಪ್ರವಾಹ ಪರಿಸ್ಥಿತಿ ಸ್ವಲ್ಪಮಟ್ಟಿಗೆ ಸುಧಾರಣೆಗೊಂಡಿದೆ. ಆದಾಗ್ಯೂ 14 ಜಿಲ್ಲೆಗಳ 1.18ಲಕ್ಷ ಜನರು ಇನ್ನೂ ಸಂಕಷ್ಟದಲ್ಲಿದ್ದಾರೆ ಎಂದು ಸರ್ಕಾರ ತಿಳಿಸಿದೆ. ಗೋಲಾಘಾಟ್ ಜಿಲ್ಲೆಯ 48,000 ಜನರು, ಡರಾಂಗ್ ಜಿಲ್ಲೆಯಲ್ಲಿ 46,000, ಮಾರಿಗಾಂವ್ನಲ್ಲಿ 16,000 ಮತ್ತು ನಾಗಾಂವ್ನಲ್ಲಿ 3500, ಬರ್ಪೇಟಾದಲ್ಲಿ 2400 ಜನರು ಪ್ರವಾಹದಿಂದ ಕಷ್ಟಪಡುತ್ತಿದ್ದಾರೆ ಎಂದು ಹೇಳಲಾಗಿದೆ. ಸುಮಾರು 646 ಹಳ್ಳಿಗಳು ಸಂಪೂರ್ಣ ಜಲಾವೃತಗೊಂಡಿದ್ದು, ಇದುವರೆಗೆ 7 ಮಂದಿ ಮೃತಪಟ್ಟಿದ್ದಾರೆ ಎಂದು ಅಸ್ಸಾಂ ರಾಜ್ಯ ವಿಪತ್ತು ಪ್ರತಿಕ್ರಿಯಾ ತಂಡ ಮಾಹಿತಿ ನೀಡಿದೆ.
ಇದನ್ನೂ ಓದಿ: WhatsApp: ವಾಟ್ಸ್ಆ್ಯಪ್ ಮೇಲೆ ಬಿದ್ದಿದೆ ಹ್ಯಾಕರ್ಗಳ ಕಣ್ಣು: ಮಾಹಿತಿ ಕದಿಯಲು ಬಿಡುವ ʼಬಗ್ʼ ಬಗ್ಗೆ ಎಚ್ಚರ
ಕೊಡಗು: ರಾಜ್ಯ ಹೆದ್ದಾರಿಯಲ್ಲಿ ಒಂಟಿ ಸಲಗ ಜಾಯ್ ವಾಕ್! ಭಯಭೀತರಾದ ದಾರಿಹೋಕರು