
ಲಕ್ನೋ, ನವೆಂಬರ್ 26: 2027ರ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗಾಗಿ ಸಮಾಜವಾದಿ ಪಕ್ಷದ (ಎಸ್ಪಿ) ಮುಖ್ಯಸ್ಥ ಅಖಿಲೇಶ್ ಯಾದವ್ ಇಂದು ಪಕ್ಷದ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದ್ದು, ಉದ್ಯೋಗ, ಆರ್ಥಿಕ ನೆರವು ಮತ್ತು ಸಾಮಾಜಿಕ ಕಲ್ಯಾಣವನ್ನು ಕೇಂದ್ರೀಕರಿಸಿದ ಹಲವು ಭರವಸೆಗಳನ್ನು ಘೋಷಿಸಿದ್ದಾರೆ. ಪದವೀಧರರಿಗೆ ಉದ್ಯೋಗ ಸಿಗುವವರೆಗೂ ಮಾಸಿಕ 5,000 ರೂ. ಭತ್ಯೆ, 5 ವರ್ಷಗಳಲ್ಲಿ 25 ಲಕ್ಷ ಯುವಕರಿಗೆ ಸರ್ಕಾರಿ ಉದ್ಯೋಗ ಮತ್ತು ಹಿರಿಯ ಮಹಿಳಾ ಕುಶಲಕರ್ಮಿಗಳಿಗೆ ವಾರ್ಷಿಕ 40,000 ರೂ. ಪಿಂಚಣಿ ನೀಡುವ ಪ್ರಮುಖ ವಾಗ್ದಾನಗಳು ಇದರಲ್ಲಿ ಸೇರಿವೆ.
‘ಜನ್-ಮನ್ ಕಾ ಮ್ಯಾನಿಫೆಸ್ಟೋ’ (ಜನರ ಪ್ರಣಾಳಿಕೆ) ಎಂಬ ಶೀರ್ಷಿಕೆಯ ಈ ಪ್ರಣಾಳಿಕೆಯು, ಇತರ ವಲಯಗಳಲ್ಲಿ 2 ಕೋಟಿಯಿಂದ 3 ಕೋಟಿ ಯುವಕರಿಗೆ ಉದ್ಯೋಗಾವಕಾಶಗಳನ್ನು ಸೃಷ್ಟಿಸುವುದು, ಜಾತಿ ಜನಗಣತಿ ನಡೆಸುವುದು ಮತ್ತು 5 ರೂ.ಗೆ ಊಟ ನೀಡುವ ‘ಸಮಾಜವಾದಿ ಕ್ಯಾಂಟೀನ್’ಗಳನ್ನು ತೆರೆಯುವ ಭರವಸೆಯನ್ನೂ ನೀಡಿದೆ. ಈ ಪ್ರಣಾಳಿಕೆಯಲ್ಲಿ ಉದ್ಯೋಗ ಮತ್ತು ಆರ್ಥಿಕ ಬೆಂಬಲಕ್ಕೆ ಪ್ರಮುಖ ಆದ್ಯತೆ ನೀಡಲಾಗಿದೆ. ಪ್ರತಿಯೊಬ್ಬ ಪದವೀಧರರಿಗೆ ಉದ್ಯೋಗ ಅಥವಾ ಉದ್ಯೋಗಾವಕಾಶ ಸಿಗುವವರೆಗೂ ತಿಂಗಳಿಗೆ 5,000 ರೂ. ಭತ್ಯೆ ನೀಡುವುದಾಗಿ ಸಮಾಜವಾದಿ ಪಕ್ಷ ಭರವಸೆ ನೀಡಿದೆ. ಅಲ್ಲದೆ ಪದವೀಧರರಿಗೆ ಉದ್ಯೋಗ ಒದಗಿಸುವ ವಾಗ್ದಾನವನ್ನೂ ಪಕ್ಷ ಮಾಡಿದೆ.
ಇದನ್ನೂ ಓದಿ: ಉತ್ತರ ಪ್ರದೇಶದಲ್ಲಿ 1.27 ಕೋಟಿ ಹಿಂದೂ ಮತದಾರರ ಹೆಸರು ಕಣ್ಮರೆ; ವಿಪಕ್ಷಗಳ ವಿರುದ್ಧ ಯೋಗಿ ಆದಿತ್ಯನಾಥ್ ವಾಗ್ದಾಳಿ
5 ವರ್ಷಗಳಲ್ಲಿ 25 ಲಕ್ಷ ಯುವಕರಿಗೆ ಸರ್ಕಾರಿ ಉದ್ಯೋಗ ನೀಡುವ ಗುರಿಯನ್ನು ಪಕ್ಷ ನಿಗದಿಪಡಿಸಿಕೊಂಡಿದೆ. ಇದರ ಜೊತೆಗೆ ಖಾಸಗಿ ವಲಯಗಳಲ್ಲಿ 2 ಕೋಟಿಯಿಂದ 3 ಕೋಟಿ ಯುವಕರಿಗೆ ಉದ್ಯೋಗಾವಕಾಶಗಳನ್ನು ಕಲ್ಪಿಸುವ ಭರವಸೆಯನ್ನು ಪ್ರತ್ಯೇಕವಾಗಿ ನೀಡಿದೆ.
ಶಿಕ್ಷಣಕ್ಕೆ ಸಂಬಂಧಿಸಿದಂತೆ ರಾಜ್ಯದಲ್ಲಿ ಉಚಿತ ಶಾಲಾ ಶಿಕ್ಷಣ ನೀಡುವುದಾಗಿ ಮತ್ತು ಮುಚ್ಚಲ್ಪಟ್ಟಿರುವ ಪ್ರಾಥಮಿಕ ಶಾಲೆಗಳನ್ನು ಪುನರಾರಂಭಿಸುವುದಾಗಿ ಸಮಾಜವಾದಿ ಪಕ್ಷ ಘೋಷಿಸಿದೆ. ಆರೋಗ್ಯ ಕ್ಷೇತ್ರದಲ್ಲಿ ಕುಟುಂಬಗಳಿಗೆ 10 ಲಕ್ಷದವರೆಗೆ ಆರೋಗ್ಯ ವಿಮೆ ಒದಗಿಸುವುದು ಹಾಗೂ ರಾಜ್ಯದಲ್ಲಿ 5 ಹೊಸ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳನ್ನು ನಿರ್ಮಿಸುವ ಭರವಸೆಯನ್ನು ಪ್ರಣಾಳಿಕೆಯಲ್ಲಿ ಸೇರಿಸಲಾಗಿದೆ.
ಇದನ್ನೂ ಓದಿ: ಸೌರವ್ ದಾಸ್ಗೆ ಮಾತ್ರವಲ್ಲದೆ ಸಿಜೆಪಿಯ ಅಭಿಜೀತ್ ದಿಪ್ಕೆ, ಅಶುತೋಷ್ ರಾಂಕಾ ವಿರುದ್ಧವೂ ಲುಕ್‌ಔಟ್ ನೋಟಿಸ್ ಜಾರಿ
ಹಿರಿಯ ಮಹಿಳಾ ಕುಶಲಕರ್ಮಿಗಳಿಗೆ ವಾರ್ಷಿಕ 40,000 ರೂ. ಪಿಂಚಣಿ ನೀಡುವುದಾಗಿ ಪ್ರಣಾಳಿಕೆಯಲ್ಲಿ ಭರವಸೆ ನೀಡಲಾಗಿದೆ. ಪಿಡಿಎ ಸಮುದಾಯಗಳು, ಮಹಿಳೆಯರು ಮತ್ತು ಬಡವರಿಗಾಗಿ ಸಮಾಜವಾದಿ ಕ್ಯಾಂಟೀನ್‌ಗಳನ್ನು ತೆರೆಯಲು ಪಕ್ಷ ಪ್ರಸ್ತಾಪಿಸಿದ್ದು, ಇಲ್ಲಿ 5 ರೂ.ಗೆ ಊಟ ಲಭ್ಯವಿರಲಿದೆ. ಪ್ರಣಾಳಿಕೆ ಬಿಡುಗಡೆಗೆ ಸಂವಿಧಾನ ದಿನವನ್ನೇ ಏಕೆ ಆಯ್ಕೆ ಮಾಡಿಕೊಳ್ಳಲಾಯಿತು ಎಂಬುದನ್ನು ವಿವರಿಸುವಾಗ ಅಖಿಲೇಶ್ ಯಾದವ್ ಅವರು ಬಿಜೆಪಿ ನೇತೃತ್ವದ ಸರ್ಕಾರದ ವಿರುದ್ಧ ವ್ಯಂಗ್ಯವಾಡಿದ್ದಾರೆ. ‘ಅಚ್ಛೇ ದಿನ್’ (ಒಳ್ಳೆಯ ದಿನಗಳು) ಭರವಸೆ ಈಡೇರಿಲ್ಲ ಎಂದು ಹೇಳಿದ ಅವರು, ಆಡಳಿತ ಪಕ್ಷದ ಅಧಿಕಾರಾವಧಿ ಕೊನೆಗೊಳ್ಳುವ ಹಂತಕ್ಕೆ ಬಂದಿದೆ ಎಂದು ಪ್ರತಿಪಾದಿಸಿದರು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ