ನಿಗೂಢವಾಗಿ ಮೃತಪಟ್ಟ 7 ವರ್ಷದ ಬಾಲಕಿಯ ಅಂತ್ಯಸಂಸ್ಕಾರವನ್ನೂ ಅಷ್ಟೇ ಗುಟ್ಟಾಗಿ ಮಾಡಿ ಮುಗಿಸಿದ ವಿಚಿತ್ರ ಘಟನೆ ರಾಷ್ಟ್ರರಾಜಧಾನಿಯಲ್ಲಿ ನಡೆದಿದೆ. ಬಾಲಕಿಯ ಅಂತ್ಯಸಂಸ್ಕಾರವನ್ನು ಮಾಡಲು ಆಕೆಯ ಪಾಲಕರು ಒಪ್ಪದೆ ಇದ್ದರೂ, ಬಲವಂತವಾಗಿ ಮಾಡಲಾಗಿದೆ. ಇದೀಗ ಪಾಲಕರು ಪೊಲೀಸರಿಗೆ ದೂರು ನೀಡಿದ್ದಾರೆ. ತಮ್ಮ ಮಗಳ ಮೇಲೆ ಅತ್ಯಾಚಾರ ಮಾಡಿ, ಹತ್ಯೆ ಮಾಡಲಾಗಿದೆ. ನಂತರ ನಾವು ಪೋಸ್ಟ್ಮಾರ್ಟಂಗೆ ಒತ್ತಾಯ ಮಾಡಿದರೂ, ಲೆಕ್ಕಕ್ಕೆ ತೆಗೆದುಕೊಳ್ಳದೆ ಬಲವಂತವಾಗಿ ಅಂತ್ಯಸಂಸ್ಕಾರ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ.
ಅಷ್ಟಕ್ಕೂ ಅಂತ್ಯಸಂಸ್ಕಾರ ಮಾಡಿದ್ಯಾರು?
ಬಾಲಕಿ ತನ್ನ ಪಾಲಕರೊಂದಿಗೆ ಓಲ್ಡ್ ನಂಗಲ್ ಬಳಿಯ ಏರಿಯಾವೊಂದರಲ್ಲಿ ವಾಸವಾಗಿದ್ದಳು. ಅಲ್ಲೇ ಸಮೀಪ ಇರುವ ಚಿತಾಗಾರದಲ್ಲಿ ನೀರನ್ನು ತಂಪಾಗಿಡುವ ಕೂಲರ್ ಇದೆ. ಈಕೆಗೆ ಅದೇನೋ ತಣ್ಣನೆಯ ನೀರು ಕುಡಿಯುವ ಆಸೆಯಾಯಿತು. ಸಂಜೆ ಸುಮಾರು 5.30ರಹೊತ್ತಿಗೆ ತನ್ನ ಅಮ್ಮನಿಗೆ ತಿಳಿಸಿ, ಹತ್ತಿರದ ಚಿತಾಗಾರಕ್ಕೆ ಹೋದಳು. ಆದರೆ ಆಕೆ ಅಲ್ಲಿಯೇ ಸಾವನ್ನಪ್ಪಿದ್ದಾಳೆ. ಎಷ್ಟೊತ್ತಾದರೂ ಬರಲಿಲ್ಲವಲ್ಲ ಎಂದು ತಾಯಿ ಸುಮಾರು 6ಗಂಟೆ ಹೊತ್ತಿಗೆ ಹುಡುಕಿಕೊಂಡು ಹೋದಾಗ ಸತ್ಯ ಗೊತ್ತಾಗಿದೆ. ಆ ಚಿತಾಗಾರ ಉಸ್ತುವಾರಿ, ಬಾಲಕಿಯ ಶವವನ್ನು ತಾಯಿಗೆ ತೋರಿಸಿದ್ದಾನೆ. ಇನ್ನು ಆಕೆ ನೀರು ತೆಗೆದುಕೊಳ್ಳಲು ಹೋದಾಗ ಶಾಕ್ ಹೊಡೆದು ಮೃತಪಟ್ಟಿದ್ದಾಳೆ ಎಂದೂ ಹೇಳಿದ್ದಾನೆ. ಅದಕ್ಕೆ ಸರಿಯಾಗಿ ಬಾಲಕಿಯ ಎಡ ಮಣಿಕಟ್ಟು, ಮೊಣಕೈ ಮೇಲೆಲ್ಲ ಸುಟ್ಟಗಾಯದ ಗುರುತುಗಳೂ ಇವೆ. ಇನ್ನು ಬಾಲಕಿಯ ತುಟಿ ನೀಲಿಗಟ್ಟಿತ್ತು. ಈ ಬಗ್ಗೆ ತಾಯಿ ಪೊಲೀಸರ ಎದುರು ವಿವರಿಸಿದ್ದಾರೆ.
ಅಷ್ಟೇ ಅಲ್ಲ, ತಾಯಿ ಪೊಲೀಸ್ ಕಂಟ್ರೋಲ್ ರೂಂಗೆ ಫೋನ್ ಮಾಡುತ್ತೇನೆಂದು ಹೋದಾಗ ಆ ಚಿತಾಗಾರದ ವಿಧಿ-ವಿಧಾನಗಳನ್ನು ನೆರವೇರಿಸುವ ವ್ಯಕ್ತಿ ಆಕೆಯನ್ನು ತಡೆದಿದ್ದಾನೆ. ಪೊಲೀಸರಿಗೆ ಕರೆ ಮಾಡಿದರೆ ಅವರು ಪೋಸ್ಟ್ ಮಾರ್ಟಮ್ ಮಾಡುತ್ತಾರೆ. ಆಗ ಅಂಗಾಂಗಗಳನ್ನು ಕದಿಯುತ್ತಾರೆ ಎಂದೆಲ್ಲ ಹೇಳಿ, ತನ್ನ ಸಹಚರರೊಂದಿಗೆ ಸೇರಿ ಬಲವಂತವಾಗಿ ಬಾಲಕಿಯ ಶವಸಂಸ್ಕಾರ ಮಾಡಿದ್ದಾನೆ. ಆದರೆ ನಂತರ ಬಾಲಕಿಯ ತಂದೆ-ತಾಯಿ ಪೊಲೀಸರಿಗೆ ಎಲ್ಲವನ್ನೂ ವಿವರಿಸಿದ್ದಾರೆ. ತಮ್ಮ ಮಗಳ ಮೇಲೆ ರೇಪ್ ಮಾಡಿ, ಹತ್ಯೆ ಮಾಡಲಾಗಿದೆ ಎಂದು ಅವರು ಆರೋಪ ಮಾಡಿದ ಹಿನ್ನೆಲೆಯಲ್ಲಿ ಪೋಕ್ಸೊ (POCSO) ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ಸದ್ಯ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ. ಇನ್ನು ಚಿತಾಗಾರ ಸುತ್ತಲಿನ ಹಳ್ಳಿಗಳ ಸುಮಾರು 200 ಜನರು ಪ್ರತಿಭಟನೆ ನಡೆಸುತ್ತಿದ್ದು, ಬಾಲಕಿಯ ಸಾವಿಗೆ ನ್ಯಾಯ ಒದಗಿಸಿ ಎಂದು ಆಗ್ರಹಿಸುತ್ತಿದ್ದಾರೆ.
ಇದನ್ನೂ ಓದಿ: Ola Electric Scooter: ಸ್ವಾತಂತ್ರ್ಯ ದಿನಕ್ಕೆ ಮುನ್ನ ಓಲಾ ಎಲೆಕ್ಟ್ರಿಕ್ ಸ್ಕೂಟರ್ ಅನಾವರಣ; ಕಂಪೆನಿ ಸಿಇಒ ಹೇಳಿದ್ದೇನು?