ಪ್ರಧಾನಿ ನರೇಂದ್ರ ಮೋದಿ ವಾರಾಣಸಿ ಭೇಟಿ ಹಿನ್ನೆಲೆ; ರಸ್ತೆ ಬದಿಯಲ್ಲಿದ್ದ ಮಸೀದಿಗೆ ಕೇಸರಿ ಬಣ್ಣದಿಂದ ಪೇಂಟಿಂಗ್ !
ಸ್ಥಳೀಯ ಆಡಳಿತಾಧಿಕಾರಿಗಳು ಹೇಳಿದ್ದು ಬೇರೆ. ಈ ರಸ್ತೆಯಲ್ಲಿರುವ ಎಲ್ಲ ಹಳೇ ಕಟ್ಟಡಗಳಿಗೂ ಬಣ್ಣ ಬಳಿಯಲಾಗಿದೆ. ಎಲ್ಲದಕ್ಕೂ ಒಂದೇ ರೀತಯ ಬಣ್ಣವನ್ನು ಹೊಡೆಸಲಾಗಿದೆ ಎಂದಿದ್ದಾರೆ.
ವಾರಾಣಸಿ: ಪ್ರಧಾನಮಂತ್ರಿ ನರೇಂದ್ರ ಮೋಡಿ ಡಿಸೆಂಬರ್ 13-14ರಂದು ಉತ್ತರ ಪ್ರದೇಶದ ವಾರಾಣಸಿಗೆ ಭೇಟಿ ನೀಡಲಿದ್ದು, ಅಲ್ಲಿ ಅಭಿವೃದ್ಧಿ ಕಾಮಗಾರಿಗಳನ್ನು ಉದ್ಘಾಟನೆ ಮಾಡುವರು. 2022ರ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಉತ್ತರ ಪ್ರದೇಶದ ಹಲವು ಕಡೆ ವಿವಿಧ ಅಭಿವೃದ್ಧಿ ಯೋಜನೆಗಳ ಲೋಕಾರ್ಪಣೆಯಾಗುತ್ತಿದೆ. ನಿನ್ನೆಯಷ್ಟೇ ಅವರು ಗೋರಖ್ಪುರಕ್ಕೆ ಭೇಟಿ ನೀಡಿ, ಮೂರು ಬೃಹತ್ ಯೋಜನೆಗಳನ್ನು ಉದ್ಘಾಟಿಸಿದ್ದಾರೆ. ಇದೀಗ ಡಿ.13ರಂದು ಅವರು ವಾರಾಣಸಿಗೆ ಭೇಟಿ ಕೊಡುತ್ತಿರುವ ಹಿನ್ನೆಲೆಯಲ್ಲಿ, ಕಾಶಿ ವಿಶ್ವನಾಥ ದೇವಾಲಯಕ್ಕೆ ಹೋಗುವ ರಸ್ತೆಯಲ್ಲಿರುವ ಒಂದು ಮಸೀದಿಗೆ ಸ್ಥಳೀಯ ಆಡಳಿತಾಧಿಕಾರಿಗಳು ಕೇಸರಿ ಬಣ್ಣ ಹೊಡೆಸಿದ್ದಾರೆ ಎಂದು ಮಸೀದಿಯ ಸಮಿತಿ ಸದಸ್ಯರು ಹೇಳಿದ್ದಾಗಿ ವರದಿಯಾಗಿದೆ.
ಆದರೆ ಸ್ಥಳೀಯ ಆಡಳಿತಾಧಿಕಾರಿಗಳು ಹೇಳಿದ್ದು ಬೇರೆ. ಈ ರಸ್ತೆಯಲ್ಲಿರುವ ಎಲ್ಲ ಹಳೇ ಕಟ್ಟಡಗಳಿಗೂ ಬಣ್ಣ ಬಳಿಯಲಾಗಿದೆ. ಎಲ್ಲದಕ್ಕೂ ಒಂದೇ ರೀತಯ ಬಣ್ಣವನ್ನು ಹೊಡೆಸಲಾಗಿದೆ. ಅದು ತಿಳಿ ಗುಲಾಬಿಯೇ ಹೊರತು ಕೇಸರಿಯಲ್ಲ ಎಂದಿದ್ದಾರೆ. ಆದರೆ ಅದು ಕೇಸರಿ ಬಣ್ಣವೇ ಹೌದು ಎಂದು ಸ್ಥಳೀಯ ಮುಸ್ಲಿಂ ಸಮುದಾಯ ಕ್ಯಾತೆ ತೆಗೆದ ಬಳಿಕ ಅದರ ಮೇಲೆ ಮತ್ತೆ ಬಿಳಿ ಬಣ್ಣ ಬಳಿಯಲಾಗಿದೆ. ಈ ಮಸೀದಿಯ ಹೆಸರು ಅಂಜುಮಾನ್ ಇಂಟೆಝಮಿಯಾ ಎಂದಾಗಿದ್ದು, ಅದರ ಸಮಿತಿ ಸದಸ್ಯ ಮೊಹಮ್ಮದ್ ಎಜಾಝ್ ಇಸ್ಲಾಹಿ ಹೇಳುವ ಪ್ರಕಾರ ಇದು ಮೊದಲು ಬಿಳಿ ಬಣ್ಣದಲ್ಲೇ ಇತ್ತು. ನಂತರ ಕೇಸರಿ ಬಣ್ಣ ಬಡಿಯಲಾಯಿತು. ನಮ್ಮ ಸಮಿತಿಯನ್ನು ಸಂಪರ್ಕಿಸಿ ಈ ಬಗ್ಗೆ ಮಾಹಿತಿಯನ್ನೂ ನೀಡಿರಲಿಲ್ಲ ಎಂದು ಹೇಳಿದ್ದಾರೆ.
ಇದನ್ನೂ ಓದಿ: Vastu Tips : ವಾಸ್ತು ಪ್ರಕಾರ ಮನೆಯ ಬಳಿ ಅಪ್ಪಿತಪ್ಪಿಯೂ ಈ ನಾಲ್ಕು ಗಿಡ ಹಾಕಬೇಡಿ, ಅದರಿಂದ ಹಾನಿಯೇ ಹೆಚ್ಚು