Scrub Typhus: ಮಥುರಾದಲ್ಲಿ ಪತ್ತೆಯಾಗಿದ್ದ ನಿಗೂಢ ಜ್ವರದ ಹೆಸರು ಸ್ಕ್ರಬ್ ಟೈಫಸ್; ಸೋಂಕು ಹೇಗೆ ಹರಡುತ್ತದೆ? ಚಿಕಿತ್ಸೆ ಏನು?-ಇಲ್ಲಿದೆ ವಿವರ
ಈ ಸ್ಕ್ರಬ್ ಟೈಫಸ್ ಸೋಂಕು ತಡೆಗೆ ಇದುವರೆಗೂ ಯಾವುದೇ ಲಸಿಕೆಯನ್ನೂ ಅಭಿವೃದ್ಧಿಪಡಿಸಿಲ್ಲ. ಚಿಗಟಿಗಳು ಹೆಚ್ಚಾಗಿರುವ ಪ್ರದೇಶಗಳಿಂದ ದೂರ ಇರುವುದೇ ಈ ಜ್ವರ ಬಾರದಂತೆ ನೋಡಿಕೊಳ್ಳಲು ಇರುವ ಮಾರ್ಗ ಎಂದು ಕಾಯಿಲೆ ನಿಯಂತ್ರಣ ಮತ್ತು ತಡೆಗಟ್ಟುವಿಕೆ ಕೇಂದ್ರ ಹೇಳಿದೆ.
ಉತ್ತರಪ್ರದೇಶದ ಪಶ್ಚಿಮ ಭಾಗದ ಮಥುರಾ ಜಿಲ್ಲೆಯಲ್ಲಿ ಒಂದು ನಿಗೂಢ ಜ್ವರ ಕಾಣಿಸಿಕೊಂಡಿತ್ತು. ಈ ಜ್ವರ 2-45ವರ್ಷಗಳವರೆಗಿನ 29 ಜನರಲ್ಲಿ ಕಾಣಿಸಿಕೊಂಡಿದ್ದಲ್ಲೆ, ಜ್ವರಕ್ಕೆ 5 ಮಕ್ಕಳು ಸೇರಿ ಒಟ್ಟು 6 ಮಂದಿ ಬಲಿಯಾಗಿದ್ದೂ ವರದಿಯಾಗಿತ್ತು. ಅದ್ಯಾವ ಜ್ವರವೆಂದೇ ತಿಳಿದಿರಲಿಲ್ಲ. ಆದರೆ ಅದನ್ನೀಗ ಸ್ಕ್ರಬ್ ಟೈಫಸ್ (Scrub Typhus)ಜ್ವರ ಎಂದು ಗುರುತಿಸಲಾಗಿದೆ. ಈ ಜ್ವರ ಆರೋಗ್ಯ ಸಿಬ್ಬಂದಿಯ ತಲೆ ಕೆಡಿಸಿದ್ದು ಅಷ್ಟಿಷ್ಟಲ್ಲ. ಜ್ವರದ ಪ್ರಕರಣ ಅತಿಹೆಚ್ಚು ಸಂಖ್ಯೆಯಲ್ಲಿ ಪತ್ತೆಯಾದ ಕೊಹ್ ಗ್ರಾಮದ ಹಲವರ ರಕ್ತ, ಗಂಟಲು ಮಾದರಿಯನ್ನು ತೆಗೆದುಕೊಂಡು ಹೋಗಿದ್ದ ಆರೋಗ್ಯ ಸಿಬ್ಬಂದಿ, ನಂತರ ಅದನ್ನು ತಪಾಸಣೆಗೆ ಒಳಪಡಿಸಿದ್ದರು. ತಪಾಸಣೆಯ ಬಳಿಕ ಇದು ಸ್ಕ್ರಬ್ ಟೈಫಸ್ ರೋಗ ಎಂಬುದು ಸ್ಪಷ್ಟವಾಗಿದೆ.
ಮೊದಮೊದಲು ಮಥುರಾದಲ್ಲಿ ಮಾತ್ರ ಪತ್ತೆಯಾಗಿದ್ದ ಜ್ವರ ನಂತರ ಫಿರೋಜಾಬಾದ್, ಮೈನ್ಪುರಿಗಳಲ್ಲೂ ಕಾಣಿಸಿಕೊಂಡಿತ್ತು. ಲಕ್ಷಣಗಳೆಲ್ಲ ಒಂದೇ ತೆರನಾಗಿದ್ದು, ಜ್ವರದ ಕೇಸ್ ಹೆಚ್ಚುತ್ತಿರುವ ಬಗ್ಗೆ ಆರೋಗ್ಯಾಧಿಕಾರಿಗಳು ಸ್ಥಳೀಯರಿಗೆ ಎಚ್ಚರಿಕೆ ನೀಡಿದ್ದರು. ಆಗಸ್ಟ್ 27ರಂದು ಆಸ್ಸಾಂನಿಂದ ಕೂಡ ಇಂಥದ್ದೇ ಮಾದರಿಯ ಜ್ವರ ಪತ್ತೆಯಾಗಿತ್ತು. ಈಗ ಅದೆಲ್ಲವೂ ಸ್ಕ್ರಬ್ ಟೈಫಸ್ ಎಂದೇ ಗುರುತಿಸಲ್ಪಟ್ಟಿದೆ.
ಏನಿದು ಸ್ಕ್ರಬ್ ಟೈಫಸ್? ಕಾಯಿಲೆ ನಿಯಂತ್ರಣಾ ಮತ್ತು ತಡೆಗಟ್ಟುವಿಕೆ ಕೇಂದ್ರಗಳ(CDC)ಪ್ರಕಾರ ಈ ಸ್ಕ್ರಬ್ ಟೈಫಸ್ ಎಂಬುದು, ಓರಿಯೆಂಟಿಯಾ ಸುತ್ಸುಗಮುಶಿ (Orientia Tsutsugamushi) ಎಂಬ ಬ್ಯಾಕ್ಟೀರಿಯಾದಿಂದ ಉಂಟಾಗುವ ರೋಗ. ಇದಕ್ಕೆ ಬುಷ್ ಟೈಫಸ್ ಎಂದೂ ಕರೆಯಲಾಗುತ್ತದೆ. ಇದು ಬ್ಯಾಕ್ಟೀರಿಯಾ ಸೋಂಕಿತ ಲಾರ್ವಾ ಹುಳುಗಳ ಮುಖಾಂತರ ಒಬ್ಬರಿಂದ ಇನ್ನೊಬ್ಬರಿಗೆ ಹರಡುತ್ತದೆ. ಸೋಂಕಿತ ವ್ಯಕ್ತಿಗೆ ಕಡಿದು ಸ್ಕ್ರಬ್ ಟೈಫಸ್ ಜ್ವರಕ್ಕೆ ತುತ್ತಾದ ಲಾರ್ವಾಹುಳುಗಳು ಇನ್ನೊಬ್ಬರಿಗೆ ಕಚ್ಚಿದಾಗ ಅವರಲ್ಲಿಯೂ ಈ ಜ್ವರ ಕಾಣಿಸಿಕೊಳ್ಳುತ್ತದೆ.
ಲಕ್ಷಣಗಳು ಹೀಗಿವೆ.. ಸೋಂಕು ನಮ್ಮ ದೇಹದ ಒಳಗೆ ಹೋದ 10 ದಿನಗಳ ಒಳಗೆ ಲಕ್ಷಣಗಳು ಕಾಣಿಸಿಕೊಳ್ಳಲು ಶುರುವಾಗುತ್ತದೆ. ಶೀತ ಮತ್ತು ಜ್ವರ, ತಲೆನೋವು, ಮೈಕೈ ನೋವು, ಸ್ನಾಯು ಸೆಳೆತ, ಚಿಗಟಿ (ಲಾರ್ವಾಹುಳು)ಕಚ್ಚಿದ ಸ್ಥಳದಲ್ಲಿ ಕಪ್ಪು ಬಣ್ಣ ಆಗುವುದು, ಮಾನಸಿಕ ಸ್ಥಿತಿಯಲ್ಲಿ ಬದಲಾವಣೆ, ಹೆಚ್ಚಾದ ಪರಿಸ್ಥಿತಿಯಲ್ಲಿ ಕೋಮಾ, ದದ್ದು, ಗಡ್ಡೆಗಳು ಜ್ವರದ ಪ್ರಮುಖ ಲಕ್ಷಣಗಳಾಗಿವೆ. ಅಷ್ಟೇ ಅಲ್ಲ, ಈ ಜ್ವರ ತೀವ್ರವಾದರೆ ಅಂಗಾಂಗ ವಿಫಲಗೊಳ್ಳಬಹುದು, ರಕ್ತಸ್ರಾವವೂ ಆಗುತ್ತದೆ. ಹಾಗೆಲ್ಲ ಆದರೆ ಚಿಕಿತ್ಸೆ ನೀಡಲು ಸಾಧ್ಯವಿಲ್ಲ.. ಪ್ರಾಣ ಹೋಗುತ್ತದೆ ಎಂದೂ ಸಿಡಿಸಿ ತಿಳಿಸಿದೆ.
ಯಾವುದೇ ಲಸಿಕೆಗಳೂ ಇಲ್ಲ ಈ ಸ್ಕ್ರಬ್ ಟೈಫಸ್ ಸೋಂಕು ತಡೆಗೆ ಇದುವರೆಗೂ ಯಾವುದೇ ಲಸಿಕೆಯನ್ನೂ ಅಭಿವೃದ್ಧಿಪಡಿಸಿಲ್ಲ. ಚಿಗಟಿಗಳು ಹೆಚ್ಚಾಗಿರುವ ಪ್ರದೇಶಗಳಿಂದ ದೂರ ಇರುವುದೇ ಈ ಜ್ವರ ಬಾರದಂತೆ ನೋಡಿಕೊಳ್ಳಲು ಇರುವ ಮಾರ್ಗ ಎಂದು ಸಿಡಿಸಿ ಹೇಳುತ್ತದೆ. ಇನ್ನು ಸ್ಕ್ರಬ್ ಟೈಫಸ್ಗೆ ಒಳಗಾದ ವ್ಯಕ್ತಿಗೆ ಡಾಕ್ಸಿಸೈಕ್ಲಿನ್ ಆ್ಯಂಟಿಬಯೋಟಿಕ್ ಮೂಲಕ ಚಿಕಿತ್ಸೆ ನೀಡಲಾಗುತ್ತದೆ. ಜ್ವರದ ಪ್ರಾಥಮಿಕ ಹಂತದಲ್ಲಿಯೇ ಯಾರಿಗೆ ಡಾಕ್ಸಿಸೈಕ್ಲಿನ್ ನೀಡಲಾಗುತ್ತದೆಯೋ ಅವರು ಶೀಘ್ರವೇ ಚೇತರಿಸಿಕೊಳ್ಳುತ್ತಾರೆ ಎಂದೂ ಸಿಡಿಸಿ ಮಾಹಿತಿ ನೀಡಿದೆ.
ಮಕ್ಕಳನ್ನು ಕಾಪಾಡಿ ಜ್ವರ ಮಕ್ಕಳಿಗೆ ಬಂದರೆ ಇನ್ನೂ ಅಪಾಯಕಾರಿಯಾಗುತ್ತದೆ. ಹಾಗಾಗಿ ಈ ಸೋಂಕು ಹೆಚ್ಚಾಗಿರುವ ಪ್ರದೇಶದ ಪುಟ್ಟಪುಟ್ಟ ಮಕ್ಕಳಿಗೆ ಮೈಯನ್ನು ಆದಷ್ಟು ಪೂರ್ತಿಯಾಗಿ ಮುಚ್ಚಬೇಕು. ಇಂಥ ಪ್ರದೇಶಗಳ ಮನೆಗಳಲ್ಲಿ ಮಗುವನ್ನು ಮಲಗಿಸುವ ತೊಟ್ಟಿಲುಗಳನ್ನೂ ಸೊಳ್ಳೆಪರದೆಗಳಿಂದ ಮುಚ್ಚಬೇಕು ಎಂದು ಸಿಡಿಸಿ ಸಲಹೆ ನೀಡಿದೆ. ಈ ಸ್ಕ್ರಬ್ ಟೈಫಸ್ ಬರೀ ಭಾರತದಲ್ಲಷ್ಟೇ ಅಲ್ಲ, ಇಂಡೋನೇಷ್ಯಾ, ಚೀನಾ, ಜಪಾನ್ ಮತ್ತು ಉತ್ತರ ಆಸ್ಟ್ರೇಲಿಯಾದ ಗ್ರಾಮೀಣ ಪ್ರದೇಶಗಳಲ್ಲೂ ಹೆಚ್ಚಾಗಿ ಕಂಡುಬರುತ್ತದೆ.
ಇದನ್ನೂ ಓದಿ: ಆಸ್ಪತ್ರೆಯ ಬೆಡ್, ಸಿಬ್ಬಂದಿ ಇದೀಗ ಆಮ್ಲಜನಕದ ಕೊರತೆ: ಅಮೆರಿಕದಲ್ಲಿ ಡೆಲ್ಟಾ ರೂಪಾಂತರಿ ಆರ್ಭಟ
ಇಂಡೋ ಟಿಬೆಟಿಯನ್ ಬಾರ್ಡರ್ ಪೊಲೀಸ್ ಡಿಜಿಯಾಗಿ ಸಂಜಯ್ ಅಧಿಕಾರ ಸ್ವೀಕಾರ