
ಡೆಹ್ರಾಡೂನ್: ಉತ್ತರಾಖಂಡ್ ವಿಧಾನಸಭೆ ಚುನಾವಣೆ (Uttarakhand Assembly Election 2022) ಕೆಲವೇ ದಿನಗಳು ಬಾಕಿ ಇರುವ ಬೆನ್ನಲ್ಲೇ ಬಾಲಿವುಡ್ ನಟ ಅಕ್ಷಯ್ ಕುಮಾರ್ (Akshay Kumar) ಅವರನ್ನು ಉತ್ತರಾಖಂಡ್ ರಾಜ್ಯದ ಬ್ರಾಂಡ್ ಅಂಬಾಸಿಡರ್ (ಬ್ರಾಂಡ್ ರಾಯಭಾರಿ) ಆಗಿ ನೇಮಕ ಮಾಡಲಾಗಿದೆ. ಈ ಬಗ್ಗೆ ರಾಜ್ಯದ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಮಿ (Pushkar Singh Dhami) ಘೋಷಣೆ ಮಾಡಿದ್ದಾರೆ. ಅಂದಹಾಗೇ, ರಾಜ್ಯದ ಬ್ರಾಂಡ್ ಅಂಬಾಸಿಡರ್ ಆಗುವಂತೆ ಮನವಿ ಮಾಡಲು ಪುಷ್ಕರ್ ಸಿಂಗ್ ಧಮಿಯವರೇ ಅಕ್ಷಯ್ ಕುಮಾರ್ರನ್ನು ಭೇಟಿ ಮಾಡಿದ್ದರು. ಅದಕ್ಕೆ ಅಕ್ಷಯ್ ಕುಮಾರ್ ಒಪ್ಪಿಗೆ ನೀಡಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಧಮಿ, ನಾವು ಅಕ್ಷಯ್ ಕುಮಾರ್ ಎದುರು ಪ್ರಸ್ತಾಪವನ್ನು ಇಟ್ಟಿದ್ದೆವು. ಅದನ್ನವರು ಒಪ್ಪಿಕೊಂಡಿದ್ದು ಖುಷಿಯಾಗಿದೆ ಎಂದು ಹೇಳಿದ್ದಾರೆ.
2017ರಲ್ಲಿ ನಟ ಅಕ್ಷಯ್ ಕುಮಾರ್ ಅವರು ಉತ್ತರಾಖಂಡ್ಗೆ ಸ್ವಚ್ಛ ಭಾರತ್ ಅಭಿಯಾನದ ಬ್ರಾಂಡ್ ರಾಯಭಾರಿಯಾಗಿದ್ದರು. ಆಗ ಅವರು ಅದಕ್ಕಾಗಿ ಹಣ ಪಡೆಯದೆ ಉಚಿತವಾಗಿಯೇ ರಾಯಭಾರಿಯಾಗಿದ್ದರು. ಇಂಥದ್ದೊಂದು ಅಭಿಯಾನದ ಭಾಗವಾಗುವುದು ನನ್ನ ಪಾಲಿಗೆ ಗೌರವ ಎಂದೂ ಹೇಳಿದ್ದರು. ಇದೀಗ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಅಂಬಾಸಿಡರ್ ಆಗಿದ್ದಾರೆ.
ಉತ್ತರಾಖಂಡ್ನ 70 ವಿಧಾನಸಭೆ ಕ್ಷೇತ್ರಗಳಿಗೆ ಫೆ. 14ರಂದು ಮತದಾನ ನಡೆಯಲಿದೆ. ಇಲ್ಲಿ ಈಗಾಗಲೇ ಅಧಿಕಾರದಲ್ಲಿರುವ ಬಿಜೆಪಿ ಮತ್ತೆ ತಾನೇ ಆಡಳಿತ ಹಿಡಿಯುವ ಪ್ರಯತ್ನದಲ್ಲಿದೆ. ಭಾನುವಾರ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ಉತ್ತರಾಖಂಡ್ನಲ್ಲಿ ಮನೆ ಮನೆ ಪ್ರಚಾರ ನಡೆಸಿದ್ದಾರೆ. ಗಂಗೋತ್ರಿಯಲ್ಲಿ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದ ಅವರು, ಉತ್ತರಾಖಂಡ್ನಲ್ಲಿ ಬಿಜೆಪಿ ಸರ್ಕಾರ ಬಡವರು, ತುಳಿತಕ್ಕೊಳಗಾದವರು, ಹಿಂದುಳಿದವರು, ದೀನದಲಿತರು, ಮಹಿಳೆಯರ ಸಬಲೀಕರಣಕ್ಕಾಗಿ ಮಾಡಿದ ಕೆಲಸದ ರಿಪೋರ್ಟ್ ಕಾರ್ಡ್ ಇಲ್ಲಿನ ಪ್ರತಿಯೊಬ್ಬರ ಎದುರಿಗೆ ಇದೆ. ಇವರೆಲ್ಲ ಮತ್ತೊಮ್ಮೆ ಬಿಜೆಪಿಗೆ ಸಂಪೂರ್ಣವಾಗಿ ಆಶೀರ್ವಾದ ಮಾಡಲು ಉತ್ಸಾಹದಲ್ಲಿದ್ದಾರೆ ಎಂಬುದು ಸ್ಪಷ್ಟವಾಗಿ ಗೊತ್ತಾಗುತ್ತಿದೆ ಎಂದು ಜೆ.ಪಿ.ನಡ್ಡಾ ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ: ಶಾಲೆ- ಕಾಲೇಜುಗಳಲ್ಲಿ ಹೆಚ್ಚಾಗ್ತಿದೆ ಹಿಜಾಬ್, ಕೇಸರಿ ಶಾಲು ಸಮರ; ನೀಲಿ ಶಾಲ್ ಧರಿಸಿ ಬಂದ ಮತ್ತೊಂದು ಬಣ, ಪ್ರಾಂಶುಪಾಲರು ಹೈರಾಣ
Published On - 12:08 pm, Mon, 7 February 22