13 ಲಕ್ಷದ ಕಾರಿಗಾಗಿ ಮದುವೆಯನ್ನೇ ರದ್ದು ಮಾಡಿದ ಪೊಲೀಸ್ ಕಾನ್‌ಸ್ಟೆಬಲ್, ಅಮಾನತು
ಸೋನಿಪತ್‌ನಲ್ಲಿ ವರದಕ್ಷಿಣೆಗಾಗಿ ಮದುವೆ ರದ್ದಾದ ಆಘಾತಕಾರಿ ಘಟನೆ ನಡೆದಿದೆ. 13 ಲಕ್ಷ ರೂ. ಮೌಲ್ಯದ ಮಾರುತಿ ಬ್ರೆಝಾ ಕಾರು ಬೇಕೆಂದು ಬೇಡಿಕೆ ಇಟ್ಟಿದ್ದ ಕಾನ್‌ಸ್ಟೆಬಲ್ ಮದುವೆಯನ್ನೇ ರದ್ದುಗೊಳಿಸಿದ್ದಾನೆ. ಈ ಘಟನೆಗೆ ಸಂಬಂಧಿಸಿದಂತೆ ದೆಹಲಿ ಪೊಲೀಸ್ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಕಾನ್‌ಸ್ಟೆಬಲ್ ಕುಲದೀಪ್‌ನನ್ನು ಅಮಾನತುಗೊಳಿಸಲಾಗಿದೆ. ವಧುವಿನ ಕುಟುಂಬದ ದೂರಿನ ಮೇರೆಗೆ ಕ್ರಮ ಕೈಗೊಳ್ಳಲಾಗಿದೆ.

ಸೋನಿಪತ್, ನವೆಂಬರ್ 24: ಹೆಚ್ಚಿನ ವರದಕ್ಷಿಣೆ ಮತ್ತು ದುಬಾರಿ ಕಾರಿನ ಬೇಡಿಕೆಯಿಂದಾಗಿ ಮದುವೆಯೇ ರದ್ದಾದ ಘಟನೆ ಹರಿಯಾಣದ ಸೋನಿಪತ್‌ನಲ್ಲಿ ನಡೆದಿದೆ. ವಧುವಿನ ಕುಟುಂಬವು ವರನಿಗೆ 9.5 ಲಕ್ಷ ರೂಪಾಯಿ ಮೌಲ್ಯದ ಹುಂಡೈ ಔರಾ ಕಾರನ್ನು ಖರೀದಿಸಲು ನಿರ್ಧರಿಸಿತ್ತು. ಆದರೆ ತನಗೆ ಆ ಕಾರು ಬೇಡ, 13 ಲಕ್ಷ ರೂಪಾಯಿ ಮೌಲ್ಯದ ಮಾರುತಿ ಬ್ರೆಝಾ ಕಾರನ್ನೇ ಕೊಡಬೇಕು ಎಂದು ವರ ಹಠ ಹಿಡಿದಿದ್ದಾನೆ. ಕೊನೆಗೆ ತನಗೆ ಇಷ್ಟವಾದ ಕಾರು ಸಿಗದ ಕಾರಣ ಮದುವೆಯನ್ನೇ ರದ್ದುಗೊಳಿಸಿದ್ದಾನೆ ಎಂಬ ಆರೋಪ ಕೇಳಿಬಂದಿದೆ. ಈ ಘಟನೆಗೆ ಸಂಬಂಧಿಸಿದಂತೆ ದೆಹಲಿ ಪೊಲೀಸ್ ಇಲಾಖೆಯಲ್ಲಿ ಕಾನ್‌ಸ್ಟೆಬಲ್ ಆಗಿ ಕೆಲಸ ಮಾಡುತ್ತಿದ್ದ ವರನನ್ನು ಅಮಾನತುಗೊಳಿಸಲಾಗಿದೆ.
ಮದುವೆ ಮಂಟಪ ಸಿದ್ಧ, ವಧು ಕಾಯುತ್ತಿದ್ದಳು, ಆದರೆ ವರನ ಬೇಡಿಕೆ ಬೇರೆಯೇ ಇತ್ತು
ಸೋನಿಪತ್‌ನ ಮಮ್‌ಚಂದ್ ವಾಟಿಕಾದಲ್ಲಿ ನವೆಂಬರ್ 20ರಂದು ಮದುವೆ ನಡೆಯಬೇಕಿತ್ತು. ಸುಮಾರು ಆರು ತಿಂಗಳ ಹಿಂದೆಯೇ ಎರಡೂ ಕುಟುಂಬಗಳು ಮದುವೆಯನ್ನು ನಿಶ್ಚಯಿಸಿದ್ದವು. ಮದುವೆಗಾಗಿ ಮಂಟಪವನ್ನು ಅಲಂಕರಿಸಲಾಗಿತ್ತು. ಡಿಜೆ ವ್ಯವಸ್ಥೆ ಮಾಡಲಾಗಿತ್ತು. ಸಂಬಂಧಿಕರು ಮತ್ತು ಅತಿಥಿಗಳು ಮದುವೆಗೆ ಆಗಮಿಸಿದ್ದರು. ವಧುವಿನ ಕುಟುಂಬವೂ ಎಲ್ಲ ಸಿದ್ಧತೆಗಳನ್ನು ಮಾಡಿಕೊಂಡಿತ್ತು.
ವಧುವಿನ ತಂದೆ ಸುಭಾಷ್ ಕುಮಾರ್ ನೀಡಿರುವ ದೂರಿನ ಪ್ರಕಾರ, ವರನಿಗೆ 9.5 ಲಕ್ಷ ರೂಪಾಯಿ ಮೌಲ್ಯದ ಹುಂಡೈ ಔರಾ ಕಾರನ್ನು ಬುಕ್ ಮಾಡಲಾಗಿತ್ತು. ಆದರೆ ವರ ಕುಲದೀಪ್ ತನಗೆ ಆ ಕಾರು ಇಷ್ಟವಿಲ್ಲ ಎಂದು ಹೇಳಿ, 13 ಲಕ್ಷ ರೂಪಾಯಿ ಮೌಲ್ಯದ ಮಾರುತಿ ಬ್ರೆಝಾ ಕಾರು ಬೇಕೆಂದು ಬೇಡಿಕೆ ಇಟ್ಟಿದ್ದಾನೆ. ಇದರಿಂದ ವಧುವಿನ ಕುಟುಂಬ ಔರಾ ಕಾರಿನ ಬುಕಿಂಗ್ ರದ್ದುಗೊಳಿಸಿ ಬ್ರೆಝಾ ಕಾರಿಗಾಗಿ ಹುಡುಕಾಟ ನಡೆಸಿದೆ. ಆದರೆ ಕಾರು ತಕ್ಷಣಕ್ಕೆ ಲಭ್ಯವಾಗದ ಕಾರಣ ಅದನ್ನು ಖರೀದಿಸಲು ಸಾಧ್ಯವಾಗಿರಲಿಲ್ಲ.
ಚಿನ್ನಾಭರಣ, ಪೀಠೋಪಕರಣಗಳಿಗೂ ಬೇಡಿಕೆ?
ಕಾರಿನ ಬೇಡಿಕೆಯಷ್ಟೇ ಅಲ್ಲದೆ, ವರನ ಕುಟುಂಬ ಚಿನ್ನಾಭರಣ ಮತ್ತು ಇತರೆ ವಸ್ತುಗಳನ್ನೂ ಕೇಳಿತ್ತು ಎಂದು ವಧುವಿನ ತಂದೆ ಆರೋಪಿಸಿದ್ದಾರೆ. ವರನಿಗೆ ಎರಡು ತೊಲಾ ಚಿನ್ನದ ಸರ, ವರನ ತಾಯಿಗೆ ನಾಲ್ಕು ತೊಲಾ ಚಿನ್ನದ ಕಿವಿಯೋಲೆ ಹಾಗೂ ಬೆಳ್ಳಿಯ ಕಾಲುಂಗುರವನ್ನು ನೀಡಲು ಸಿದ್ಧತೆ ಮಾಡಿಕೊಳ್ಳಲಾಗಿತ್ತು. ವರನ ಸಹೋದರ ಮತ್ತು ಅವರ ಪತ್ನಿಗೂ ಆಭರಣ ನೀಡುವಂತೆ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ.
ಇದನ್ನೂ ಓದಿ: ಕಳೆದ 5 ವರ್ಷಗಳಲ್ಲಿ ವರದಕ್ಷಿಣೆ ಕಿರುಕುಳಕ್ಕೆ ಕರ್ನಾಟಕದಲ್ಲಿ 629 ಮಂದಿ ಸಾವು: ಕೇವಲ 7 ಪ್ರಕರಣಗಳಲ್ಲಿ ಮಾತ್ರ ಈವರೆಗೆ ಶಿಕ್ಷೆ
ಇದರ ಜೊತೆಗೆ ಸೋಫಾ, ಅಲ್ಮಿರಾ ಸೇರಿದಂತೆ ಪೀಠೋಪಕರಣಗಳನ್ನು ಕೂಡ ವರನ ಕುಟುಂಬಕ್ಕೆ ನೀಡಲು ವ್ಯವಸ್ಥೆ ಮಾಡಲಾಗಿತ್ತು. ಮದುವೆಗಾಗಿ 11 ಸಾವಿರ ರೂಪಾಯಿ ವೆಚ್ಚದಲ್ಲಿ ಅಲಂಕೃತ ಕುದುರೆ ಹಾಗೂ 13,500 ರೂಪಾಯಿ ವೆಚ್ಚದಲ್ಲಿ ಡಿಜೆ ವ್ಯವಸ್ಥೆ ಮಾಡಲಾಗಿತ್ತು. ಸುಮಾರು 1,200 ಅತಿಥಿಗಳಿಗೆ ಔತಣಕೂಟ ಏರ್ಪಡಿಸಲಾಗಿತ್ತು ಎಂದು ವರದಿಯಾಗಿದೆ. ಮದುವೆ ಸಿದ್ಧತೆಗಳಿಗೆ ಸುಮಾರು 30 ಲಕ್ಷ ರೂಪಾಯಿ ಖರ್ಚು ಮಾಡಿರುವುದಾಗಿ ವಧುವಿನ ತಂದೆ ಹೇಳಿಕೊಂಡಿದ್ದಾರೆ.
ಮಂಟಪಕ್ಕೆ ಬಂದ ವರ, ಮದುವೆ ಮಾಡಿಕೊಳ್ಳದೆ ವಾಪಸ್
ನವೆಂಬರ್ 20ರಂದು ಸಂಜೆ ಸುಮಾರು 7.15ರ ವೇಳೆಗೆ ವರ ಕುಲದೀಪ್ ತನ್ನ ತಾಯಿಯೊಂದಿಗೆ ಸಾಮಾನ್ಯ ಉಡುಪಿನಲ್ಲಿ ಮದುವೆ ಮಂಟಪಕ್ಕೆ ಬಂದಿದ್ದಾನೆ. ಅಲ್ಲಿ ತನಗಾಗಿ ಮಾರುತಿ ಬ್ರೆಝಾ ಕಾರಿನ ವ್ಯವಸ್ಥೆ ಮಾಡದಿರುವುದನ್ನು ಕಂಡು ವಧುವಿನ ಕುಟುಂಬದವರೊಂದಿಗೆ ವಾಗ್ವಾದ ನಡೆಸಿದ್ದಾನೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ವಧುವಿನ ತಂದೆ ಸುಭಾಷ್ ಕುಮಾರ್ ಮತ್ತು ಕುಟುಂಬದ ಇತರರು ವರ ಹಾಗೂ ಆತನ ತಾಯಿಯನ್ನು ಸಮಾಧಾನಪಡಿಸಿ ಮದುವೆ ಮುಂದುವರಿಸುವಂತೆ ಮನವಿ ಮಾಡಿದ್ದಾರೆ. ಆದರೆ, ಅವರ ಮನವಿಗೆ ಒಪ್ಪದ ಕುಲದೀಪ್ ಮತ್ತು ಆತನ ತಾಯಿ ಮದುವೆ ಮಂಟಪದಿಂದ ಹೊರಟುಹೋಗಿದ್ದಾರೆ. ವಧು ಮದುವೆಯ ಉಡುಪಿನಲ್ಲೇ ಮಂಟಪದಲ್ಲಿ ಕಾಯುತ್ತಿದ್ದಳು ಎಂದು ವರದಿಯಾಗಿದೆ.
ದೆಹಲಿ ಪೊಲೀಸ್ ಇಲಾಖೆಯಿಂದ ಅಮಾನತು
ಈ ಘಟನೆಗೆ ಸಂಬಂಧಿಸಿದಂತೆ ವಧುವಿನ ಕುಟುಂಬ ಸೋನಿಪತ್ ಪೊಲೀಸರಿಗೆ ದೂರು ನೀಡಿದೆ. ವರದಕ್ಷಿಣೆ ಬೇಡಿಕೆ ಇಟ್ಟು ಮದುವೆ ರದ್ದುಗೊಳಿಸಿದ ಆರೋಪವನ್ನು ದೆಹಲಿ ಪೊಲೀಸ್ ಇಲಾಖೆ ಗಂಭೀರವಾಗಿ ಪರಿಗಣಿಸಿದೆ. ದೆಹಲಿ ಪೊಲೀಸರ ಉತ್ತರ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಕಾನ್‌ಸ್ಟೆಬಲ್ ಕುಲದೀಪ್‌ನನ್ನು ನವೆಂಬರ್ 23ರಂದು ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಲಾಗಿದೆ. ಆತನ ವಿರುದ್ಧ ಇಲಾಖಾ ವಿಚಾರಣೆಯನ್ನೂ ಆರಂಭಿಸಲಾಗಿದೆ.
ಸೋನಿಪತ್ ಉಪ ಪೊಲೀಸ್ ಆಯುಕ್ತ ಜಿತೇಂದ್ರ ಗಹ್ಲಾವತ್ ಅವರು ವಧುವಿನ ಕುಟುಂಬದಿಂದ ದೂರು ಸ್ವೀಕರಿಸಿರುವುದನ್ನು ಖಚಿತಪಡಿಸಿದ್ದಾರೆ. ಸಮುದಾಯದ ಮುಖಂಡರ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳಲು ಕುಟುಂಬ ಒಂದು ದಿನದ ಕಾಲಾವಕಾಶ ಕೇಳಿದ್ದರಿಂದ ಪೊಲೀಸರು ಮಾತುಕತೆಗೆ ಅವಕಾಶ ನೀಡಿದ್ದರು.
ವರ ಕುಲದೀಪ್ ಹೇಳಿದ್ದೇನು?
ಇನ್ನೊಂದೆಡೆ, ತನ್ನ ಮೇಲಿನ ಆರೋಪಗಳನ್ನು ಕುಲದೀಪ್ ನಿರಾಕರಿಸಿದ್ದಾನೆ. ತಾನು ಯಾವುದೇ ಕಾರು ಅಥವಾ ವರದಕ್ಷಿಣೆಗೆ ಬೇಡಿಕೆ ಇಟ್ಟಿಲ್ಲ. ಮದುವೆ ಸಮಾರಂಭದಲ್ಲಿ ನಡೆದ ಸಣ್ಣ ಭಿನ್ನಾಭಿಪ್ರಾಯವನ್ನು ದೊಡ್ಡ ವಿವಾದವನ್ನಾಗಿ ಮಾಡಲಾಗಿದೆ ಎಂದು ಆತ ಹೇಳಿಕೊಂಡಿದ್ದಾನೆ. ಮದುವೆ ಮೆರವಣಿಗೆಯನ್ನು ತಾನೇ ವಾಪಸ್ ಕಳುಹಿಸಿಲ್ಲ, ವಧುವಿನ ಕಡೆಯವರೇ ಮದುವೆಯನ್ನು ಮುಂದುವರಿಸಲು ಅವಕಾಶ ನೀಡಲಿಲ್ಲ ಎಂಬುದು ಆತನ ವಾದವಾಗಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




