ತುಮಕೂರಿನಲ್ಲಿ ಯುವಕನ ಕೊಲೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್: ತಾಯಿಯೇ ಕೊಲೆಗಾರ್ತಿ! ಸಿಸಿಟಿವಿಯಿಂದ ಬಯಲಾಯ್ತು ರಹಸ್ಯ
ತುಮಕೂರು ತಾಲೂಕಿನ ಜಕ್ಕೇನಹಳ್ಳಿಯಲ್ಲಿ ಮನೆಯ ಹೊರಗೆ ಮಲಗಿದ್ದ ಯುವಕ ಮುತ್ತುರಾಜ್ ಕೊಲೆ ಪ್ರಕರಣಕ್ಕೆ ರೋಚಕ ತಿರುವು ಸಿಕ್ಕಿದೆ. ಅನ್ಯಜಾತಿಯ ವಿವಾಹಿತ ಮಹಿಳೆಯನ್ನು ಮದುವೆಯಾಗಲು ಮುಂದಾಗಿದ್ದ ಮಗನ ನಿರ್ಧಾರದಿಂದ ಬೇಸರಗೊಂಡ ತಾಯಿ ಶಿವಮ್ಮ, ಕಬ್ಬಿಣದ ರಾಡ್‌ನಿಂದ ಹಲ್ಲೆ ನಡೆಸಿ ಕೊಲೆ ಮಾಡಿರುವುದು ಸಿಸಿಟಿವಿ ದೃಶ್ಯಗಳಿಂದ ಬಯಲಾಗಿದೆ. ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಮುಖ್ಯಾಂಶಗಳು
- ಮಗನ ಪ್ರೀತಿಗೆ ವಿರೋಧ ವ್ಯಕ್ತಪಡಿಸಿದ್ದ ತಾಯಿ ಶಿವಮ್ಮ
- ಕಬ್ಬಿಣದ ರಾಡ್‌ನಿಂದ ಹಲ್ಲೆ ನಡೆಸಿ ಮಗನ ಹತ್ಯೆ
- ಸಿಸಿಟಿವಿ ದೃಶ್ಯ ಆಧರಿಸಿ ಆರೋಪಿ ತಾಯಿ ಬಂಧನ
ತುಮಕೂರು, ನವೆಂಬರ್ 24: ಮಗನಿಗೆ ಬುದ್ಧಿ ಕಲಿಸಲು ಹೋಗಿ ತಾಯಿಯೇ ಆತನನ್ನು ಕೊಲೆಗೈದಿರುವ ಆಘಾತಕಾರಿ ಘಟನೆ ತುಮಕೂರು ತಾಲೂಕಿನ ಜಕ್ಕೇನಹಳ್ಳಿಯಲ್ಲಿ ನಡೆದಿದೆ. ಇದರೊಂದಿಗೆ, ಮನೆಯ ಹೊರಗೆ ಮಲಗಿದ್ದ ಯುವಕನ ಕೊಲೆ ಪ್ರಕರಣಕ್ಕೆ ಅನಿರೀಕ್ಷಿತ ತಿರುವು ಸಿಕ್ಕಿದ್ದು, ಮಗನನ್ನು ಕೊಂದ ಆರೋಪದ ಮೇಲೆ ತಾಯಿ ಶಿವಮ್ಮಳನ್ನು ತುಮಕೂರು ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ.
ಕೊಲೆಯಾದ ಯುವಕ ಮುತ್ತುರಾಜ್ ಅದೇ ಗ್ರಾಮದ ಅನ್ಯಜಾತಿಯ ವಿವಾಹಿತ ಮಹಿಳೆಯೊಬ್ಬಳನ್ನು ಪ್ರೀತಿಸುತ್ತಿದ್ದ. ಆಕೆಗೆ ಈಗಾಗಲೇ ಮದುವೆಯಾಗಿದ್ದು, ಇಬ್ಬರು ಮಕ್ಕಳೂ ಇದ್ದರು. ಆದರೂ ಆಕೆಯನ್ನೇ ಮದುವೆಯಾಗುವುದಾಗಿ ಮುತ್ತುರಾಜ್ ಹೇಳಿಕೊಂಡು ಓಡಾಡುತ್ತಿದ್ದ. ಮಗನ ಈ ನಿರ್ಧಾರದಿಂದ ತಾಯಿ ಶಿವಮ್ಮ ಬೇಸರಗೊಂಡಿದ್ದಳು. ಅಲ್ಲದೆ, ಮಗನಿಗೆ ಬುದ್ಧಿ ಕಲಿಸಬೇಕೆಂದು ನಿರ್ಧರಿಸಿದ್ದಳು.
ಇದೇ ಕಾರಣಕ್ಕೆ ರಾತ್ರಿ ಮನೆಯ ಹೊರಗೆ ಮಲಗಿದ್ದ ಮುತ್ತುರಾಜ್ ಮೇಲೆ ಹಲ್ಲೆ ಮಾಡಲು ಶಿವಮ್ಮ ನಿರ್ಧರಿಸಿದ್ದಳು. ಅದರಂತೆ, ಮನೆಯವರೆಲ್ಲರೂ ಮಲಗಿದ್ದ ವೇಳೆ ಕಬ್ಬಿಣದ ರಾಡ್ ಹಿಡಿದು ಹೊರಬಂದ ತಾಯಿ, ಮಲಗಿದ್ದ ಮಗನ ಮೇಲೆ ಹಲ್ಲೆ ನಡೆಸಿದ್ದಾಳೆ. ಹಲ್ಲೆಯ ತೀವ್ರತೆಗೆ ಮುತ್ತುರಾಜ್ ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ಏನೂ ಗೊತ್ತಿಲ್ಲದವಳಂತೆ ನಾಟಕವಾಡಿದ್ದ ಶಿವಮ್ಮ
ಮರುದಿನ ಮಗ ಮೃತಪಟ್ಟಿರುವುದು ತಿಳಿದ ಬಳಿಕ ಶಿವಮ್ಮ ಏನೂ ಗೊತ್ತಿಲ್ಲದವಳಂತೆ ವರ್ತಿಸಿದ್ದಾಳೆ. ತಾನೇ ಮೊದಲು ಮಗನ ಶವವನ್ನು ನೋಡಿದಂತೆ ಕಥೆ ಕಟ್ಟಿದ್ದಲ್ಲದೆ, ಯಾರೋ ಅಪರಿಚಿತರು ಕೊಲೆ ಮಾಡಿದ್ದಾರೆ ಎಂದು ಗೋಳಾಡಿ ಕಣ್ಣೀರಿನ ನಾಟಕವಾಡಿದ್ದಳು.
ಆದರೆ, ಪೊಲೀಸರ ತನಿಖೆ ವೇಳೆ ಸಿಸಿಟಿವಿ ದೃಶ್ಯಾವಳಿಗಳು ಕೊಲೆಯ ರಹಸ್ಯವನ್ನು ಬಯಲು ಮಾಡಿವೆ. ಕಬ್ಬಿಣದ ರಾಡ್‌ನಿಂದ ತಾಯಿಯೇ ಮಗನ ಮೇಲೆ ಹಲ್ಲೆ ನಡೆಸಿರುವ ದೃಶ್ಯಗಳು ಪೊಲೀಸರಿಗೆ ಲಭ್ಯವಾಗಿವೆ. ಈ ಸಾಕ್ಷ್ಯಗಳ ಆಧಾರದಲ್ಲಿ ತುಮಕೂರು ಗ್ರಾಮಾಂತರ ಪೊಲೀಸರು ಶಿವಮ್ಮಳನ್ನು ಬಂಧಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




