ಕಲ್ಲಿದ್ದಲು ಹಗರಣ; ನಿಧನರಾದ 2 ವರ್ಷದ ಬಳಿಕ ಮಾಜಿ ಪ್ರಧಾನಿ ಮನಮೋಹನ್ ಸಿಂಗ್​ಗೆ ಸುಪ್ರೀಂ ಕೋರ್ಟ್ ಕ್ಲೀನ್ ಚಿಟ್

ಕಲ್ಲಿದ್ದಲು ನಿಕ್ಷೇಪ ಹಂಚಿಕೆ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಇಂದು ಮಹತ್ವದ ನಿರ್ಧಾರ ತೆಗೆದುಕೊಂಡಿದ್ದು, ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅವರಿಗೆ 2015ರಲ್ಲಿ ಸಮನ್ಸ್ ಜಾರಿ ಮಾಡಿದ್ದ ವಿಶೇಷ ಸಿಬಿಐ ನ್ಯಾಯಾಲಯದ ಆದೇಶವನ್ನು ರದ್ದುಗೊಳಿಸಿದೆ. ಸಿಬಿಐನ ಅಂತಿಮ ವರದಿಯನ್ನು ತಿರಸ್ಕರಿಸಲು ಮತ್ತು ಅವರ ವಿರುದ್ಧ ಕ್ರಮ ಕೈಗೊಳ್ಳಲು ವಿಚಾರಣಾ ನ್ಯಾಯಾಲಯಕ್ಕೆ ಯಾವುದೇ ಆಧಾರವಿಲ್ಲ ಎಂದು ಸುಪ್ರೀಂ ಕೋರ್ಟ್ ಇಂದು ತೀರ್ಪು ನೀಡಿದೆ.

ಕಲ್ಲಿದ್ದಲು ಹಗರಣ; ನಿಧನರಾದ 2 ವರ್ಷದ ಬಳಿಕ ಮಾಜಿ ಪ್ರಧಾನಿ ಮನಮೋಹನ್ ಸಿಂಗ್​ಗೆ ಸುಪ್ರೀಂ ಕೋರ್ಟ್ ಕ್ಲೀನ್ ಚಿಟ್
Manmohan Singh
Image Credit source: PTI

Updated on: Jul 29, 2026 | 5:05 PM

ನವದೆಹಲಿ, ಜುಲೈ 29: ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ (Dr Manmohan Singh) ನಿಧನರಾದ 2 ವರ್ಷಗಳ ನಂತರ, ಅವರ ಆಡಳಿತಾವಧಿಯ ಮೇಲೆ ಕಪ್ಪುಚುಕ್ಕೆಯಾಗಿದ್ದ ಕಲ್ಲಿದ್ದಲು ಹಗರಣದ ಪ್ರಕರಣವೊಂದಕ್ಕೆ ಸುಪ್ರೀಂ ಕೋರ್ಟ್ ಅಂತಿಮ ತೆರೆ ಎಳೆದಿದೆ. ಒಡಿಶಾದ ತಲಬಿರಾ-II ಕಲ್ಲಿದ್ದಲು ಬ್ಲಾಕ್ ಹಂಚಿಕೆ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್(Supreme Court)  ಮನಮೋಹನ್ ಸಿಂಗ್ ಅವರಿಗೆ ಕ್ಲೀನ್ ಚಿಟ್ ನೀಡುವ ಮೂಲಕ ಮಹತ್ವದ ತೀರ್ಪು ನೀಡಿದೆ. ಈ ಪ್ರಕರಣದ ವಿಚಾರಣೆ ಎದುರಿಸುವಂತೆ ಮನಮೋಹನ್ ಸಿಂಗ್ ಮತ್ತು ಇತರ ಐವರಿಗೆ ಸಮನ್ಸ್ ಜಾರಿಗೊಳಿಸಿದ್ದ 2015ರ ಸಿಬಿಐ ವಿಶೇಷ ನ್ಯಾಯಾಲಯದ ಆದೇಶವನ್ನು ರದ್ದುಗೊಳಿಸಿದೆ. ಈ ಪ್ರಕರಣದಲ್ಲಿ ಮಾಜಿ ಪ್ರಧಾನಿಯವರ ವಿರುದ್ಧ ವಿಚಾರಣೆ ನಡೆಸಲು ಯಾವುದೇ ಸಾಕ್ಷ್ಯಾಧಾರಗಳಿಲ್ಲ ಎಂಬ ಸಿಬಿಐ ನಿರ್ಧಾರವನ್ನು ವಿಶೇಷ ನ್ಯಾಯಾಲಯ ತಿರಸ್ಕರಿಸಿದ ನಂತರ ಆರಂಭವಾಗಿದ್ದ 11 ವರ್ಷಗಳ ಸುದೀರ್ಘ ಕಾನೂನು ಹೋರಾಟಕ್ಕೆ ಈ ತೀರ್ಪಿನೊಂದಿಗೆ ಮುಕ್ತಾಯ ಸಿಕ್ಕಿದೆ.

ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್, ನ್ಯಾಯಮೂರ್ತಿ ಜೋಯ್ಮಲ್ಯ ಬಾಗ್ಚಿ ಮತ್ತು ನ್ಯಾಯಮೂರ್ತಿ ವಿ. ಮೋಹನ ಅವರಿದ್ದ ಪೀಠವು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಪರ ವಕೀಲರ ಮೇಲ್ಮನವಿಯನ್ನು ಅಂಗೀಕರಿಸಿತು. ಸಿಬಿಐನ ಕ್ಲೀನ್ ಚಿಟ್ ವರದಿಯನ್ನು ಅಂಗೀಕರಿಸಿತು ಮತ್ತು ಈ ಪ್ರಕರಣದ ವಿಚಾರಣೆಯನ್ನು ಮುಕ್ತಾಯಗೊಳಿಸಿತು.

ಭಾರತದ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ನೇತೃತ್ವದ ಪೀಠವು ಸಿಬಿಐ ಸಲ್ಲಿಸಿದ್ದ ಬಿ-ರಿಪೋರ್ಟ್ ಅನ್ನು ಪುರಸ್ಕರಿಸಿದ್ದು, ಸಿಬಿಐ ವರದಿಯನ್ನು ತಿರಸ್ಕರಿಸಿ ಆರೋಪಿಗಳ ವಿರುದ್ಧ ತನಿಖೆ ಮುಂದುವರಿಸಲು ವಿಶೇಷ ನ್ಯಾಯಾಧೀಶರಿಗೆ ಯಾವುದೇ ಸೂಕ್ತ ಕಾರಣವಿರಲಿಲ್ಲ ಎಂದು ಅಭಿಪ್ರಾಯಪಟ್ಟಿದೆ. ಸಿಬಿಐ ವಿಸ್ತೃತ ತನಿಖೆ ನಡೆಸಿ 2 ಪ್ರತ್ಯೇಕ ಬಿ-ರಿಪೋರ್ಟ್‌ಗಳನ್ನು ಸಲ್ಲಿಸಿದ್ದು, ಎರಡರಲ್ಲೂ ಯಾವುದೇ ಅಪರಾಧ ಪ್ರಕರಣ ಸಾಬೀತಾಗಿಲ್ಲ ಎಂದು ತೀರ್ಮಾನಿಸಲಾಗಿತ್ತು ಎಂಬುದನ್ನು ಸುಪ್ರೀಂ ಕೋರ್ಟ್ ಉಲ್ಲೇಖಿಸಿದೆ.

ಇದನ್ನೂ ಓದಿ: ಡಾ. ಮನಮೋಹನ್ ಸಿಂಗ್ ಅಂತ್ಯಕ್ರಿಯೆ, ಸ್ಮಾರಕ ವಿಚಾರದಲ್ಲೂ ವಿವಾದ: ಕಾರಣ ಇಲ್ಲಿದೆ ನೋಡಿ

ಡಾ. ಮನಮೋಹನ್ ಸಿಂಗ್ ಡಿಸೆಂಬರ್ 2024ರಲ್ಲಿ ನಿಧನರಾದರೂ ಅವರ ವಿರುದ್ಧ ಹಲವಾರು ಪ್ರತಿಕೂಲ ಟೀಕೆಗಳು ಇದ್ದ ಕಾರಣ ವಿಚಾರಣಾ ನ್ಯಾಯಾಲಯದ ಆದೇಶದ ಸಿಂಧುತ್ವವನ್ನು ಪರಿಶೀಲಿಸಲು ಸುಪ್ರೀಂ ಕೋರ್ಟ್ ನಿರ್ಧರಿಸಿತ್ತು. ದಿವಂಗತ ಮಾಜಿ ಪ್ರಧಾನಿಯನ್ನು ಪ್ರತಿನಿಧಿಸಿದ ಹಿರಿಯ ವಕೀಲ ಕಪಿಲ್ ಸಿಬಲ್, ಮನಮೋಹನ್ ಸಿಂಗ್ ಅವರ ಮರಣದ ನಂತರ ಮೇಲ್ಮನವಿ ತಾಂತ್ರಿಕವಾಗಿ ನಿಷ್ಪರಿಣಾಮಕಾರಿಯಾಗಿದೆ. ಆದರೆ ವಿಚಾರಣಾ ನ್ಯಾಯಾಲಯದ ಅವಲೋಕನಗಳನ್ನು ಪರಿಗಣಿಸುವುದು ಮುಖ್ಯ ಎಂದು ವಾದಿಸಿದ್ದರು.

ಇಂದು ನೀಡಿರುವ ಈ ಮಹತ್ವದ ತೀರ್ಪಿನ ಮೂಲಕ ಸುಪ್ರೀಂ ಕೋರ್ಟ್ 2015ರ ಮಾರ್ಚ್ 11ರ ವಿಶೇಷ ಸಿಬಿಐ ನ್ಯಾಯಾಲಯದ ಆದೇಶವನ್ನು ರದ್ದುಗೊಳಿಸಿ, ತನಿಖಾ ಸಂಸ್ಥೆಯ ಬಿ-ರಿಪೋರ್ಟ್ ಅನ್ನು ಅಂಗೀಕರಿಸಿ ಪ್ರಕರಣವನ್ನು ಮುಕ್ತಾಯಗೊಳಿಸಿದೆ.

ಇದನ್ನೂ ಓದಿ: ‘ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ’; ಚುನಾವಣಾ ಆಯುಕ್ತರೆದುರು ಹೀಗಂದಿದ್ದರಂತೆ ಮಾಜಿ ಪ್ರಧಾನಿ ಮನಮೋಹನ್ ಸಿಂಗ್

ಏನಿದು ಪ್ರಕರಣ?:

ಈ ಪ್ರಕರಣವು 2005ರಲ್ಲಿ ಒಡಿಶಾದ ತಲಬಿರಾ-II ಕಲ್ಲಿದ್ದಲು ಬ್ಲಾಕ್ ಅನ್ನು ಹಿಂಡಾಲ್ಕೊ ಕಂಪನಿಗೆ ಹಂಚಿಕೆ ಮಾಡಿದ್ದಕ್ಕೆ ಸಂಬಂಧಿಸಿದ್ದಾಗಿದೆ. ಆ ಸಮಯದಲ್ಲಿ ಡಾ. ಮನಮೋಹನ್ ಸಿಂಗ್ ಅವರ ಬಳಿಯೇ ಕಲ್ಲಿದ್ದಲು ಸಚಿವಾಲಯದ ಹೆಚ್ಚುವರಿ ಜವಾಬ್ದಾರಿಯೂ ಇತ್ತು. ಅವರ ವಿರುದ್ಧ ತನಿಖೆ ನಡೆಸಲು ಸಾಕ್ಷ್ಯಾಧಾರಗಳ ಕೊರತೆಯಿದೆ ಎಂದು ಸಿಬಿಐ ತೀರ್ಮಾನಿಸಿದ್ದರೂ, ವಿಶೇಷ ಸಿಬಿಐ ನ್ಯಾಯಾಲಯವು ಮನಮೋಹನ್ ಸಿಂಗ್ ಮತ್ತು ಇತರ ಐವರಿಗೆ ಕ್ರಿಮಿನಲ್ ಗೂಢಾಲೋಚನೆ ಹಾಗೂ ನಂಬಿಕೆ ದ್ರೋಹ ಸೇರಿದಂತೆ ವಿವಿಧ ಆರೋಪಗಳಡಿಯಲ್ಲಿ ವಿಚಾರಣೆ ಎದುರಿಸುವಂತೆ ಸಮನ್ಸ್ ಜಾರಿಗೊಳಿಸಿತ್ತು.

ಯುಪಿಎ ಆಡಳಿತಾವಧಿಯಲ್ಲಿ ದೊಡ್ಡ ರಾಜಕೀಯ ಬಿರುಗಾಳಿಯನ್ನೇ ಎಬ್ಬಿಸಿದ್ದ ಕಲ್ಲಿದ್ದಲು ಹಂಚಿಕೆ ವಿವಾದಕ್ಕೆ ಸಂಬಂಧಿಸಿದ ಕೆಲವು ಕ್ರಿಮಿನಲ್ ಪ್ರಕ್ರಿಯೆಗಳಲ್ಲಿ ಒಂದಾಗಿದ್ದ ಈ ಪ್ರಕರಣವು ಡಾ. ಮನಮೋಹನ್ ಸಿಂಗ್ ಅವರ ನಿಧನದ ನಂತರ ಮುಕ್ತಾಯಗೊಂಡಿದೆ. ಪ್ರಾಮಾಣಿಕ ರಾಜಕಾರಣಿ ಎಂದು ರಾಜಕೀಯ ವಿರೋಧಿಗಳಿಂದಲೂ ಮೆಚ್ಚುಗೆ ಪಡೆದಿದ್ದ ಮನಮೋಹನ್ ಸಿಂಗ್ ಅವರಿಗೆ ಈ ಪ್ರಕರಣ ದೊಡ್ಡ ಕಪ್ಪುಚುಕ್ಕೆಯಾಗಿತ್ತು. ಆ ಕಪ್ಪುಚುಕ್ಕೆ ಅವರ ನಿಧನದ ಬಳಿಕ ಅಳಿಸಿಹೋದಂತಾಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us