Delhi Chalo | ನಾಳೆ ದೆಹಲಿಯತ್ತ ಟ್ರ್ಯಾಕ್ಟರ್ ಪೆರೇಡ್
ಈ ಟ್ರ್ಯಾಕ್ಟರ್ ಪರೇಡ್ ನಾವು ಜನವರಿ 26ರಂದು ದೆಹಲಿಯ ರಸ್ತೆಗಳಲ್ಲಿ ನಡೆಸಲು ನಿಶ್ವಯಿಸಿಕೊಂಡಿರುವ ಪೆರೇಡ್ಗೆ ಪೂರ್ವಭಾವಿಯಾಗಿರುತ್ತದೆ ಎಂದು ಯೋಗೇಂದ್ರ ಯಾದವ್ ಹೇಳಿದ್ದಾರೆ.

ದೆಹಲಿ: ಮೂರು ನೂತನ ಕೃಷಿ ಕಾಯ್ದೆಗಳನ್ನು ರದ್ದು ಮಾಡುವಂತೆ ಸಿಂಘು ಗಡಿಯಲ್ಲಿ ಮುಷ್ಕರ ನಡೆಸುತ್ತಿರುವ ರೈತರು ದೆಹಲಿ ಹೊರವಲಯದ ಪೂರ್ವ ಮತ್ತು ಪಶ್ವಿಮ ಪೆರಿಫೆರಲ್ ಎಕ್ಸ್ಪ್ರೆಸ್ ರಸ್ತೆಗಳಲ್ಲಿ ನಾಳೆ (ಜ.7) ಟ್ರ್ಯಾಕ್ಟರ್ ಪರೇಡ್ ನಡೆಸಲು ನಿರ್ಧರಿಸಿದ್ದಾರೆ. ಕೇಂದ್ರ ಸರ್ಕಾರದೊಂದಿಗೆ 7ನೇ ಸುತ್ತಿನ ಮಾತುಕತೆಯೂ ವಿಫಲವಾದ ನಂತರ ರೈತರು ಈ ತೀರ್ಮಾನಕ್ಕೆ ಬಂದಿದ್ದಾರೆ.
ತಮ್ಮ ಬೇಡಿಕೆಗಳು ಜ.26 ಕ್ಕಿಂತ ಮೊದಲು ಈಡೇರದಿದ್ದರೆ, ಗಣರಾಜ್ಯೋತ್ಸವ ದಿನದಂದು ದೆಹಲಿಯ ರಸ್ತೆಗಳಲ್ಲಿ ಟ್ರ್ಯಾಕ್ಟರ್ ಪರೇಡ್ ನಡೆಸುವುದಾಗಿ ಈ ಮುಷ್ಕರದ ನೇತೃತ್ವ ವಹಿಸಿರುವ ಸಂಯುಕ್ತ್ ಕಿಸಾನ್ ಮೋರ್ಚಾ ಹೇಳಿದೆ.
ಸಿಂಘು ಗಡಿಯಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ, ರಾಜಕೀಯ ಹೋರಾಟಗಾರ ಮತ್ತು ಸಂಯುಕ್ತ್ ಕಿಸಾನ್ ಮೋರ್ಚಾ ಸದಸ್ಯ ಯೋಗೇಂದ್ರ ಯಾದವ್ ಸರ್ಕಾರದೊಂದಿಗೆ ಮಾತುಕತೆಗಳು ವಿಫಲವಾಗಿರುವುದರಿಂದ ಟ್ರ್ಯಾಕ್ಟರ್ ಪರೇಡ್ ನಡೆಸುವ ನಿರ್ಧಾರಕ್ಕೆ ಬರಲಾಗಿದೆಯೆಂದು ಹೇಳಿದರು.
‘ಏಳು ತಿಂಗಳಲ್ಲಿ ಏಳನೇ ಬಾರಿಗೆ ಸರ್ಕಾರದೊಂದಿಗೆ ನಡೆಸಿದ ಮಾತುಕತೆಗಳು ವಿಫಲವಾಗಿವೆ. ಸರ್ಕಾರ ಮತ್ತೊಮ್ಮೆ ಮೂರು ಹೊಸ ಕೃಷಿ ಕಾಯ್ದೆಗಳನ್ನು ಹಿಂಪಡೆಯಲು ನಿರಾಕರಿಸಿದ್ದರಿಂದ ಮಾತುಕತೆ ಮುರಿದು ಬಿದ್ದವು. ನಾವು ಮುಷ್ಕರವನ್ನು ಮುಂದುವರಿಸಲು ನಿರ್ಧರಿಸಿದ್ದು ನಾಳೆ ಅಂದರೆ ಗುರುವಾರ ಕೆಎಮ್ಪಿ ಎಕ್ಸ್ಪ್ರೆಸ್ ಹೆದ್ದಾರಿಯಲ್ಲಿ ಟ್ರ್ಯಾಕ್ಟರ್ ಪರೇಡ್ ನಡೆಸಲು ಮುಂದಾಗಿದ್ದೇವೆ’ ಎಂದರು.

‘ಟ್ರ್ಯಾಕ್ಟರ್ಗಳು ಸಿಂಘು, ಟಿಕ್ರಿ, ಗಾಜಿಪುರ್ ಗಡಿಗಳಿಂದಲ್ಲದೆ ಹರಿಯಾಣದ ರೇವಾಸನ್ ಗಡಿಯಿಂದಲೂ ಪೂರ್ವ ಮತ್ತು ಪಶ್ಚಿಮ ಪರಿಫೆರಲ್ ಎಕ್ಸ್ಪ್ರೆಸ್ಗಳ ಕಡೆ ಹೊರಟು ಮಧ್ಯಭಾಗದಲ್ಲಿ ಸೇರಲಿವೆ. ಈ ಟ್ರ್ಯಾಕ್ಟರ್ ಪರೇಡ್ ನಾವು ಜನವರಿ 26ರಂದು ದೆಹಲಿಯ ರಸ್ತೆಗಳಲ್ಲಿ ನಡೆಸಲು ನಿಶ್ವಯಿಸಿಕೊಂಡಿರುವ ಪೆರೇಡ್ಗೆ ಪೂರ್ವಭಾವಿಯಾಗಿರುತ್ತದೆ’ ಎಂದರು.
ಹರಿಯಾಣ ಭಾರತೀಯ ಕಿಸಾನ್ ಒಕ್ಕೂಟದ ಬಾತ್ಮೀದಾರ ರಾಕೇಶ್ ಬೇನ್ಸ್ ಮಾತಾಡಿ, ಟ್ರ್ಯಾಕ್ಟರ್ ಪರೇಡ್ ಅನ್ನು ಅಸಲಿಗೆ ಬುಧವಾರದಂದು ನಡೆಸಲು ನಿಶ್ಚಯಿಸಲಾಗಿತ್ತು, ಆದರೆ ನಿರಂತರವಾಗಿ ಸುರಿಯುತ್ತಿರುವ ಮಳೆಯ ಕಾರಣ ಒಂದು ದಿನ ಮುಂದೂಡಲಾಯಿತು ಎಂದರು. ಹರಿಯಾಣದ ಡಿಜಿಪಿ ಮನೋಜ್ ಯಾದವ್ ಸಹ ಟ್ರ್ಯಾಕ್ಟರ್ ಪರೇಡ್ ಒಂದು ದಿನ ಮುಂದೂಡಿರುವುದನ್ನು ಖಚಿತಪಡಿಸಿದರು.
ಸುದ್ದಿಗಾರರೊಂದಿಗೆ ಮಾತಾಡಿದ ಮನೋಜ್ ಯಾದವ್, ಮುಷ್ಕರನಿರತ ರೈತರೊಂದಿಗೆ ನಾವು ಮಾತುಕತೆ ನಡೆಸುತ್ತಿದ್ದೇವೆ, ಅವರಿಗೆ ಪರೇಡ್ ನಡೆಸಲು ಅನುಮತಿ ನೀಡಬೇಕೋ ಇಲ್ಲವೋ ಅನ್ನುವುದನ್ನು ನಂತರ ನಿರ್ಧರಿಸುತ್ತೇವೆ,’ ಎಂದು ಹೇಳಿದರು.

ಮುಷ್ಕರನಿರತ ರೈತರು
ಮೂಲಗಳ ಪ್ರಕಾರ ಹರಿಯಾಣದ ದೂರ ಪ್ರದೇಶಗಳಲ್ಲಿರುವ ರೈತರಿಗೆ ಮುಖಂಡರು ತಮ್ಮ ಪ್ರದೇಶಗಳಲ್ಲೇ ಟ್ರ್ಯಾಕ್ಟರ್ ಪರೇಡ್ ನಡೆಸಲು ಸೂಚಿಸಿರುವರಾದರೂ ರೈತರು ದೆಹಲಿ ಕಡೆ ಬರುವ ಉತ್ಸಾಹ ತೋರುತ್ತಿದ್ದಾರೆ. ಈ ರೈತರು ನಾಳೆ ನಸುಕಿನಲ್ಲಿಯೇ ದೆಹಲಿಯತ್ತ ಹೊರಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಟ್ರ್ಯಾಕ್ಟರ್ ಪೆರೇಡ್ಗೆ ಹರಿಯಾಣ ಯುವತಿಯರ ಸಿದ್ಧತೆ; ಗಣರಾಜ್ಯೋತ್ಸವದಂದು ಇವರೂ ದೆಹಲಿಗೆ ಧಾವಿಸಲಿದ್ದಾರೆ
Delhi Chalo: ಗಣರಾಜ್ಯೋತ್ಸವದಂದು ದೆಹಲಿಯಲ್ಲಿ ಟ್ರ್ಯಾಕ್ಟರ್ ಮೂಲಕ ರೈತರ ಪರೇಡ್!
Published On - 9:41 pm, Wed, 6 January 21