ಅಗ್ನಿಪಥ್ ಯೋಜನೆ ವಿರೋಧಿಸಿ ನಡೆಯುತ್ತಿರುವ ಪ್ರತಿಭಟನೆಗಳ ಹಿಂದೆ ಕೋಚಿಂಗ್ ಸೆಂಟರ್ಗಳ ಕೈವಾಡ ಶಂಕೆ: ನಿವೃತ್ತ ಸೈನಿಕನ ಬಂಧನ
ಸಿಕಂದರಾಬಾದ್ನಲ್ಲಿ ನಡೆದ ಪ್ರತಿಭಟನೆ ಮತ್ತು ರೈಲಿಗೆ ಬೆಂಕಿ ಹಚ್ಚಿದ ಪ್ರಕರಣದಲ್ಲಿ ಓರ್ವ ನಿವೃತ್ತ ಸೈನಿಕನನ್ನು ಬಂಧಿಸಲಾಗಿದೆ.
ಪಾಟ್ನಾ/ಹೈದರಾಬಾದ್: ಕೇಂದ್ರ ಸರ್ಕಾರವು ಹೊಸದಾಗಿ ಜಾರಿಗೊಳಿಸಿರುವ ಅಗ್ನಿಪಥ್ ಯೋಜನೆ (Agnipath Scheme) ವಿರೋಧಿಸಿ ದೇಶಾದ್ಯಂತ ನಡೆಯುತ್ತಿರುವ ಹೋರಾಟಗಳ ಹಿಂದೆ ಯುವಕರನ್ನು ಸೈನಿಕ ತರಬೇತಿಗೆ ಸಿದ್ಧಪಡಿಸುವ ಕೋಚಿಂಗ್ ಸೆಂಟರ್ಗಳ (Coaching Center) ಕೈವಾಡವಿದೆ ಎಂದು ಪೊಲೀಸರು ಶಂಕಿಸಿದ್ದಾರೆ. ಸಿಕಂದರಾಬಾದ್ನಲ್ಲಿ ನಡೆದ ಪ್ರತಿಭಟನೆ ಮತ್ತು ರೈಲಿಗೆ ಬೆಂಕಿ ಹಚ್ಚಿದ ಪ್ರಕರಣದಲ್ಲಿ ಓರ್ವ ನಿವೃತ್ತ ಸೈನಿಕನನ್ನು ಬಂಧಿಸಲಾಗಿದೆ. ಪ್ರತಿಭಟನೆಯನ್ನು ಸಂಘಟಿಸಲು ನೆರವಾಗಿರಬಹುದು ಎಂಬ ಶಂಕೆಯ ಮೇಲೆ ಹಲವು ಶಿಕ್ಷಕರು ಮತ್ತು ಕೋಚಿಂಗ್ ಸೆಂಟರ್ಗಳ ನಿರ್ವಾಹಕರನ್ನು ಬಂದಿಸಲಾಗಿದೆ. ಆದರೆ ಕೋಚಿಂಗ್ ಸೆಂಟರ್ಗಳ ಸಿಬ್ಬಂದಿ ಈ ಪ್ರತಿಭಟನೆಗಳಲ್ಲಿ ತಮ್ಮ ಹಸ್ತಕ್ಷೇಪ ಇರುವುದನ್ನು ನಿರಾಕರಿಸಿದ್ದಾರೆ.
ಸೇನೆಯಲ್ಲಿ ಹವಾಲ್ದಾರ್ ಆಗಿ ಕೆಲಸ ಮಾಡಿ ನಿವೃತ್ತರಾಗಿರುವ ಅವ್ವುಲಾ ಸುಬ್ಬರಾವ್ ಅವರನ್ನು ಸಿಕಂದರಾಬಾದ್ ಪೊಲೀಸರು ಬಂಧಿಸಿದ್ದಾರೆ. ರೈಲ್ವೆ ಆಸ್ತಿಗೆ ಹಾನಿ ಮಾಡಿದ ಆರೋಪದ ಮೇಲೆ 45 ಜನರನ್ನು ರೈಲ್ವೆ ಪೊಲೀಸರು ಬಂಧಿಸಿದ್ದಾರೆ. ಶುಕ್ರವಾರ ನಡೆದ ಪ್ರತಿಭಟನೆ ವೇಳೆ ಸಿಕಂದರಾಬಾದ್ ರೈಲ್ವೆ ನಿಲ್ದಾಣವು ಯುದ್ಧಭೂಮಿಯಂತೆ ಕಂಡು ಬರುತ್ತಿತ್ತು.
ಬಿಹಾರದಲ್ಲಿ ತರೆಜ್ಞಾದಲ್ಲಿ ನಡೆದ ಪ್ರತಿಭಟನೆ ವೇಳೆ ರೈಲಿನ ಎರಡು ಬೋಗಿಗಳಿಗೆ ಬೆಂಕಿ ಹಚ್ಚಲಾಗಿತ್ತು. ಪಾಟ್ನಾ ಮತ್ತು ಬಿಹಾರದ ವಿವಿಧೆಡೆ ಕಾರ್ಯನಿರ್ವಹಿಸುತ್ತಿರುವ ಕೋಚಿಂಗ್ ಸೆಂಟರ್ಗಳ ಸಿಬ್ಬಂದಿಯನ್ನು ಪೊಲೀಸರು ವಿಚಾರಣೆಗೆ ಒಳಪಡಿಸಿದರು. ಮೊಬೈಲ್ ಟವರ್ ಲೊಕೇಶನ್, ಕಾಲ್ ಹಿಸ್ಟರಿ, ವಿಡಿಯೊ ಮತ್ತು ಆಡಿಯೊ ಕ್ಲಿಪ್ಗಳನ್ನು ಪೊಲೀಸರು ಪರಿಶೀಲಿಸಿದರು.
‘ಕಳೆದ ಮೂರು ದಿನಗಳಿಂದ ನಡೆಯುತ್ತಿರುವ ಪ್ರತಿಭಟನೆಗಳಲ್ಲಿ ಪಾಲ್ಗೊಂಡಿದ್ದ ಸುಮಾರು 700 ಮಂದಿಯನ್ನು ಬಿಹಾರ ಪೊಲೀಸರು ವಿಡಿಯೊ ಫೂಟೇಜ್ ಆಧಾರದ ಮೇಲೆ ಗುರುತಿಸಿದ್ದಾರೆ. ಈ ಪೈಕಿ ಹಲವರು ರೈಲ್ವೆ ನೇಮಕಾತಿ ಮಂಡಳಿ ವಿರುದ್ಧ ನಡೆದ ಪ್ರತಿಭಟನೆಗಳಲ್ಲಿಯೂ ಪಾಲ್ಗೊಂಡಿದ್ದರು. ಕಳೆದ ಬಾರಿಯೂ ಈ ಪ್ರತಿಭಟನೆಗಳಲ್ಲಿ ಕೆಲ ಕೋಚಿಂಗ್ ಸೆಂಟರ್ಗಳ ಕೈವಾಡ ಇರುವುದು ಪತ್ತೆಯಾಗಿತ್ತು’ ಎಂದು ಪೊಲೀಸರು ಹೇಳಿದ್ದಾರೆ.
ಸುಬ್ಬಾರಾವ್ ಅವರ ಸೈನಿಕ ನೇಮಕಾತಿ ತರಬೇತಿ ಕೋಚಿಂಗ್ ಸೆಂಟರ್ಗಳಲ್ಲಿ ಅಭ್ಯಾಸ ಮಾಡುತ್ತಿರುವ ಸುಮಾರು 100 ಅಭ್ಯರ್ಥಿಗಳನ್ನು ಆಂಧ್ರ ಮತ್ತು ತೆಲಂಗಾಣ ಪೊಲೀಸರು ಗುರುತಿಸಿದ್ದಾರೆ. ಸಾಯಿ ಡಿಫೆನ್ಸ್ ಅಕಾಡೆಮಿಯ ನಿರ್ದೇಶಕ ಸುಬ್ಬರಾವ್ ಅಗ್ನಿಪಥ್ ಯೋಜನೆಯ ಬಗ್ಗೆ ಅವಹೇಳನಕಾರಿ ಸಂದೇಶಗಳು ಮತ್ತು ಭಾಷಣಗಳನ್ನು ವಾಟ್ಸ್ಆ್ಯಪ್ ಮೂಲಕ ಹಂಚಿಕೊಂಡಿದ್ದ. ಅವರನ್ನು ವಶಕ್ಕೆ ತೆಗೆದುಕೊಂಡಿರುವ ಪೊಲೀಸರು ನಿಗೂಢ ಸ್ಥಳದಲ್ಲಿ ವಿಚಾರಣೆಗೆ ಒಳಪಡಿಸಿದ್ದಾರೆ. ಸಿಕಂದರಾಬಾದ್ನಲ್ಲಿ ಹಿಂಸಾಚಾರದಲ್ಲಿ ಪಾಲ್ಗೊಂಡ ಆರೋಪದ ಮೇಲೆ 45 ಯುವಕರನ್ನು ಶನಿವಾರ ಪೊಲೀಸರು ಬಂಧಿಸಿದ್ದರು.
ಪಾಟ್ನಾ ಒಂದರಲ್ಲೇ ಎಂಟು ಕೋಚಿಂಗ್ ಕೇಂದ್ರಗಳ ಮೇಲೆ ಪೊಲೀಸರು ಕಣ್ಣಿಟ್ಟಿದ್ದಾರೆ. ಆದರೆ ಪ್ರತಿಭಟನೆಗಳಲ್ಲಿ ತಮ್ಮ ಪಾತ್ರ ಇರುವುದನ್ನು ಕೋಚಿಂಗ್ ಸೆಂಟರ್ಗಳ ಸಿಬ್ಬಂದಿ ನಿರಾಕರಿಸಿದ್ದಾರೆ.
ಅಗ್ನಿಪಥ್ ಯೋಜನೆಯ ಬಗ್ಗೆ ನಮ್ಮ ಅಭಿಪ್ರಾಯಗಳನ್ನು ಮಾತ್ರವೇ ನಾವು ವ್ಯಕ್ತಪಡಿಸಿದ್ದೆವು. ಪ್ರತಿಭಟನೆ ನಡೆಸಬೇಕೆಂದು ಯಾವುದೇ ವಿದ್ಯಾರ್ಥಿಯನ್ನು ಪ್ರಚೋದಿಸಿರಲಿಲ್ಲ. ನಮ್ಮ ವಿಡಿಯೊ-ಆಡಿಯೊ ಸಂದೇಶ ಮತ್ತು ಮೆಸೇಜ್ಗಳನ್ನು ತಪ್ಪಾಗಿ ಅರ್ಥೈಸಲಾಗಿದೆ. ಈ ವರ್ಷದ ಲಿಖಿತ, ವೈದ್ಯಕೀಯ ಮತ್ತು ದೈಹಿಕ ಅರ್ಹತೆಯ ಪರೀಕ್ಷೆಗಳನ್ನು ಪೂರೈಸಿರುವ ವಿದ್ಯಾರ್ಥಿಗಳಿಗೆ ಅಗ್ನಿಪಥ್ ಯೋಜನೆಯಿಂದ ಅನ್ಯಾಯವಾಗುತ್ತಿತ್ತು. ಇದೀಗ ಸರ್ಕಾರ ತನ್ನ ನಿಯಮಾವಳಿಗಳನ್ನು ಸರಿಪಡಿಸಿದೆ. ಇದು ತೃಪ್ತಿಕರವಾಗಿದೆ ಎಂದು ಕೋಚಿಂಗ್ ಕೇಂದ್ರವೊಂದರ ಶಿಕ್ಷಕ ಸುಧೀರ್ ಹೇಳಿದರು.
ಕರ್ನಾಟಕದ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ. ದೇಶದ ಇತರ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 12:51 pm, Sun, 19 June 22