ಸಿಧು ಮೂಸೆ ವಾಲಾ ಅಂತ್ಯಸಂಸ್ಕಾರದ ವೇಳೆ ಭಾರಿ ಜನಸಂದಣಿ, ಆಪ್ ಸರ್ಕಾರದ ವಿರುದ್ಧ ಘೋಷಣೆ ಕೂಗಿದ ಅಭಿಮಾನಿಗಳು

ಅಂತ್ಯಸಂಸ್ಕಾರದ ವೇಳೆ ಕೇವಲ ಕುಟುಂಬದ ಸದಸ್ಯರು ಮತ್ತು ಹತ್ತಿರದ ಗೆಳೆಯರಿಗೆ ಮಾತ್ರ ಮನೆ ಪ್ರವೇಶಿಸಲು ಅವಕಾಶ ನೀಡಲಾಯಿತು.

ಸಿಧು ಮೂಸೆ ವಾಲಾ ಅಂತ್ಯಸಂಸ್ಕಾರದ ವೇಳೆ ಭಾರಿ ಜನಸಂದಣಿ, ಆಪ್ ಸರ್ಕಾರದ ವಿರುದ್ಧ ಘೋಷಣೆ ಕೂಗಿದ ಅಭಿಮಾನಿಗಳು
ಪಂಜಾಬ್​​ನಲ್ಲಿ ನಡೆದ ಸಿಧು ಮೂಸೆ ವಾಲಾ ಅಂತ್ಯಸಂಸ್ಕಾರದ ವೇಳೆ ಸಾಕಷ್ಟು ಅಭಿಮಾನಿಗಳು ನೆರೆದಿದ್ದರು.
Follow us
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on:May 31, 2022 | 11:14 AM

ಚಂಡಿಗಡ: ಸಿಧು ಮೂಸೆವಾಲಾ ಎಂದೇ ಖ್ಯಾತರಾಗಿದ್ದ ಪಂಜಾಬಿ ಗಾಯಕ ಮತ್ತು ಕಾಂಗ್ರೆಸ್ ನಾಯಕ ಶುಭದೀಪ್ ಸಿಂಗ್ ಸಿಧು (28) ಅಂತ್ಯ ಸಂಸ್ಕಾರದಲ್ಲಿ ಸಾವಿರಾರು ಜನರು ಸೇರಿದ್ದರು. ಮನೆಯ ಸಮೀಪವೇ ಸಿಧು ಮೂಸೆವಾಲಾ (Sidhu Moose Wala) ಅವರನ್ನು ದುಷ್ಕರ್ಮಿಗಳು ಗುಂಡಿಕ್ಕಿ ಕೊಂದಿದ್ದರು. ಕೆನಡಾದಲ್ಲಿ ವಿದ್ಯಾಭ್ಯಾಸ ಮಾಡಿದ್ದ ಮೂಸೆವಾಲಾ ಅವರಿಗೆ ಅಲ್ಲಿಯೂ ಸಾಕಷ್ಟು ಅಭಿಮಾನಿಗಳಿದ್ದರು. ಭಾರೀ ಬಂದೋಬಸ್ತ್​​ನೊಂದಿಗೆ ಮೂಸೆ ವಾಲಾರ ಪಾರ್ಥಿವ ಶರೀರವನ್ನು ಮನೆಗೆ ತರಲಾಯಿತು. ಮನೆಯ ಬಾಗಿಲು ಮುಚ್ಚಿದ್ದ ಪೊಲೀಸರು ಕಾವಲಿಗೆ ನಿಂತಿದ್ದರು. ಕೇವಲ ಕುಟುಂಬದ ಸದಸ್ಯರು ಮತ್ತು ಹತ್ತಿರದ ಗೆಳೆಯರಿಗೆ ಮಾತ್ರ ಮನೆ ಪ್ರವೇಶಿಸಲು ಅವಕಾಶ ನೀಡಲಾಯಿತು.

ಮೂಸಾ ಗ್ರಾಮದಲ್ಲಿರುವ ಕೃಷಿ ಭೂಮಿಯಲ್ಲಿಯೇ ಗಾಯಕನ ಅಂತ್ಯ ಸಂಸ್ಕಾರ ನೆರವೇರಿತು. ಈ ವೇಳೆ ಅಲ್ಲಿಗೆ ಬಂದಿದ್ದ ಹಲವು ಬೆಂಬಲಿಗರು ಭಗವಂತ್ ಮಾನ್ ನೇತೃತ್ವದಲ್ಲಿ ರಚನೆಯಾಗಿರುವ ಪಂಜಾಬ್​​ನ ಆಮ್ ಆದ್ಮಿ ಪಕ್ಷದ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ಕಾಂಗ್ರೆಸ್​ ನಾಯಕನೂ ಆಗಿದ್ದ ಜನಪ್ರಿಯ ಗಾಯಕನ ಕೊಲೆಯ ನಂತರ ಪಂಜಾಬ್​ನಲ್ಲಿ ರಾಜ್ಯ ಸರ್ಕಾರವನ್ನು ವಜಾ ಮಾಡಬೇಕು ಎಂಬ ಆಗ್ರಹಗಳು ಕೇಳಿ ಬರುತ್ತಿವೆ. ಭದ್ರತೆಯನ್ನು ಕಡಿಮೆ ಮಾಡಿದ್ದ ಕೇವಲ ಒಂದೇ ದಿನ ತರುವಾಯ ಮೂಸೆ ಅವರ ಹತ್ಯೆಯಾಗಿತ್ತು.

ಭದ್ರತೆಯ ಪ್ರಮಾಣ ಕಡಿಮೆ ಮಾಡಿದ ನಿರ್ಧಾರದ ಬಗ್ಗೆ ಸಾಕಷ್ಟು ಟೀಕೆಗಳು ಕೇಳಿ ಬಂದ ಹಿನ್ನೆಲೆಯಲ್ಲಿ, ಇಂಥ ಆದೇಶ ನೀಡಿದ ಬಗ್ಗೆ ವಿಚಾರಣೆ ನಡೆಸುವಂತೆ ಮುಖ್ಯಮಂತ್ರಿ ಭಗವಂತ್ ಮಾನ್ ಸೂಚಿಸಿದ್ದರು. ನೂರಾರು ಜನರಿಗೆ ಸಂಕಷ್ಟ ತಂದೊಡ್ಡುವ ವಿಐಪಿ ಸಂಸ್ಕೃತಿಯನ್ನು ತೊಡೆದು ಹಾಕುವ ನಿಟ್ಟಿನಲ್ಲಿ ಪಂಜಾಬ್ ಸರ್ಕಾರ ಈ ಆದೇಶ ಹೊರಡಿಸಿತ್ತು.

ಎರಡು ರೌಡಿ ಗುಂಪುಗಳ ನಡುವಣ ಗಲಾಟೆಯಲ್ಲಿ ಮೂಸೆವಾಲಾರ ಕೊಲೆ ಆಗಿದೆ ಎಂದು ಪೊಲೀಸರು ಹೇಳಿಕೆ ನೀಡಿದ್ದರು. ಇದನ್ನು ಪ್ರತಿಭಟಿಸಿದ್ದ ಮೂಸೆವಾಲಾ ಕುಟುಂಬದ ಸದಸ್ಯರು ಮರಣೋತ್ತರ ಪರೀಕ್ಷೆಗೆ ಒಪ್ಪಿಗೆ ಸೂಚಿಸಲು ನಿರಾಕರಿಸಿದ್ದರು.

ನಂತರ ತಮ್ಮ ಹೇಳಿಕೆಗೆ ಸ್ಪಷ್ಟನೆ ನೀಡಿದ್ದ ಪಂಜಾಬ್ ಡಿಜಿಪಿ ವಿ.ಕೆ.ಭಾವ್ರ, ‘ಗಾಯಕ ಮೂಸೆವಾಲಾರ ಬಗ್ಗೆ ತಮಗೆ ಸಾಕಷ್ಟು ಗೌರವವಿದೆ. ಯಾವುದೇ ಸಂದರ್ಭದಲ್ಲಿ ನಾನು ಅವರನ್ನು ರೌಡಿ ಎಂದು ಕರೆದಿಲ್ಲ’ ಎಂದು ಹೇಳಿದ್ದರು.

ಮೂಸೆವಾಲಾ ಕೊಲೆಯ ಹೊಣೆಯನ್ನು ಹಲವಾರು ಮಂದಿ ಸಾಮಾಜಿಕ ಮಾಧ್ಯಮಗಳಲ್ಲಿ ಹೊತ್ತುಕೊಂಡಿದ್ದಾರೆ. ಲಾರೆನ್ಸ್​ ಬಿಷ್ಣೋಯ್ ಗ್ಯಾಂಗ್ ಪರವಾಗಿ ತಾನೇ ಈ ಕೊಲೆ ಮಾಡಿದ್ದಾಗಿ ಗೋಲ್ಡಿ ಬ್ರಾರ್ ಎನ್ನುವಾತ ಹೇಳಿಕೊಂಡಿದ್ದ. ಮೂಸೆವಾಲಾರ ಮೃತ ದೇಹದಲ್ಲಿ ಗುಂಡುಗಳು ಒಳಹೊಕ್ಕು, ಹೊರಬಂದಿರುವ 25 ಗಾಯಗಳಿದ್ದವು.

ಕರ್ನಾಟಕದ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ. ದೇಶದ ಇತರ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ ಪ್ರಮುಖ  ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 11:13 am, Tue, 31 May 22