ಜಮ್ಮು ಕಾಶ್ಮೀರದ ಕುಲ್ಗಾಮ್​ನಲ್ಲಿ ಉಗ್ರರಿಂದ ಹಿಂದೂ ಶಿಕ್ಷಕಿಯ ಹತ್ಯೆ

ಈ ನೀಚ ಕೃತ್ಯ ಎಸಗಿದ ಉಗ್ರರನ್ನು ಶೀಘ್ರ ಪತ್ತೆ ಹಚ್ಚಿ, ಶಿಸ್ತುಕ್ರಮ ಜರುಗಿಸಲಾಗುವುದು ಎಂದು ಪೊಲೀಸರು ಹೇಳಿದ್ದಾರೆ.

ಜಮ್ಮು ಕಾಶ್ಮೀರದ ಕುಲ್ಗಾಮ್​ನಲ್ಲಿ ಉಗ್ರರಿಂದ ಹಿಂದೂ ಶಿಕ್ಷಕಿಯ ಹತ್ಯೆ
ಪ್ರಾತಿನಿಧಿಕ ಚಿತ್ರ
TV9kannada Web Team

| Edited By: Ghanashyam D M | ಡಿ.ಎಂ.ಘನಶ್ಯಾಮ

May 31, 2022 | 12:01 PM

ಕುಲ್ಗಾಮ್: ಹಿಂದೂಗಳನ್ನು ಗುರಿಯಾಗಿಸಿ ಹತ್ಯೆ ಮಾಡುವ ಪ್ರಕರಣಗಳು ಜಮ್ಮು ಮತ್ತು ಕಾಶ್ಮೀರದಲ್ಲಿ (Jammu Kashmir) ಮುಂದುವರಿದಿದೆ. ಕುಲ್ಗಾಂ ಜಿಲ್ಲೆಯಲ್ಲಿ ಮಂಗಳವಾರ (ಮೇ 31) ಹಿಂದೂ ಧರ್ಮಕ್ಕೆ ಸೇರಿದ ಶಿಕ್ಷಕಿಯನ್ನು ಗುಂಡಿಕ್ಕಿ ಕೊಂದಿದ್ದಾರೆ. ಮೃತರನ್ನು ರಾಜ್​ನಿ ಬಲ್ಲಾ ಎಂದು ಗುರುತಿಸಲಾಗಿದೆ. ಗುಂಡೇಟಿನಿಂದ ತೀವ್ರವಾಗಿ ಗಾಯಗೊಂಡಿದ್ದ ಶಿಕ್ಷಕಿಯನ್ನು ತಕ್ಷಣ ಆಸ್ಪತ್ರೆಗೆ ಕರೆದೊಯ್ಯಲಾಯಿತು. ವೈದ್ಯರು ತಕ್ಷಣ ಚಿಕಿತ್ಸೆ ಕೊಡುವ ಪ್ರಯತ್ನ ಮಾಡಿದರಾದರೂ ಶಿಕ್ಷಕಿಯ ಜೀವ ಉಳಿಯಲಿಲ್ಲ. ಈ ನೀಚ ಕೃತ್ಯ ಎಸಗಿದ ಉಗ್ರರನ್ನು ಶೀಘ್ರ ಪತ್ತೆ ಹಚ್ಚಿ, ಶಿಸ್ತುಕ್ರಮ ಜರುಗಿಸಲಾಗುವುದು ಎಂದು ಪೊಲೀಸರು ಹೇಳಿದ್ದಾರೆ. ಕುಲ್ಗಾಮ್​ನ ಗೋಪಾಲಪುರ ಪ್ರದೇಶದಲ್ಲಿರುವ ಪ್ರೌಢಶಾಲೆಯಲ್ಲಿ ಈ ಪ್ರಕರಣ ನಡೆದಿದೆ. ಸದ್ಯಕ್ಕೆ ಪೊಲೀಸರು ಈ ಪ್ರದೇಶದಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿದ್ದು, ದುಷ್ಕರ್ಮಿಗಳ ಪತ್ತೆಗೆ ಬಲೆ ಬೀಸಿದ್ದಾರೆ.

ಕಾಶ್ಮೀರದಲ್ಲಿ ಇತ್ತೀಚೆಗಷ್ಟೇ ಸರ್ಕಾರಿ ನೌಕರ ರಾಹುಲ್ ಭಟ್ ಅವರನ್ನು ಉಗ್ರಗಾಮಿಗಳು ಅವರ ಕಚೇರಿಯಲ್ಲಿಯೇ ಕೊಂದು ಹಾಕಿದ್ದರು. ಈ ಘಟನೆಯ ನಂತರ ಮಧ್ಯ ಕಾಶ್ಮೀರದಲ್ಲಿ ವ್ಯಾಪಕ ಪ್ರತಿಭಟನೆಗಳು ವ್ಯಕ್ತವಾಗಿದ್ದವು. ಚಾದೂರ ಪಟ್ಟಣದ ತಹಸೀಲ್ ಕಚೇರಿಯಲ್ಲಿಯೇ ರಾಹುಲ್ ಅವರನ್ನು ಉಗ್ರರು ಕೊಂದಿದ್ದರು. 2010-11ರಲ್ಲಿ ರೂಪಿಸಿದ್ದ ವಲಸಿಗರ ವಿಶೇಷ ಪ್ಯಾಕೇಜ್​ ಅಡಿಯಲ್ಲಿ ಅವರಿಗೆ ಈ ಕೆಲಸ ಸಿಕ್ಕಿತ್ತು.

ಕೇವಲ ಒಂದು ವಾರದ ಹಿಂದಷ್ಟೇ 35 ವರ್ಷದ ಟಿಕ್​ಟಾಕ್ ಸ್ಟಾರ್ ಅಮರೀನ್ ಭಟ್ ಅವರನ್ನು ಲಷ್ಕರ್-ಎ-ತಯ್ಯಬಾ ಉಗ್ರರು ಹತ್ಯೆ ಮಾಡಿದ್ದರು. ಮಹಿಳೆಯ 10 ವರ್ಷದ ಸೋದರ ಸಂಬಂಧಿ ಈ ಹತ್ಯೆಯ ಪ್ರತ್ಯಕ್ಷಸಾಕ್ಷಿಯಾಗಿತ್ತು. ಆ ಮಗುವೂ ಈ ಘಟನೆಯಲ್ಲಿ ಗಾಯಗೊಂಡಿತ್ತು. ಕಾಶ್ಮೀರದಿಂದ ಹೊರಗೆ ಬಂದಿದ್ದ ಹಿಂದೂಗಳನ್ನು ಮತ್ತೆ ಕಾಶ್ಮೀರ ಕಣಿವೆಯಲ್ಲಿ ನೆಲೆಗೊಳಿಸಲು ಯತ್ನಿಸುತ್ತಿರುವ ಕೇಂದ್ರದ ಬಿಜೆಪಿ ಸರ್ಕಾರವು ಹಿಂದೂಗಳ ಜೀವದೊಂದಿಗೆ ಚೆಲ್ಲಾಟವಾಡುತ್ತಿದೆ ಎಂದು ದೂರಿದ್ದರು.

ಹಿಂದೂಗಳನ್ನು ಗುರಿಯಾಗಿಸಿ ಹತ್ಯೆ ಮಾಡುವ ಉಗ್ರಗಾಮಿ ಚಟುವಟಿಕೆಗಳಿಗೆ ಕಡಿವಾಣ ಬಿದ್ದಿಲ್ಲ. ಹೀಗಾಗಿ ಮತ್ತೆ ಕಾಶ್ಮೀರ ರಾಜ್ಯದಲ್ಲಿ ನೆಲೆಸುವ ನಮ್ಮ ಕನಸುಗಳು ಭಗ್ನಗೊಂಡಿವೆ ಎಂದು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು. ಹಿಂದೂಗಳ ಹತ್ಯೆ ಖಂಡಿಸಿ, ಕಾಶ್ಮೀರದಾದ್ಯಂತ ಪ್ರತಿಭಟನೆಗಳು ನಡೆದಿದ್ದವು.

ಹಿಂದೂಗಳನ್ನು ಗುರಿಯಾಗಿಸಿ ಹತ್ಯೆ ಮಾಡುವ ಪ್ರಕರಣಗಳು ಹೆಚ್ಚಾದ ನಂತರ ಕಾಶ್ಮೀರದಲ್ಲಿ ಪೊಲೀಸರು ಮತ್ತು ಭದ್ರತಾ ಸಿಬ್ಬಂದಿ ಚುರುಕಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಹತ್ಯೆ ಮಾಡಿದ ಹಲವು ಉಗ್ರರನ್ನು ಭದ್ರತಾ ಪಡೆಗಳು ಬೆನ್ನಟ್ಟಿ ಕೊಂದಿವೆ. ಇತ್ತೀಚಿನ ದಿನಗಳಲ್ಲಿ 26ಕ್ಕೂ ಹೆಚ್ಚು ವಿದೇಶಿ ಉಗ್ರರನ್ನು ಭದ್ರತಾ ಪಡೆಗಳು ಕೊಂದು ಹಾಕಿವೆ. ಲಷ್ಕರ್-ಎ-ತಯ್ಯಬಾ ಮತ್ತು ಜೈಷ್-ಎ-ಮೊಹಮದ್ ಬಣಕ್ಕೆ ಸೇರಿದ ಉಗ್ರಗಾಮಿ ಗುಂಪುಗಳಿಗೆ ಸೇರಿದ ಯುವಕರೇ ಹೆಚ್ಚಿನ ಸಂಖ್ಯೆಯಲ್ಲಿ ಕಾಶ್ಮೀರದಲ್ಲಿ ಸಕ್ರಿಯವಾಗಿದ್ದಾರೆ.

ಕರ್ನಾಟಕದ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ. ದೇಶದ ಇತರ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ ಪ್ರಮುಖ  ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada