ಮಹಾರಾಷ್ಟ್ರದ ಮುಂದಿನ ಉಪಮುಖ್ಯಮಂತ್ರಿಯಾಗುತ್ತಾರಾ ಸುನೇತ್ರಾ ಪವಾರ್? ಶುರುವಾಯ್ತು ಬಿಸಿ-ಬಿಸಿ ಚರ್ಚೆ
ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ್ ಪವಾರ್ ಅವರ ನಿಧನದ ನಂತರ, ರಾಜಕೀಯ ಬೆಳವಣಿಗೆಗಳು ವೇಗ ಪಡೆದಿವೆ. ಅಜಿತ್ ಪವಾರ್ ಅವರ ನಿಧನದಿಂದಾಗಿ ಉಪಮುಖ್ಯಮಂತ್ರಿ ಮತ್ತು ಹಣಕಾಸು ಸಚಿವ ಹುದ್ದೆಗಳು ಖಾಲಿಯಾಗಿವೆ. ಈ ಹುದ್ದೆಗೆ ಅಜಿತ್ ಪವಾರ್ ಅವರ ಪತ್ನಿ ಸುನೇತ್ರಾ ಪವಾರ್ ಅವರನ್ನು ನೇಮಿಸುವ ಬಗ್ಗೆ ಚರ್ಚೆಗಳು ಶುರುವಾಗಿವೆ. ಎನ್‌ಸಿಪಿ ನಾಯಕರಾದ ಪ್ರಫುಲ್ ಪಟೇಲ್ ಮತ್ತು ಭುಜಬಲ್ ಇಂದು ಸುನೇತ್ರಾ ಪವಾರ್ ಅವರನ್ನು ಭೇಟಿಯಾಗಿದ್ದಾರೆ. ಇದು ಈ ವದಂತಿಗೆ ಪುಷ್ಠಿ ನೀಡಿದೆ.

ಪುಣೆ, ಜನವರಿ 29: ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ್ ಪವಾರ್ (Ajit Pawar) ವಿಮಾನ ಅಪಘಾತದಲ್ಲಿ ನಿಧನ ಹೊಂದಿದ ನಂತರ ಆ ಸ್ಥಾನಕ್ಕೆ ಯಾರ ನೇಮಕವಾಗುತ್ತದೆ ಎಂಬ ಚರ್ಚೆಗಳು ಶುರುವಾಗಿವೆ. ಅಜಿತ್ ಪವಾರ್ ಅವರ ಪತ್ನಿ ಸುನೇತ್ರಾ ಪವಾರ್ ಎನ್‌ಸಿಪಿಯ ನಾಯಕತ್ವ ವಹಿಸಿಕೊಳ್ಳುವುದರ ಜೊತೆಗೆ ಉಪಮುಖ್ಯಮಂತ್ರಿ ಹುದ್ದೆಯನ್ನೂ ಅಲಂಕರಿಸಬೇಕೆಂದು ಎನ್‌ಸಿಪಿ ನಾಯಕರು ಪ್ರಯತ್ನಿಸುತ್ತಿದ್ದಾರೆ.
ಮೂಲಗಳ ಪ್ರಕಾರ, ಸುನೇತ್ರಾ ಪವಾರ್ ಅವರನ್ನು ಉಪಮುಖ್ಯಮಂತ್ರಿಯನ್ನಾಗಿ ಮಾಡುವ ಪ್ರಸ್ತಾಪವನ್ನು ಮಾಡಲಾಗುವುದು. ಸುನೇತ್ರಾ ಪವಾರ್ ಅವರು ಅಜಿತ್ ಪವಾರ್ ಅವರ ಕ್ಷೇತ್ರದಿಂದ ಚುನಾವಣೆಯಲ್ಲಿ ಸ್ಪರ್ಧಿಸಬಹುದು. ಪ್ರಫುಲ್ ಪಟೇಲ್ ಎನ್‌ಸಿಪಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಬಹುದು. ಈ ಪ್ರಸ್ತಾಪವನ್ನು ಚರ್ಚಿಸಲು ಎನ್‌ಸಿಪಿ ನಾಯಕರು ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರನ್ನು ಭೇಟಿ ಮಾಡುವ ಸಾಧ್ಯತೆಯಿದೆ. ಈ ಸಮಯದಲ್ಲಿ ಎನ್‌ಸಿಪಿಗಳ ವಿಲೀನದ ಬಗ್ಗೆಯೂ ಚರ್ಚಿಸುವ ಸಾಧ್ಯತೆಯಿದೆ.
ಇದನ್ನೂ ಓದಿ: ಅಜಿತ್ ಪವಾರ್ ಪಕ್ಷದ ಚಿಹ್ನೆಯಾದ ಗಡಿಯಾರವೇ ಅವರ ಸಾವಿಗೆ ಸಾಕ್ಷಿಯಾಯ್ತು!
ಎನ್‌ಸಿಪಿ ನಾಯಕ ಮತ್ತು ಸಚಿವ ನರಹರಿ ಜಿರ್ವಾಲ್ ಕೂಡ ಸುನೇತ್ರಾ ಪವಾರ್ ಅವರನ್ನು ಉಪಮುಖ್ಯಮಂತ್ರಿಯನ್ನಾಗಿ ಮಾಡಬೇಕೆಂದು ಒತ್ತಾಯಿಸಿದ್ದಾರೆ. ಅಜಿತ್‌ದಾದಾ ಅವರ ಎನ್‌ಸಿಪಿ ಮಹಾಯುತಿಯಲ್ಲಿ ಪ್ರಮುಖ ಪಕ್ಷವಾಗಿದೆ. ಈ ಮೈತ್ರಿಕೂಟದಲ್ಲಿ ಏಕನಾಥ್ ಶಿಂಧೆ ಅವರ ಶಿವಸೇನೆ ಕೂಡ ಇದೆ.
ಅಜಿತ್ ಪವಾರ್ ನಂತರ ಸುನೇತ್ರಾ ಪವಾರ್ ಅವರನ್ನು ಉಪಮುಖ್ಯಮಂತ್ರಿಯನ್ನಾಗಿ ಮಾಡಬೇಕೆಂದು ಅಜಿತ್‌ದಾದಾ ಅವರ ಬೆಂಬಲಿಗರು ಕೂಡ ಒತ್ತಾಯಿಸಿದ್ದಾರೆ. ಅಜಿತ್ ಪವಾರ್ ಅವರ ಅಂತ್ಯಕ್ರಿಯೆಯ ನಂತರ, ಬಾರಾಮತಿಯಲ್ಲಿರುವ ಅಜಿತ್‌ದಾದಾ ಅವರ ಪ್ರೇಮಿಗಳು ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಸುನೇತ್ರಾ ಪವಾರ್ ಇದೀಗ ರಾಜ್ಯಸಭಾ ಸದಸ್ಯರಾಗಿದ್ದಾರೆ.
ಇದನ್ನೂ ಓದಿ: ಅಜಿತ್ ಪವಾರ್ ಅಂತ್ಯಕ್ರಿಯೆ; ಕಣ್ಣೀರಿಡುತ್ತಾ ಮಕ್ಕಳಿಂದ ಅಪ್ಪನ ಚಿತೆಗೆ ಅಗ್ನಿಸ್ಪರ್ಶ
ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಮತ್ತು ರಾಷ್ಟ್ರೀಯತಾವಾದಿ ಕಾಂಗ್ರೆಸ್ ಪಕ್ಷದ (ಎನ್‌ಸಿಪಿ) ಮುಖ್ಯಸ್ಥ ಅಜಿತ್ ಪವಾರ್ ಜನವರಿ 28ರಂದು ನಿಧನರಾದರು. ಬಾರಾಮತಿ ವಿಮಾನ ನಿಲ್ದಾಣದ ಬಳಿ ನಡೆದ ವಿಮಾನ ಅಪಘಾತದಲ್ಲಿ ಅವರು ಮೃತಪಟ್ಟಿದ್ದರು. ಅಜಿತ್ ಪವಾರ್ ಸೇರಿದಂತೆ ಐವರು ಈ ವಿಮಾನದ ಅಪಘಾತದಲ್ಲಿ ಸಾವನ್ನಪ್ಪಿದರು. ಇಂದು ಬಾರಾಮತಿಯ ವಿದ್ಯಾ ಪ್ರತಿಷ್ಠಾನ ಮೈದಾನದಲ್ಲಿ ಅವರ ಅಂತ್ಯಕ್ರಿಯೆಯನ್ನು ಸರ್ಕಾರಿ ಗೌರವಗಳೊಂದಿಗೆ ಮಾಡಲಾಯಿತು. ಈ ಸಮಯದಲ್ಲಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್, ಉಪಮುಖ್ಯಮಂತ್ರಿ ಏಕನಾಥ್ ಶಿಂಧೆ, ಗೃಹ ಸಚಿವ ಅಮಿತ್ ಶಾ ಮತ್ತು ಇತರ ಅನೇಕ ಪ್ರಮುಖ ನಾಯಕರು ಉಪಸ್ಥಿತರಿದ್ದರು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:55 pm, Thu, 29 January 26
