ಪ್ರವಾದಿಗೆ ಅವಮಾನ; ಅಲ್ಖೈದಾದಿಂದ ಮುಂಬೈ, ದೆಹಲಿ, ಗುಜರಾತ್‌ನಲ್ಲಿ ಆತ್ಮಾಹುತಿ ಬಾಂಬ್ ದಾಳಿಯ ಬೆದರಿಕೆ
ಪ್ರವಾದಿ ಮೊಹಮ್ಮದ್ ಅವರ ಹೇಳಿಕೆಯ ವಿವಾದದ ನಡುವೆ ಅಲ್-ಖೈದಾ ಸಂಘಟನೆ ದೆಹಲಿ, ಮುಂಬೈ, ಗುಜರಾತ್ ಮತ್ತು ಉತ್ತರ ಪ್ರದೇಶದಲ್ಲಿ ಆತ್ಮಾಹುತಿ ದಾಳಿ ನಡೆಸುವುದಾಗಿ ಬೆದರಿಕೆ ಹಾಕಿದೆ.
ನವದೆಹಲಿ: ಟಿವಿ ಚರ್ಚೆ ವೇಳೆ ಪ್ರವಾದಿ ಮೊಹಮ್ಮದ್ (Prophet Muhammad) ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದಕ್ಕೆ ಅಮಾನತುಗೊಂಡಿರುವ ಬಿಜೆಪಿ ರಾಷ್ಟ್ರೀಯ ವಕ್ತಾರೆ ನೂಪುರ್ ಶರ್ಮಾ (Nupur Sharma) ವಿರುದ್ಧ ವಿಶ್ವಾದ್ಯಂತ ಆಕ್ರೋಶ ವ್ಯಕ್ತವಾಗಿದೆ. ಪ್ರವಾದಿ ಮೊಹಮ್ಮದ್ ಅವರ ಹೇಳಿಕೆಯ ವಿವಾದದ ನಡುವೆ ಅಲ್-ಖೈದಾ (Al-Qaeda) ಸಂಘಟನೆ ದೆಹಲಿ, ಮುಂಬೈ, ಗುಜರಾತ್ ಮತ್ತು ಉತ್ತರ ಪ್ರದೇಶದಲ್ಲಿ ಆತ್ಮಾಹುತಿ ದಾಳಿ (suicide attack) ನಡೆಸುವುದಾಗಿ ಬೆದರಿಕೆ ಹಾಕಿದೆ.
ಜೂನ್ 6ರಂದು ಈ ಕುರಿತು ಹೇಳಿಕೆ ನೀಡಿರುವ ಅಲ್ಖೈದಾ ಉಗ್ರ ಸಂಘಟನೆ “ಕೇಸರಿ ಭಯೋತ್ಪಾದಕರು ಈಗ ದೆಹಲಿ, ಮುಂಬೈ, ಉತ್ತರ ಪ್ರದೇಶ ಮತ್ತು ಗುಜರಾತ್‌ನಲ್ಲಿ ತಮ್ಮ ಅಂತ್ಯವನ್ನು ಕಾಯಬೇಕು” ಎಂದು ಎಚ್ಚರಿಕೆ ನೀಡಿದೆ. ಪ್ರವಾದಿ ಮೊಹಮ್ಮದ್ ಅವರ ವಿರುದ್ಧ ಅವಮಾನಕಾರಿ ಹೇಳಿಕೆ ನೀಡಿರುವ ಅಪರಾಧಿಗಳಿಗೆ ಯಾವುದೇ ಕ್ಷಮೆ ಸಿಗುವುದಿಲ್ಲ. ಶಾಂತಿ ಮತ್ತು ಭದ್ರತೆ ಅವರನ್ನು ಉಳಿಸುವುದಿಲ್ಲ. ನಾವು ಭಾರತದ ಹಲವು ನಗರಗಳಲ್ಲಿ ಆತ್ಮಾಹುತಿ ಬಾಂಬ್ ದಾಳಿ ನಡೆಸಬೇಕಾಗುತ್ತದೆ ಎಂದು ಬೆದರಿಕೆ ಪತ್ರದಲ್ಲಿ ತಿಳಿಸಲಾಗಿದೆ.
ಇಬ್ಬರು ಮಾಜಿ ಬಿಜೆಪಿ ಪದಾಧಿಕಾರಿಗಳು ಪ್ರವಾದಿ ಮೊಹಮ್ಮದ್ ಅವರ ಬಗ್ಗೆ ವಿವಾದಾತ್ಮಕ ಹೇಳಿಕೆಗಳ ಬಗ್ಗೆ ಪಶ್ಚಿಮ ಏಷ್ಯಾದ ದೇಶಗಳಲ್ಲಿ ವ್ಯಾಪಕ ಆಕ್ರೋಶದ ನಡುವೆ ಈ ಹೇಳಿಕೆ ಬಂದಿದೆ. ಪ್ರವಾದಿ ಮೊಹಮ್ಮದ್ ವಿರುದ್ಧದ ಹೇಳಿಕೆಗಳ ಬಗ್ಗೆ ಹಲವಾರು ಗಲ್ಫ್ ರಾಷ್ಟ್ರಗಳು ಭಾರತೀಯ ರಾಯಭಾರಿಗಳನ್ನು ಸಹ ಕರೆಸಿವೆ. ಬೆದರಿಕೆ ಕರೆಗಳು ಹೆಚ್ಚಾದ ಹಿನ್ನೆಲೆಯಲ್ಲಿ ನೂಪುರ್ ಶರ್ಮಾ ಮತ್ತು ಅವರ ಕುಟುಂಬಕ್ಕೆ ದೆಹಲಿ ಪೊಲೀಸರು ಭದ್ರತೆ ಒದಗಿಸಿದ್ದಾರೆ. ಪ್ರವಾದಿ ಅವರ ಕುರಿತಾದ ವಿವಾದಾತ್ಮಕ ಹೇಳಿಕೆಗಳ ಕುರಿತು ತನಗೆ ಜೀವ ಬೆದರಿಕೆ ಇದೆ ಎಂಬ ದೂರಿನ ಮೇಲೆ ಎಫ್‌ಐಆರ್ ದಾಖಲಾಗಿದೆ.
ಇದನ್ನೂ ಓದಿ: Nupur Sharma: ಪ್ರವಾದಿ ಮೊಹಮ್ಮದ್ ಕುರಿತ ವಿವಾದಾತ್ಮಕ ಹೇಳಿಕೆಯಿಂದ ಅಮಾನತುಗೊಂಡಿರುವ ನೂಪುರ್ ಶರ್ಮ ಯಾರು?
ಟಿವಿ ಚರ್ಚೆಯಲ್ಲಿ ಪ್ರವಾದಿ ಮೊಹಮ್ಮದ್ ಅವರ ವಿರುದ್ಧ ಅವಹೇಳನಕಾರಿ ಹೇಳಿಕೆಗಳ ವಿವಾದವು ಹಲವಾರು ಮುಸ್ಲಿಂ ರಾಷ್ಟ್ರಗಳ ಪ್ರತಿಭಟನೆಯೊಂದಿಗೆ ಉಲ್ಬಣಗೊಂಡಿದ್ದರಿಂದ ಬಿಜೆಪಿಯು ಭಾನುವಾರ ನೂಪುರ್ ಶರ್ಮಾ ಅವರನ್ನು ಅಮಾನತುಗೊಳಿಸಿದೆ. ಹಾಗೇ, ದೆಹಲಿ ಘಟಕದ ಮಾಧ್ಯಮ ಮುಖ್ಯಸ್ಥ ನವೀನ್ ಕುಮಾರ್ ಜಿಂದಾಲ್ ಅವರನ್ನು ಉಚ್ಚಾಟಿಸಿದೆ. ನೂಪುರ್ ಶರ್ಮಾ ಹೇಳಿಕೆಗೆ ಮುಸ್ಲಿಂ ಗುಂಪುಗಳ ಪ್ರತಿಭಟನೆ, ಕುವೈತ್, ಕತಾರ್ ಮತ್ತು ಇರಾನ್‌ನಂತಹ ದೇಶಗಳ ತೀಕ್ಷ್ಣ ಪ್ರತಿಕ್ರಿಯೆಯ ನಡುವೆ ಬಿಜೆಪಿಯು ಹೇಳಿಕೆಯನ್ನು ಬಿಡುಗಡೆ ಮಾಡಿತ್ತು. ಅದು ಎಲ್ಲಾ ಧರ್ಮಗಳನ್ನು ಗೌರವಿಸುತ್ತದೆ ಮತ್ತು ಯಾವುದೇ ಧಾರ್ಮಿಕ ವ್ಯಕ್ತಿತ್ವದ ಅವಮಾನಗಳನ್ನು ಬಲವಾಗಿ ಖಂಡಿಸುತ್ತದೆ ಎಂದು ಬಿಜೆಪಿ ಹೇಳಿತ್ತು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:44 am, Wed, 8 June 22