ದೆಹಲಿಯಲ್ಲಿ ವಾಯು ಮಾಲಿನ್ಯ ಹೆಚ್ಚಳ ಹಿನ್ನೆಲೆಯಲ್ಲಿ ಮುಂದಿನ ಆದೇಶದವರೆಗೆ ಶಾಲೆಗಳಿಗೆ ರಜೆಯನ್ನು ಘೋಷಿಸಲಾಗಿದೆ. ಆನ್‌ಲೈನ್ ತರಗತಿ ಮಾತ್ರ ನಡೆಸಲು ಅವಕಾಶ ನೀಡಲಾಗಿದ್ದು, ದೆಹಲಿ ಶಿಕ್ಷಣ ಇಲಾಖೆ ಈ ಕುರಿತು ಅಧಿಕೃತ ಘೋಷಣೆ ಮಾಡಿದೆ. ಮುಂದಿನ ಆದೇಶ ಬರುವವರೆಗೆ ಶಾಲೆಗಳನ್ನು ಮುಚ್ಚಲು ಪರಿಸರ ಇಲಾಖೆ ನಿರ್ದೇಶನ ನೀಡಿದೆ ಎಂದು ಹೆಚ್ಚುವರಿ ಶಿಕ್ಷಣ ನಿರ್ದೇಶಕಿ ರೀಟಾ ಶರ್ಮಾ ತಿಳಿಸಿದ್ದಾರೆ.ಅದಾಗ್ಯೂ, ಆನ್‌ಲೈನ್ ಬೋಧನಾ ಚಟುವಟಿಕೆಗಳು ಮತ್ತು ಬೋರ್ಡ್ ತರಗತಿಗಳಿಗೆ ಪರೀಕ್ಷೆಗಳನ್ನು ಮೊದಲೇ ನೀಡಲಾದ ಮಾರ್ಗಸೂಚಿಗಳ ಪ್ರಕಾರ ನಡೆಸಲಾಗುವುದು ಎಂದು ಅವರು ಹೇಳಿದ್ದಾರೆ. ಹೇಳಿದರು. ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಕಳೆದ ವಾರ (ನವೆಂಬರ್ 13 ರಂದು) ಒಂದು ವಾರದವರೆಗೆ ಶಾಲೆಗಳನ್ನು ಮುಚ್ಚಲಾಗುವುದು ಎಂದು ಘೋಷಿಸಿದ್ದರು. ಹರಿಯಾಣ ಸರ್ಕಾರ ಕೂಡ ಗುರುಗ್ರಾಮ್, ಫರಿದಾಬಾದ್, ಸೋನಿಪತ್ ಮತ್ತು ಝಿಜಾರ್ ನಗರಗಳಲ್ಲಿ ಶಾಲೆಗಳನ್ನು ಮುಚ್ಚುವುದಾಗಿ ಘೋಷಿಸಿತ್ತು. ಇದೀಗ ದೆಹಲಿಯಲ್ಲಿ ಶಾಲೆಗಳಿಗೆ ರಜೆ ಮುಂದುವರೆದಿದೆ.
Air pollution: All schools in Delhi to remain shut for physical classes till further orders, online education to continue, says Directorate of Education
— ANI (@ANI) November 21, 2021
ದೆಹಲಿಯಲ್ಲಿ ಕಳೆದ ಎರಡು ವಾರದಿಂದ ವಾಯು ಗುಣಮಟ್ಟ ಕಳಪೆ ಗುಣಮಟ್ಟದಲ್ಲಿದೆ. ಗಾಳಿಯ ಗುಣಮಟ್ಟ ಮತ್ತು ಹವಾಮಾನ ಮುನ್ಸೂಚನೆ ಮತ್ತು ಸಂಶೋಧನೆಯ ವ್ಯವಸ್ಥೆ (SAFAR) ಬಿಡುಗಡೆಗೊಳಿಸಿರುವ ಸೂಚ್ಯಂಕದ ಪ್ರಕಾರ, ಇಂದು 347 ಎಕ್ಯುಐ ದಾಖಲಾಗಿದೆ. ಸೂಚ್ಯಂಕದ ಪ್ರಕಾರ ಎಕ್ಯುಐ 0 ಯಿಂದ 50ರ ಒಳಗಿದ್ದರೆ ಉತ್ತಮವೆಂದು, 51 ರಿಂದ 100ರೊಳಗಿದ್ದರೆ ಮಧ್ಯಮವೆಂದೂ, 301ರಿಂದ 400ರ ಒಳಗಿದ್ದರೆ ಕಳಪೆಯಿಂದೂ ಗುರುತಿಸಲಾಗುತ್ತದೆ. 400-500ರ ನಡುವಿದ್ದರೆ ಅದನ್ನು ಅತ್ಯಂತ ಗಂಭೀರ ಪರಿಸ್ಥಿತಿ ಎಂದು ಪರಿಗಣಿಸಲಾಗುತ್ತದೆ. ಇದರ ಪ್ರಕಾರ ದೆಹಲಿಯಲ್ಲಿ ವಾಯು ಗುಣಮಟ್ಟ ಕಳಪೆ ಮಟ್ಟದಲ್ಲಿದೆ. ನಾಳೆ (ಸೋಮವಾರ) ವಾಯು ಗುಣಮಟ್ಟ ಸುಧಾರಣೆಯಾಗಬಹುದು ಎಂದು ನಿರೀಕ್ಷಿಸಲಾಗುತ್ತಿದೆ.
ದೆಹಲಿ ಸರ್ಕಾರ, ಮಾಲಿನ್ಯ ಮಟ್ಟವನ್ನು ನಿಯಂತ್ರಿಸಲು ಕಟ್ಟಡ ನಿರ್ಮಾಣ ಮತ್ತು ಕಸ ಸುಡುವುದನ್ನು ನಿಷೇಧಿಸುವುದು, ಜನರಿಗೆ ಮನೆಯಿಂದಲೇ ಕೆಲಸ ಮಾಡಲು ಅವಕಾಶ ನೀಡುವುದು ಸೇರಿದಂತೆ ಹಲವು ಕ್ರಮಗಳನ್ನು ಕೈಗೊಂಡಿದೆ. ಇತ್ತೀಚೆಗಷ್ಟೇ ಸಾರಿಗೆ ಇಲಾಖೆ ವಾಹನಗಳಿಗೆ ಯಾವ ಮಾದರಿಯ ಇಂಧನ ಬಳಸುತ್ತಿದೆ ಎಂಬುದನ್ನು ಗಮನಿಸಿ, ಕಲರ್ ಕೋಡಿಂಗ್ ಸ್ಟಿಕ್ಕರ್ ನೀಡುವ ನಿಯಮ ಜಾರಿಗೆ ತಂದಿದೆ. ಅದಾಗ್ಯೂ ಮಾಲಿನ್ಯದ ಮಟ್ಟ ಕಡಿಮೆಯಾಗಿಲ್ಲ.
ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ತಿಳಿಸಿರುವಂತೆ ದೆಹಲಿಯ ಪಕ್ಕದ ನಗರಗಳಾದ, ಫರೀದಾಬಾದ್ (332), ಘಾಜಿಯಾಬಾದ್ (346), ಗ್ರೇಟರ್ ನೋಯ್ಡಾ (340), ಗುರುಗ್ರಾಮ್ (375) ಮತ್ತು ನೋಯ್ಡಾ (422)ಗಳೂ ಕೂಡ ಕಳಪೆ ವಾಯು ಗುಣಮಟ್ಟವನ್ನು ಹೊಂದಿವೆ.
Published On - 4:54 pm, Sun, 21 November 21