ಹಸುಗಳ ಕಳ್ಳ ಸಾಗಾಣಿಕೆ ಶಂಕೆ: ರಾಜಸ್ಥಾನದಲ್ಲಿ ಗುಂಪು ಹಲ್ಲೆಗೆ ವ್ಯಕ್ತಿ ಬಲಿ
Cow Smuggling: ಕೆಲವು ಜನರು ತಮ್ಮ ವಾಹನದಲ್ಲಿ ಹಸುಗಳನ್ನು ಕಳ್ಳ ಸಾಗಾಣಿಕೆ ಮಾಡುತ್ತಿದ್ದಾರೆ ಎಂದು ಮಧ್ಯರಾತ್ರಿಯ ಹೊತ್ತಿಗೆ ಪೊಲೀಸ್ ಠಾಣೆಯ ಉಸ್ತುವಾರಿ ಅಧಿಕಾರಿಗೆ ಮಾಹಿತಿ ಬಂದಿದ್ದು, ನಮ್ಮ ಅಧಿಕಾರಿಗಳು ಸ್ಥಳಕ್ಕೆ ತಲುಪಿದರು
ಚಿತ್ತೋರ್ಗಡ: ಹಸುಗಳ ಕಳ್ಳಸಾಗಣೆ ಆರೋಪದ ಮೇಲೆ ರಾಜಸ್ಥಾನದ ಚಿತ್ತೋರ್‌ಗಡದಲ್ಲಿ ವ್ಯಕ್ತಿಯೊಬ್ಬರ ಮೇಲೆ ಮಾರಣಾಂತಿಕ ಹಲ್ಲೆ ನಡೆದಿದ್ದು ಆ ವ್ಯಕ್ತಿ ಸೋಮವಾರ ಮೃತಪಟ್ಟಿದ್ದಾರೆ. ಸಾವಿಗೀಡಾದ ವ್ಯಕ್ತಿ ಮಧ್ಯಪ್ರದೇಶದ ಅಚಲ್‌ಪುರದವರು ಎಂದು ಎನ್ಡಿಟಿವಿ ವರದಿ ಮಾಡಿದೆ.ಇಬ್ಬರು ವ್ಯಕ್ತಿಗಳು ವಾಹನದಲ್ಲಿ ಸಾಗುತ್ತಿದ್ದಾಗ ಗುಂಪೊಂದು ವಾಹನಕ್ಕೆ ತಡೆಯೊಡ್ಡಿ ಹಲ್ಲೆ ನಡೆಸಿತ್ತು. ಮಾರಣಾಂತಿಕ ಹಲ್ಲೆಗೊಳಗಾಗಿ ಸಾವಿಗೀಡಾದ ವ್ಯಕ್ತಿಯನ್ನು ಬಾಬು ಲಾಲ್ ಭಿಲ್ ಎಂದು ಗುರುತಿಸಲಾಗಿದೆ. ಇನ್ನೊಬ್ಬ ವ್ಯಕ್ತಿ ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬೇಗು ಎಂಬ ಪಟ್ಟಣದ ಬಳಿ ಈ ದಾಳಿ ನಡೆದಿದ್ದು, ಪೊಲೀಸರು ಕೆಲವು ಜನರನ್ನು ವಶಕ್ಕೆ ಪಡೆದಿದ್ದಾರೆ.
“ಕೆಲವು ಜನರು ತಮ್ಮ ವಾಹನದಲ್ಲಿ ಹಸುಗಳನ್ನು ಕಳ್ಳ ಸಾಗಾಣಿಕೆ ಮಾಡುತ್ತಿದ್ದಾರೆ ಎಂದು ಮಧ್ಯರಾತ್ರಿಯ ಹೊತ್ತಿಗೆ ಪೊಲೀಸ್ ಠಾಣೆಯ ಉಸ್ತುವಾರಿ ಅಧಿಕಾರಿಗೆ ಮಾಹಿತಿ ಬಂದಿದ್ದು, ನಮ್ಮ ಅಧಿಕಾರಿಗಳು ಸ್ಥಳಕ್ಕೆ ತಲುಪಿದರು. ಅಲ್ಲಿ ಹತ್ತಿರದ ರೈಟಿ ಗ್ರಾಮ ಮತ್ತು ಸುತ್ತಮುತ್ತಲಿನ ಜನರು ಇಬ್ಬರು ವ್ಯಕ್ತಿಗಳ ಮೇಲೆ ಹಲ್ಲೆ ನಡೆಸುತ್ತಿದ್ದಾರೆಂದು ಎಂದು ನಮಗೆ ತಿಳಿಯಿತು. ಹಲ್ಲೆಗೊಳಗಾದವರು ಬಾಬು ಮತ್ತು ಪಿಂಟು ಎಂದು ಇನ್ಸ್‌ಪೆಕ್ಟರ್ ಜನರಲ್ (ಉದಯಪುರ ರೇಂಜ್) ಸತ್ಯವೀರ್ ಸಿಂಗ್ ಹೇಳಿದರು.
“ಅವರು (ದಾಳಿಕೋರರು) ವಾಹನದಲ್ಲಿದ್ದ ವ್ಯಕ್ತಿಗಳ ದಾಖಲೆಗಳು ಮತ್ತು ಮೊಬೈಲ್ ಫೋನ್‌ಗಳನ್ನು ಕಸಿದುಕೊಂಡಿದ್ದರು. ಪೊಲೀಸರು ಬಂದಾಗ ಅವರು ಓಡಿಹೋದರು … ನಮ್ಮ ಅಧಿಕಾರಿಗಳು ಇಬ್ಬರನ್ನೂ ರಕ್ಷಿಸಿ ಆಸ್ಪತ್ರೆಗೆ ಕರೆದೊಯ್ದರು, ಅಲ್ಲಿ ಬಾಬು ಪ್ರಾಣ ಕಳೆದುಕೊಂಡರು. ಪಿಂಟು ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದಿದ್ದಾರೆ ಸಿಂಗ್.
ಹೆಚ್ಚಿನ ತನಿಖೆ ನಡೆಸಲು ಪೊಲೀಸರು ದಾಳಿ ನಡೆದ ಸ್ಥಳಕ್ಕೆ ಭೇಟಿ ನೀಡಿದ್ದಾರೆ ಎಂದು ಐಜಿ ಸಿಂಗ್ ಹೇಳಿದ್ದಾರೆ. “ನಾವು ಸ್ಥಳಕ್ಕೆ ಭೇಟಿ ನೀಡಿದ್ದೇವೆ ಮತ್ತು ಈಗ ಘಟನೆ ಬಗ್ಗೆ ತನಿಖೆ ನಡೆಸುತ್ತಿದ್ದೇವೆ. ಯಾವುದೇ ಆರೋಪಿಗಳನ್ನು ಬಿಡುವುದಿಲ್ಲ. ನಾವು ಕೆಲವರನ್ನೂ ವಶಕ್ಕೆ ಪಡೆದಿದ್ದೇವೆ ಎಂದಿದ್ದಾರೆ ಸಿಂಗ್.
ಈ ಹಿಂದೆ ಭಾರತದಲ್ಲಿ ಗೋರಕ್ಷಣೆ ಹೆಸರಲ್ಲಿ ಹಲವಾರು ಘಟನೆಗಳು ನಡೆದಿವೆ. ಕಳೆದ ವಾರ ಉತ್ತರ ಪ್ರದೇಶ ಪ್ರದೇಶದಲ್ಲಿ ಗೋವು ಕಳ್ಳಸಾಗಣೆ ಅನುಮಾನದ ಮೇಲೆ 55 ವರ್ಷದ ವ್ಯಕ್ತಿಯನ್ನು ಗುಂಡಿಕ್ಕಿ ಕೊಲ್ಲಲಾಯಿತು.
2019 ರಲ್ಲಿ ಪ್ರಕಟವಾದ ಹ್ಯೂಮನ್ ರೈಟ್ಸ್ ವಾಚ್ ವರದಿಯ ಪ್ರಕಾರ, ಮೇ 2015 ಮತ್ತು ಡಿಸೆಂಬರ್ 2018 ರ ನಡುವೆ ಭಾರತದಲ್ಲಿ ಹಸು ರಕ್ಷಣೆಯ ದಾಳಿಯಲ್ಲಿ ಕನಿಷ್ಠ 44 ಜನರು ಸಾವಿಗೂಡಾಗಿದ್ದು, ಅವರಲ್ಲಿ 36 ಮಂದಿ ಮುಸ್ಲಿಮರಾಗಿದ್ದಾರೆ.
ಇದನ್ನೂ ಓದಿ: ಉತ್ತರ ಪ್ರದೇಶ ಚುನಾವಣೆಯಲ್ಲಿ ಲವ್ ಜಿಹಾದ್, ಗೋ ಭಯೋತ್ಪಾದನೆ ವರ್ಕೌಟ್ ಆಗಲ್ಲ: ಆರ್ಎಲ್ಡಿ ಮುಖ್ಯಸ್ಥ ಜಯಂತ್ ಚೌಧರಿ
(Allegations of trafficking in cows Man Beaten To Death By Mob In Rajasthan)
Published On - 4:33 pm, Mon, 14 June 21