ಡ್ರಗ್ಸ್ ಮುಕ್ತ ಭಾರತಕ್ಕೆ ಮಾಸ್ಟರ್ ಪ್ಲಾನ್; 3 ವರ್ಷದ ‘ವಿಷನ್ ಡಾಕ್ಯುಮೆಂಟ್ ಬಿಡುಗಡೆ ಮಾಡಿದ ಅಮಿತ್ ಶಾ

ಮಾದಕ ದ್ರವ್ಯಗಳ ವಿರುದ್ಧದ ಹೋರಾಟವನ್ನು ತೀವ್ರಗೊಳಿಸಲು ಅಮಿತ್ ಶಾ ವಿಷನ್ ಡಾಕ್ಯುಮೆಂಟ್ ಅನಾವರಣಗೊಳಿಸಿದ್ದಾರೆ. 6,000 ಕೋಟಿ ರೂ. ಮೌಲ್ಯದ ಡ್ರಗ್ಸ್ ವಿಲೇವಾರಿ ಅಭಿಯಾನಕ್ಕೆ ಚಾಲನೆ ನೀಡಿದ್ದಾರೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಇಂದು ಮಾದಕ ದ್ರವ್ಯಗಳ ವಿರುದ್ಧ ಒಗ್ಗಟ್ಟಿನ ಹೋರಾಟಕ್ಕೆ ಕರೆ ನೀಡಿದ್ದಾರೆ. ಮಾದಕ ದ್ರವ್ಯದ ಪಿಡುಗು ರಾಷ್ಟ್ರೀಯ ಭದ್ರತೆ, ಸಾಮಾಜಿಕ ಸ್ಥಿರತೆ, ಆರ್ಥಿಕ ಹಿತಾಸಕ್ತಿಗಳು ಹಾಗೂ ಯುವ ಪೀಳಿಗೆ ಮತ್ತು ದೇಶದ ಭವಿಷ್ಯಕ್ಕೆ ದೊಡ್ಡ ಆಪತ್ತನ್ನು ತಂದೊಡ್ಡಿದೆ ಎಂದು ಅವರು ಹೇಳಿದ್ದಾರೆ. ಈ ಯುದ್ಧವನ್ನು ಗೆಲ್ಲಲು ಆಧ್ಯಾತ್ಮಿಕ ನಾಯಕರು, ಯುವಕರು ಮತ್ತು ತಾಯಂದಿರು ಒಂದಾಗಬೇಕು ಎಂದು ಒತ್ತಾಯಿಸಿದ್ದಾರೆ.

ಡ್ರಗ್ಸ್ ಮುಕ್ತ ಭಾರತಕ್ಕೆ ಮಾಸ್ಟರ್ ಪ್ಲಾನ್; 3 ವರ್ಷದ ವಿಷನ್ ಡಾಕ್ಯುಮೆಂಟ್ ಬಿಡುಗಡೆ ಮಾಡಿದ ಅಮಿತ್ ಶಾ
Amit Shah
Image Credit source: PTI

Updated on: Jun 26, 2026 | 9:16 PM

ಮುಖ್ಯಾಂಶಗಳು

  • ಮಾದಕ ದ್ರವ್ಯ ನಿಯಂತ್ರಣ ವಿಷನ್ ಡಾಕ್ಯುಮೆಂಟ್ ಅನಾವರಣ
  • ಡ್ರಗ್ ವಿಲೇವಾರಿ ಪಾಕ್ಷಿಕ ಅಭಿಯಾನಕ್ಕೆ ಚಾಲನೆ
  • ಸಿಂಥೆಟಿಕ್ ಡ್ರಗ್ಸ್ ಜಪ್ತಿಯಲ್ಲಿ ಭಾರಿ ಏರಿಕೆ

ನವದೆಹಲಿ, ಜೂನ್ 26: ಭಾರತದಲ್ಲಿ ಮಾದಕ ದ್ರವ್ಯಗಳ ಜಾಲವನ್ನು ಸಂಪೂರ್ಣವಾಗಿ ಬೇರುಸಹಿತ ಕಿತ್ತೊಗೆಯಲು ಕೇಂದ್ರ ಸರ್ಕಾರವು ದೊಡ್ಡ ಪ್ಲಾನ್ ಸಿದ್ಧಪಡಿಸಿದೆ. ನವದೆಹಲಿಯಲ್ಲಿ ನಡೆದ 10ನೇ NCORD ಉನ್ನತ ಮಟ್ಟದ ಸಭೆಯಲ್ಲಿ ಪಾಲ್ಗೊಂಡ ಕೇಂದ್ರ ಗೃಹ ಸಚಿವ ಅಮಿತ್ ಶಾ ಮುಂದಿನ 3 ವರ್ಷಗಳ ಅವಧಿಯ ‘ಮಾದಕ ದ್ರವ್ಯ ನಿಯಂತ್ರಣ ವಿಷನ್ ಡಾಕ್ಯುಮೆಂಟ್’ ಅನಾವರಣಗೊಳಿಸಿದರು. ಇದೇ ಸಂದರ್ಭದಲ್ಲಿ ದೇಶಾದ್ಯಂತ ಜಪ್ತಿ ಮಾಡಲಾಗಿದ್ದ ಬರೋಬ್ಬರಿ 6,000 ಕೋಟಿ ರೂ. ಮೌಲ್ಯದ 2,09,500 ಕೆಜಿ ಮಾದಕ ಪದಾರ್ಥಗಳನ್ನು ಏಕಕಾಲದಲ್ಲಿ ನಾಶಪಡಿಸುವ ‘ಡ್ರಗ್ ವಿಲೇವಾರಿ ಪಾಕ್ಷಿಕ ಅಭಿಯಾನ’ಕ್ಕೆ ಚಾಲನೆ ನೀಡುವ ಮೂಲಕ ಡ್ರಗ್ಸ್ (Drugs) ಮಾಫಿಯಾಗೆ ಕಠಿಣ ಸಂದೇಶ ರವಾನಿಸಿದರು.

“ಮಾದಕ ದ್ರವ್ಯದ ಪಿಡುಗು ಕೇವಲ ಕಾನೂನು ಸುವ್ಯವಸ್ಥೆಯ ಪ್ರಶ್ನೆಯಲ್ಲ. ಅದು ದೇಶದ ರಾಷ್ಟ್ರೀಯ ಭದ್ರತೆ, ಸಾಮಾಜಿಕ ಸ್ಥಿರತೆ, ಆರ್ಥಿಕ ಹಿತಾಸಕ್ತಿ ಹಾಗೂ ಕೋಟ್ಯಂತರ ಯುವ ಪೀಳಿಗೆಯ ಭವಿಷ್ಯಕ್ಕೆ ಮಾರಕವಾಗಿದೆ” ಎಂದು ಅಮಿತ್ ಶಾ ಆತಂಕ ವ್ಯಕ್ತಪಡಿಸಿದರು. “ಈ ಪಿಡುಗಿನ ವಿರುದ್ಧ ಜಯ ಸಾಧಿಸಲು ಆಧ್ಯಾತ್ಮಿಕ ನಾಯಕರು, ಯುವಕರು, ಶಿಕ್ಷಕರು ಮತ್ತು ತಾಯಂದಿರು ಒಂದೇ ವೇದಿಕೆಗೆ ಬಂದು ಒಗ್ಗಟ್ಟಿನಿಂದ ಹೋರಾಡಬೇಕು” ಎಂದು ಅವರು ಕರೆ ನೀಡಿದರು.

ಇದನ್ನೂ ಓದಿ: ಈಗ ಉಳಿದಿರುವುದು ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆ ಮಾತ್ರ; ಉದ್ಧವ್ ಠಾಕ್ರೆಗೆ ಅಮಿತ್ ಶಾ ಟಾಂಗ್

ಸಿಂಥೆಟಿಕ್ ಡ್ರಗ್ಸ್ ಜಪ್ತಿಯಲ್ಲಿ ಭಾರಿ ಏರಿಕೆ:

“ಹಿಂದಿನ ಸರ್ಕಾರಗಳ ಅವಧಿಗೆ ಹೋಲಿಸಿದರೆ ಪ್ರಸ್ತುತ ಸರ್ಕಾರದ ಅವಧಿಯಲ್ಲಿ ಡ್ರಗ್ಸ್ ಹಾವಳಿಯನ್ನು ತಡೆಗಟ್ಟಲು ಕಠಿಣ ಕ್ರಮ ಕೈಗೊಳ್ಳಲಾಗಿದೆ ಎಂದು ಗೃಹ ಸಚಿವ ಅಮಿತ್ ಶಾ ಅಂಕಿ-ಅಂಶಗಳನ್ನು ನೀಡಿದರು. 2004ರಿಂದ 2014ರ ನಡುವೆ ದೇಶದಲ್ಲಿ ಕೇವಲ 26 ಲಕ್ಷ ಕೆಜಿ ಸಿಂಥೆಟಿಕ್ ಡ್ರಗ್ಸ್ ಜಪ್ತಿ ಮಾಡಲಾಗಿತ್ತು. ಆದರೆ 2014ರಿಂದ 2026ರ ಅವಧಿಯಲ್ಲಿ ಈ ಪ್ರಮಾಣವು ಬರೋಬ್ಬರಿ 1.18 ಕೋಟಿ ಕೆಜಿಗೆ (11.8 ಮಿಲಿಯನ್ ಕೆಜಿ) ಏರಿಕೆಯಾಗಿದೆ. ಇದು ಸರ್ಕಾರದ ನಿರಂತರ ಕಾರ್ಯಾಚರಣೆಯ ಯಶಸ್ಸನ್ನು ತೋರಿಸುತ್ತದೆ” ಎಂದರು.


ಇದನ್ನೂ ಓದಿ: ಬೆಂಗಳೂರಲ್ಲಿ ಡ್ರಗ್ಸ್ ಬೇಟೆ: 5.67 ಕೋಟಿ ರೂ. ಮೌಲ್ಯದ ಹೈಡ್ರೋ ಗಾಂಜಾ, ಕೊಕೇನ್ ಜಪ್ತಿ, ಉಗಾಂಡಾ ಮಹಿಳೆ ಸೇರಿ ಮೂವರ ಬಂಧನ

ಡ್ರಗ್ಸ್ ಅಪರಾಧಗಳ ತನಿಖೆಯನ್ನು ಚುರುಕುಗೊಳಿಸಲು ಎನ್‌ಸಿಬಿ (NCB) ಹಲವು ಅತ್ಯಾಧುನಿಕ ಆನ್‌ಲೈನ್ ಪೋರ್ಟಲ್‌ಗಳನ್ನು ಅಭಿವೃದ್ಧಿಪಡಿಸಿದೆ. ದೇಶದ ಎಲ್ಲಾ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳು ಮತ್ತು ಪೊಲೀಸ್ ಮಹಾನಿರ್ದೇಶಕರು (DGPs) ತಮ್ಮ ರಾಜ್ಯಗಳಲ್ಲಿ ದಾಖಲಾಗುವ ಡ್ರಗ್ಸ್ ಪ್ರಕರಣಗಳ ಇಂಚಿಂಚೂ ಮಾಹಿತಿಯನ್ನು ನಿಗದಿತ ಸಮಯದೊಳಗೆ ಈ ಪೋರ್ಟಲ್‌ನಲ್ಲಿ ಅಪ್‌ಲೋಡ್ ಮಾಡಬೇಕು ಎಂದು ಸಚಿವರು ಕಟ್ಟುನಿಟ್ಟಿನ ಸೂಚನೆ ನೀಡಿದರು. ಇದರಿಂದ ಕೇಂದ್ರ ಮತ್ತು ರಾಜ್ಯಗಳ ನಡುವೆ ಮಾಹಿತಿ ಹಂಚಿಕೆ ಸುಲಭವಾಗಿ, ತನಿಖೆ ವೇಗವಾಗಿ ನಡೆಯಲು ಸಾಧ್ಯವಾಗುತ್ತದೆ.


ಪ್ರಧಾನಿ ನರೇಂದ್ರ ಮೋದಿ ಅವರ ‘ಮಾದಕ ಮುಕ್ತ ಭಾರತ’ದ ಸಂಕಲ್ಪವನ್ನು 2047ರ ವೇಳೆಗೆ ಸಾಕಾರಗೊಳಿಸಲು ಈ 3 ವರ್ಷಗಳ ವಿಷನ್ ಡಾಕ್ಯುಮೆಂಟ್ ಅತ್ಯಂತ ಪ್ರಮುಖ ತಳಹದಿಯಾಗಿದೆ ಎಂದು ಅಮಿತ್ ಶಾ ವಿಶ್ವಾಸ ವ್ಯಕ್ತಪಡಿಸಿದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us