ಡಿಸಿಎಂ ಸ್ಥಾನಕ್ಕೆ ದೇವೇಂದ್ರ ಫಡ್ನವೀಸ್ ರಾಜೀನಾಮೆ ಪ್ರಸ್ತಾಪ ತಿರಸ್ಕರಿಸಿದ ಅಮಿತ್ ಶಾ
ಲೋಕಸಭೆ ಚುನಾವಣೆಯ ಸಂದರ್ಭದಲ್ಲಿ ಮಹಾರಾಷ್ಟ್ರ ರಾಜ್ಯದಲ್ಲಿ ಬಿಜೆಪಿ ಬಹಳ ಕಳಪೆ ಪ್ರದರ್ಶನ ನೀಡಿತ್ತು. ಇದಕ್ಕೆ ನೈತಿಕ ಹೊಣೆ ಹೊತ್ತ ಮಹಾರಾಷ್ಟ್ರದ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ರಾಜೀನಾಮೆ ನೀಡುವುದಾಗಿ ಘೋಷಿಸಿದ್ದರು.
ಮುಂಬೈ: ಮಹಾರಾಷ್ಟ್ರದಲ್ಲಿ 2019ರ ಲೋಕಸಭೆ ಚುನಾವಣೆಯಲ್ಲಿ (Lok Sabha Elections 2024) 23 ಸ್ಥಾನಗಳನ್ನು ಪಡೆದಿದ್ದ ಬಿಜೆಪಿ ಈ ಬಾರಿ 9 ಸ್ಥಾನಗಳಿಗೆ ಕುಸಿದಿತ್ತು. ಇದರ ನೈತಿಕ ಹೊಣೆ ಹೊತ್ತು ತಾವು ಉಪಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಬಿಜೆಪಿಯ ದೇವೇಂದ್ರ ಫಡ್ನವಿಸ್ (Devendra Fadnavis) ಘೋಷಿಸಿದ್ದರು. ದೇವೇಂದ್ರ ಫಡ್ನವಿಸ್ ಗುರುವಾರ ಅಮಿತ್ ಶಾ (Amit Shah) ಅವರನ್ನು ಅವರ ನಿವಾಸದಲ್ಲಿ ಭೇಟಿಯಾದರು. ತಾವು ರಾಜೀನಾಮೆ ನೀಡುವ ನಿರ್ಧಾರವನ್ನು ಪುನರುಚ್ಚರಿಸಿದರು. ಆದರೆ, ಆ ಯೋಚನೆಯನ್ನು ಬಿಟ್ಟು, ನರೇಂದ್ರ ಮೋದಿಯವರ ಪ್ರಮಾಣವಚನ ಸ್ವೀಕಾರದವರೆಗೆ ಉಪಮುಖ್ಯಮಂತ್ರಿಯಾಗಿ ಮುಂದುವರೆಯುವಂತೆ ಅಮಿತ್ ಶಾ ಸೂಚನೆ ನೀಡಿದ್ದಾರೆ.
ಮಹಾರಾಷ್ಟ್ರದ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರು ರಾಜ್ಯ ಸರ್ಕಾರದಲ್ಲಿ ತಮ್ಮ ಕೆಲಸವನ್ನು ಮುಂದುವರಿಸುವಂತೆ ಅಮಿತ್ ಶಾ ಕೇಳಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಮಹಾರಾಷ್ಟ್ರದ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ರಾಜ್ಯದಲ್ಲಿ ಎನ್‌ಡಿಎ ಕಳಪೆ ಪ್ರದರ್ಶನದ ಹೊಣೆ ಹೊತ್ತು ರಾಜೀನಾಮೆ ನೀಡುವ ನಿರ್ಧಾರಕ್ಕೆ ದೃಢವಾಗಿ ನಿಂತಿದ್ದಾರೆ ಎಂಬ ವರದಿಗಳ ನಡುವೆ ಗೃಹ ಸಚಿವ ಅಮಿತ್ ಶಾ ಅವರೊಂದಿಗೆ ಮಾತನಾಡಿದ್ದಾರೆ. ಅವರು ಸರ್ಕಾರದಲ್ಲಿ ತಮ್ಮ ಕೆಲಸವನ್ನು ಮುಂದುವರಿಸುವಂತೆ ಕೇಳಿಕೊಂಡಿದ್ದಾರೆ.
ಇದನ್ನೂ ಓದಿ: ನಾವು ಗೆಲ್ಲಿಸುವ ಸಂಸದರ ಸಂಬಳ, ಸಿಗುವ ಸೌಲಭ್ಯಗಳ ಬಗ್ಗೆ ನಿಮಗೆಷ್ಟು ಗೊತ್ತು?
ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು ಶಿವಸೇನೆಯ ಏಕನಾಥ್ ಶಿಂಧೆ ಬಣ ಮತ್ತು ಅಜಿತ್ ಪವಾರ್ ನೇತೃತ್ವದ ನ್ಯಾಶನಲಿಸ್ಟ್ ಕಾಂಗ್ರೆಸ್ ಪಾರ್ಟಿ (ಎನ್‌ಸಿಪಿ) ಜೊತೆ ಮಹಾರಾಷ್ಟ್ರ ಸರ್ಕಾರದ ಭಾಗವಾಗಿದ್ದಾರೆ. ಅವಿಭಜಿತ ಶಿವಸೇನೆ ಮತ್ತು ಬಿಜೆಪಿ 2019ರಲ್ಲಿ ರಾಜ್ಯದ 48ರಲ್ಲಿ 41 ಸ್ಥಾನವನ್ನು ಗೆದ್ದಿದ್ದವು. ಆದರೆ ಮಹಾರಾಷ್ಟ್ರದಲ್ಲಿ ಮಹಾಯುತಿ ಎಂದು ಕರೆಯಲ್ಪಡುವ ಹೊಸ ಒಕ್ಕೂಟವು ಈ ಬಾರಿ ಕೇವಲ 17 ಸ್ಥಾನ ಗಳಿಸುವಲ್ಲಿ ಯಶಸ್ವಿಯಾಗಿದೆ.
ಮತ ಎಣಿಕೆಯ ಒಂದು ದಿನದ ನಂತರ ದೇವೇಂದ್ರ ಫಡ್ನವೀಸ್ ಬುಧವಾರ ರಾಜೀನಾಮೆ ನೀಡಲು ಮುಂದಾಗಿದ್ದರು. ನಂತರ ಹಲವಾರು ಬಿಜೆಪಿ ನಾಯಕರು ಅವರೊಂದಿಗೆ ಮಾತನಾಡಿದ್ದಾರೆ. ಬಿಜೆಪಿ ನಾಯಕರು ಸಹ ಉಪಮುಖ್ಯಮಂತ್ರಿ ಅಜಿತ್ ಪವಾರ್ ಮತ್ತು ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರೊಂದಿಗೆ ಕುಳಿತು ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರದ ಕಾರ್ಯಕ್ಷಮತೆಯನ್ನು ಚರ್ಚಿಸಿದರು. ಇದರಲ್ಲಿ ದೇವೇಂದ್ರ ಫಡ್ನವಿಸ್ ರಾಜೀನಾಮೆ ವಿಷಯವೂ ಪ್ರಸ್ತಾಪವಾಯಿತು ಎಂದು ಮೂಲಗಳು ತಿಳಿಸಿವೆ.
ಇದನ್ನೂ ಓದಿ: 150 ಜಿಲ್ಲಾಧಿಕಾರಿಗಳಿಗೆ ಅಮಿತ್ ಶಾ ಕರೆ ಆರೋಪ, ವದಂತಿ ಹರಡಿ ಅವಮಾನಿಸುವುದು ತಪ್ಪು ಎಂದ ರಾಜೀವ್ ಕುಮಾರ್
ಅಮಿತ್ ಶಾ ದೇವೇಂದ್ರ ಫಡ್ನವಿಸ್ ಅವರಿಗೆ ಮಹಾರಾಷ್ಟ್ರ ಸರ್ಕಾರಕ್ಕಾಗಿ ಕೆಲಸ ಮಾಡುವುದನ್ನು ಮುಂದುವರಿಸಲು ಮತ್ತು ರಾಜ್ಯದಲ್ಲಿ ಬಿಜೆಪಿಯನ್ನು ಪುನರುಜ್ಜೀವನಗೊಳಿಸುವ ಯೋಜನೆಯನ್ನು ಸಿದ್ಧಪಡಿಸುವಂತೆ ಸೂಚಿಸಿದ್ದಾರೆ. ಈ ವರ್ಷದ ಅಕ್ಟೋಬರ್‌ನಲ್ಲಿ ಮಹಾರಾಷ್ಟ್ರದಲ್ಲಿ ವಿಧಾನಸಭೆ ಚುನಾವಣೆ ನಡೆಯುವ ಸಾಧ್ಯತೆ ಇದೆ. “ನೀವು ರಾಜೀನಾಮೆ ನೀಡಿದರೆ, ಅದು ಬಿಜೆಪಿ ಕಾರ್ಯಕರ್ತರ ನೈತಿಕತೆಯ ಮೇಲೆ ಪರಿಣಾಮ ಬೀರುತ್ತದೆ. ಆದ್ದರಿಂದ ಈಗ ರಾಜೀನಾಮೆ ನೀಡಬೇಡಿ,” ಎಂದು ಅಮಿತ್ ಶಾ ಹೇಳಿದ್ದಾರೆ ಎನ್ನಲಾಗಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ