ವಿಜಯ್ ನೇತೃತ್ವದ ಟಿವಿಕೆಗೆ ಬೆಂಬಲಿಸಿದ್ದಕ್ಕೆ ಎಎಂಎಂಕೆಯಿಂದ ಶಾಸಕ ಕಾಮರಾಜ್​ ಉಚ್ಛಾಟನೆ

ತಮಿಳುನಾಡಿನ ಅಮ್ಮ ಮಕ್ಕಳ್ ಮುನ್ನೇತ್ರ ಕಳಗಂ (ಎಎಂಎಂಕೆ) ಪ್ರಧಾನ ಕಾರ್ಯದರ್ಶಿ ಟಿಟಿವಿ ದಿನಕರನ್ ತಮ್ಮ ಪಕ್ಷದ ಶಾಸಕ ಎಸ್. ಕಾಮರಾಜ್ ಅವರನ್ನು ಉಚ್ಚಾಟಿಸುವ ಮೂಲಕ ಪ್ರಮುಖ ಹೆಜ್ಜೆ ಇಟ್ಟಿದ್ದಾರೆ. ತಮಿಳುನಾಡು ವಿಧಾನಸಭೆಯಲ್ಲಿ ತಮಿಳುನಾಡು ವಿಕ್ಟರಿ ಪಕ್ಷಕ್ಕೆ (ಟಿವಿಕೆ) ಬೆಂಬಲ ವ್ಯಕ್ತಪಡಿಸಿದ ಎಸ್. ಕಾಮರಾಜ್ ಅವರನ್ನು ಪಕ್ಷದ ಮೂಲ ಸದಸ್ಯತ್ವ ಮತ್ತು ಪಕ್ಷದ ಎಲ್ಲಾ ಜವಾಬ್ದಾರಿಗಳಿಂದ ತಕ್ಷಣದಿಂದ ಜಾರಿಗೆ ಬರುವಂತೆ ವಜಾಗೊಳಿಸಲಾಗಿದೆ ಎಂದು ಎಎಂಎಂಕೆ ಘೋಷಿಸಿದೆ.

ವಿಜಯ್ ನೇತೃತ್ವದ ಟಿವಿಕೆಗೆ ಬೆಂಬಲಿಸಿದ್ದಕ್ಕೆ ಎಎಂಎಂಕೆಯಿಂದ ಶಾಸಕ ಕಾಮರಾಜ್​ ಉಚ್ಛಾಟನೆ
Kamaraj And Dinakaran

Updated on: May 12, 2026 | 4:53 PM

ಚೆನ್ನೈ, ಮೇ 12: ಟಿಟಿವಿ ದಿನಕರನ್ ಅವರ ಅಮ್ಮ ಮಕ್ಕಳ್ ಮುನ್ನೆತ್ರ ಕಳಗಂ (ಎಎಂಎಂಕೆ) ಇಂದು ತಮಿಳುನಾಡು ವಿಧಾನಸಭೆಯ ತಮ್ಮ ಪಕ್ಷದ ಏಕೈಕ ಶಾಸಕ ಎಸ್. ಕಾಮರಾಜ್ ಅವರನ್ನು ಉಚ್ಚಾಟನೆ ಮಾಡಿದೆ. ಎಐಎಡಿಎಂಕೆಯ ಒಂದು ಬಣ ಟಿವಿಕೆಗೆ ಬೆಂಬಲ ಘೋಷಿಸುತ್ತಿದ್ದಂತೆ ಎಎಂಎಂಕೆ ಶಾಸಕ ಕಾಮರಾಜ್ ಕೂಡ ಮುಖ್ಯಮಂತ್ರಿ ವಿಜಯ್ ಮತ್ತು ಅವರ ಪಕ್ಷವಾದ ಟಿವಿಕೆಯನ್ನು ಸದನದಲ್ಲಿ ಏಕಪಕ್ಷೀಯವಾಗಿ ಬೆಂಬಲಿಸಿದ್ದರು. ಈ ಹಿನ್ನೆಲೆಯಲ್ಲಿ ಪಕ್ಷದಿಂದ ಅವರನ್ನು ಉಚ್ಚಾಟನೆ ಮಾಡಲಾಗಿದೆ.

ತಮಿಳುನಾಡು ವಿಧಾನಸಭೆಯಲ್ಲಿ ತಮಿಳುನಾಡು ವಿಕ್ಟರಿ ಪಕ್ಷಕ್ಕೆ ಬೆಂಬಲ ವ್ಯಕ್ತಪಡಿಸಿದ ನಂತರ, ಎಸ್. ಕಾಮರಾಜ್ ಅವರನ್ನು ಪಕ್ಷದ ಮೂಲ ಸದಸ್ಯತ್ವ ಮತ್ತು ಪಕ್ಷದ ಎಲ್ಲಾ ಜವಾಬ್ದಾರಿಗಳಿಂದ ತಕ್ಷಣದಿಂದ ಜಾರಿಗೆ ಬರುವಂತೆ ತೆಗೆದುಹಾಕಲಾಗಿದೆ ಎಂದು ಎಎಂಎಂಕೆ ಘೋಷಿಸಿದೆ. ಮೇ 9ರಂದು ಎಎಂಎಂಕೆ ಶಾಸಕ ಎಸ್. ಕಾಮರಾಜ್ ಅವರು ಟಿವಿಕೆ ಸರ್ಕಾರ ರಚಿಸಲು ಬೆಂಬಲ ವ್ಯಕ್ತಪಡಿಸಿ, ಬೆಂಬಲ ಪತ್ರವನ್ನು ಸಹ ನೀಡಿದ್ದರು. ಆದರೆ, ಅದೇ ದಿನ ಸಂಜೆ ರಾಜ್ಯಪಾಲರನ್ನು ಭೇಟಿಯಾಗಿದ್ದ ಎಎಂಎಂಕೆ ಪಕ್ಷದ ನಾಯಕ ಟಿಟಿವಿ ದಿನಕರನ್, ತಮ್ಮ ಪಕ್ಷದ ಶಾಸಕ ಎಸ್. ಕಾಮರಾಜ್ ಅವರು ಟಿವಿಕೆಯನ್ನು ಬೆಂಬಲಿಸುವ ಪತ್ರವನ್ನು ನೀಡಿಲ್ಲ, ನಕಲಿ ಪತ್ರವನ್ನು ರಾಜ್ಯಪಾಲರಿಗೆ ನೀಡಲಾಗಿದೆ ಎಂದು ಆರೋಪಿಸಿದ್ದರು. ಅಲ್ಲದೆ, ಎಸ್. ಕಾಮರಾಜ್ ಕಾಣೆಯಾಗಿದ್ದಾರೆ ಎಂದು ಅವರು ದೂರು ನೀಡಿದ್ದರು.

ಇದನ್ನೂ ಓದಿ: 2 ಬಣಗಳಾಗಿ ಒಡೆದ ಎಐಎಡಿಎಂಕೆ; ಪಳನಿಸ್ವಾಮಿಗೆ 17 ಶಾಸಕರು, ವೇಲುಮಣಿ​ಗೆ 30 ಶಾಸಕರ ಬೆಂಬಲ

ಇದರ ಬೆನ್ನಲ್ಲೇ, ಟಿವಿಕೆ ಪಕ್ಷವು ತಮ್ಮನ್ನು ಬೆಂಬಲಿಸಿ ಪತ್ರಕ್ಕೆ ಸಹಿ ಹಾಕಿರುವ ಎಸ್. ಕಾಮರಾಜ್ ಅವರ ವೀಡಿಯೊವನ್ನು ಬಿಡುಗಡೆ ಮಾಡುವ ಮೂಲಕ ಕೋಲಾಹಲ ಸೃಷ್ಟಿಸಿತ್ತು. ಆದರೆ, ದಿನಕರನ್ ಅದು ಕೂಡ ನಕಲಿ ವಿಡಿಯೋ, ಎಐನಿಂದ ರಚಿಸಲಾದ ವಿಡಿಯೋ ಎಂದು ಆರೋಪಿಸಿದ್ದರು. ಇದೆಲ್ಲದರ ನಡುವೆ ಇಂದು ಶಾಸಕ ಕಾಮರಾಜ್ ಬಹಿರಂಗವಾಗಿ ವಿಧಾನಸಭೆಯಲ್ಲಿ ಟಿವಿಕೆಗೆ ಬೆಂಬಲ ಘೋಷಿಸಿದ್ದರಿಂದ ದಿನಕರನ್​ಗೆ ಭಾರೀ ಮುಖಭಂಗವಾಗಿದೆ. ತಾನು ಟಿವಿಕೆ ವಿರುದ್ಧ ಮಾಡಿದ ಆರೋಪಗಳು ಸುಳ್ಳೆಂದು ಬಹಿರಂಗವಾದ್ದರಿಂದ ಕೋಪಗೊಂಡ ಅವರು ಕಾಮರಾಜ್ ಅವರನ್ನು ತಮ್ಮ ಪಕ್ಷದಿಂದಲೇ ಉಚ್ಛಾಟನೆ ಮಾಡಿದ್ದಾರೆ. ಇದರ ನಂತರ ಮಾತನಾಡಿದ ಎಸ್. ಕಾಮರಾಜ್, ಪಕ್ಷದ ನಾಯಕತ್ವದ ನಿರ್ಧಾರವನ್ನು ಒಪ್ಪಿಕೊಳ್ಳುವುದಾಗಿ ಹೇಳಿದ್ದಾರೆ.

ಇದನ್ನೂ ಓದಿ: ತಮಿಳುನಾಡು ರಾಜಕಾರಣದಲ್ಲಿ ಸ್ಫೋಟಕ ಬೆಳವಣಿಗೆ: ಎಐಎಡಿಎಂಕೆಯಲ್ಲಿ ಭಾರಿ ಬಂಡಾಯ, ಟಿವಿಕೆಗೆ ಷಣ್ಮುಗಂ ನೇತೃತ್ವದ 30 ಶಾಸಕರ ಬೆಂಬಲ

ಈ ಮಧ್ಯೆ, ಎಐಎಡಿಎಂಕೆ ಪಕ್ಷ ಎಡಪ್ಪಾಡಿ ಪಳನಿಸ್ವಾಮಿ ಬಣ ಮತ್ತು ಸಿವಿ ಷಣ್ಮುಗಂ ಬಣ ಎಂದು 2 ಬಣಗಳಾಗಿ ವಿಭಜನೆಯಾಗಿದೆ. ಸಿವಿ ಷಣ್ಮುಗಂ ನೇತೃತ್ವದ 30 ಶಾಸಕರು ಟಿವಿಕೆಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಉಳಿದ 15 ಶಾಸಕರು ಟಿವಿಕೆ ವಿರುದ್ಧ ಮತ ಚಲಾಯಿಸಲು ನಿರ್ಧರಿಸಿದ್ದು, ಟಿವಿಕೆ ಪರವಾಗಿ ಮತ ಚಲಾಯಿಸುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಲಾಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us