ಅಪಘಾತ: ಕಾರಿನ ಮೇಲೆ ಬೈಕ್ ಸವಾರನ ದೇಹವಿರಿಸಿಕೊಂಡು 18 ಕಿ.ಮೀ ಹೋಗಿ ಪರಾರಿಯಾದ ಚಾಲಕ
ಕುಡಿದ ಮತ್ತಿನಲ್ಲಿ ಬೈಕ್ಗೆ ಡಿಕ್ಕಿ ಹೊಡೆಸಿದ್ದಲ್ಲದೆ, ಕಾರಿನ ಮೇಲೆ ಬಿದ್ದಿದ್ದ ಬೈಕ್ ಸವಾರನ ದೇಹವನ್ನು ಹಾಗೆಯೇ ಇರಿಸಿ 18 ಕಿ.ಮೀ ಕಾರು ಚಲಾಯಿಸಿ ಬಳಿಕ ಚಾಲಕ ಪರಾರಿಯಾಗಿರುವ ಘಟನೆ ಆಂಧ್ರಪ್ರದೇಶದಲ್ಲಿ ನಡೆದಿದೆ.
ಕಾರು ಹಾಗೂ ಬೈಕ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ, ಬೈಕ್ ಸವಾರನ ದೇಹ ಕಾರಿನ ಮೇಲೆ ಬಿದ್ದಿದೆ. ಆದರೆ ಕಾರು ಚಾಲಕ ಅದನ್ನು ಗಮನಿಸದೆ ಕಾರು ನಿಲ್ಲಿಸದೆ 18 ಕಿ.ಮೀ ಸಂಚರಿಸಿ ಬಳಿಕ ಪರಾರಿಯಾಗಿರುವ ಘಟನೆ ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯಲ್ಲಿ ನಡೆದಿದೆ. ಭಾನುವಾರ ರಾತ್ರಿ 8 ಗಂಟೆ ಸುಮಾರಿಗೆ ಘಟನೆ ನಡೆದಿದೆ. ಚಲಿಸುತ್ತಿದ್ದ ಟೊಯೊಟಾ ಇನ್ನೋವಾ ಕಾರಿನ ಮೇಲೆ ಶವ ಪತ್ತೆಯಾಗಿದೆ ಎಂದು ಮಾಹಿತಿದಾರರಿಂದ ಪೊಲೀಸರಿಗೆ ಕರೆ ಬಂದಿತ್ತು.
ತಕ್ಷಣ ಅಧಿಕಾರಿಗಳು ವಾಹನವನ್ನು ಪತ್ತೆ ಹಚ್ಚಿ ಮೃತರನ್ನು ಬೈಕ್ ಚಲಾಯಿಸುತ್ತಿದ್ದ ಯರ್ರಿಸ್ವಾಮಿ ಎಂದು ಗುರುತಿಸಿದ್ದಾರೆ. ಆತನನ್ನು ಹಿಡಿಯುವ ಪ್ರಯತ್ನ ನಡೆಯುತ್ತಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಕೊಲೆ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.
ಆತನ ಕಾರಿನ ಮೇಲೆ ದೇಹವಿರುವುದನ್ನು ಕಂಡು ರಸ್ತೆಯಲ್ಲಿದ್ದ ಇತರೆ ವಾಹನ ಸವಾರರು ಆತನನ್ನು ಎಚ್ಚರಿಸಿದ್ದಾರೆ. ಭಾನುವಾರ (ಏಪ್ರಿಲ್ 14) ರಾತ್ರಿ ಅನಂತಪುರ ಜಿಲ್ಲೆಯ ಆತ್ಮಕೂರು ಮಂಡಲದಲ್ಲಿ ಈ ಭಯಾನಕ ಘಟನೆ ನಡೆದಿದೆ. ಅನಂತಪುರ ಜಿಲ್ಲೆಯ ಕೂಡೇರು ಮಂಡಲದ ಚೋಳಸಮುದ್ರ ಗ್ರಾಮದ ಜಿನ್ನೆ ಎರ್ರಿಸ್ವಾಮಿ (35) ಟ್ರ್ಯಾಕ್ಟರ್ ಮೆಕ್ಯಾನಿಕ್ ಆಗಿ ಕೆಲಸ ಮಾಡುತ್ತಾ ಕುಟುಂಬವನ್ನು ಪೋಷಿಸುತ್ತಿದ್ದಾರೆ. ಕೆಲ ವರ್ಷಗಳ ಹಿಂದೆ ಆತ್ಮಕೂರು ಮಂಡಲದ ಪಿ ಸಿದ್ದರಾಂಪುರದ ಮಂಜು ಎಂಬುವವರನ್ನು ವಿವಾಹವಾಗಿದ್ದರು. ಅವರಿಗೆ ಒಬ್ಬ ಮಗ ಮತ್ತು ಮಗಳು ಇದ್ದಾರೆ. ಅನಂತಪುರದಲ್ಲಿ ನೆಲೆಸಿರುವ ಈ ದಂಪತಿ ನೆಮ್ಮದಿಯಿಂದ ಜೀವನ ನಡೆಸುತ್ತಿದ್ದರು.
ಮತ್ತಷ್ಟು ಓದಿ: ಎಲೆಕ್ಷನ್ ಡ್ಯೂಟಿಗೆ ಹೋಗುತ್ತಿದ್ದಾಗ ಅಪಘಾತ; ಕರ್ನಾಟಕ ಪೊಲೀಸ್ ಸೇರಿ ಇಬ್ಬರ ಸಾವು
ಭಾನುವಾರ ರಾತ್ರಿ ಎರ್ರಿಸ್ವಾಮಿ ಅವರು ವೈಯಕ್ತಿಕ ಕೆಲಸಗಳ ಮೇಲೆ ದ್ವಿಚಕ್ರ ವಾಹನದಲ್ಲಿ ಸಿದ್ದರಾಮಪುರದ ಅತ್ತಾರಿಂಟಿಗೆ ಹೋಗಿ ರಾತ್ರಿ 9.30ರ ಸುಮಾರಿಗೆ ಅನಂತಪುರಕ್ಕೆ ವಾಪಸಾಗಿದ್ದರು. ವೈ ಕೊತ್ತಪಲ್ಲಿ ಬಳಿ ರಾಷ್ಟ್ರೀಯ ಹೆದ್ದಾರಿ ಪ್ರವೇಶಿಸುವಾಗ ಕಲ್ಯಾಣದುರ್ಗದ ಕಡೆಗೆ ಹೋಗುತ್ತಿದ್ದ ಇನ್ನೋವಾ ಕಾರು ಏಕಾಏಕಿ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದಿದೆ. ಇದರಿಂದ ಎರ್ರಿಸ್ವಾಮಿ ಕಾರಿನ ಮೇಲೆ ಬಿದ್ದು ಸಾವನ್ನಪ್ಪಿದ್ದಾರೆ.
ಅದಾಗಲೇ ಪಾನಮತ್ತನಾಗಿದ್ದ ಕಾರು ಚಾಲಕ ಇದನ್ನು ಗಮನಿಸದೆ ಕಲ್ಯಾಣದುರ್ಗದ ಕಡೆಗೆ ಕಾರನ್ನು ಓಡಿಸಿದ್ದಾನೆ. 18 ಕಿ.ಮೀ ಪ್ರಯಾಣಿಸಿದ ಬಳಿಕ ಬೆಳಗುಪ್ಪ ಮಂಡಲದ ಹನಿಮಿರೆಡ್ಡಿಪಲ್ಲಿ ಎಂಬಲ್ಲಿ ಕಾರಿನ ಮೇಲೆ ಬಿದ್ದಿದ್ದ ವ್ಯಕ್ತಿಯನ್ನು ಗಮನಿಸಿದ ಇತರೆ ವಾಹನ ಸವಾರರು ಕಾರು ನಿಲ್ಲಿಸಿ ಚಾಲಕನಿಗೆ ವಿಷಯ ತಿಳಿಸಿದ್ದಾರೆ.
ಚಾಲಕ ಕಾರನ್ನು ರಸ್ತೆ ಬದಿ ಬಿಟ್ಟು ಓಡಿ ಹೋಗಿದ್ದಾನೆ. ತಕ್ಷಣ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಸ್ಥಳಕ್ಕಾಗಮಿಸಿ ಶವವನ್ನು ಹೊರತೆಗೆದು ತನಿಖೆ ಆರಂಭಿಸಿದ್ದಾರೆ. ಕಾರು ಬೆಂಗಳೂರಿಗೆ ಸೇರಿದ್ದು ಎಂದು ಗುರುತಿಸಲಾಗಿದೆ. ಚಾಲಕ ಪಾನಮತ್ತನಾಗಿದ್ದ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ