Amalapuram Tension ಆಂಧ್ರ ಪ್ರದೇಶದ ಅಮಲಾಪುರಂನಲ್ಲಿ ಹಿಂಸಾಚಾರ; 46 ಮಂದಿ ಬಂಧನ, ನಗರದಾದ್ಯಂತ ಬಿಗಿ ಬಂದೋಬಸ್ತ್
ಪರಿಸ್ಥಿತಿ ಈಗ ಶಾಂತವಾಗಿದೆ. ಆದರೆ ಅಹಿತಕರ ಘಟನೆಗಳನ್ನು ತಡೆಗಟ್ಟಲು ಮತ್ತು ಶಾಂತಿ ಕಾಪಾಡಲು ಪೊಲೀಸರು ಜಾಗರೂಕರಾಗಿದ್ದಾರೆ. ಪೊಲೀಸರು ವಿವಿಧ ಗುಂಪುಗಳ ಮುಖಂಡರೊಂದಿಗೆ ಮಾತನಾಡಿ ಶಾಂತಿ ಕಾಪಾಡಲು ಸಹಕರಿಸುವಂತೆ ಕೋರಿದರು
ಹೈದರಾಬಾದ್: ಆಂಧ್ರ ಪ್ರದೇಶದ (Andhra Pradesh) ಅಮಲಾಪುರಂನಲ್ಲಿ (Amalapuram) ಮಂಗಳವಾರ ನಡೆದ ಹಿಂಸಾಚಾರ (Violence) ವೇಳೆ ಸಚಿವರು ಮತ್ತು ಶಾಸಕರ ಮನೆಗಳಿಗೆ ಬೆಂಕಿ ಹಚ್ಚಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು 46 ಜನರನ್ನು ಬಂಧಿಸಿದ್ದಾರೆ ಎಂದು ಹಿರಿಯ ಅಧಿಕಾರಿಯೊಬ್ಬರು ಬುಧವಾರ ತಿಳಿಸಿದ್ದಾರೆ. ಕೋನಸೀಮಾ ಜಿಲ್ಲೆಯನ್ನು ಡಾ.ಬಿ.ಆರ್ ಅಂಬೇಡ್ಕರ್ ಕೋನಸೀಮಾ ಜಿಲ್ಲೆ ಎಂದು ಮರುನಾಮಕರಣ ಮಾಡುವುದನ್ನು ವಿರೋಧಿಸಿ ನಿನ್ನೆ ಪ್ರತಿಭಟನೆ ನಡೆದಿದ್ದು, ಆನಂತರ ಅದು ಹಿಂಸಾಚಾರಕ್ಕೆ ತಿರುಗಿತ್ತು. ಇದೀಗ ಸರ್ಕಾರದ ಪ್ರಸ್ತಾವನೆಯನ್ನು ಬೆಂಬಲಿಸಿ ಹೆಚ್ಚಿನ ಗುಂಪುಗಳು ಪ್ರತಿಭಟನೆಗಳನ್ನು ಯೋಜಿಸುತ್ತಿರುವ ವರದಿಗಳ ಮಧ್ಯೆ ಪರಿಸ್ಥಿತಿ ಮತ್ತಷ್ಟು ಉಲ್ಬಣಗೊಳ್ಳುವುದನ್ನು ತಡೆಯಲು ವಿವಿಧ ಜಿಲ್ಲೆಗಳಿಂದ ಪೊಲೀಸ್ ಪಡೆಗಳನ್ನು ಕರೆಸಿದ್ದು, ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ. ಜಿಲ್ಲೆಯ ಮರುನಾಮಕರಣವನ್ನು ವಿರೋಧಿಸಿ ಕೋನಸೀಮಾ ಸಾಧನಾ ಸಮಿತಿ (ಕೆಎಸ್‌ಎಸ್) ಮಂಗಳವಾರ ಕರೆ ನೀಡಿದ್ದ ಪ್ರತಿಭಟನೆಯ ವೇಳೆ ಜಿಲ್ಲಾ ಕೇಂದ್ರ ಅಮಲಾಪುರಂನಲ್ಲಿ ಹಿಂಸಾಚಾರ ನಡೆದಿದೆ . ಪ್ರತಿಭಟನಾಕಾರರು ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿದ್ದು ವಾಹನಗಳಿಗೆ ಬೆಂಕಿ ಹಚ್ಚಿದರು. ರಾಜ್ಯ ಸಚಿವ ಪಿ.ವಿಶ್ವರೂಪ್ ಮತ್ತು ವಿಧಾನಪರಿಷತ್ ಸದಸ್ಯ ಸತೀಶ್ ಅವರ ಮನೆಗಳಿಗೂ ಬೆಂಕಿ ಹಚ್ಚಿದರು. ಹಿಂಸಾಚಾರದಲ್ಲಿ ಪೊಲೀಸರು ಸೇರಿದಂತೆ ಹತ್ತಾರು ಜನರು ಗಾಯಗೊಂಡಿದ್ದಾರೆ.
ಜಿಲ್ಲೆಯ ಮರುನಾಮಕರಣಕ್ಕೆ ಒಲವು ತೋರುವ ಗುಂಪುಗಳು ಪ್ರತಿ ಪ್ರತಿಭಟನೆಗಳನ್ನು ಯೋಜಿಸುತ್ತಿವೆ ಎಂಬ ವರದಿಗಳ ನಡುವೆ, ಭದ್ರತೆಯನ್ನು ಹೆಚ್ಚಿಸಲು ಹೆಚ್ಚುವರಿ ಪಡೆಗಳನ್ನು ಹಿಂಸಾಚಾರ ಪೀಡಿತ ಪ್ರದೇಶದಲ್ಲಿ ನಿಯೋಜಿಸಲಾಗಿದೆ. ಸಿಆರ್‌ಪಿಸಿಯ ಸೆಕ್ಷನ್ 144 ರ ಅಡಿಯಲ್ಲಿ ಪೊಲೀಸರು ನಿಷೇಧಾಜ್ಞೆಗಳನ್ನು ವಿಧಿಸಿದ್ದು ಸಭೆ ಮತ್ತು ರ್ಯಾಲಿಗಳನ್ನು ನಿಷೇಧಿಸಿದ್ದಾರೆ.
ನಗರಕ್ಕೆ ಬರುವ ಬಸ್ ಗಳನ್ನು ರದ್ದು ಮಾಡಲಾಗಿದೆ. ಯಾವುದೇ ರೀತಿಯ ಪ್ರತಿಭಟನೆಗಳು ನಡೆಯದಂತೆ ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ. ಹಿಂಸಾಚಾರ ಉಲ್ಬಣಗೊಳ್ಳದಂತೆ ತಡೆಯಲು ಮೊಬೈಲ್ ಸೇವೆಗಳನ್ನು ನಿರ್ಬಂಧಿಸಿದ್ದು, ಇನ್ನೂ ಪೂರ್ಣ ಪ್ರಮಾಣದಲ್ಲಿ ನಿರ್ಬಂಧ ಹಿಂತೆಗೆದಿಲ್ಲ.
ಪೊಲೀಸರು ಇದುವರೆಗೆ ಆರು ಪ್ರಕರಣಗಳನ್ನು ದಾಖಲಿಸಿಕೊಂಡು 46 ಮಂದಿಯನ್ನು ಬಂಧಿಸಿದ್ದಾರೆ ಎಂದು ಏಲೂರು ವ್ಯಾಪ್ತಿಯ ಪೊಲೀಸ್ ಉಪ ಮಹಾ ನಿರೀಕ್ಷಕ (ಡಿಐಜಿ) ಪಾಲ ರಾಜು ಸ್ಥಳೀಯ ಮಾಧ್ಯಮಗಳಿಗೆ ತಿಳಿಸಿದ್ದಾರೆ. “ನಾವು ನಿನ್ನೆಯ ಘಟನೆಗಳಲ್ಲಿ ಭಾಗಿಯಾಗಿರುವ ಅನೇಕ ವ್ಯಕ್ತಿಗಳನ್ನು ಸಿಸಿಟಿವಿ ಫೂಟೇಜ್ ಮತ್ತು ಮಾಧ್ಯಮ ಮತ್ತು ವಿಶೇಷ ಶಾಖೆಯ ವಿಡಿಯೊ ರೆಕಾರ್ಡಿಂಗ್ ಸಹಾಯದಿಂದ ಗುರುತಿಸಿದ್ದೇವೆ. ಅವರನ್ನು ಒಟ್ಟುಗೂಡಿಸುವ ಪ್ರಕ್ರಿಯೆಯು ನಡೆಯುತ್ತಿದೆ. ಇಂದು ಅದನ್ನು ಪೂರ್ಣಗೊಳಿಸಬಹುದು ಎಂದು ನಾವು ಭಾವಿಸುತ್ತೇವೆ” ಎಂದಿದ್ದಾರೆ ಅವರು.
ಪರಿಸ್ಥಿತಿ ಈಗ ಶಾಂತವಾಗಿದೆ. ಆದರೆ ಅಹಿತಕರ ಘಟನೆಗಳನ್ನು ತಡೆಗಟ್ಟಲು ಮತ್ತು ಶಾಂತಿ ಕಾಪಾಡಲು ಪೊಲೀಸರು ಜಾಗರೂಕರಾಗಿದ್ದಾರೆ. ಪೊಲೀಸರು ವಿವಿಧ ಗುಂಪುಗಳ ಮುಖಂಡರೊಂದಿಗೆ ಮಾತನಾಡಿ ಶಾಂತಿ ಕಾಪಾಡಲು ಸಹಕರಿಸುವಂತೆ ಕೋರಿದರು. ಮಾತುಕತೆ ಮೂಲಕ ಸೌಹಾರ್ದಯುತವಾಗಿ ಸಮಸ್ಯೆಯನ್ನು ಬಗೆಹರಿಸಿಕೊಳ್ಳುವಂತೆ ಗುಂಪುಗಳನ್ನು ಒತ್ತಾಯಿಸಲಾಯಿತು. ಪೋಷಕರು ತಮ್ಮ ಮಕ್ಕಳನ್ನು ಮನೆಯೊಳಗೆ ಇರುವಂತೆ ಮತ್ತು ಕಾನೂನು ಪಾಲಿಸುವಂತೆ ಸಲಹೆ ನೀಡಬೇಕು ಎಂದು ಅವರು ಮನವಿ ಮಾಡಿದ್ದಾರೆ. ಮಂಗಳವಾರ ಕೆಎಸ್‌ಎಸ್ ಕರೆದಿದ್ದ ಪ್ರತಿಭಟನೆಯಲ್ಲಿ ನೂರಾರು ಯುವಕರು ಪಾಲ್ಗೊಂಡಿದ್ದರು. ನಿಯೋಗಕ್ಕೆ ಜಿಲ್ಲಾಧಿಕಾರಿಯನ್ನು ಭೇಟಿ ಮಾಡಿ ಮನವಿ ಸಲ್ಲಿಸಲು ಪೊಲೀಸರು ಅವಕಾಶ ನೀಡಿದರೆ, ಹೆಚ್ಚಿನ ಸಂಖ್ಯೆಯ ಪ್ರತಿಭಟನಾಕಾರರು ಬೀದಿಗಿಳಿದು ಹಿಂಸಾಚಾರ ನಡೆಸಿದರು.
ಕೋನಸೀಮಾ ಜಿಲ್ಲೆಯನ್ನು ಪೂರ್ವ ಗೋದಾವರಿಯ ಭಾಗವಾಗಿದ್ದು, ಅಮಾಲಪುರಂನಲ್ಲಿ ಕೇಂದ್ರ ಕಚೇರಿಯನ್ನು ಹೊಂದಿದೆ. ಏಪ್ರಿಲ್ 4 ರಂದು ರಚಿಸಲಾದ 13 ಜಿಲ್ಲೆಗಳಲ್ಲಿ ಇದು ಒಂದಾಗಿದೆ. ಕೋನಸೀಮಾ ಜಿಲ್ಲೆಗೆ ಡಾ.ಅಂಬೇಡ್ಕರ್ ಕೋನಸೀಮಾ ಜಿಲ್ಲೆ ಎಂದು ಮರುನಾಮಕರಣ ಮಾಡುವ ಪ್ರಸ್ತಾವನೆಗೆ ಆಕ್ಷೇಪಣೆ ಮತ್ತು ಸಲಹೆಗಳನ್ನು ಆಹ್ವಾನಿಸಿ ವಿವಿಧ ವಿಭಾಗಗಳ ಬೇಡಿಕೆಗಳ ನಂತರ ರಾಜ್ಯ ಸರ್ಕಾರ ಮೇ 18 ರಂದು ಅಧಿಸೂಚನೆಯನ್ನು ಹೊರಡಿಸಿತ್ತು.
ದೇಶದ ಇತರ ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ ಪ್ರಮುಖ ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ
Published On - 4:24 pm, Wed, 25 May 22