ಹೆಂಡತಿಗೆ ಮಾಡಿದ ಅವಮಾನಕ್ಕೆ ಸೇಡು ತೀರಿಸಿಕೊಳ್ಳಲು ಜ್ಯುವೆಲರಿ ಶಾಪ್​ನಿಂದ 7 ಕೋಟಿ ರೂ. ಚಿನ್ನ ಕದ್ದ ಗಂಡ!

ವ್ಯಕ್ತಿಯೊಬ್ಬರು ತನ್ನ ಹೆಂಡತಿಗೆ ಆಭರಣದ ಅಂಗಡಿ ಮಾಲೀಕರು ಮಾಡಿದ ಅವಮಾನಕ್ಕೆ ಸೇಡು ತೀರಿಸಿಕೊಳ್ಳಲು ನಿರ್ಧರಿಸಿದ್ದರು. ಹೀಗಾಗಿ, ಆ ಜ್ಯುವೆಲರಿ ಶಾಪ್ ಮಾಲೀಕನ ಆಭರಣದ ಅಂಗಡಿಯಿಂದ 7 ಕೋಟಿ ರೂ. ಮೌಲ್ಯದ ಚಿನ್ನ ಕದ್ದಿದ್ದಾರೆ. ಈ ವಿಚಿತ್ರವಾದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಅವರ ಉದ್ದೇಶ ತನ್ನ ಮಾಲೀಕನಿಗೆ ಕಿರುಕುಳ ನೀಡುವುದು ಮಾತ್ರವಾಗಿತ್ತು. ಆಂಧ್ರಪ್ರದೇಶದ ಎಲೂರಿನಲ್ಲಿ ಈ ಘಟನೆ ನಡೆದಿದೆ.

ಹೆಂಡತಿಗೆ ಮಾಡಿದ ಅವಮಾನಕ್ಕೆ ಸೇಡು ತೀರಿಸಿಕೊಳ್ಳಲು ಜ್ಯುವೆಲರಿ ಶಾಪ್​ನಿಂದ 7 ಕೋಟಿ ರೂ. ಚಿನ್ನ ಕದ್ದ ಗಂಡ!
Gold

Updated on: Feb 01, 2026 | 10:18 PM

ಎಲೂರು, ಫೆಬ್ರವರಿ 1: ಆಂಧ್ರಪ್ರದೇಶದ ಎಲೂರಿನಲ್ಲಿ ತನ್ನ ಮಾಲೀಕ ತನ್ನ ಹೆಂಡತಿಗೆ ಮಾಡಿದ ಅವಮಾನದಿಂದ ಬೇಸತ್ತು ಉಮಾಮಹೇಶ್ ಎಂಬ ವ್ಯಕ್ತಿ ಸೇಡು ತೀರಿಸಿಕೊಳ್ಳಲು 7 ಕೋಟಿ ರೂ. ಮೌಲ್ಯದ ಚಿನ್ನವನ್ನು (Gold Theft) ಕದ್ದಿದ್ದಾರೆ. ಕನಕದುರ್ಗಾ ಫೈನಾನ್ಸ್ ಕಂಪನಿಯಲ್ಲಿ ನಡೆದ ಈ ಬೃಹತ್ ಕಳ್ಳತನದ ಹಿಂದಿನ ಉದ್ದೇಶ ಸೇಡು. ವೃತ್ತಿಯಲ್ಲಿ ಕಳ್ಳನಲ್ಲದಿದ್ದರೂ ಮಹೇಶ್ ತನ್ನ ಮಾಲೀಕನಿಗೆ ತೊಂದರೆಯನ್ನುಂಟುಮಾಡಲು ಈ ನಿರ್ಧಾರ ಮಾಡಿದರು.

ಅದಾಗಿ 4 ತಿಂಗಳ ನಂತರ ಪೊಲೀಸರು ಆತನನ್ನು ಬಂಧಿಸಿ, ಚಿನ್ನವನ್ನು ವಶಪಡಿಸಿಕೊಂಡರು. ಆಂಧ್ರಪ್ರದೇಶದ ಎಲೂರಿನ ಚಿಂತಲಪುಡಿಯಲ್ಲಿ ಈ ಘಟನೆ ನಡೆದಿದೆ. ಸೆಪ್ಟೆಂಬರ್ 9, 2025ರಂದು ಚಿಂತಲಪುಡಿಯ ಕನಕ ದುರ್ಗಾ ಫೈನಾನ್ಸ್ ಕಂಪನಿಯಲ್ಲಿ ಒಂದು ದೊಡ್ಡ ಕಳ್ಳತನ ನಡೆದಿತ್ತು. ಆ ಕಂಪನಿಯು ತನ್ನ ಗ್ರಾಹಕರಿಗೆ ಚಿನ್ನದ ಆಭರಣಗಳ ಅಡಮಾನದ ಮೇಲೆ ಸಾಲ ನೀಡುತ್ತದೆ. ವಡಲ್ಮುಡಿ ಉದ್ಯೋಗಿ ಉಮಾ ಮಹೇಶ್ ಒತ್ತೆ ಇಟ್ಟ ಚಿನ್ನವನ್ನು ಲೆಕ್ಕಪರಿಶೋಧಿಸುತ್ತಿದ್ದಾಗ ತನ್ನೊಂದಿಗೆ ತಂದಿದ್ದ ಚೀಲದಲ್ಲಿ ನಾಲ್ಕೂವರೆ ಕೆಜಿ ಚಿನ್ನವನ್ನು ಕದ್ದು ಪರಾರಿಯಾಗಿದ್ದರು. ಕಂಪನಿಯ ವ್ಯವಸ್ಥಾಪಕರು ಆ ರಾತ್ರಿ ಪೊಲೀಸ್ ದೂರು ದಾಖಲಿಸಿದರು. ಚಿಂತಲಪುಡಿ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಪ್ರಾರಂಭಿಸಿದರು. ಆ ಸಮಯದಲ್ಲಿ ಶೋಧ ನಡೆಸಿದರೂ, ಆರೋಪಿಗಳು ಪತ್ತೆಯಾಗಲಿಲ್ಲ.

ಇದನ್ನೂ ಓದಿ: 400 ಕೋಟಿ ರೂ. ದರೋಡೆ ಪ್ರಕರಣದ ಪ್ರಮುಖ ಆರೋಪಿ ಕಿಶೋರ್ ಸಾಳ್ವೆ ಬಂಧನ

ಆದರೆ, ಕೊನೆಗೂ ಕಳ್ಳತನದ ನಂತರ ತಲೆಮರೆಸಿಕೊಂಡಿದ್ದ ಉಮಾಮಹೇಶ್‌ನನ್ನು ಪೊಲೀಸರು ಬಂಧಿಸಿದ್ದಾರೆ. ಕದ್ದ ಚಿನ್ನದ ಒಟ್ಟು ಮೌಲ್ಯ ಸುಮಾರು 7 ಕೋಟಿ ರೂ. ಎಂದು ಅಂದಾಜಿಸಲಾಗಿದೆ. ಆದರೆ, ಮಹೇಶ್ ತನ್ನ ವೈಯಕ್ತಿಕ ಬಳಕೆಗಾಗಿ ಕೇವಲ 6 ಗ್ರಾಂ ಉಂಗುರವನ್ನು ಮಾತ್ರ ಬಳಸಿದ್ದರು. ಪೊಲೀಸರು ಆರೋಪಿಯಿಂದ ಉಳಿದ ಚಿನ್ನವನ್ನು ವಶಪಡಿಸಿಕೊಂಡರು. ಈ ಕಳ್ಳತನದ ಹಿಂದಿನ ಕಾರಣದ ಬಗ್ಗೆ ಪೊಲೀಸರು ಮಹೇಶ್‌ನನ್ನು ಪ್ರಶ್ನಿಸಿದಾಗ ಅದು ತುಂಬಾ ವಿಚಿತ್ರವಾಗಿತ್ತು.

ಮಹೇಶ್ ಅವರ ಸ್ವಂತ ಜಿಲ್ಲೆ ನೆಲ್ಲೂರು. ಅವರ ಪತ್ನಿ ಕೂಡ ಅದೇ ಕಂಪನಿಯಲ್ಲಿ ಕೆಲಸ ಮಾಡುತ್ತಾರೆ. ಕಂಪನಿ ಮಾಲೀಕರು ಆತನ ಪತ್ನಿಯೊಂದಿಗೆ ಅಸಭ್ಯವಾಗಿ ಮಾತನಾಡಿದಾಗ ಮಹೇಶ್ ಕೋಪಗೊಂಡು ಕಳ್ಳತನಕ್ಕೆ ಮುಂದಾದರು. ತನ್ನ ಹೆಂಡತಿಗೆ ಮಾಡಿದ ಅವಮಾನದಿಂದ ಅವರು ಒತ್ತಡಕ್ಕೊಳಗಾಗಿದ್ದರು. ಹೀಗಾಗಿ, ಅವರು ಕಂಪನಿಗೆ ನಷ್ಟ ಉಂಟುಮಾಡಿ ತೊಂದರೆಯಲ್ಲಿ ಸಿಲುಕಿಸಲು 4 ಕೆಜಿ ಚಿನ್ನ ಕದ್ದಿದ್ದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ