ಅದೇ ಶುಕ್ರವಾರ, ಅದೇ ಕೋರಮಂಡಲ್ ಎಕ್ಸ್​ಪ್ರೆಸ್ ಮತ್ತು ಒಡಿಶಾ; ಮರುಕಳಿಸಿತು 14 ವರ್ಷಗಳ ಹಿಂದಿನ ಘಟನೆ

2009ರ ಫೆಬ್ರವರಿ 13ರಂದು ಕೂಡ ಶುಕ್ರವಾರ ಸಂಜೆ ಕೋರಮಂಡಲ್ ಎಕ್ಸ್​ಪ್ರೆಸ್ ರೈಲು ಒಡಿಶಾದ ಜಾಜ್‌ಪುರ ರಸ್ತೆ ರೈಲು ನಿಲ್ದಾಣದ ಮೂಲಕ ಅತಿವೇಗದಲ್ಲಿ ಹಾದು ಹೋಗುತ್ತಿದ್ದಾಗ ಅಪಘಾತ ಸಂಭವಿಸಿತ್ತು!

ಅದೇ ಶುಕ್ರವಾರ, ಅದೇ ಕೋರಮಂಡಲ್ ಎಕ್ಸ್​ಪ್ರೆಸ್ ಮತ್ತು ಒಡಿಶಾ; ಮರುಕಳಿಸಿತು 14 ವರ್ಷಗಳ ಹಿಂದಿನ ಘಟನೆ
ಬಾಲಸೋರ್ ರೈಲು ಅಪಘಾತImage Credit source: PTI
Follow us
|

Updated on: Jun 03, 2023 | 2:52 PM

ಭುವನೇಶ್ವರ: ಒಡಿಶಾದ ಬಾಲಸೋರ್ ಬಳಿ ಸಂಭವಿಸಿದ ಭೀಕರ ರೈಲು ಅಪಘಾತ (Odisha Train Accident) ದೇಶದಾದ್ಯಂತ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಘಟನೆಯಲ್ಲಿ ಸುಮಾರು 250ಕ್ಕೂ ಹೆಚ್ಚು ಪ್ರಯಾಣಿಕರು ಮೃತಪಟ್ಟಿದ್ದು, 900ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಇದೇ ವೇಳೆ, 14 ವರ್ಷಗಳ ಹಿಂದೆಯೂ ಒಡಿಶಾದಲ್ಲಿ ಶುಕ್ರವಾರದಂದೇ, ಸಂಜೆ ವೇಳೆಯೇ ಇದೇ ಕೋರಮಂಡಲ್ ಎಕ್ಸ್​ಪ್ರೆಸ್ ಅಪಘಾತಕ್ಕೀಡಾಗಿದ್ದ ವಿಚಾರ ಮುನ್ನೆಲೆಗೆ ಬಂದಿದೆ. ಅಂದು ಸಂಭವಿಸಿದ್ದ ಅಪಘಾತ ಈಗಿನದ್ದರಷ್ಟು ಭೀಕರವಾಗಿಲ್ಲದಿದ್ದರೂ ಒಡಿಶಾ ಹಾಗೂ ಕೋರಮಂಡಲ್ ಎಕ್ಸ್​ಪ್ರೆಸ್ ಪಾಲಿಗೆ ಅದೊಂದು ಕರಾಳ ಶುಕ್ರವಾರ ಆಗಿದ್ದಂತೂ ನಿಜ.

ಹಳಿತಪ್ಪಿತ್ತು ಕೋರಮಂಡಲ್ ಎಕ್ಸ್‌ಪ್ರೆಸ್‌

2009ರ ಫೆಬ್ರವರಿ 13ರಂದು ಶುಕ್ರವಾರ ಸಂಜೆ ಕೋರಮಂಡಲ್ ಎಕ್ಸ್​ಪ್ರೆಸ್ ರೈಲು ಒಡಿಶಾದ ಜಾಜ್‌ಪುರ ರಸ್ತೆ ರೈಲು ನಿಲ್ದಾಣದ ಮೂಲಕ ಅತಿವೇಗದಲ್ಲಿ ಹಾದು ಹೋಗುತ್ತಿದ್ದಾಗ ಅಪಘಾತ ಸಂಭವಿಸಿತ್ತು. ಹೌರಾದಿಂದ ಚೆನ್ನೈಗೆ ತೆರಳುತ್ತಿದ್ದ ಕೋರಮಂಡಲ್ ಎಕ್ಸ್‌ಪ್ರೆಸ್‌ನ 13 ಬೋಗಿಗಳು ಜಾಜ್‌ಪುರ್ ಬಳಿ ಹಳಿಗಳನ್ನು ಬದಲಾಯಿಸುವಾಗ ಹಳಿತಪ್ಪಿತ್ತು. ಅಪಘಾತವು ಸಂಜೆ 7:30 ರಿಂದ 7:40 ರ ನಡುವೆ ಸಂಭವಿಸಿತ್ತು. ದುರ್ಘಟನೆಯಲ್ಲಿ 16 ಮಂದಿ ಮೃತಪಟ್ಟಿದ್ದರು. ಹಳಿತಪ್ಪಿದ 13 ಬೋಗಿಗಳಲ್ಲಿ 11 ಸ್ಲೀಪರ್ ಮತ್ತು ಎರಡು ಸಾಮಾನ್ಯ ದರ್ಜೆಯ ಬೋಗಿಗಳಾಗಿದ್ದವು.

ಇದನ್ನೂ ಓದಿ: Odisha Train Accident: ಒಡಿಶಾ ರೈಲು ದುರಂತ; ದೇವರಂತೆಯೇ ಬಂದು ಸುಮಾರು 300 ಜನರ ರಕ್ಷಣೆಗೆ ಕಾರಣನಾದ ಸ್ಥಳೀಯ ವ್ಯಕ್ತಿ

ಈ ಮಧ್ಯೆ, ಬಾಲಸೋರ್​​ನಲ್ಲಿ ರೈಲು ಅಪಘಾತದಲ್ಲಿ ಅವಶೇಷಗಳಡಿ ಸಿಲುಕಿದ್ದವರ ರಕ್ಷಣಾ ಕಾರ್ಯಾಚರಣೆ ಪೂರ್ಣಗೊಂಡಿದೆ ಎಂದು ರೈಲ್ವೆ ಇಲಾಖೆ ತಿಳಿಸಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ