AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಒಡಿಶಾ: ರೈಲು ಅಪಘಾತ ಸಂಭವಿಸಿದ ಸ್ಥಳಕ್ಕೆ ಭೇಟಿ ನೀಡಲಿದ್ದಾರೆ ಪ್ರಧಾನಿ ಮೋದಿ

ಶುಕ್ರವಾರ ರಾತ್ರಿ ಮೂರು ರೈಲುಗಳ ನಡುವೆ ಸಂಭವಿಸಿದ ಅಪಘಾತದಲ್ಲಿ ಗಾಯಗೊಂಡವರನ್ನು ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಮತ್ತು ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಭೇಟಿ ಮಾಡಿದ್ದಾರೆ.

ಒಡಿಶಾ: ರೈಲು ಅಪಘಾತ ಸಂಭವಿಸಿದ ಸ್ಥಳಕ್ಕೆ ಭೇಟಿ ನೀಡಲಿದ್ದಾರೆ ಪ್ರಧಾನಿ ಮೋದಿ
ನರೇಂದ್ರ ಮೋದಿ
ರಶ್ಮಿ ಕಲ್ಲಕಟ್ಟ
|

Updated on: Jun 03, 2023 | 1:41 PM

Share

ದೆಹಲಿ: ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಇಂದು (ಶನಿವಾರ) ಒಡಿಶಾದ ಬಾಲಸೋರ್‌ನಲ್ಲಿ ರೈಲು ಅಪಘಾತ  (Odisha train accident) ಸಂಭವಿಸಿದ ಸ್ಥಳಕ್ಕೆ ಭೇಟಿ ನೀಡಲಿದ್ದಾರೆ. ಇದಾದ ನಂತರ ಕಟಕ್‌ನ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವ ಜನರನ್ನು ಭೇಟಿ ಮಾಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಶುಕ್ರವಾರ ರಾತ್ರಿ ಒಡಿಶಾದಲ್ಲಿ ರೈಲು ಅಪಘಾತದಲ್ಲಿ (Coromandel Express accident)261 ಜನರು ಸಾವನ್ನಪ್ಪಿದ ನಂತರ ಮೋದಿ ರೈಲ್ವೆ ಅಧಿಕಾರಿಗಳೊಂದಿಗೆ ಉನ್ನತ ಮಟ್ಟದ ಸಭೆ ಕರೆದಿದ್ದಾರೆ. ಈ ಅಪಘಾತದಲ್ಲಿ 900ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.

ಸಂಜೆ 7 ಗಂಟೆಗೆ ಬಾಲಸೋರ್‌ನಲ್ಲಿ ರೈಲಿನ ಒಂದು ಬೋಗಿ ಹಳಿತಪ್ಪಿದ ನಂತರ ಮೂರು ರೈಲುಗಳು ಡಿಕ್ಕಿ ಹೊಡೆದವು.ಅಪಘಾತದಲ್ಲಿ ಬೆಂಗಳೂರು-ಹೌರಾ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್, ಶಾಲಿಮಾರ್-ಚೆನ್ನೈ ಸೆಂಟ್ರಲ್ ಕೋರಮಂಡಲ್ ಎಕ್ಸ್‌ಪ್ರೆಸ್ ಮತ್ತು ಗೂಡ್ಸ್ ರೈಲು ಸೇರಿವೆ.

ರಕ್ಷಣಾ ಕಾರ್ಯಾಚರಣೆ ಮುಂದುವರಿದಿದ್ದು, ಸಮೀಪದ ಜಿಲ್ಲೆಗಳ ಎಲ್ಲಾ ಆಸ್ಪತ್ರೆಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ.

ಮೂರು ಎನ್‌ಡಿಆರ್‌ಎಫ್ ಘಟಕಗಳು, 4 ಒಡಿಶಾ ವಿಪತ್ತು ಕ್ಷಿಪ್ರ ಕಾರ್ಯಾಚರಣೆ ಪಡೆಗಳು, 15 ಕ್ಕೂ ಹೆಚ್ಚು ಅಗ್ನಿಶಾಮಕ ರಕ್ಷಣಾ ತಂಡಗಳು, 30 ವೈದ್ಯರು, 200 ಪೊಲೀಸ್ ಸಿಬ್ಬಂದಿ ಮತ್ತು 60 ಆಂಬುಲೆನ್ಸ್‌ಗಳನ್ನು ಸ್ಥಳಕ್ಕೆ ಸಜ್ಜುಗೊಳಿಸಲಾಗಿದೆ ಎಂದು ಒಡಿಶಾ ಮುಖ್ಯ ಕಾರ್ಯದರ್ಶಿ ಪ್ರದೀಪ್ ಎನ್‌ಡಿಟಿವಿಗೆ ತಿಳಿಸಿದ್ದಾರೆ.

ಗಾಯಗೊಂಡವರನ್ನು ಭೇಟಿಯಾದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್, ಧರ್ಮೇಂದ್ರ ಪ್ರಧಾನ್

ಶುಕ್ರವಾರ ರಾತ್ರಿ ಮೂರು ರೈಲುಗಳ ನಡುವೆ ಸಂಭವಿಸಿದ ಅಪಘಾತದಲ್ಲಿ ಗಾಯಗೊಂಡವರನ್ನು ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಮತ್ತು ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಭೇಟಿ ಮಾಡಿದ್ದಾರೆ. ಕೇಂದ್ರ ಸಚಿವರು ಒಡಿಶಾದ ಬಾಲಸೋರ್ ಜಿಲ್ಲೆಯ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳನ್ನು ಭೇಟಿ ಮಾಡಿ ಅವರ ಆರೋಗ್ಯವನ್ನು ವಿಚಾರಿಸಿದರು.

ರೈಲು ಅಪಘಾತದಲ್ಲಿ ಮೃತಪಟ್ಟವರಿಗೆ ಪರಿಹಾರ ಘೋಷಿಸಿದ ತಮಿಳುನಾಡು

ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಅವರು ರೈಲು ಅಪಘಾತದಲ್ಲಿ ಸಾವಿಗೀಡಾದ ರಾಜ್ಯದ ಜನರ ಸಂಬಂಧಿಕರಿಗೆ 5 ಲಕ್ಷ ರೂಪಾಯಿ ಮತ್ತು ಬಾಲಸೋರ್ ರೈಲು ಅಪಘಾತದಲ್ಲಿ ಗಾಯಗೊಂಡವರಿಗೆ ತಲಾ 1 ಲಕ್ಷ ರೂಪಾಯಿಗಳನ್ನು ಘೋಷಿಸಿದ್ದಾರೆ. ರಕ್ಷಣಾ ಮತ್ತು ಪರಿಹಾರ ಕಾರ್ಯಗಳನ್ನು ಕೈಗೊಳ್ಳಲು ಹೆಚ್ಚುವರಿ ಅಧಿಕಾರಿಗಳನ್ನು ನೇಮಿಸುವುದಾಗಿ ಅವರು ಹೇಳಿದ್ದಾರೆ.

ಇದನ್ನೂ ಓದಿ: Odisha Train Accident: ಒಡಿಶಾ ರೈಲು ದುರಂತ; ದೇವರಂತೆಯೇ ಬಂದು ಸುಮಾರು 300 ಜನರ ರಕ್ಷಣೆಗೆ ಕಾರಣನಾದ ಸ್ಥಳೀಯ ವ್ಯಕ್ತಿ

ಅಪಘಾತ ಸ್ಥಳಕ್ಕೆ ಭೇಟಿ ನೀಡಿದ ಮಮತಾ ಬ್ಯಾನರ್ಜಿ

ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಪ್ರಸ್ತುತ ಒಡಿಶಾದಲ್ಲಿ ರೈಲು ಅಪಘಾತದ ಸಂಭವಿಸಿದ  ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಮಮತಾ ಶನಿವಾರ ಬೆಳಗ್ಗೆ ಹೌರಾದ ದುಮುರ್ಜಾಲಾದಿಂದ ಹೆಲಿಕಾಪ್ಟರ್ ಮೂಲಕ ಪ್ರಯಾಣಿಸಿದ್ದಾರೆ. ಶುಕ್ರವಾರ ರಾತ್ರಿ ಟ್ವೀಟ್ ಮಾಡಿದ ಮಮತಾ, ಶುಕ್ರವಾರ ಸಂಜೆ, ಪಶ್ಚಿಮ ಬಂಗಾಳದಿಂದ ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಶಾಲಿಮಾರ್-ಕೋರಮಂಡಲ ಎಕ್ಸ್‌ಪ್ರೆಸ್ ಬಾಲೇಶ್ವರದ ಬಳಿ ಗೂಡ್ಸ್ ರೈಲಿಗೆ ಡಿಕ್ಕಿ ಹೊಡೆದಿದೆ. ಅನೇಕ ಮಂದಿಗೆ ತೀವ್ರ ಗಾಯಗಳಾಗಿವೆ. ನಮ್ಮ ರಾಜ್ಯದ ಪ್ರಯಾಣಿಕರೊಂದಿಗೆ, ಆಗ್ನೇಯ ರೈಲ್ವೆ ಮತ್ತು ಒಡಿಶಾ ಸರ್ಕಾರದೊಂದಿಗೆ ನಾವು ಸಂಪರ್ಕದಲ್ಲಿದ್ದೇವೆ.  ತುರ್ತು ಸಂದರ್ಭದಲ್ಲಿ ನಿಯಂತ್ರಣ ಕೊಠಡಿಯನ್ನು ಸಹ ತೆರೆಯಲಾಗಿದೆ ಎಂದಿದ್ದಾರೆ.

ಪರಿಹಾರವಾಗಿ ರೈಲ್ವೆ 10 ಲಕ್ಷ ರೂ ನೀಡುತ್ತಿದೆ. ನಾವು ನಮ್ಮ ರಾಜ್ಯದ ಜನರಿಗೆ ತಲಾ 5 ಲಕ್ಷ ರೂಪಾಯಿಗಳನ್ನು ನೀಡುತ್ತೇವೆ. ಕೆಲಸ ಪೂರ್ಣಗೊಳ್ಳುವವರೆಗೆ ರೈಲ್ವೆ ಮತ್ತು ಒಡಿಶಾ ಸರ್ಕಾರದೊಂದಿಗೆ ಸಹಕರಿಸುತ್ತೇವೆ ಎಂದು ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಹೇಳಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ