ಇಂಡಿಯಾ ಬಣಕ್ಕೆ ಹಿನ್ನಡೆ; ಪಂಜಾಬ್‌ನ ಎಲ್ಲಾ ಲೋಕಸಭಾ ಸ್ಥಾನಗಳಲ್ಲಿ ಆಪ್ ಏಕಾಂಗಿ ಸ್ಪರ್ಧೆ: ಕೇಜ್ರಿವಾಲ್
ಪಂಜಾಬ್‌ನಲ್ಲಿ ಆಮ್ ಆದ್ಮಿ ಪಕ್ಷ ಏಕಾಂಗಿಯಾಗಿ ಚುನಾವಣಾ ಕಣಕ್ಕಿಳಿಯಲಿದೆ. ಪಕ್ಷದ ಮುಖ್ಯಸ್ಥ ಅರವಿಂದ ಕೇಜ್ರಿವಾಲ್ ಪಂಜಾಬ್‌ನ ಎಲ್ಲಾ 13 ಲೋಕಸಭಾ ಸ್ಥಾನಗಳಿ ತಮ್ಮ ಪಕ್ಷವು ಅಭ್ಯರ್ಥಿಗಳನ್ನು ಘೋಷಿಸಲಿದೆ ಎಂದು ಹೇಳಿದ್ದಾರೆ. ಅಂದರೆ ರಾಜ್ಯದಲ್ಲಿ ಕಾಂಗ್ರೆಸ್‌ನೊಂದಿಗೆ ಯಾವುದೇ ಮೈತ್ರಿ ಇಲ್ಲ ಎಂಬುದನ್ನು ಇದು ಸೂಚಿಸುತ್ತದೆ
ದೆಹಲಿ ಫೆಬ್ರುವರಿ 10: ಪ್ರತಿಪಕ್ಷ ಇಂಡಿಯಾ ಬಣಕ್ಕೆ (INDIA bloc) ಮತ್ತೊಂದು ಹಿನ್ನಡೆಯಾಗಿದ್ದು, ಪಂಜಾಬ್‌ನ (Punjab) ಎಲ್ಲಾ 13 ಲೋಕಸಭಾ ಸ್ಥಾನಗಳಿಗೆ ತಮ್ಮ ಪಕ್ಷವು ಅಭ್ಯರ್ಥಿಗಳನ್ನು ಘೋಷಿಸಲಿದೆ ಎಂದು ಆಮ್ ಆದ್ಮಿ ಪಕ್ಷ (AAP) ಹೇಳಿದೆ. ಅಂದರೆ ರಾಜ್ಯದಲ್ಲಿ ಕಾಂಗ್ರೆಸ್‌ನೊಂದಿಗೆ ಯಾವುದೇ ಮೈತ್ರಿ ಇಲ್ಲ ಎಂಬುದನ್ನು ಇದು ಸೂಚಿಸುತ್ತದೆ. ಎಎಪಿ ರಾಜ್ಯದ ಎಲ್ಲಾ 13 ಮತ್ತು ಚಂಡೀಗಢದ 1 ಸ್ಥಾನಗಳಲ್ಲಿ ಸ್ಪರ್ಧಿಸಲಿದೆ ಎಂದು ಪಕ್ಷದ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ (Arvind kejriwal) ಶನಿವಾರ ಘೋಷಿಸಿದ್ದಾರೆ.
ದೆಹಲಿ ಮುಖ್ಯಮಂತ್ರಿಯ ಹೇಳಿಕೆಯು ವಿರೋಧ ಪಕ್ಷದ ಗುಂಪಿನಲ್ಲಿ ಗೊಂದಲವನ್ನು ಹೆಚ್ಚಿಸಲಿದೆ. ಈಗಾಗಲೇ ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಅವರ ಪಕ್ಷವು ಪಶ್ಚಿಮ ಬಂಗಾಳದಲ್ಲಿ ತನ್ನ ಪಕ್ಷವು ಏಕಾಂಗಿಯಾಗಿ ಸ್ಪರ್ಧಿಸಲಿದೆ ಎಂದು ಹೇಳಿದ್ದಾರೆ. ಇತ್ತ ಜನತಾ ದಳ (ಯುನೈಟೆಡ್) ಮುಖ್ಯಸ್ಥ ನಿತೀಶ್ ಕುಮಾರ್ ಕಳೆದ ತಿಂಗಳು ಬಿಜೆಪಿ ನೇತೃತ್ವದ ಎನ್‌ಡಿಎಗೆ ಬದಲಾದರು.
ಸಮಾಜವಾದಿ ಪಕ್ಷ ಮತ್ತು ಕಾಂಗ್ರೆಸ್ ನಡುವೆ ಒಪ್ಪಂದದ ಲಕ್ಷಣಗಳು ಕಂಡುಬಂದಿರುವ ಉತ್ತರ ಪ್ರದೇಶದಲ್ಲಿ ಪರಿಸ್ಥಿತಿ ಅಸ್ಪಷ್ಟವಾಗಿದೆ. ಈ ಹೊತ್ತಲ್ಲೇ ಇಂಡಿಯಾ ಬಣದಲ್ಲಿದ್ದ ಜಯಂತ್ ಚೌಧರಿ ನೇತೃತ್ವದ ರಾಷ್ಟ್ರೀಯ ಲೋಕದಳವು ಎನ್‌ಡಿಎ ಜೊತೆ ಕೈಜೋಡಿಸುವ ಸಾಧ್ಯತೆ ದಟ್ಟವಾಗಿದೆ. ಜಯಂತ್ ಚೌಧರಿ ಅವರ ತಾತ ಮಾಜಿ ಪ್ರಧಾನಿ ಚೌಧರಿ ಚರಣ್ ಸಿಂಗ್ ಅವರಿಗೆ ಮರಣೋತ್ತರವಾಗಿ ಭಾರತ ರತ್ನ ನೀಡಲಾಗುವುದು ಎಂದು ಸರ್ಕಾರ ಘೋಷಿಸಿದಾಗಿನಿಂದಾಗಿನಿಂದ ಚೌಧರಿ, ಎನ್‌ಡಿಎ ಕಡೆ ವಾಲುವ ಎಲ್ಲ ಲಕ್ಷಣಗಳು ಕಾಣುತ್ತಿವೆ.
ಮುಂದಿನ 10-15 ದಿನಗಳಲ್ಲಿ ಪಕ್ಷವು ಈ ಸ್ಥಾನಗಳಿಗೆ ಅಭ್ಯರ್ಥಿಗಳನ್ನು ಘೋಷಿಸಲಿದೆ ಎಂದು ಎಎಪಿ ಸಂಚಾಲಕರು ತಿಳಿಸಿದ್ದಾರೆ. ಪಂಜಾಬ್ ಸರ್ಕಾರದ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯಡಿಯಲ್ಲಿ ಪಡಿತರವನ್ನು “ಬಾಗಿಲಿಗೆ ತಲುಪಿಸಲು” ಆಯೋಜಿಸಲಾದ ಸಭೆಯಲ್ಲಿ ಕೇಜ್ರಿವಾಲ್ ಅವರು ಈ ಘೋಷಣೆಯನ್ನು ಮಾಡಿದರು.
“ಎರಡು ವರ್ಷಗಳ ಹಿಂದೆ, ನೀವು ನಿಮ್ಮ ಆಶೀರ್ವಾದವನ್ನು ನೀಡಿದ್ದೀರಿ. 117 ಸೀಟುಗಳಲ್ಲಿ ನಮಗೆ 92 ಸೀಟು ಕೊಟ್ಟಿದ್ದೀರಿ. ನೀವು ಪಂಜಾಬ್‌ನಲ್ಲಿ ಇತಿಹಾಸ ಸೃಷ್ಟಿಸಿದ್ದೀರಿ. ಇಂದು ನಾನು ಮತ್ತೆ ಕೈಮುಗಿದು ನಿಮ್ಮ ಆಶೀರ್ವಾದವನ್ನು ಕೋರುತ್ತೇನೆ. ಎರಡು ತಿಂಗಳ ನಂತರ ಲೋಕಸಭೆ ಚುನಾವಣೆ ಇದೆ. ಪಂಜಾಬ್‌ನಲ್ಲಿ 13 (ಲೋಕಸಭಾ) ಸ್ಥಾನಗಳಿವೆ, ಒಂದು ಚಂಡೀಗಢ ಮತ್ತು 14 ಸ್ಥಾನಗಳಿವೆ ಎಂದು ಕೇಜ್ರಿವಾಲ್ ಹೇಳಿರುವುದಾಗಿ ಪಿಟಿಐ ಉಲ್ಲೇಖಿಸಿದೆ.
ಇದನ್ನೂ ಓದಿ: ವಿಚಾರಣೆಗಾಗಿ ಮೋದಿ 12 ಗಂಟೆ ಕುಳಿತಿದ್ದರು; ಅರವಿಂದ ಕೇಜ್ರಿವಾಲ್ ವಿರುದ್ಧ ಗುಡುಗಿದ ಮೀನಾಕ್ಷಿ ಲೇಖಿ
ಇಂಡಿಯಾ ಬಣದಲ್ಲಿ ಅದರ ಮಿತ್ರಪಕ್ಷಗಳಲ್ಲಿ ಒಂದಾಗಿರುವ ಕಾಂಗ್ರೆಸ್ ಸೇರಿದಂತೆ ವಿರೋಧ ಪಕ್ಷಗಳ ವಿರುದ್ಧ ಹರಿಹಾಯ್ದ ಕೇಜ್ರಿವಾಲ್, ಪಂಜಾಬ್‌ನಲ್ಲಿ ಅಧಿಕಾರ ವಹಿಸಿಕೊಂಡಾಗಿನಿಂದ ಕಾಂಗ್ರೆಸ್ ಅಥವಾ ಅಕಾಲಿದಳ ಏನಾದರೂ ಒಳ್ಳೆಯ ಕೆಲಸ ಮಾಡಿದೆಯೇ ಎಂದು ಜನರನ್ನು ಕೇಳಿದರು.ಇಂದು ನಾನು ನಿಮ್ಮನ್ನು ಕೇಳಿದರೆ 75 ವರ್ಷಗಳಲ್ಲಿ ಕಾಂಗ್ರೆಸ್ ಇಷ್ಟು ವರ್ಷ ಆಡಳಿತ ನಡೆಸಿದೆ. ಕಾಂಗ್ರೆಸ್ ಮಾಡಿದ ಒಂದು ಒಳ್ಳೆಯ ಕೆಲಸ ಹೇಳಿ. ನಿಮಗೆ ಅದುನೆನಪಿರುವುದಿಲ್ಲ. ಅಕಾಲಿದಳ ಇಷ್ಟು ವರ್ಷ ಆಡಳಿತ ನಡೆಸಿದೆ ಅಂತ ಕೇಳಿದರೆ ಅಕಾಲಿದಳ ಒಂದು ಒಳ್ಳೆ ಕೆಲಸ ಮಾಡಿದೆಯಾ ಹೇಳಿ. ನಿಮಗೆ ಅದು ನೆನಪಿರುವುದಿಲ್ಲ ಎಂದು ಕೇಜ್ರಿವಾಲ್ ವಾಗ್ದಾಳಿ ಮಾಡಿದ್ದಾರೆ.
ಭಗವಂತ್ ಮಾನ್ ಸರ್ಕಾರವನ್ನು ಶ್ಲಾಘಿಸಿದ ದೆಹಲಿ ಮುಖ್ಯಮಂತ್ರಿ, ಕಳೆದ ಎರಡು ವರ್ಷಗಳಲ್ಲಿ ಅದು “ಬಹಳಷ್ಟು ಕೆಲಸ” ಮಾಡಿದೆ ಎಂದು ಹೇಳಿದರು.
ಮೊನ್ನೆ ಶುಕ್ರವಾರ, ಕೇಜ್ರಿವಾಲ್ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ವಿರುದ್ಧ ಗುಡುಗಿದ್ದು ವಿರೋಧ ಪಕ್ಷಗಳ ನೇತೃತ್ವದ ರಾಜ್ಯ ಸರ್ಕಾರಗಳ ವಿರುದ್ಧ ಯುದ್ಧವನ್ನು ನಡೆಸುತ್ತಿದೆ ಎಂದು ಆರೋಪಿಸಿದರು. ದುರಹಂಕಾರದ ವಿರುದ್ಧ ಎಚ್ಚರಿಕೆಯನ್ನೂ ಅವರು ನೀಡಿದರು. ಮುಖ್ಯಮಂತ್ರಿ ಪಿಣರಾಯಿ ವಿಜಯನ್ ನೇತೃತ್ವದ ಕೇರಳದ ಎಡ ಪ್ರಜಾಸತ್ತಾತ್ಮಕ ರಂಗದ ನಾಯಕರು ಮತ್ತು ಶಾಸಕರು ದೆಹಲಿಯ ಜಂತರ್ ಮಂತರ್‌ನಲ್ಲಿ ಕೇಂದ್ರ ಸರ್ಕಾರದ ವಿರುದ್ಧ ನಡೆಸಿದ ಪ್ರತಿಭಟನೆಯಲ್ಲಿ ದೆಹಲಿ ಮುಖ್ಯಮಂತ್ರಿ ಕೂಡಾ ಭಾಗವಹಿಸಿದ್ದಾರೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 4:14 pm, Sat, 10 February 24