ಆಂಧ್ರಪ್ರದೇಶದಲ್ಲೂ ‘ಡಿಎಸ್‌ಸಿ’ ಪರೀಕ್ಷೆ ಅಕ್ರಮದ ಕಾವು: ಶಿಕ್ಷಣ ಸಚಿವ ನಾರಾ ಲೋಕೇಶ್ ರಾಜೀನಾಮೆಗೆ ಜಗನ್ ಒತ್ತಾಯ

ಆಂಧ್ರಪ್ರದೇಶದ 'ಮೆಗಾ ಡಿಎಸ್‌ಸಿ-2025' ಶಿಕ್ಷಕರ ನೇಮಕಾತಿ ಪರೀಕ್ಷೆಯಲ್ಲಿ ಭಾರೀ ಅಕ್ರಮ ನಡೆದಿದೆ ಎಂಬ ಆರೋಪ ಕೇಳಿಬಂದಿದೆ. ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ಉದಾಹರಿಸಿ, ವೈಎಸ್‌ಆರ್‌ಸಿಪಿ ರಾಜ್ಯ ಶಿಕ್ಷಣ ಸಚಿವ ನಾರಾ ಲೋಕೇಶ್ ರಾಜೀನಾಮೆಗೆ ಒತ್ತಾಯಿಸಿದೆ. ಪಾರದರ್ಶಕತೆ ಕೊರತೆ ಆರೋಪಿಸಿ, ಹೈಕೋರ್ಟ್ ಉಸ್ತುವಾರಿಯಲ್ಲಿ ಸಿಬಿಐ ತನಿಖೆಗೆ ಹಾಗೂ ಜುಲೈ 28 ರಂದು ರಾಜ್ಯಾದ್ಯಂತ ಪ್ರತಿಭಟನೆಗೆ ಕರೆ ನೀಡಲಾಗಿದೆ. ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಆರೋಪಗಳನ್ನು ತಳ್ಳಿಹಾಕಿದ್ದಾರೆ.

ಆಂಧ್ರಪ್ರದೇಶದಲ್ಲೂ ‘ಡಿಎಸ್‌ಸಿ’ ಪರೀಕ್ಷೆ ಅಕ್ರಮದ ಕಾವು: ಶಿಕ್ಷಣ ಸಚಿವ ನಾರಾ ಲೋಕೇಶ್ ರಾಜೀನಾಮೆಗೆ ಜಗನ್  ಒತ್ತಾಯ
ಜಗನ್ ರೆಡ್ಡಿ

Updated on: Jul 26, 2026 | 2:19 PM

ಅಮರಾವತಿ, ಜುಲೈ 26: ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್(Dharmendra Pradhan) ಅವರು ನೀಟ್ ಅಕ್ರಮದ ಹೊಣೆ ಹೊತ್ತು ರಾಜೀನಾಮೆ ನೀಡಿದ ಬೆನ್ನಲ್ಲೇ, ಆಂಧ್ರಪ್ರದೇಶದಲ್ಲೂ ಶಿಕ್ಷಣ ಸಚಿವರ ರಾಜೀನಾಮೆಗೆ ಒತ್ತಾಯಿಸಿ ರಾಜಕೀಯ ಕಾವೇರಿದೆ. ‘ಮೆಗಾ ಡಿಎಸ್‌ಸಿ-2025’ (Mega DSC-2025) ಶಿಕ್ಷಕರ ನೇಮಕಾತಿ ಪರೀಕ್ಷೆಯಲ್ಲಿ ಭಾರೀ ಅಕ್ರಮ ನಡೆದಿದೆ ಎಂದು ಆರೋಪಿಸಿರುವ ವೈಎಸ್‌ಆರ್ ಕಾಂಗ್ರೆಸ್ ಪಕ್ಷ (YSRCP), ರಾಜ್ಯ ಶಿಕ್ಷಣ ಸಚಿವ ನಾರಾ ಲೋಕೇಶ್ ಅವರ ರಾಜೀನಾಮೆಗೆ ಪಟ್ಟು ಹಿಡಿದಿದೆ.

ಜಗನ್ ಮೋಹನ್ ರೆಡ್ಡಿ ಸರ್ಕಾರಕ್ಕೆ ಸವಾಲು
ಕೇಂದ್ರದ ಉದಾಹರಣೆಯನ್ನು ಉಲ್ಲೇಖಿಸಿ ಮಾತನಾಡಿರುವ ವೈಎಸ್‌ಆರ್‌ಸಿಪಿ ಅಧ್ಯಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ವೈ.ಎಸ್. ಜಗನ್ ಮೋಹನ್ ರೆಡ್ಡಿ, “ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಅವರು ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡುವ ಮೂಲಕ ಎನ್‌ಡಿಎ ಸರ್ಕಾರದಲ್ಲಿ ರಾಜಕೀಯ ಹೊಣೆಗಾರಿಕೆಗೆ ಹೊಸ ಮಾನದಂಡ ಸೃಷ್ಟಿಸಿದ್ದಾರೆ. ಹಾಗಿದ್ದಾಗ, 3.5 ಲಕ್ಷ ಅಭ್ಯರ್ಥಿಗಳ ಭವಿಷ್ಯದ ಜೊತೆ ಆಟವಾಡಿದ ಡಿಎಸ್‌ಸಿ ಅಕ್ರಮದ ಹೊಣೆ ಹೊತ್ತು ಆಂಧ್ರ ಶಿಕ್ಷಣ ಸಚಿವ ನಾರಾ ಲೋಕೇಶ್ ರಾಜೀನಾಮೆ ನೀಡುತ್ತಾರೆಯೇ? ಅಥವಾ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ತಮ್ಮ ಮಗನನ್ನು ರಕ್ಷಿಸುತ್ತಾರೆಯೇ?” ಎಂದು ಖಾರವಾಗಿ ಪ್ರಶ್ನಿಸಿದ್ದಾರೆ.

ವೈಎಸ್‌ಆರ್‌ಸಿಪಿ ಪ್ರಮುಖ ಆರೋಪಗಳು

ಪ್ರಶ್ನೆ ಪತ್ರಿಕೆ ಸಿದ್ಧಪಡಿಸುವುದು ಮತ್ತು ಪರೀಕ್ಷೆ ನಡೆಸುವುದು ಎರಡನ್ನೂ ಒಂದೇ ಖಾಸಗಿ ಸಂಸ್ಥೆಗೆ ನೀಡಲಾಗಿದೆ. ಅಲ್ಲದೆ, ರಹಸ್ಯ ಪತ್ರಿಕೆ ಅಪ್‌ಲೋಡ್ ಮಾಡುವ ಹೊರಗುತ್ತಿಗೆ ಸಿಬ್ಬಂದಿ ಮತ್ತು ಅವರ ಆಪ್ತರೇ ಪರೀಕ್ಷೆಯಲ್ಲಿ ಉನ್ನತ ರ‍್ಯಾಂಕ್ ಪಡೆದಿದ್ದಾರೆ. ಪರೀಕ್ಷಾ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಕಾಯ್ದುಕೊಂಡಿಲ್ಲ. ಹೀಗಾಗಿ ಹೈಕೋರ್ಟ್ ಉಸ್ತುವಾರಿಯಲ್ಲಿ ಸಿಬಿಐ (CBI) ತನಿಖೆ ನಡೆಯಬೇಕು ಎಂದು ಒತ್ತಾಯಿಸಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮನವಿ ಸಲ್ಲಿಸಲಾಗಿದೆ.

ಮತ್ತಷ್ಟು ಓದಿ: ನೀಟ್ ಪತ್ರಿಕೆ ಸೋರಿಕೆ : ಧರ್ಮೇಂದ್ರ ಪ್ರಧಾನ್ ರಾಜೀನಾಮೆ, ದೇಶ ಮತ್ತು ವಿದ್ಯಾರ್ಥಿಗಳ ಹಿತಾಸಕ್ತಿಯೇ ನಮಗೆ ಮುಖ್ಯ ಎಂದ ಅಮಿತ್ ಶಾ

ಲೋಕೇಶ್ ಅವರ ರಾಜೀನಾಮೆ, ಸಿಬಿಐ ತನಿಖೆ ಹಾಗೂ ನಿರುದ್ಯೋಗ ಭತ್ಯೆ ಬಿಡುಗಡೆಗೆ ಒತ್ತಾಯಿಸಿ ಜುಲೈ 28 ರಂದು ಎಲ್ಲಾ ಜಿಲ್ಲಾಧಿಕಾರಿಗಳ ಕಚೇರಿಗಳ ಮುಂದೆ ರಾಜ್ಯಾದ್ಯಂತ ಬೃಹತ್ ಪ್ರತಿಭಟನೆ ನಡೆಸುವುದಾಗಿ YSRCP ಘೋಷಿಸಿದೆ.

ವೈಎಸ್‌ಆರ್‌ಸಿಪಿ ಆರೋಪಗಳನ್ನು ಸಂಪೂರ್ಣವಾಗಿ ತಳ್ಳಿಹಾಕಿರುವ ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು, ಮೆಗಾ ಡಿಎಸ್‌ಸಿ ನೇಮಕಾತಿ ಪ್ರಕ್ರಿಯೆಯನ್ನು ಅತ್ಯಂತ ಪಾರದರ್ಶಕವಾಗಿ ಹಾಗೂ ಕೇಂದ್ರ ಸರ್ಕಾರದ ಎಲ್ಲಾ ಮಾರ್ಗಸೂಚಿಗಳನ್ನು ಪಾಲಿಸಿ ನಡೆಸಲಾಗಿದೆ ಎಂದು ತಮ್ಮ ಸರ್ಕಾರದ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದಾರೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ನಯನಾ ರಾಜೀವ್

ನಯನಾ ರಾಜೀವ್- ಮೂಲತಃ ಸಾಗರದ ಬಾಳೆಗೆರೆಯವಳು, ಹಿಂದಿಯಲ್ಲಿ ಎಂ.ಎ ಮಾಡಿದ್ದೇನೆ, ಮಾಧ್ಯಮದಲ್ಲಿ 9 ವರ್ಷಗಳ ಅನುಭವವಿದೆ, ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ, ಒನ್​ ಇಂಡಿಯಾ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದೇನೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಒಂದೂವರೆ ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್, ಸಂಗೀತ

Read More
Loading...
Unable to load recommendations.
Follow Us