ಬೆಲೆ ಏರಿಕೆ ವಿರುದ್ಧ ಪ್ರತಿಭಟಿಸಿದ ಶಿವ ಪಾರ್ವತಿ; ಶಿವನ ವೇಷ ಧರಿಸಿದ ವ್ಯಕ್ತಿಯ ಬಂಧನ, ಬಿಡುಗಡೆ
ಸಾಮಾಜಿಕ ಮಾಧ್ಯಮಗಳಲ್ಲಿ ಇದೀಗ ವೈರಲ್ ಆಗುತ್ತಿರುವ ಬೀದಿ ನಾಟಕದ ವಿಡಿಯೊದಲ್ಲಿ ಬೋರಾ ಶಿವನ ವೇಷ ಧರಿಸಿದ್ದಾರೆ. ಶಿವ ಮತ್ತು ಪಾರ್ವತಿ ಸಂಚರಿಸುವ ಬೈಕ್ನಲ್ಲಿ ಇಂಧನ ಖಾಲಿಯಾಗಿರುತ್ತದೆ.
ಅಸ್ಸಾಂನ (Assam) ನಾಗೋನ್ ಜಿಲ್ಲೆಯಲ್ಲಿ ಶಿವನ (Lord Shiva) ವೇಷ ಧರಿಸಿ ಬೀದಿ ನಾಟಕ ಮೂಲಕ ಬೆಲೆ ಏರಿಕೆ (price rise) ವಿರುದ್ಧ ಪ್ರತಿಭಟಿಸಿದ 38ರ ಹರೆಯದ ವ್ಯಕ್ತಿಯನ್ನು ಶನಿವಾರ ಬಂಧಿಸಿ ಭಾನುವಾರ ಬಿಡುಗಡೆ ಮಾಡಲಾಗಿದೆ. ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಆರೋಪದಲ್ಲಿ ವ್ಯಕ್ತಿಯನ್ನು ಬಂಧಿಸಲಾಗಿತ್ತು ಎಂದು ಪೊಲೀಸರು ಹೇಳಿದ್ದಾರೆ.ನಾಗೋನ್ ಜಿಲ್ಲೆಯ ಸಾಮಾಜಿಕ ಕಾರ್ಯಕರ್ತ ಬಿರಿಂಚಿ ಬೋರಾ ಎಂಬಾತನನ್ನು ವಿಶ್ವ ಹಿಂದೂ ಪರಿಷತ್, ಭಾರತೀಯ ಜನತಾ ಯುವ ಮೋರ್ಚಾ ಮತ್ತು ಇತರ ಗುಂಪುಗಳು ನೀಡಿದ ದೂರಿನ ಮೇರೆಗೆ ಬಂಧಿಸಲಾಗಿತ್ತು ಎಂದು ಪೊಲೀಸರು ಹೇಳಿದ್ದಾರೆ. ಇದರ ಪ್ರಕಾರ ನಾಗೋನ್ ಸದರ್ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 295A(ಧಾರ್ಮಿಕ ಭಾವನೆಗಳಿಗೆ ಧಕ್ಕೆ) ಮತ್ತು ಇತರ ಸೆಕ್ಷನ್ ಅಡಿಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ. ಪೊಲೀಸ್ ಠಾಣೆಯಲ್ಲಿ ಬೋರಾ ಶನಿವಾರ ರಾತ್ರಿ ಕಳೆದಿದ್ದು ಭಾನುವಾರ ಬೆಳಗ್ಗೆ ಆತನನ್ನು ಬಂಧಮುಕ್ತಗೊಳಿಸಲಾಗಿದೆ ಎಂದು ನಾಗೋನ್ ಎಸ್ ಪಿ ಲೀವಾ ಡೋಲಿ ಹೇಳಿದ್ದಾರೆ. ಇದಾದ ನಂತರ ಬೇರೊಂದು ದಿನ ಠಾಣೆಗೆ ಹಾಜರಾಗುವಂತೆ ಹೇಳಲಾಗಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ಇದೀಗ ವೈರಲ್ ಆಗುತ್ತಿರುವ ಬೀದಿ ನಾಟಕದ ವಿಡಿಯೊದಲ್ಲಿ ಬೋರಾ ಶಿವನ ವೇಷ ಧರಿಸಿದ್ದಾರೆ. ಶಿವ ಮತ್ತು ಪಾರ್ವತಿ ಸಂಚರಿಸುವ ಬೈಕ್ನಲ್ಲಿ ಇಂಧನ ಖಾಲಿಯಾಗಿರುತ್ತದೆ . ಬೆಲೆ ಏರಿಕೆಯಿಂದಾಗಿ ಬೈಕ್ಗೆ ಪೆಟ್ರೋಲ್ ಹಾಕಿಸಲು ಸಾಧ್ಯವಾಗುತ್ತಿಲ್ಲ ಎಂದು ಶಿವ ಹೇಳುತ್ತಿರುವುದು ವಿಡಿಯೊದಲ್ಲಿದೆ.
ಈ ಬೀದಿ ನಾಟಕದ ಉದ್ದೇಶ ಬೆಲೆ ಏರಿಕೆಯನ್ನು ಹೈಲೈಟ್ ಮಾಡುವುದಾಗಿತ್ತು. ಯಾರೊಬ್ಬರ ಭಾವನೆಗೆ ಧಕ್ಕೆ ತರುವ ಉದ್ದೇಶವಿರಲಿಲ್ಲ. ಬೆಲೆ ಅದೆಷ್ಟು ಏರಿಕೆಯಾಗಿದೆ ಎಂದರೆ ದೇವರು ಭೂಮಿಯಲ್ಲಿ ಓಡಾಡುತ್ತಿದ್ದರೆ ಅವರಿಗೂ ಇದರ ಬಿಸಿ ಮುಟ್ಟುತ್ತಿತ್ತು ಎಂದು ಹೇಳುವ ಉದ್ದೇಶ ನನ್ನದಾಗಿತ್ತು ಎಂದು ದಿ ಇಂಡಿಯನ್ ಎಕ್ಸ್ ಪ್ರೆಸ್ ಜತೆ ಮಾತನಾಡಿದ ಬೋರಾ ಹೇಳಿದ್ದಾರೆ. ಅಸ್ಸಾಂನ ನಾಟಕಗಳಲ್ಲಿ ದೇವರ ವೇಷ ಧರಿಸುವುದು ಸಾಮಾನ್ಯ ಎಂದು ಅವರು ಹೇಳಿದ್ದಾರೆ. ಆದಾಗ್ಯೂ, ಈಗ ಅಭಿವ್ಯಕ್ತಿ ಸ್ವಾತಂತ್ರ್ಯವನ್ನೂ ದಮನಿಸಲಾಗುತ್ತಿದೆ. ಈಗಿನ ಸರ್ಕಾರದ ವಿರುದ್ಧ ನಾವು ಏನನ್ನೂ ಹೇಳುವಂತಿಲ್ಲ ಎಂದು ಅವರು ಹೇಳಿದ್ದಾರೆ.
I agree with you @NavroopSingh_ that Nukad Natak on current issues is not blasphemous. Dressing up is not a crime unless offensive material is said. Appropriate order has been issued to @nagaonpolice https://t.co/Fivh7KMX5L
— Himanta Biswa Sarma (@himantabiswa) July 10, 2022
ಈ ಘಟನೆ ಬಗ್ಗೆ ಪ್ರತಿಕ್ರಿಯಿಸಿದ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು ಪ್ರಸ್ತುತ ವಿಷಯಗಳ ಕುರಿತು ಬೀದಿ ನಾಟಕಗಳು “ದೇವನಿಂದೆಯಲ್ಲ” ಎಂದು ಹೇಳಿದ್ದಾರೆ. “ಪ್ರಚಲಿತ ವಿಷಯಗಳ ಕುರಿತ ನುಕ್ಕಡ್ ನಾಟಕ ಧರ್ಮನಿಂದೆಯಲ್ಲ. ಆಕ್ಷೇಪಾರ್ಹ ವಿಷಯವನ್ನು ಹೇಳದ ಹೊರತು ವೇಷ ಧರಿಸಿರುವುದು ಅಪರಾಧವಲ್ಲ. ನಾಗೋನ್ ಪೊಲೀಸರಿಗೆ ಸೂಕ್ತ ಆದೇಶವನ್ನು ನೀಡಲಾಗಿದೆ” ಎಂದು ಅವರು ಟ್ವೀಟ್ ಮಾಡಿದ್ದಾರೆ.
Published On - 6:57 pm, Sun, 10 July 22