
ಲಕ್ನೋ, ಸೆಪ್ಟೆಂಬರ್ 23: ಪತ್ನಿ ಹಾಗೂ ಇಬ್ಬರು ಪುರೋಹಿತರು ಹಾಗೂ ಸ್ವಂತ ಮಗನನ್ನೇ ಗುಂಡಿಕ್ಕಿ ಕೊಂದು ಮಕ್ಕಳನ್ನು ಒತ್ತೆಯಾಳಾಗಿರಿಸಿಕೊಂಡಿದ್ದ ಆರೋಪಿಯನ್ನು ಪೊಲೀಸರು ಎನ್‌ಕೌಂಟರ್‌ನಲ್ಲಿ ಹತ್ಯೆ ಗೈದಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಉತ್ತರ ಪ್ರದೇಶದ ಅಜಮ್‌ಗಢ ಜಿಲ್ಲೆಯ ಅಹ್ರೌಲಾ ಪೊಲೀಸ್ ಠಾಣೆ ವ್ಯಾಪ್ತಿಯ ಶಂಭುಪುರ ಗ್ರಾಮದಲ್ಲಿ ಮಂಗಳವಾರ ಸಂಜೆ ನಡೆದ ಘಟನೆ ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿದೆ. ಮನೆಯಲ್ಲಿ ನಡೆಯುತ್ತಿದ್ದ ಧಾರ್ಮಿಕ ಪೂಜೆಯ ವಿವಾದದಿಂದ ರೊಚ್ಚಿಗೆದ್ದ ಗೃಹಮಾಲೀಕ ಅರವಿಂದ್ ಸಿಂಗ್, ತನ್ನ ಪತ್ನಿ, ಇಬ್ಬರು ಅರ್ಚಕರು ಹಾಗೂ ಸ್ವಂತ ಮಗನನ್ನೇ ಬಲಿ ಪಡೆದಿದ್ದಾನೆ. ಅಂತಿಮವಾಗಿ ಪೊಲೀಸರು ನಡೆಸಿದ ಎನ್‌ಕೌಂಟರ್‌ನಲ್ಲಿ ಆತನೂ ಸಾವನ್ನಪ್ಪಿದ್ದಾನೆ.
ಸುಮಾರು ಎರಡು ವರ್ಷಗಳ ಹಿಂದೆ ಅರವಿಂದ್ ಸಿಂಗ್‌ನ ಸಹೋದರ ಗುಡ್ಡು ಸಿಂಗ್ ಎಂಬಾತನನ್ನು ಅಪರಿಚಿತರು ಗುಂಡಿಕ್ಕಿ ಕೊಂದಿದ್ದರು. ಮೃತ ಸಹೋದರನ ಆತ್ಮಕ್ಕೆ ಶಾಂತಿ ಸಿಗಲೆಂದು ಕುಟುಂಬಸ್ಥರು ಮನೆಯಲ್ಲಿ ‘ನಾರಾಯಣ ಬಲಿ’ ಪೂಜೆ ಹಮ್ಮಿಕೊಳ್ಳಲು ನಿರ್ಧರಿಸಿದ್ದರು. ಆದರೆ ಇದಕ್ಕೆ ಅರವಿಂದ್ ತೀವ್ರ ವಿರೋಧ ವ್ಯಕ್ತಪಡಿಸಿದ್ದ. ಸೋಮವಾರ ಪೂಜೆಗೆ ಬಂದಿದ್ದ ಪುರೋಹಿತರಿಗೆ ಮತ್ತೆ ಮನೆಗೆ ಬಾರದಂತೆ ಆತ ಎಚ್ಚರಿಕೆ ನೀಡಿದ್ದ. ಆದರೂ ಮಂಗಳವಾರ ಅರವಿಂದ್ ಇಲ್ಲದ ವೇಳೆ ಆತನ ತಾಯಿ ಮತ್ತು ಪತ್ನಿ ಬಬಿತಾ ಸಿಂಗ್ (32), ಪುರೋಹಿತರಾದ ಮಹೇಂದ್ರ ಪಾಠಕ್ (60) ಹಾಗೂ ಅಖಿಲೇಶ್ ಮಿಶ್ರಾ (50) ಅವರನ್ನು ಕರೆಸಿ ಪೂಜೆ ಆರಂಭಿಸಿದ್ದರು.
ಸಂಜೆ 6 ಗಂಟೆ ಸುಮಾರಿಗೆ ಮಾರುಕಟ್ಟೆಯಿಂದ ಮನೆಗೆ ಮರಳಿದ ಅರವಿಂದ್, ಪೂಜೆ ನಡೆಯುತ್ತಿರುವುದನ್ನು ಕಂಡು ಕೆಂಡಾಮಂಡಲವಾಗಿದ್ದಾನೆ. ಅಲ್ಲದೆ ಪುರೋಹಿತರ ಹಿನ್ನೆಲೆ ಅನುಮಾನಿಸಿ ಅವರಿಂದ ಆಧಾರ್ ಕಾರ್ಡ್ ಕೇಳಲು ಶುರುಮಾಡಿದ್ದಾನೆ. ಈ ವಿಚಾರವಾಗಿ ಪತ್ನಿಯೊಂದಿಗೆ ತೀವ್ರ ಮಾತಿನ ಚಕಮಕಿ ನಡೆಯಿತು. ಕ್ಷಣಾರ್ಧದಲ್ಲಿ ಆವೇಶಕ್ಕೊಳಗಾದ ಅರವಿಂದ್, ತನ್ನ ಪರವಾನಗಿ ಪಡೆದ ಬಂದೂಕಿನಿಂದ ಪತ್ನಿ ಬಬಿತಾ ಮತ್ತು ಇಬ್ಬರು ಪುರೋಹಿತರ ಮೇಲೆ ನೇರ ಗುಂಡು ಹಾರಿಸಿದನು. ಮೂವರೂ ಸ್ಥಳದಲ್ಲೇ ರಕ್ತದ ಮಡುವಿನಲ್ಲಿ ಕೊನೆಯುಸಿರೆಳೆದರು.
ಮತ್ತಷ್ಟು ಓದಿ: ಉತ್ತರ ಪ್ರದೇಶದಲ್ಲಿ ಭೀಕರ ಘಟನೆ; ಶಾಲಾ ಮಕ್ಕಳ ಕಣ್ಣೆದುರೇ ಶಿಕ್ಷಕಿಗೆ ಗುಂಡಿಕ್ಕಿ ಹತ್ಯೆ, ಆರೋಪಿಯೂ ಆತ್ಮಹತ್ಯೆ!
ತ್ರಿವಳಿ ಕೊಲೆಯ ನಂತರ ಅರವಿಂದ್ ತನ್ನ ಮೂವರು ಅಪ್ರಾಪ್ತ ಮಕ್ಕಳನ್ನು ಒಂದು ಕೋಣೆಯಲ್ಲಿ ಕೂಡಿಹಾಕಿ ಒಳಗಿನಿಂದ ಚಿಲಕ ಹಾಕಿಕೊಂಡಿದ್ದ. ಮಾಹಿತಿ ತಿಳಿದು ಎಸ್ಪಿ ಡಾ. ಅನಿಲ್ ಕುಮಾರ್, ಗ್ರಾಮೀಣ ಎಸ್ಪಿ ಚಿರಾಗ್ ಜೈನ್ ಹಾಗೂ ಮೂರು ಠಾಣೆಗಳ ಪೊಲೀಸರು ಸ್ಥಳಕ್ಕೆ ಧಾವಿಸಿ ಮನೆಯನ್ನು ಸುತ್ತುವರೆದರು. ಶರಣಾಗುವಂತೆ ಕುಟುಂಬದವರ ಮೂಲಕ ಮನವೊಲಿಸಲು ಯತ್ನಿಸಿದರೂ ಆತ ಕೇಳಲಿಲ್ಲ. ಬದಲಾಗಿ, ಪೊಲೀಸರ ಎದುರೇ ತನ್ನ ಸ್ವಂತ ಮಗನ ಮೇಲೆಯೇ ಗುಂಡು ಹಾರಿಸಿ, ಉಳಿದ ಮಕ್ಕಳನ್ನೂ ಕೊಲ್ಲುವುದಾಗಿ ಬೆದರಿಕೆ ಹಾಕಿದ್ದ.
ಪೋಸ್ಟ್
#WATCH | Azamgarh, UP | On the incident in which a man allegedly shot and killed his wife and two other people at his residence, a local says, “It is a very tragic incident…A puja was being held at the house, and five pandits had arrived. He (the accused) came and asked the… pic.twitter.com/KwV17MoIBT
— ANI (@ANI) September 22, 2026
ಮಗನ ಮೇಲೆ ಗುಂಡೇಟು ಬೀಳುತ್ತಿದ್ದಂತೆ ಪೊಲೀಸರು ತಕ್ಷಣವೇ ಬಾಗಿಲು ಮುರಿದು ಕೋಣೆಯೊಳಗೆ ನುಗ್ಗಿದರು. ಆರೋಪಿ ಪೊಲೀಸರ ಮೇಲೂ ನಿರಂತರವಾಗಿ ಗುಂಡಿನ ದಾಳಿ ಮುಂದುವರೆಸಿದಾಗ, ಪೊಲೀಸರು ಆತ್ಮರಕ್ಷಣೆಗಾಗಿ ಹಾಗೂ ಉಳಿದ ಮಕ್ಕಳ ಪ್ರಾಣ ಉಳಿಸಲು ಪ್ರತಿದಾಳಿ ನಡೆಸಿದರು. ಪೊಲೀಸರ ಗುಂಡೇಟಿನಿಂದ ಗಂಭೀರವಾಗಿ ಗಾಯಗೊಂಡ ಅರವಿಂದ್ ಹಾಗೂ ಆತನ ಮಗನನ್ನು ತಕ್ಷಣ ಆಸ್ಪತ್ರೆಗೆ ರವಾನಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಇಬ್ಬರೂ ಮೃತಪಟ್ಟಿದ್ದಾರೆ ಎಂದು ವೈದ್ಯರು ಘೋಷಿಸಿದರು. ಕೋಣೆಯಲ್ಲಿದ್ದ ಉಳಿದ ಇಬ್ಬರು ಮಕ್ಕಳನ್ನು ಪೊಲೀಸರು ಸುರಕ್ಷಿತವಾಗಿ ರಕ್ಷಿಸಿದ್ದು, ಸ್ಥಳದಿಂದ ಬಂದೂಕುಗಳನ್ನು ವಶಪಡಿಸಿಕೊಂಡು ವಿಧಿವಿಜ್ಞಾನ ತನಿಖೆ ಮುಂದುವರೆಸಿದ್ದಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 7:22 am, Wed, 23 September 26