
ಮುಂಬೈ, ಮೇ 13: ಮಹಾರಾಷ್ಟ್ರದ (Maharashtra) ಬಾರಾಮತಿಯಲ್ಲಿ ಮತ್ತೆ ವಿಮಾನ ದುರಂತ ಸಂಭವಿಸಿದೆ. ಈ ವರ್ಷದ ಆರಂಭದಲ್ಲಿ ಉಪಮುಖ್ಯಮಂತ್ರಿ ಅಜಿತ್ ಪವಾರ್ (Ajit Pawar) ಅವರಿದ್ದ ವಿಮಾನ ಅಪಘಾತಕ್ಕೀಡಾಗಿದ್ದ ಅದೇ ಗ್ರಾಮದ ವ್ಯಾಪ್ತಿಯಲ್ಲೇ ಬುಧವಾರ ತರಬೇತಿ ವಿಮಾನವೊಂದು ಪತನಗೊಂಡಿರುವುದು ಆತಂಕಕ್ಕೆ ಕಾರಣವಾಗಿದೆ.
ಬಾರಾಮತಿಯ ಗೋಜ್‌ಬಾಬಿ ಗ್ರಾಮದ ಬಳಿ ತರಬೇತಿ ನಿರತ ವಿಮಾನ ಪತನಗೊಂಡಿದ್ದು, ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ಇದು ‘ರೆಡ್‌ಬರ್ಡ್’ ವಿಮಾನಯಾನ ಸಂಸ್ಥೆಗೆ ಸೇರಿದ ತರಬೇತಿ ವಿಮಾನವಾಗಿದ್ದು, ಹಾರಾಟದ ವೇಳೆ ತಾಂತ್ರಿಕ ದೋಷ ಕಾಣಿಸಿಕೊಂಡು ಪತನವಾಗಿದೆ ಎಂಬುದು ತಿಳಿದುಬಂದಿದೆ. ವಿಮಾನಕ್ಕೆ ಭಾರಿ ಹಾನಿಯಾಗಿದೆ. ಆದಾಗ್ಯೂ ಪೈಲಟ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಇದೇ ವರ್ಷದ ಜನವರಿ 28 ರಂದು ಮಹಾರಾಷ್ಟ್ರದ ಪ್ರಭಾವಿ ನಾಯಕ ಅಜಿತ್ ಪವಾರ್ ಅವರಿದ್ದ ಚಾರ್ಟರ್ ವಿಮಾನವು ಇದೇ ಗ್ರಾಮದ ವ್ಯಾಪ್ತಿಯಲ್ಲಿ ಪತನಗೊಂಡಿತ್ತು. ಆ ಭೀಕರ ದುರಂತದಲ್ಲಿ ಅಜಿತ್ ಪವಾರ್ ಸೇರಿದಂತೆ ಐವರು ಸ್ಥಳದಲ್ಲೇ ಸಾವನ್ನಪ್ಪಿದ್ದರು. ಅಜಿತ್ ಪವಾರ್ ಮೃತಪಟ್ಟ ಅದೇ ಸ್ಥಳದಲ್ಲಿ ಈಗ ಮತ್ತೊಂದು ವಿಮಾನ ಬಿದ್ದಿರುವುದು ಹಲವು ಅನುಮಾನಗಳಿಗೆ ದಾರಿ ಮಾಡಿಕೊಟ್ಟಿದೆ.
ಇದನ್ನೂ ಓದಿ: ಅಜಿತ್ ಪವಾರ್ ಪ್ರಯಾಣಿಸುತ್ತಿದ್ದ ವಿಮಾನ ಪತನವಾಗಿದ್ದು ಹೇಗೆ? ತನಿಖೆಯಲ್ಲಿ ಬಯಲಾದ ಸಂಗತಿಗಳಿವು
ಬಾರಾಮತಿಯಲ್ಲಿ ಪೈಲಟ್ ತರಬೇತಿ ನೀಡುವ ಪ್ರಮುಖ ಸಂಸ್ಥೆಗಳಲ್ಲಿ ರೆಡ್‌ಬರ್ಡ್ ಕೂಡ ಒಂದು. ಆದರೆ, ಈ ಹಿಂದೆಯೂ ಈ ಸಂಸ್ಥೆಯ ವಿಮಾನಗಳು ಪದೇ ಪದೇ ಅಪಘಾತಕ್ಕೀಡಾಗಿದ್ದರಿಂದ ಇದರ ಮೇಲೆ ನಿಷೇಧ ಹೇರಲಾಗಿತ್ತು. ಇಲ್ಲಿನ ರನ್‌ವೇಗಳು ‘ಟೇಬಲ್ ಟಾಪ್’ ಮಾದರಿಯಲ್ಲಿದ್ದು, ಲ್ಯಾಂಡಿಂಗ್ ಸಮಯದಲ್ಲಿ ಪೈಲಟ್‌ಗಳ ಜಾಣ್ಮೆ ಅತ್ಯಂತ ಮುಖ್ಯವಾಗಿರುತ್ತದೆ ಎಂದು ಎನ್‌ಸಿಪಿ ಶಾಸಕ ಅನಿಲ್ ಪಾಟೀಲ್ ಅಭಿಪ್ರಾಯಪಟ್ಟಿದ್ದಾರೆ. ಸದ್ಯ ಘಟನೆ ಬಗ್ಗೆ ಡಿಜಿಸಿಎ ತನಿಖೆ ಆರಂಭಿಸಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ