ಕೊಲ್ಕತ್ತಾ: ಜುಲೈ 21 ರಂದು ತನ್ನ ವಾರ್ಷಿಕ ಹುತಾತ್ಮರ ದಿನ ಱಲಿಗಾಗಿ ತೃಣಮೂಲ್ ಕಾಂಗ್ರೆಸ್ ಸಿದ್ಧತೆಯಲ್ಲಿ ತೊಡಗಿದೆ. ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಕಳೆದ ಸಲದಂತೆ ಈ ಬಾರಿಯೂ ವರ್ಚ್ಯುಯಲ್ ಭಾಷಣ ಮಾಡಲಿದ್ದಾರೆ. ಆದರೆ, ಈ ಸಲದ ಅವರ ಭಾಷಣವು ಇತ್ತೀಚೆಗೆ ನಡೆದ ವಿಧಾನ ಸಭಾ ಚುನಾವಣೆಯಲ್ಲಿ ಅವರ ಟಿಎಮ್ಸಿ ಪಕ್ಷ ಭರ್ಜರಿ ಜಯ ಸಾಧಿಸಿದ ನಂತರ ಮಾಡಲಿರುವ ಮೊದಲ ಪ್ರಮುಖ ಭಾಷಣವಾಗಲಿದೆ. ತೃಣಮೂಲ ಪಕ್ಷದ ಮೂಲಗಳ ಪ್ರಕಾರ ಮಮತಾ ಅವರ ಭಾಷಣವನ್ನು ಈ ಬಾರಿ ಬಂಗಾಳವಲ್ಲದೆ, ತ್ರಿಪುರ, ಅಸ್ಸಾಂ, ದೆಹಲಿ, ಉತ್ತರ ಪ್ರದೇಶ ಮತ್ತು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಅವರ ತವರು ರಾಜ್ಯ ಗುಜರಾತ್ನಲ್ಲೂ ನೇರ ಪ್ರಸಾರಗೊಳ್ಳಲಿದೆ.
ಮಮತಾ ಅವರು ಜುಲೈ 25 ರಂದು ದೆಹಲಿಗೆ ಹೋಗಲಿರುವುದರಿಂದ ಅದಕ್ಕೆ 4 ದಿನ ಮೊದಲು ನಡೆಯುವ ಈ ಱಲಿಯಲ್ಲಿ ಬಿಜೆಪಿಯನ್ನು ತೀವ್ರ ತರಾಟೆಗೆ ತೆಗೆದುಕೊಳ್ಳಲಿದ್ದಾರೆಂದು ನಿರೀಕ್ಷಿಸಲಾಗಿದೆ. ಆ ವಾರವೆಲ್ಲ ದೆಹಲಿಯಲ್ಲಿ ಉಳಿಯಲಿರುವ ಅವರು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಸೇರಿದಂತೆ ಹಲವಾರು ವಿರೋಧ ಪಕ್ಷದ ನಾಯಕರನ್ನು ಭೇಟಿಯಾಗಲಿದ್ದಾರೆ.
ಅಖಿಲೇಶ್ ಯಾದವ್ ಮತ್ತು ಅರವಿಂದ್ ಕೇಜ್ರಿವಾಲ್ ಅವರನ್ನು ಸಹ ಅವರು ಭೇಟಿ ಮಾಡುವ ಸಾಧ್ಯತೆಯಿದೆ. ಉತ್ತರ ಪ್ರಧೇಶದಲ್ಲಿ ಮುಂದಿನ ವರ್ಷ ವಿಧಾನ ಸಭೆ ಚುನಾವಣೆ ನಡೆಯಲಿರುವುದರಿಂದ ಅದಕ್ಕೆ ಮೊದಲು ವಿರೋಧ ಪಕ್ಷಗಳ ಒಂದು ಸಂಯುಕ್ತ ರಂಗ ರಚಿಸಲು ಗಂಭೀರ ಪ್ರಯತ್ನಗಳು ನಡೆದಿವೆ.
ರಾಷ್ಟ್ರಪತಿ ಮತ್ತು ಪ್ರಧಾನ ಮಂತ್ರಿಗಳು ಸಮಯ ನೀಡಿದರೆ ಅವರನ್ನೂ ಭೇಟಿಯಾಗುವುದಾಗಿ ಮಮತಾ ಹೇಳಿದ್ದಾರೆ.
ಕಲ್ಕತ್ತ ಹೈಕೋರ್ಟ್ ಬಂಗಾಳದಲ್ಲಿ ಚುನಾವಣೋತ್ತರ ಹಿಂಸೆಗೆ ಸಂಬಂಧಿಸಿದ ಪ್ರಕರಣವೊಂದರ ವಿಚಾರಣೆ ನಡೆಸುತ್ತಿರುವಾಗಲೇ, ಮಮತಾ ಅವರು ದೆಹಲಿಗೆ ಭೇಟಿ ನೀಡುತ್ತಿದ್ದಾರೆ. ಪ್ರಕರಣದ ವಿಷಯವಾಗಿ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗವು (ಎನ್ಎಚ್ಆರ್ಸಿ), ‘ಬಂಗಾಳದಲ್ಲಿ ಆಡಳಿತವೆಂಬುದೇ ಇಲ್ಲ, ಆಡಳಿತ ನಡೆಸುತ್ತಿರುವವರು ಹೇಳಿದ್ದೇ ಅಲ್ಲಿ ಕಾನೂನಾಗಿದೆ,’ ಎಂದು ಹೇಳಿದೆ.
ಚುನಾವಣೋತ್ತರ ಹಿಂಸೆ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಬೇಕು ಎಂದು ಆಯೋಗ ಹೇಳಿದ್ದು, ಒಬ್ಬ ಸಚಿವನೂ ಸೇರಿದಂತೆ ‘ತೃಣಮೂಲ ಪಕ್ಷದ ನಾಯಕರು ಕುಖ್ಯಾತ ಕ್ರಿಮಿನಲ್ಗಳು,’ ಎಂದು ಹೇಳಿದೆ.
ಎನ್ಎಚ್ಆರ್ಸಿ ವರದಿಯನ್ನು ಲೀಕ್ ಮಾಡಲಾಗಿದೆ ಎಂದು ಆರೋಪಿಸಿರುವ ಮಮತಾ ಅವರು ಬಿಜೆಪಿಯೊಂದಿಗೆ ಸಂಪರ್ಕವಿಟ್ಟುಕೊಂಡಿರುವ ಆಯೋಗದ ಕೆಲ ಸದಸ್ಯರು ತಪ್ಪು ಮಾಹಿತಿ ಬಹಿರಂಗಗೊಳ್ಳುವಂತೆ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.
‘ಅವರು ವರದಿಯನ್ನು ಹೇಗೆ ಲೀಕ್ ಮಾಡಿದರು? ಪಶ್ಚಿಮ ಬಂಗಾಳಕ್ಕೆ ಕೆಟ್ಟ ಹೆಸರು ತರುವ ಮತ್ತು ರಾಜಕೀಯ ಸೇಡು ತೀರಿಸಿಕೊಳ್ಳಲು ಹೀಗೆ ಮಾಡಲಾಗಿದೆ. ಅವರು ಚುನಾವಣೆಯಲ್ಲಿ ಸೋತಿರುವುದರಿಂದ ಕಂಗಾಲಾಗಿದ್ದಾರೆ, ಹಾಗಾಗಿ ಇದು ಅವರ ಸೇಡು ತೀರಿಸಿಕೊಳ್ಳುವ ವಿಧಾನ,’ ಎಂದು ಹೇಳಿದ ಮಮತಾ,ಉತ್ತರ ಪ್ರದೇಶದಲ್ಲಿ ಯಾವುದೇ ಕಾನೂನಿಲ್ಲ,’ ಎಂದರು.
ಸದರಿ ಪ್ರಕರಣದ ಮುಂದಿನ ವಿಚಾರಣೆ ಜುಲೈ 22ರಂದು ನಡೆಯಲಿದೆ. ಅದಕ್ಕೆ ಮೊದಲು ಟಿಎಮ್ಸಿ ಸುಪ್ರೀಮ್ ಕೋರ್ಟ್ನಲ್ಲಿ ಮನವಿ ಸಲ್ಲಿಸುವ ಸಾಧ್ಯತೆಯಿದೆ. ಆದರೆ ಬಿಜೆಪಿ ಸದರಿ ಪ್ರಕರಣದ ಮೇಲೆ ಒತ್ತಡ ಹೇರುತ್ತಿದೆ.
ರವಿವಾರದಂದು ಹೇಳಿಕೆಯೊಂದನ್ನು ನೀಡಿದ ಪಕ್ಷದ ಎಸ್ಸಿ ಮೋರ್ಚಾದ ನಾಯಕ ದುಲಾಲ್ ಬಾರ್ ಅವರು, ಎನ್ಎಚ್ಆರ್ಸಿ ವರದಿಯ ಆಧಾರದ ಮೇಲೆ ಬಂಗಾಳದಲ್ಲಿ ರಾಷ್ಟ್ರಪತಿ ಆಳ್ವಿಕೆ ಜಾರಿಗೆ ತರಬೇಕು ಎಂದರು. ಕಳೆದ ಎರಡು ತಿಂಗಳುಗಳಲ್ಲಿ ಬಿಜೆಪಿಯ 42 ಬೆಂಬಲಿಗರನ್ನು ಕೊಲ್ಲಲಾಗಿದೆ ಅವರಲ್ಲಿ 29 ಜನ ಪರಿಶಿಷ್ಟ ಜಾತಿ ಮತ್ತು ಪಂಗಡಗಳಿಗೆ ಸೇರಿದವರು ಎಂದು ಹೇಳಿದರು. ಇದಕ್ಕೆ ಮೊದಲು ಬಿಜೆಪಿಯ ಅಂಗವು ಎನ್ಎಚ್ಆರ್ಸಿಗೆ ದೌರ್ಜನ್ಯದ 1,627 ದೂರುಗಳನ್ನು ಸಲ್ಲಿಸಿದೆ ಮತ್ತು ರವಿವಾರದಂದು 5,170 ದೂರುಗಳನ್ನು ಸಲ್ಲಿಸಲಾಗಿದೆ ಎಂದು ಬಾರ್ ಹೇಳಿದರು.
‘ಬಂಗಾಳದಲ್ಲಿ ಜನರ ಸುರಕ್ಷತೆಯ ದೃಷ್ಟಿಯಿಂದ ಎನ್ಎಚ್ಆರ್ಸಿ ವರದಿಯಲ್ಲಿ ಉಲ್ಲೇಖಿಸಲ್ಪಟ್ಟಿರುವ ತೃಣಮೂಲ ಪಕ್ಷದ ನಾಯಕರೆಲ್ಲ ರಾಜೀನಾಮೆ ನೀಡಬೇಕು ಮತ್ತು ರಾಜ್ಯದಲ್ಲಿ ರಾಷ್ಟ್ರಪತಿಗಳ ಆಳ್ವಿಕೆ ಜಾರಿಗೆ ತರಬೇಕೆನ್ನುವುದು ನಮ್ಮ ಆಗ್ರಹವಾಗಿದೆ, ಹಾಗಾಗದೇ ಹೋದ ಪಕ್ಷದಲ್ಲಿ ಬಂಗಾಳ ಭಾರತದಿಂದ ಬೇರ್ಪಟ್ಟ ರಾಜ್ಯವೆನಿಸಿಕೊಳ್ಳುತ್ತದೆ,’ ಎಂದು ಬಾರ್ ಹೇಳಿದರು.
ಶುಕ್ರವಾರ ಸುದ್ದಿಗಾರರೊಂದಿಗೆ ಮಾತಾಡಿದ್ದ ಬಿಜೆಪಿ ಬಾತ್ಮೀದಾರ ಸಮಿಕ್ ಭಟ್ಟಾಚಾರ್ಯ ಅವರು, ಎನ್ಎಚ್ಆರ್ಸಿಯ ವರದಿ ಮತ್ತು ಅದರಲ್ಲಿ ಮಾಡಿರುವ ಶಿಫಾರಸ್ಸುಗಳು ಬಂಗಾಳದಲ್ಲಿ ಸಾಂವಿಧಾನಿಕ ಆಡಳಿತ ಯಂತ್ರ ನಾಶವಾಗಿರುವುದನ್ನು ಸೂಚಿಸುತ್ತದೆ. ಈಗ ಭಾರತ ಸಂವಿಧಾನದ ರಕ್ಷಕ ಮತ್ತು ಅದನ್ನು ಅರ್ಥೈಸುವವರು ಮಧ್ಯಸ್ಥಿಕೆ ವಹಿಸಬೇಕಿದೆ. ಆದರೆ, ಬಿಜೆಪಿಯು ಬಂಗಾಳದಲ್ಲಿ 356 ನೇ ವಿಧಿಗಾಗಿ ಒತ್ತಾಯಿಸುತ್ತಿಲ್ಲ. ನಾವು ತಾತ್ವಿಕವಾಗಿ ಮತ್ತು ಸೈದ್ಧಾಂತಿಕವಾಗಿ ಅದಕ್ಕೆ ವಿರೋಧಿಗಳಾಗಿದ್ದೇವೆ,’ ಎಂದು ಹೇಳಿದ್ದರು.