Covaxin Export: ಕೊವ್ಯಾಕ್ಸಿನ್ ಲಸಿಕೆಯ ರಫ್ತಿಗೆ ಭಾರತ್ ಬಯೋಟೆಕ್‌ಗೆ ಅನುಮತಿ

ಕೇಂದ್ರ ಸರ್ಕಾರವು ಕೊರೊನಾ ಲಸಿಕೆಯನ್ನು ವಿದೇಶಗಳಿಗೆ ರಫ್ತು ಮಾಡಲು ಸೆರಮ್ ಇನ್ಸ್ ಟಿಟ್ಯೂಟ್ ಆಫ್ ಇಂಡಿಯಾ ಹಾಗೂ ಭಾರತ್ ಬಯೋಟೆಕ್ ಕಂಪನಿಗಳೆರೆಡಕ್ಕೂ ಅನುಮತಿ ನೀಡಿದೆ. ಭಾರತದಿಂದ ಮತ್ತೆ ಕೊರೊನಾ ಲಸಿಕೆ ರಫ್ತು ಶುರುವಾಗಲಿದೆ.

  • Publish Date - 11:16 pm, Thu, 25 November 21 Edited By: Ghanashyam D M | ಡಿ.ಎಂ.ಘನಶ್ಯಾಮ Follow us -
Covaxin Export: ಕೊವ್ಯಾಕ್ಸಿನ್ ಲಸಿಕೆಯ ರಫ್ತಿಗೆ ಭಾರತ್ ಬಯೋಟೆಕ್‌ಗೆ ಅನುಮತಿ
ಕೊವ್ಯಾಕ್ಸಿನ್​

ಭಾರತವು ಈಗ ಕೊರೊನಾ ಲಸಿಕೆ ಕೊರತೆಯ ದೇಶವಾಗಿ ಉಳಿದಿಲ್ಲ. ಭಾರತದಲ್ಲಿ ಈಗ ಕೊರೊನಾ ಲಸಿಕೆಯ ಕೊರತೆಯು ಇತಿಹಾಸದ ಪುಟ ಸೇರಿದೆ. ಭಾರತದಲ್ಲಿ ಈಗ ಉತ್ಪಾದನೆಯಾಗಿರುವ 27 ಕೋಟಿ ಡೋಸ್ ಲಸಿಕೆ ಬಳಕೆಯಾಗದೇ ಬಾಕಿ ಉಳಿದಿದೆ. ಇದರಿಂದಾಗಿ ಈಗ ಕೇಂದ್ರ ಸರ್ಕಾರವು ಕೊರೊನಾ ಲಸಿಕೆಯನ್ನು ವಿದೇಶಗಳಿಗೆ ರಫ್ತು ಮಾಡಲು ಸೆರಮ್ ಇನ್ಸ್ ಟಿಟ್ಯೂಟ್ ಆಫ್ ಇಂಡಿಯಾ ಹಾಗೂ ಭಾರತ್ ಬಯೋಟೆಕ್ ಕಂಪನಿಗಳೆರೆಡಕ್ಕೂ ಅನುಮತಿ ನೀಡಿದೆ. ಭಾರತದಿಂದ ಮತ್ತೆ ಕೊರೊನಾ ಲಸಿಕೆ ರಫ್ತು ಶುರುವಾಗಲಿದೆ.

ಭಾರತವು ಈಗ ಕೊರೊನಾ ಲಸಿಕೆಗಳ ಕೊರತೆ ಅನುಭವಿಸುತ್ತಿದ್ದ ಹಂತದಿಂದ ಲಸಿಕೆಯನ್ನು ರಫ್ತು ಮಾಡುವ ದೇಶವಾಗಿ ಹೊರಹೊಮ್ಮಿದೆ. ಭಾರತದಲ್ಲಿ ಈಗ ಕೊರೊನಾ ಲಸಿಕೆಗೆ ಕೊರತೆ ಇಲ್ಲ. ಲಸಿಕೆಯ ಕೊರತೆ ಎಂಬುದು ಈಗ ಇತಿಹಾಸದ ಪುಟ ಸೇರಿದೆ. ಭಾರತ ಮತ್ತೆ ಕೊರೊನಾ ಲಸಿಕೆಯ ರಫ್ತು ದೇಶವಾಗಿ ಹೊರಹೊಮ್ಮಿದೆ. ಭಾರತದಲ್ಲಿ ಈವರೆಗೂ (ನ 25) 119.38 ಕೋಟಿ ಡೋಸ್ ಲಸಿಕೆಯನ್ನು ಜನರಿಗೆ ನೀಡಲಾಗಿದೆ. ಕೇಂದ್ರ ಸರ್ಕಾರವು ಪೂರೈಸಿರುವ ಕೊರೊನಾ ಲಸಿಕೆಯು ರಾಜ್ಯ ಸರ್ಕಾರಗಳ ಬಳಿ ಬಳಕೆಯಾಗದೇ ಬಾಕಿ ಉಳಿದಿದೆ. ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳ ಬಳಿ 22.72 ಕೋಟಿ ಡೋಸ್ ಲಸಿಕೆ ಬಳಕೆಯಾಗದೆ ಬಾಕಿ ಉಳಿದಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ಹೇಳಿದೆ. ಇನ್ನು ಖಾಸಗಿ ಆಸ್ಪತ್ರೆಗಳ ಬಳಿಯೂ 4ರಿಂದ 5 ಕೋಟಿ ಡೋಸ್ ಲಸಿಕೆ ಬಳಕೆಯಾಗದೆ ಬಾಕಿ ಉಳಿದಿದೆ. ದೇಶದಲ್ಲಿ ಒಟ್ಟಾರೆ 26ರಿಂದ 27 ಕೋಟಿ ಕೊರೊನಾ ಡೋಸ್ ಲಸಿಕೆ ಬಳಕೆಯಾಗದೇ ಬಾಕಿ ಉಳಿದಿದೆ. ಇದರಿಂದ ಈಗ ಕೇಂದ್ರ ಸರ್ಕಾರವು ಕಳೆದ ಏಪ್ರಿಲ್ ತಿಂಗಳಿನಲ್ಲಿ ವಿಧಿಸಿದ್ದ ಕೊರೊನಾ ಲಸಿಕೆಯ ರಫ್ತು ನಿಷೇಧ ನಿಯಮವನ್ನು ಸಡಿಲಿಸಿದೆ. ಕೊರೊನಾ ಲಸಿಕೆ ಉತ್ಪಾದಿಸುವ ಕಂಪನಿಗಳಿಗೆ ಕೊರೊನಾ ಲಸಿಕೆಯನ್ನು ವಿದೇಶಗಳಿಗೆ ಹಾಗೂ ಕೊವ್ಯಾಕ್ಸ್ ಒಕ್ಕೂಟಕ್ಕೆ ರಫ್ತು ಮಾಡಲು ಅನುಮತಿ ನೀಡಿದೆ. ಭಾರತ್ ಬಯೋಟೆಕ್ ಈ ವಿಷಯದ ಬಗ್ಗೆ ಪ್ರತಿಕ್ರಿಯೆ ನೀಡಿಲ್ಲ.

ಕೋವಿಡ್-19 ಲಸಿಕೆಗಳ ವಾಣಿಜ್ಯ ರಫ್ತಿಗೆ ಕೇಂದ್ರ ಸರ್ಕಾರವು ಹೈದರಾಬಾದ್ ಮೂಲದ ಲಸಿಕೆ ತಯಾರಿಕಾ ಕಂಪನಿಯಾದ ಭಾರತ್ ಬಯೋಟೆಕ್‌ಗೆ ಅನುಮತಿ ನೀಡಿದೆ. ಕೊವಾಕ್ಸಿನ್‌ ಲಸಿಕೆಯ ವಾಣಿಜ್ಯ ರಫ್ತು ಪ್ರಾರಂಭಿಸಲು ಅನುಮತಿ ನೀಡಿದೆ ಎಂದು ಮೂಲಗಳು ತಿಳಿಸಿವೆ. ಕೆಲವು ದಿನಗಳ ಹಿಂದೆ ಮತ್ತೊಂದು ಪ್ರಮುಖ ಲಸಿಕೆ ಉತ್ಪಾದಕ ಕಂಪನಿಯಾದ ಪುಣೆಯ ಸೆರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾಗೆ ವಿಶ್ವ ಆರೋಗ್ಯ ಸಂಸ್ಥೆಯ ನೇತೃತ್ವದ ಲಸಿಕೆ ಉಪಕ್ರಮ COVAXಗೆ ರಫ್ತು ಮಾಡಲು ಅನುಮತಿ ನೀಡಲಾಗಿತ್ತು.

ಸೆರಮ್ ಇನ್​ಸ್ಟಿಟ್ಯೂಟ್ ಆಫ್ ಇಂಡಿಯಾ ಕೂಡ ಭಾರತ ಸರ್ಕಾರದಿಂದ ವಾಣಿಜ್ಯ ದ್ವಿಪಕ್ಷೀಯ ರಫ್ತುಗಳನ್ನು ಪ್ರಾರಂಭಿಸಲು ಒಪ್ಪಿಗೆ ಪಡೆದಿರುವುದನ್ನು ಅಧಿಕೃತವಾಗಿ ಹೇಳಿಲ್ಲ. ಭಾರತ್ ಬಯೋಟೆಕ್ ಅಕ್ಟೋಬರ್‌ನಲ್ಲಿ 55 ಮಿಲಿಯನ್ (5.5 ಕೋಟಿ) ಡೋಸ್ ಕೋವಾಕ್ಸಿನ್ ಡೋಸ್​ಗಳನ್ನು ತಯಾರಿಸಿದೆ. ಡಿಸೆಂಬರ್ ತಿಂಗಳಿನಲ್ಲಿ 8 ಕೋಟಿ ಡೋಸ್ ಲಸಿಕೆಯನ್ನು ಉತ್ಪಾದಿಸುವ ಗುರಿ ಹಾಕಿಕೊಂಡಿದೆ. ಸೆರಮ್ ಇನ್​ಸ್ಟಿಟ್ಯೂಟ್ ಆಫ್ ಇಂಡಿಯಾ ಕಂಪನಿಯು ಈಗ ಪ್ರತಿ ತಿಂಗಳು 22 ಕೋಟಿ ಡೋಸ್ ಲಸಿಕೆ ಉತ್ಪಾದಿಸುತ್ತಿದೆ. ಕೊವಾಕ್ಸ್​ಗೆ 50 ಲಕ್ಷ ಡೋಸ್ ಕೊವಿಶೀಲ್ಡ್ ರಫ್ತು ಮಾಡಲು ಅನುಮತಿ ನೀಡಿದೆ. ಆಕ್ಟೋಬರ್ ತಿಂಗಳಿನಲ್ಲಿ ಸೆರಮ್ ಇನ್ಸ್ ಟಿಟ್ಯೂಟ್ ಆಫ್ ಇಂಡಿಯಾ ಕಂಪನಿಯು ನೇಪಾಳ, ಮಯನ್ಮಾರ್, ಬಾಂಗ್ಲಾದೇಶಗಳಿಗೆ ಲಸಿಕೆ ಮೈತ್ರಿಯ ಭಾಗವಾಗಿ ಲಸಿಕೆಯನ್ನು ರಫ್ತು ಮಾಡಿದೆ. ಈ ಮೂರು ದೇಶಗಳಿಗೆ ಭಾರತ ಸರ್ಕಾರವು ಉಚಿತವಾಗಿ ಸೆರಮ್ ಇನ್ಸ್ ಟಿಟ್ಯೂಟ್ ಆಫ್ ಇಂಡಿಯಾದ ಕೊವಿಶೀಲ್ಡ್ ಲಸಿಕೆಯನ್ನು ಉಚಿತವಾಗಿ ನೀಡಿದೆ.

ಸೆರಮ್ ಕಂಪನಿಯು ಈ ವಾರ ನೋವಾವಾಕ್ಸ್ (ಕೋವಾವ್ಯಾಕ್ಸ್) ಲಸಿಕೆಯನ್ನು ಇಂಡೋನೇಷ್ಯಾಗೆ ರಫ್ತು ಮಾಡಲಿದೆ. ಭಾರತದ ಸ್ವದೇಶಿ ಕೊರೊನಾ ಲಸಿಕೆಯಾದ ಕೊವ್ಯಾಕ್ಸಿನ್ ಲಸಿಕೆಗೆ ನ.3ರಂದು ವಿಶ್ವ ಆರೋಗ್ಯ ಸಂಸ್ಥೆಯಿಂದ ತುರ್ತು ಬಳಕೆಗೆ ಅನುಮೋದನೆ ಸಿಕ್ಕಿದೆ. ಆದರೆ, ಇನ್ನೂ ಬಡ ಮತ್ತು ಮಧ್ಯಮ ಆದಾಯ ರಾಷ್ಟ್ರಗಳಿಗೆ ಲಸಿಕೆ ಪೂರೈಸುವ ಕೊವ್ಯಾಕ್ಸ್ ಒಕ್ಕೂಟದ ಪಟ್ಟಿಯಲ್ಲಿ ಕೊವ್ಯಾಕ್ಸಿನ್ ಇಲ್ಲ. ಆದರೆ, ಕೊವ್ಯಾಕ್ಸಿನ್ ಲಸಿಕೆಯೂ ಅಲ್ಪಾ, ಗಾಮಾ, ಜೀಟಾ, ಕಪಾ, ಬೀಟಾ ಮತ್ತು ಡೆಲ್ಟಾ ಪ್ರಭೇದದ ಕೊರೊನಾ ವೈರಸ್ ವಿರುದ್ಧ ಪರಿಣಾಮಕಾರಿ ಎಂದು ಭಾರತ್ ಬಯೋಟೆಕ್ ಪ್ರತಿಪಾದಿಸಿದೆ.

ಇದನ್ನೂ ಓದಿ: ವಿದೇಶಗಳಲ್ಲಿ ಹೊಸ ತಳಿಯ ಕೊರೊನಾ ವೈರಸ್ ಪತ್ತೆ
ಇದನ್ನೂ ಓದಿ: ZyCoV-D: ಒಂದು ಕೋಟಿ ಝೈಕೊವ್​-ಡಿ ಲಸಿಕೆ ಖರೀದಿಗೆ ಭಾರತ ಸರ್ಕಾರ ಆದೇಶ

Click on your DTH Provider to Add TV9 Kannada