ತ್ವಿಶಾ ಶರ್ಮಾ ಪ್ರಕರಣ: ನಿರೀಕ್ಷಣಾ ಜಾಮೀನು ಅರ್ಜಿ ವಜಾಗೊಂಡ ಬೆನ್ನಲ್ಲೇ ಸಿಬಿಐನಿಂದ ಗಿರಿಬಾಲಾ ಸಿಂಗ್ ಬಂಧನ
CBI Nabs Ex-Judge Giribala Singh in Twisha Sharma Case: ಮಾಜಿ ಮಾಡೆಲ್ ತ್ವಿಶಾ ಶರ್ಮಾ ಶಂಕಾಸ್ಪದ ಸಾವು ಪ್ರಕರಣದಲ್ಲಿ ಸಿಬಿಐ ಮಹತ್ವದ ಕಾರ್ಯಾಚರಣೆ ನಡೆಸಿ, ಅತ್ತೆ ಗಿರಿಬಾಲಾ ಸಿಂಗ್ ಅವರನ್ನು ಬಂಧಿಸಿದೆ. ಮಧ್ಯಪ್ರದೇಶ ಹೈಕೋರ್ಟ್ ಅವರ ನಿರೀಕ್ಷಣಾ ಜಾಮೀನು ರದ್ದುಗೊಳಿಸಿದ ಕೆಲವೇ ಗಂಟೆಗಳಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಮರಣೋತ್ತರ ಪರೀಕ್ಷೆಯ ವರದಿ, ಗರ್ಭಪಾತದ ಒತ್ತಡದ ವಾಟ್ಸಾಪ್ ಚಾಟ್‌ಗಳು ಹಾಗೂ ವರದಕ್ಷಿಣೆ ಕಿರುಕುಳದ ಆರೋಪಗಳು ಜಾಮೀನು ರದ್ದತಿಗೆ ಪ್ರಮುಖ ಕಾರಣಗಳಾಗಿವೆ.

ಭೋಪಾಲ್, ಮೇ 28: ಮಾಜಿ ಮಾಡೆಲ್ ಹಾಗೂ ನಟಿ ತ್ವಿಶಾ ಶರ್ಮಾ (Twisha Sharma) ಅವರ ಶಂಕಾಸ್ಪದ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರೀಯ ತನಿಖಾ ದಳ (CBI) ಮಹತ್ತರ ಕಾರ್ಯಾಚರಣೆ ನಡೆಸಿದ್ದು, ಅವರ ಅತ್ತೆ ಗಿರಿಬಾಲಾ ಸಿಂಗ್ ಅವರನ್ನು ಬಂಧಿಸಿದೆ. ಮಧ್ಯಪ್ರದೇಶ ಹೈಕೋರ್ಟ್ ಗಿರಿಬಾಲಾ ಸಿಂಗ್ (Giribala Singh) ಅವರಿಗೆ ಕೆಳ ನ್ಯಾಯಾಲಯ ನೀಡಿದ್ದ ನಿರೀಕ್ಷಣಾ ಜಾಮೀನನ್ನು ರದ್ದುಗೊಳಿಸಿದ ಕೆಲವೇ ಗಂಟೆಗಳಲ್ಲಿ ಸಿಬಿಐ ಈ ಕ್ರಮ ಕೈಗೊಂಡಿದೆ. ಬಂಧಿತ ಗಿರಿಬಾಲಾ ಸಿಂಗ್ ಅವರು ನಿವೃತ್ತ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶೆ ಎಂಬುದು ಇಲ್ಲಿ ಉಲ್ಲೇಖಾರ್ಹ. ಸಿಬಿಐ ಅಧಿಕಾರಿಗಳು ಗುರುವಾರ ಬೆಳಗ್ಗೆ ನಿ. ನ್ಯಾ| ಗಿರಿಬಾಲಾ ಸಿಂಗ್ ಅವರ ನಿವಾಸಕ್ಕೆ ಹೋಗಿ ಕೆಲ ಗಂಟೆಗಳ ಕಾಲ ವಿಚಾರಣೆ ನಡೆಸಿ ಆ ನಂತರ ಬಂಧಿಸಿದರೆಂದು ಹೇಳಲಾಗಿದೆ.
ತ್ವಿಶಾ ಅತ್ತೆಗೆ ಹೈಕೋರ್ಟ್ ಜಾಮೀನು ರದ್ದುಗೊಳಿಸಲು ಕಾರಣಗಳೇನು?
ಮೇ 15 ರಂದು ಭೋಪಾಲ್‌ನ ಸೆಷನ್ಸ್ ನ್ಯಾಯಾಲಯವು ಗಿರಿಬಾಲಾ ಸಿಂಗ್ ಅವರಿಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಿತ್ತು. ಆದರೆ ಈ ಆದೇಶವನ್ನು ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಅರ್ಜಿಗಳ ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಮೂರ್ತಿ ದೇವನಾರಾಯಣ್ ಮಿಶ್ರಾ ಅವರ ಪೀಠವು ಜಾಮೀನನ್ನು ರದ್ದುಪಡಿಸಿತು.
ಮರಣೋತ್ತರ ಪರೀಕ್ಷೆಯ ವರದಿಯ ಪ್ರಕಾರ, ತ್ವಿಶಾ ಸಾವು ನೇಣು ಬಿಗಿದುಕೊಂಡಿದ್ದರಿಂದ ಸಂಭವಿಸಿದೆ. ಆದರೆ, ಅವರ ದೇಹದ ಮೇಲೆ (ಎಡಗೈ, ಉಂಗುರದ ಬೆರಳು ಹಾಗೂ ತಲೆಯಲ್ಲಿ) ಸಾವು ಸಂಭವಿಸುವ ಮುನ್ನವೇ ಆದ 6 ಗಾಯಗಳಿರುವುದು ಪತ್ತೆಯಾಗಿದೆ. ಶವವನ್ನು ಕೆಳಗೆ ಇಳಿಸುವಾಗ ಅಥವಾ ಆಸ್ಪತ್ರೆಗೆ ಸಾಗಿಸುವಾಗ ಈ ಗಾಯಗಳಾಗಿವೆ ಎಂಬ ಪ್ರತಿವಾದಿಗಳ ವಾದವನ್ನು ವೈದ್ಯಕೀಯ ವರದಿ ತಳ್ಳಿಹಾಕಿದೆ.
ಇದನ್ನೂ ಓದಿ: ಮಾಡೆಲ್ ತ್ವಿಶಾ ಶರ್ಮಾ ಸಾವು: ಅತ್ತೆ, ನಿವೃತ್ತ ನ್ಯಾಯಾಧೀಶೆ ಗಿರಿಬಾಲ ಸಿಂಗ್ ನಿರೀಕ್ಷಣಾ ಜಾಮೀನು ರದ್ದು
ತ್ವಿಶಾ ಪ್ರಕರಣ: ಗರ್ಭಪಾತದ ಒತ್ತಡ ಮತ್ತು ವಾಟ್ಸಾಪ್ ಚಾಟ್‌ಗಳು
ಮದುವೆಯಾದ ಕೇವಲ 5 ತಿಂಗಳಲ್ಲೇ ತ್ವಿಶಾ ಗರ್ಭಿಣಿಯಾಗಿದ್ದರು ಮತ್ತು ಎರಡು ತಿಂಗಳ ಒಳಗಾಗಿ ಗರ್ಭಪಾತವಾಗಿತ್ತು. ಮಗುವಿನ ಬಗ್ಗೆ ಪತಿ ಅನುಮಾನ ವ್ಯಕ್ತಪಡಿಸುತ್ತಿದ್ದ ಉಲ್ಲೇಖಗಳು ಹಾಗೂ ಗರ್ಭಪಾತ ಮಾಡಿಸಿಕೊಳ್ಳುವಂತೆ ಪತಿ ಮತ್ತು ಅತ್ತೆ ಇಬ್ಬರೂ ಮಾನಸಿಕ ಕಿರುಕುಳ ನೀಡುತ್ತಿದ್ದರೆಂಬ ಆಪಾದನೆಗಳಿಗೆ ಪೂರಕವಾದ ವಾಟ್ಸಾಪ್ ಚಾಟ್‌ಗಳನ್ನು ಕೆಳ ನ್ಯಾಯಾಲಯ ಪರಿಗಣಿಸಿಲ್ಲ ಎಂದು ಹೈಕೋರ್ಟ್ ಆಕ್ಷೇಪಿಸಿತ್ತು.
ವಿಚಾರಣೆ ವೇಳೆ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು, ಆರೋಪಿಯು ಮಾಧ್ಯಮಗಳಲ್ಲಿ ಸಂದರ್ಶನಗಳನ್ನು ನೀಡುವ ಮೂಲಕ ಸಾಕ್ಷ್ಯಗಳ ಮೇಲೆ ಪ್ರಭಾವ ಬೀರಲು ಮತ್ತು ತನಿಖೆಯ ದಿಕ್ಕು ತಪ್ಪಿಸಲು ಯತ್ನಿಸುತ್ತಿದ್ದಾರೆ ಎಂದು ಕೋರ್ಟ್‌ಗೆ ತಿಳಿಸಿದ್ದರು.
ತ್ವಿಶಾ ಶರ್ಮಾ ಸಾವು ಪ್ರಕರಣದ ಹಿನ್ನೆಲೆ
33 ವರ್ಷದ ಮಾಜಿ ‘ಮಿಸ್ ಪುಣೆ’ ಮತ್ತು ಎಂಬಿಎ ಪದವೀಧರೆಯಾಗಿದ್ದ ತ್ವಿಶಾ ಶರ್ಮಾ (ಮೂಲತಃ ನೋಯ್ಡಾ ಉದ್ಯಮಿಗಳ ಮಗಳು), ಡಿಸೆಂಬರ್ 2025 ರಲ್ಲಿ ವಕೀಲ ಸಮರ್ಥ್ ಸಿಂಗ್ ಅವರನ್ನು ವಿವಾಹವಾಗಿದ್ದರು. ಮದುವೆಯಾದ ಕೇವಲ ಐದೇ ತಿಂಗಳಲ್ಲಿ, ಅಂದರೆ 2026ರ ಮೇ 12 ರಂದು ಭೋಪಾಲ್‌ನ ಕಟಾರಾ ಹಿಲ್ಸ್‌ನಲ್ಲಿರುವ ಪತಿಯ ಮನೆಯಲ್ಲಿ ತ್ವಿಶಾ ಶವವಾಗಿ ಪತ್ತೆಯಾಗಿದ್ದರು.
ಇದನ್ನೂ ಓದಿ: ಕೋರ್ಟ್ ಮುಂದೆ ಶರಣಾದ ತ್ವಿಶಾ ಶರ್ಮಾ ಗಂಡನ ಕಾನೂನು ಲೈಸೆನ್ಸ್ ರದ್ದು
ವರದಕ್ಷಿಣೆ ಕಿರುಕುಳದ ಆರೋಪ: ಮದುವೆಯ ಸಮಯದಲ್ಲಿ ತಮ್ಮ ಶಕ್ತಿಗೆ ಮೀರಿ ವರದಕ್ಷಿಣೆ ಮತ್ತು ಉಡುಗೊರೆಗಳನ್ನು ನೀಡಿದ್ದರೂ, ಅತ್ತೆ ಗಿರಿಬಾಲಾ ಸಿಂಗ್ ಹೆಚ್ಚುವರಿಯಾಗಿ 2 ಲಕ್ಷ ರೂ ನಗದು ಬೇಡಿಕೆ ಇಟ್ಟು ಪಡೆದಿದ್ದರು ಎಂದು ತ್ವಿಶಾ ಕುಟುಂಬಸ್ಥರು ದೂರು ನೀಡಿದ್ದಾರೆ. ಮದುವೆಯಾದ ನಂತರವೂ ಪತಿ ಮತ್ತು ಅತ್ತೆ ನಿರಂತರವಾಗಿ ವರದಕ್ಷಿಣೆಗಾಗಿ ದೈಹಿಕ ಹಾಗೂ ಮಾನಸಿಕ ಕಿರುಕುಳ ನೀಡುತ್ತಿದ್ದರು ಮತ್ತು ವೈಯಕ್ತಿಕ ಖರ್ಚಿಗೂ ಹಣ ನೀಡದೆ ಸತಾಯಿಸುತ್ತಿದ್ದರು ಎಂದು ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ.
ಸ್ಥಳೀಯ ಪೊಲೀಸರ ತನಿಖೆಯಲ್ಲಿ ಲೋಪದೋಷಗಳು ಕಂಡುಬಂದ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ಮತ್ತು ಮಧ್ಯಪ್ರದೇಶ ಹೈಕೋರ್ಟ್ ನಿರ್ದೇಶನದಂತೆ ಈ ಹೈಪ್ರೊಫೈಲ್ ಪ್ರಕರಣದ ತನಿಖೆಯನ್ನು ಸಿಬಿಐ ಇತ್ತೀಚೆಗಷ್ಟೇ ವಹಿಸಿಕೊಂಡಿದೆ.
ಪ್ರಕರಣದ ಮೊದಲ ಆರೋಪಿಯಾದ ಪತಿ ಸಮರ್ಥ್ ಸಿಂಗ್ 10 ದಿನಗಳ ಕಾಲ ತಲೆಮರೆಸಿಕೊಂಡಿದ್ದು, ನಂತರ ಮೇ 22 ರಂದು ಜಬಲ್ಪುರದಲ್ಲಿ ಬಂಧನಕ್ಕೊಳಗಾಗಿದ್ದರು. ಪ್ರಸ್ತುತ ಪತಿ ಸಮರ್ಥ್ ಸಿಂಗ್ ಕೋರ್ಟ್ ಆದೇಶದ ಮೇರೆಗೆ ಸಿಬಿಐ ಕಸ್ಟಡಿಯಲ್ಲಿದ್ದಾರೆ. ಈಗ ಎರಡನೇ ಆರೋಪಿಯಾದ ಅತ್ತೆ ಗಿರಿಬಾಲಾ ಸಿಂಗ್ ಅವರನ್ನೂ ಸಿಬಿಐ ಕಸ್ಟಡಿಗೆ ಪಡೆದು ವಿಚಾರಣೆ ನಡೆಸುತ್ತಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ





