ಯೂಟ್ಯೂಬ್ ವಿಡಿಯೋ ನೋಡಿಕೊಂಡು ಗರ್ಭಿಣಿಗೆ ಆಪರೇಷನ್ ಮಾಡಿದ ವೈದ್ಯರು; ಹೆರಿಗೆ ವೇಳೆ ತಾಯಿ ಸಾವು!
ಹೆರಿಗೆ ನೋವಿನಿಂದ ನರಳುತ್ತಿದ್ದ ಮಹಿಳೆಗೆ ಬಿಹಾರದ ವೈದ್ಯರೊಬ್ಬರು ಯೂಟ್ಯೂಬ್ ವಿಡಿಯೋ ನೋಡಿಕೊಂಡು ಗರ್ಭಿಣಿ ಆಪರೇಷನ್ ಮಾಡಿದ್ದಾರೆ. ಈ ಆಪರೇಷನ್ ಬಳಿಕ ಮಗುವನ್ನು ಹೊರತೆಗೆಯಲಾಗಿದ್ದು, ಹೆರಿಗೆಯಾಗುತ್ತಿದ್ದಂತೆ ತಾಯಿ ಪ್ರಾಣ ಬಿಟ್ಟಿದ್ದಾರೆ. ಭಾಗಲ್ಪುರ ಜಿಲ್ಲೆಯ ಕಹಲ್ಗಾಂವ್ ಬ್ಲಾಕ್‌ನ ಎಚ್ಚಾರಿ ಪಂಚಾಯತ್‌ನ ಶ್ರೀಮತ್ ಸ್ಥಾನ ಬಳಿ ನಕಲಿ ವೈದ್ಯರ ನಿರ್ಲಕ್ಷ್ಯದಿಂದ ಗರ್ಭಿಣಿ ಪ್ರಾಣ ಕಳೆದುಕೊಂಡಿದ್ದಾರೆ. ಈ ಆಘಾತಕಾರಿ ಘಟನೆ ಇಡೀ ಪ್ರದೇಶವನ್ನು ಬೆಚ್ಚಿಬೀಳಿಸಿದೆ.

ನವದೆಹಲಿ, ಜನವರಿ 9: ಹೊಟ್ಟೆ ನೋವಿನಿಂದ ನರಳುತ್ತಿದ್ದ ಗರ್ಭಿಣಿಗೆ (Pregnant) ನಕಲಿ ವೈದ್ಯರೊಬ್ಬರು ಯೂಟ್ಯೂಬ್ ವಿಡಿಯೋ ನೋಡಿಕೊಂಡು ಆಪರೇಷನ್ ಮಾಡಿದ್ದಾರೆ. ಆ ವೈದ್ಯರ ಹುಚ್ಚಾಟದಿಂದಾಗಿ ಆ ಮಹಿಳೆ ಸಾವನ್ನಪ್ಪಿದ್ದಾರೆ. ಆದರೆ, ಮಗು ಸದ್ಯಕ್ಕೆ ಸುರಕ್ಷಿತವಾಗಿದೆ. ಬಿಹಾರದ ಭಾಗಲ್ಪುರದಲ್ಲಿ ಈ ಅಮಾನವೀಯ ಘಟನೆ ನಡೆದಿದೆ. ನಕಲಿ ವೈದ್ಯ ಯೂಟ್ಯೂಬ್ನಲ್ಲಿ ಪೋಸ್ಟ್ ಮಾಡಲಾಗಿದ್ದ ವಿಡಿಯೋವನ್ನು ನೋಡಿಕೊಂಡು ಹೆರಿಗೆ ನೋವಿನಿಂದ ನರಳುತ್ತಿದ್ದ ಮಹಿಳೆಗೆ ಆಪರೇಷನ್ ಮಾಡಿದ್ದಾರೆ. ಆಪರೇಷನ್ ಸಮಯದಲ್ಲಿ ಮಹಿಳೆ ಸಾವನ್ನಪ್ಪಿದ್ದಾರೆ.
ಈ ವಿಷಯ ತಿಳಿಯುತ್ತಿದ್ದಂತೆ ಮಹಿಳೆಯ ಕುಟುಂಬಸ್ಥರು ಹಾಗೂ ಊರಿನವರು ಆಸ್ಪತ್ರೆಗೆ ಮುತ್ತಿಗೆ ಹಾಕಿ ವೈದ್ಯರ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಪೊಲೀಸರು ಸ್ಥಳಕ್ಕೆ ಆಗಮಿಸಿ ಮಹಿಳೆಯ ಶವವನ್ನು ಸ್ವಾಧೀನಪಡಿಸಿಕೊಂಡು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ.
ಮೃತ ಮಹಿಳೆಯನ್ನು ಸ್ವಾತಿ ದೇವಿ ಎಂದು ಗುರುತಿಸಲಾಗಿದೆ. ಅವರ ಅತ್ತೆ-ಮಾವ ಜಾರ್ಖಂಡ್‌ನ ಠಾಕೂರ್ಗಂಟಿ ಮೋಧಿಯಾದಲ್ಲಿ ವಾಸಿಸುತ್ತಿದ್ದಾರೆ. ಅವರ ಪತಿ ರೋಷನ್ ಸಹಾ ದಿನಗೂಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದಾರೆ. ಗರ್ಭಿಣಿಯಾದ ನಂತರ ಆ ಮಹಿಳೆ ರಸಲ್‌ಪುರದಲ್ಲಿರುವ ತನ್ನ ಹೆತ್ತವರ ಮನೆಯಲ್ಲಿ ವಾಸಿಸುತ್ತಿದ್ದರು. ಅಲ್ಲಿ ಅವರು ಶ್ರೀಮಠ ಸ್ಥಾನದ ಬಳಿಯ ನಕಲಿ ವೈದ್ಯರ ಬಳಿ ಚಿಕಿತ್ಸೆ ಪಡೆಯುತ್ತಿದ್ದರು.
ಇದನ್ನೂ ಓದಿ: Viral: ಬಾತ್ ರೂಮ್‌ನಲ್ಲೇ ಹೆರಿಗೆ; ನವಜಾತ ಶಿಶುವನ್ನು ಬಕೆಟ್‌ನಲ್ಲೇ ತುಂಬಿಸಿಟ್ಟು ಎಸ್ಕೇಪ್ ಆದ ಬಾಣಂತಿ
ಗುರುವಾರ ರಾತ್ರಿ ಸ್ವಾತಿ ದೇವಿಗೆ ಹಠಾತ್ತನೆ ಹೆರಿಗೆ ನೋವು ಕಾಣಿಸಿಕೊಂಡಿತು. ಆಕೆಯ ಕುಟುಂಬವು ತಕ್ಷಣ ಆಕೆಯನ್ನು ಅದೇ ಕ್ಲಿನಿಕ್ಗೆ ಕರೆದೊಯ್ದರು. ಆಕೆಯನ್ನು ಪರೀಕ್ಷಿಸಿದ ನಂತರ ವೈದ್ಯರು ತಮ್ಮ ಸಹಾಯಕರೊಂದಿಗೆ ಆಪರೇಷನ್ ಮಾಡಲು ಸಜ್ಜಾದರು. ಆ ಮಹಿಳೆಯ ಕುಟುಂಬದ ಒಪ್ಪಿಗೆಯನ್ನು ಪಡೆದ ನಂತರ ವೈದ್ಯರು ಹೆರಿಗೆಯ ಕಾರ್ಯವಿಧಾನವನ್ನು ಅರ್ಥ ಮಾಡಿಕೊಳ್ಳಲು ಯೂಟ್ಯೂಬ್ ವೀಡಿಯೊವನ್ನು ವೀಕ್ಷಿಸಿದರು. ಬಳಿಕ ಆ ಮೊಬೈಲನ್ನು ಆಪರೇಷನ್ ಮಾಡುವ ಜಾಗದಲ್ಲಿಟ್ಟುಕೊಂಡೇ ಅಗತ್ಯ ವೈದ್ಯಕೀಯ ಸಹಾಯವಿಲ್ಲದೆಯೇ ಆಪರೇಷನ್ ಪ್ರಾರಂಭಿಸಿದರು.
ಇದನ್ನೂ ಓದಿ: Viral News: ಹಾಸಿಗೆಯಲ್ಲಿ ಮೂತ್ರ ಮಾಡಿದ್ದಕ್ಕೆ ಮಗುವಿನ ಗುಪ್ತಾಂಗವನ್ನೇ ಸುಟ್ಟ ತಾಯಿ!
ಈ ವೇಳೆ ಆ ಮಹಿಳೆಗೆ ತೀವ್ರ ರಕ್ತಸ್ರಾವವಾಗಿ ಆಪರೇಷನ್ ನಡೆಯುತ್ತಿದ್ದ ಜಾಗದಲ್ಲೇ ಸಾವನ್ನಪ್ಪಿದರು. ಆದರೂ ಮಗುವನ್ನು ಆಕೆಯ ಹೊಟ್ಟೆಯಿಂದ ಸುರಕ್ಷಿತವಾಗಿ ಹೊರತೆಗೆಯಲಾಯಿತು. ಆದರೆ, ಆಕೆ ಮೃತಪಟ್ಟ ವಿಷಯವನ್ನು ಮುಚ್ಚಿಟ್ಟ ವೈದ್ಯರು ಆಕೆಯ ಸ್ಥಿತಿ ಚೆನ್ನಾಗಿಲ್ಲ, ಅವರನ್ನು ಬೇರೆ ವೈದ್ಯರ ಬಳಿಗೆ ಕರೆದೊಯ್ಯಬೇಕು ಎಂದು ಹೇಳಿದರು. ಬಳಿಕ ಅವರು ಕ್ಲಿನಿಕ್ ಅನ್ನು ಮುಚ್ಚಿ ಆ ಸ್ಥಳದಿಂದ ಓಡಿಹೋದರು. ಬಳಿಕ ಪೊಲೀಸರು ವಿಷಯ ತಿಳಿದ ಬಳಿಕ ಆ ವೈದ್ಯರನ್ನು ವಶಕ್ಕೆ ಪಡೆದಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
