ಸೈನಿಕನನ್ನು ಕಾರಿನೊಳಗೆ ಕೂಡಿ ಹಾಕಿ ಬೆಂಕಿ ಹಚ್ಚಿದ ದುಷ್ಕರ್ಮಿಗಳು

ಬಿಹಾರದ ಕೈಮೂರ್ ಜಿಲ್ಲೆಯಲ್ಲಿ ಹಣಕಾಸಿನ ವಿವಾದಕ್ಕೆ ಸೈನಿಕ ಶತ್ರುಧನ್ ಯಾದವ್ ಅವರನ್ನು ಕಾರಿನೊಳಗೆ ಕೂಡಿ ಹಾಕಿ ಬೆಂಕಿ ಹಚ್ಚಿ ಕೊಲೆ ಮಾಡಲಾಗಿದೆ. ಈ ಘಟನೆಯಿಂದ ರೊಚ್ಚಿಗೆದ್ದ ನೂರಾರು ಗ್ರಾಮಸ್ಥರು ರಸ್ತೆ ತಡೆದು ಪ್ರತಿಭಟನೆ ನಡೆಸಿದ್ದು, ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಗೆ ಆಗ್ರಹಿಸಿದ್ದಾರೆ. ಈಗಾಗಲೇ ಮೂವರು ಆರೋಪಿಗಳನ್ನು ಬಂಧಿಸಲಾಗಿದ್ದು, ಗ್ರಾಮದಲ್ಲಿ ಬಿಗಿ ಭದ್ರತೆ ಒದಗಿಸಲಾಗಿದೆ.

ಸೈನಿಕನನ್ನು ಕಾರಿನೊಳಗೆ ಕೂಡಿ ಹಾಕಿ ಬೆಂಕಿ ಹಚ್ಚಿದ ದುಷ್ಕರ್ಮಿಗಳು
ಸಾಂದರ್ಭಿಕ ಚಿತ್ರ
Image Credit source: Jay Wankhade x account

Updated on: Sep 18, 2026 | 7:57 AM

ಕೈಮೂರ್, ಸೆಪ್ಟೆಂಬರ್ 18: ಸೈನಿಕರೊಬ್ಬರನ್ನು ಕಾರಿನೊಳಗೆ ಕೂಡಿ ಹಾಕಿ ದುಷ್ಕರ್ಮಿಗಳು ಬೆಂಕಿ ಹಚ್ಚಿರುವ ಘಟನೆ ಬಿಹಾರದಲ್ಲಿ ನಡೆದಿದೆ. ಗಂಭೀರವಾಗಿ ಗಾಯಗೊಂಡಿದ್ದ ಯೋಧ ಶತ್ರುಧನ್ ಯಾದವ್ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಈ ಘಟನೆ 8 ದಿನಗಳ ಹಿಂದೆ ನಡೆದಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಬಿಹಾರದ ಕೈಮೂರ್ ಜಿಲ್ಲೆಯ ರಾಮಗಢ ಪೊಲೀಸ್ ಠಾಣಾ ವ್ಯಾಪ್ತಿಯ ಸಾಹುಕಾ ಗ್ರಾಮದ ಈ ಯೋಧನ ಸಾವಿನಿಂದ ರೊಚ್ಚಿಗೆದ್ದ ನೂರಾರು ಗ್ರಾಮಸ್ಥರು ಗುರುವಾರ ದುರ್ಗಾ ಚೌಕ್‌ನಲ್ಲಿ ಬರೋಬ್ಬರಿ ಐದು ಗಂಟೆಗಳ ಕಾಲ ರಸ್ತೆ ತಡೆ ನಡೆಸಿ, ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ವಿಧಿಸುವಂತೆ ಆಗ್ರಹಿಸಿ ಭಾರೀ ಪ್ರತಿಭಟನೆ ನಡೆಸಿದ್ದಾರೆ.

ಹಣಕಾಸಿನ ವ್ಯವಹಾರ ಬಗೆಹರಿಸಿಕೊಳ್ಳಲು ಶತ್ರುಧನ್ ಯಾದವ್ ಅವರನ್ನು ರಾಮಗಢಕ್ಕೆ ಕರೆಯಿಸಿಕೊಂಡಿದ್ದ ದುಷ್ಕರ್ಮಿಗಳು, ಅವರನ್ನು ಸ್ಕಾರ್ಪಿಯೋ ಕಾರಿನೊಳಗೆ ಕೂಡಿಹಾಕಿ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಪರಾರಿಯಾಗಿದ್ದರು. ಗಂಭೀರವಾಗಿ ಸುಟ್ಟ ಗಾಯಗಳಾಗಿದ್ದ ಯೋಧನನ್ನು ಮೊದಲು ವಾರಣಾಸಿಯ ಟ್ರಾಮಾ ಸೆಂಟರ್‌ಗೆ ದಾಖಲಿಸಲಾಗಿತ್ತು. ಸ್ಥಿತಿ ಚಿಂತಾಜನಕವಾಗಿದ್ದರಿಂದ ಹೆಚ್ಚಿನ ಚಿಕಿತ್ಸೆಗಾಗಿ ಲಕ್ನೋದ ಕಮಾಂಡ್ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತಾದರೂ, ಚಿಕಿತ್ಸೆ ಫಲಿಸದೆ ಅವರು ಕೊನೆಯುಸಿರೆಳೆದಿದ್ದಾರೆ.

ಮತ್ತಷ್ಟು ಓದಿ: ಆಸ್ತಿ ವಿವಾದ: ಗ್ರಾಮ ಪಂಚಾಯ್ತಿ ಕಚೇರಿಯಲ್ಲೇ ತಂದೆ, ಮಗಳ ಬರ್ಬರ ಹತ್ಯೆ

ಯೋಧನ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಆಕ್ರೋಶಗೊಂಡ ಗ್ರಾಮಸ್ಥರು ದುರ್ಗಾ ಚೌಕ್‌ನಲ್ಲಿ ಟೈರ್ ಸುಟ್ಟು ಸಂಚಾರ ಸಂಪೂರ್ಣ ಅಸ್ತವ್ಯಸ್ತಗೊಳಿಸಿದರು. ರಾಮಗಢ ಪೊಲೀಸ್ ಠಾಣೆಗೂ ಮುತ್ತಿಗೆ ಹಾಕಲು ಯತ್ನಿಸಿದಾಗ ಪರಿಸ್ಥಿತಿ ಉದ್ವಿಗ್ನಗೊಂಡಿತು.

ಸ್ಥಳಕ್ಕೆ ದೌಡಾಯಿಸಿದ ಎಸ್ಪಿ ಶಿಖರ್ ಚೌಧರಿ, ಎಸ್‌ಡಿಎಂ ಹಾಗೂ ಡಿಎಸ್‌ಪಿ ಪ್ರತಿಭಟನಾಕಾರರ ಮನವೊಲಿಸಿದರು. ಪ್ರಕರಣದಲ್ಲಿ ಒಟ್ಟು 7 ಜನರನ್ನು ಆರೋಪಿಗಳನ್ನಾಗಿ ಗುರುತಿಸಲಾಗಿದ್ದು, ಈಗಾಗಲೇ ಮೂವರನ್ನು ಬಂಧಿಸಿ ಜೈಲಿಗಟ್ಟಲಾಗಿದೆ; ಉಳಿದ ನಾಲ್ವರಿಗಾಗಿ ಶೋಧ ನಡೆಯುತ್ತಿದೆ ಮತ್ತು ಸ್ಥಳೀಯ ಎಸ್‌ಎಚ್‌ಒ (SHO) ಪಾತ್ರದ ಬಗ್ಗೆಯೂ ತನಿಖೆ ನಡೆಸುವುದಾಗಿ ಭರವಸೆ ನೀಡಿದ ಬಳಿಕ ಪ್ರತಿಭಟನೆ ಹಿಂಪಡೆಯಲಾಯಿತು.

ಈ ಪ್ರಕರಣದಲ್ಲಿ ಈ ಹಿಂದೆ ಕೊಲೆ ಯತ್ನ ಪ್ರಕರಣ ದಾಖಲಿಸಲಾಗಿದ್ದು, ಯೋಧನ ಸಾವಿನ ನಂತರ ಪ್ರಕರಣವನ್ನು ಭಾರತೀಯ ನ್ಯಾಯ ಸಂಹಿತೆಯ (BNS) ಸೆಕ್ಷನ್ 103 (ಕೊಲೆ) ಅಡಿಯಲ್ಲಿ ಮಾರ್ಪಡಿಸಲಾಗಿದೆ. ಯೋಧ ಶತ್ರುಧನ್ ಯಾದವ್ ಅವರ ಪಾರ್ಥಿವ ಶರೀರವನ್ನು ಮರಣೋತ್ತರ ಪರೀಕ್ಷೆಯ ನಂತರ ಅವರ ಸ್ವಗ್ರಾಮ ಸಾಹುಕಾಗೆ ತರಲಾಗುತ್ತಿದ್ದು, ಸೇನಾ ಗೌರವ ಹಾಗೂ ಸಾರ್ವಜನಿಕರ ಅಂತಿಮ ನಮನಗಳೊಂದಿಗೆ ಅಂತ್ಯಕ್ರಿಯೆ ನಡೆಯುವ ಸಾಧ್ಯತೆಯಿದೆ.

ಗ್ರಾಮದಲ್ಲಿ ಮುಂದುವರೆದ ಬಿಗಿ ಭದ್ರತೆ: ಘಟನೆಯಿಂದಾಗಿ ಸ್ಥಳೀಯವಾಗಿ ಎರಡು ಗುಂಪುಗಳ ನಡುವೆ ಅಥವಾ ಆಡಳಿತದ ವಿರುದ್ಧ ಮತ್ತೆ ಸಂಘರ್ಷ ಭುಗಿಲೇಳದಂತೆ ರಾಮಗಢ ಪಟ್ಟಣ ಮತ್ತು ಸಾಹುಕಾ ಗ್ರಾಮದಲ್ಲಿ ಹೆಚ್ಚುವರಿ ಪೊಲೀಸ್ ತುಕಡಿಗಳನ್ನು ನಿಯೋಜಿಸಲಾಗಿದೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Loading...
Unable to load recommendations.
Follow Us