2002 ಗೋಧ್ರಾ ಗಲಭೆ (2002 Gujarat riots)ವೇಳೆ ಬಿಲ್ಕಿಸ್ ಬಾನು ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ(Bilkis Bano gangrape case) ಜೀವಾವಧಿ ಶಿಕ್ಷೆಗೊಳಗಾಗಿದ್ದ ಹನ್ನೊಂದು ಅಪರಾಧಿಗಳನ್ನು ಸೋಮವಾರ ಗೋಧ್ರಾ ಸಬ್ ಜೈಲಿನಿಂದ ಬಿಡುಗಡೆ ಮಾಡಲಾಗಿದೆ. ರಾಜ್ಯ ಸರ್ಕಾರದ ಸಮಿತಿಯು ಶಿಕ್ಷೆಯ ವಿನಾಯತಿಗಾಗಿ ಸಲ್ಲಿಸಿದ ಅರ್ಜಿಯನ್ನು ಅನುಮೋದಿಸಿತು ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ. ಜೈಲಿನಲ್ಲಿ 14 ವರ್ಷಗಳು ಪೂರ್ಣಗೊಂಡಿದೆ. ವಯಸ್ಸು, ಅಪರಾಧದ ಸ್ವರೂಪ, ಜೈಲಿನಲ್ಲಿನ ನಡವಳಿಕೆ ಮತ್ತು ಮುಂತಾದ ಇತರ ಅಂಶಗಳ ಕಾರಣದಿಂದಾಗಿ ಕ್ಷಮಾಪಣೆಗಾಗಿ ಅರ್ಜಿಯನ್ನು ಪರಿಗಣಿಸಲಾಗಿದೆ ಎಂದು ಗುಜರಾತ್ ಹೆಚ್ಚುವರಿ ಪ್ರಧಾನ ಕಾರ್ಯದರ್ಶಿ (ಗೃಹ) ರಾಜ್ ಕುಮಾರ್ ಹೇಳಿರುವುದಾಗಿ ದಿ ಇಂಡಿಯನ್ ಎಕ್ಸ್ಪ್ರೆಸ್ ವರದಿ ಮಾಡಿದೆ. ದಾಹೋದ್ ಜಿಲ್ಲೆಯ ಲಿಮ್ಖೇದಾ ತಾಲ್ಲೂಕಿನಲ್ಲಿ 2002 ಮಾರ್ಚ್ 3ರಂದು ಬಿಲ್ಕಿಸ್ ಬಾನು ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿದ್ದು, 14 ಮಂದಿಯನ್ನು ಜನರ ಗುಂಪೊಂದು ಹೊಡೆದು ಕೊಂದಿತ್ತು. ಸಾವಿಗೀಡಾದವರಲ್ಲಿ ಬಿಲ್ಕಿಸ್ ಅವರ ಮೂರು ವರ್ಷದ ಮಗಳು ಸಲೇಹಾ ಕೂಡಾ ಇದ್ದಾಳೆ. ಈ ಪ್ರಕರಣ ನಡೆದಾಗ ಬಿಲ್ಕಿಸ್ ಗರ್ಭಿಣಿ ಆಗಿದ್ದರು. ತನ್ನ ಮೇಲೆ ನಡೆದ ದೌರ್ಜನ್ಯ ಬಗ್ಗೆ ಬಿಲ್ಕಿಸ್ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗವನ್ನು ಸಮೀಪಿಸಿದಾಗ ಈ ಬಗ್ಗೆ ಸಿಬಿಐ ತನಿಖೆಗೆ ಸುಪ್ರೀಂಕೋರ್ಟ್ ಆದೇಶಿಸಿತ್ತು. ಬಿಲ್ಕಿಸ್ ಅವರಿಗೆ ಆರೋಪಿಯಿಂದ ಜೀವ ಬೆದರಿಕೆ ಬಂದಿದೆ ಎಂಬ ದೂರಿನನ್ವಯ 2004 ಆಗಸ್ಟ್ ತಿಂಗಲ್ಲಿ ಸುಪ್ರೀಂಕೋರ್ಟ್ ಪ್ರಸ್ತುತ ಪ್ರಕರಣವನ್ನು ಗುಜರಾತಿನಿಂದ ಮಹಾರಾಷ್ಟ್ರಕ್ಕೆ ವರ್ಗಾಯಿಸಿತ್ತು. 2008 ಜನವರಿ 21ರಂದು ಸಿಬಿಐ ವಿಶೇಷ ನ್ಯಾಯಾಲಯದ ನ್ಯಾಯಮೂರ್ತಿ ಯುಡಿ ಸಾಲ್ವಿ ಅವರು 13 ಆರೋಪಿಗಳಿಗೆ ಶಿಕ್ಷೆ ವಿಧಿಸಿದ್ದು, ಮುಂಬೈನಲ್ಲಿ ನಡೆದ ಇನ್ ಕ್ಯಾಮೆರಾ ವಿಚಾರಣೆಯಲ್ಲಿ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಆರೋಪದಲ್ಲಿ 11 ಮಂದಿಗೆ ಜೀವಾವಧಿ ಶಿಕ್ಷೆ ವಿಧಿಸಿದ್ದರು. 2017 ಮೇ ತಿಂಗಳಲ್ಲಿ ಬಾಂಬೈ ಹೈಕೋರ್ಟ್ ಈ ನಿರ್ಧಾರವನ್ನು ಎತ್ತಿ ಹಿಡಿದಿತ್ತು.
2019ರಲ್ಲಿ ಸುಪ್ರೀಂಕೋರ್ಟ್ ಬಿಲ್ಕಿಸ್ ಅವರಿಗೆ 50 ಲಕ್ಷ ಪರಿಹಾರ ನೀಡಿತ್ತು. 2002 ರ ಗಲಭೆಗೆ ಸಂಬಂಧಿಸಿದ ಪ್ರಕರಣದಲ್ಲಿ ಇದು ಮೊದಲ ಆದೇಶವಾಗಿತ್ತು. ಆಗಬಾರದ್ದು ಸಂಭವಿಸಿದ್ದು, ರಾಜ್ಯವು ಪರಿಹಾರ ನೀಡಬೇಕು ಎಂಬುದು ಮೇಲ್ನೋಟಕ್ಕೆ ಸ್ಪಷ್ಟವಾಗಿದೆ ಎಂದು ಅಂದಿನ ಭಾರತದ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ಮತ್ತು ನ್ಯಾಯಮೂರ್ತಿಗಳಾದ ದೀಪಕ್ ಗುಪ್ತಾ ಮತ್ತು ಸಂಜೀವ್ ಖನ್ನಾ ಅವರ ಸುಪ್ರೀಂ ಕೋರ್ಟ್ ಪೀಠ ಹೇಳಿತ್ತು.
ಬಿಡುಗಡೆಯಾದ 11 ಅಪರಾಧಿಗಳು
ಜಸ್ವಂತ್ ನೇಯ್, ಗೋವಿಂದ್ ನೇಯ್, ಶೈಲೇಶ್ ಭಟ್, ರಾಧೇ ಶ್ಯಾಮ್ ಶಾ, ಬಿಪಿನ್ ಚಂದ್ರ ಜೋಷಿ, ಕೇಸರ್ ಬಾಯ್ ವಹೋನಿಯ, ಪ್ರದೀಪ್ ಮೋರ್ದಿಯಾ, ಬಕಾಬಾಯಿ ವಹೋನಿಯಾ, ರಾಜುಬಾಯಿ ಸೋನಿ, ಮಿತೇಶ್ ಭಟ್ ಮತ್ತು ರಮೇಶ್ ಚಂದನ.
ಪ್ರಕರಣದ ವಿಚಾರಣೆ
2008ರ ತೀರ್ಪಿನಲ್ಲಿ ಸಿಬಿಐ ನ್ಯಾಯಾಲಯವು ಜಸ್ವಂತ್ ನೇಯ್, ಗೋವಿಂದ್ ನೇಯ್ ಮತ್ತು ನರೇಶ್ ಕುಮಾರ್ ಮೋರ್ಧಿಯಾ (ತೀರಿಕೊಂಡಿದ್ದ) ಬಿಲ್ಕಿಸ್ ಮೇಲೆ ಅತ್ಯಾಚಾರವೆಸಗಿದ್ದಾರೆ ಎಂದು ಶಿಕ್ಷೆ ವಿಧಿಸಿತ್ತು. ಅದೇ ವೇಳೆ ಸಲೇಹಾ ಎಂಬ ಮಗುವನ್ನು ನೆಲಕ್ಕೆ ಬಡಿದು ಕೊಂದಿದ್ದು ಶೈಲೇಶ್ ಭಟ್ ಎಂದಿತ್ತು. ಇನ್ನಿತರ ಆರೋಪಿಗಳಿಗೆ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಶಿಕ್ಷೆ ವಿಧಿಸಿದ್ದು, ಇವರುಕಾನೂನುಬಾಹಿರವಾಗಿ ಸೇರಿದ್ದು ಅಪರಾಧ ಎಂದ ನ್ಯಾಯಾಲಯ ಹೇಳಿತ್ತು.
11 ಅಪರಾಧಿಗಳು ಒಟ್ಟು 14 ವರ್ಷಗಳ ಶಿಕ್ಷೆಯನ್ನು ಅನುಭವಿಸಿದ್ದಾರೆ. ಕಾನೂನಿನ ಪ್ರಕಾರ, ಜೀವಾವಧಿ ಎಂದರೆ ಕನಿಷ್ಠ 14 ವರ್ಷಗಳ ಅವಧಿಯ ನಂತರ ಅಪರಾಧಿ ಕ್ಷಮಾಪಣೆಗಾಗಿ ಅರ್ಜಿ ಸಲ್ಲಿಸಬಹುದು. ನಂತರ ಅರ್ಜಿಯನ್ನು ಪರಿಗಣಿಸುವುದು ಸರ್ಕಾರದ ನಿರ್ಧಾರವಾಗಿದೆ. ಅರ್ಹತೆಯ ಆಧಾರದ ಮೇಲೆ, ಜೈಲು ಸಲಹಾ ಸಮಿತಿ ಮತ್ತು ಜಿಲ್ಲಾ ಕಾನೂನು ಪ್ರಾಧಿಕಾರಗಳ ಶಿಫಾರಸಿನ ನಂತರ ಕೈದಿಗಳಿಗೆ ಕ್ಷಮೆ ನೀಡಲಾಗುತ್ತದೆ ಎಂದು ಹೆಚ್ಚುವರಿ ಮುಖ್ಯ ಕಾರ್ಯದರ್ಶಿ (ಗೃಹ) ರಾಜ್ ಕುಮಾರ್ ಹೇಳಿದ್ದಾರೆ. ಈ ಅಪರಾಧಿಗಳ ಕ್ಷಮಾಪಣೆಗೆ ಪರಿಗಣಿಸಲಾದ ಮಾನದಂಡಗಳಲ್ಲಿ ವಯಸ್ಸು, ಅಪರಾಧದ ಸ್ವರೂಪ, ಜೈಲಿನಲ್ಲಿನ ನಡವಳಿಕೆ ಮೊದಲಾದುದನ್ನು ಗಣನೆಗೆ ತೆಗೆದುಕೊಳ್ಳಲಾಗಿದೆ. ಈ ನಿರ್ದಿಷ್ಟ ಪ್ರಕರಣದಲ್ಲಿ ಅಪರಾಧಿಗಳು ತಮ್ಮ ಜೀವಿತಾವಧಿಯ 14 ವರ್ಷಗಳವರೆಗೆ ಜೈಲಿನಲ್ಲಿದ್ದ ಕಾರಣ ಎಲ್ಲಾ ಅಂಶಗಳನ್ನು ಪರಿಗಣಿಸಿದ ನಂತರ ಕ್ಷಮೆಗೆ ಅರ್ಹರು ಎಂದು ಪರಿಗಣಿಸಲಾಗಿದೆ ಎಂದಿದ್ದಾರೆ ಕುಮಾರ್.
ಕೆಲವು ತಿಂಗಳ ಹಿಂದೆ ರಚಿಸಲಾದ ಸಮಿತಿಯು ಪ್ರಕರಣದಲ್ಲಿ ಎಲ್ಲಾ 11 ಅಪರಾಧಿಗಳ ಕ್ಷಮಾಪಣೆ ಪರವಾಗಿ ಸರ್ವಾನುಮತದ ನಿರ್ಧಾರವನ್ನು ತೆಗೆದುಕೊಂಡಿತು. ಶಿಫಾರಸನ್ನು ರಾಜ್ಯ ಸರ್ಕಾರಕ್ಕೆ ಕಳುಹಿಸಲಾಗಿದ್ದು, ನಿನ್ನೆ ಅವರ ಬಿಡುಗಡೆಗೆ ಆದೇಶ ಬಂದಿದೆ ಎಂದು ಪಂಚಮಹಲ್ ನ ಜಿಲ್ಲಾಧಿಕಾರಿ ಸುಜಲ್ ಮಯಾತ್ರ ಹೇಳಿರುವುದಾಗಿ ಪಿಟಿಐ ವರದಿ ಮಾಡಿದೆ.
2008ರ ತೀರ್ಪಿನಲ್ಲಿ ಸಿಬಿಐ ವಿಶೇಷ ನ್ಯಾಯಾಲಯದ ನ್ಯಾಯಮೂರ್ತಿ ಸಾಲ್ವಿ ಅವರು ಬಿಲ್ಕಿಸ್ ಅವರ ಧೈರ್ಯದ ನಿಲುವು ಈ ಪ್ರಕರಣದ ಟರ್ನಿಂಗ್ ಪಾಯಿಂಟ್ ಎಂದಿದ್ದಾರೆ. ನ್ಯಾಯಾಧೀಶರು ಅಪ್ರಾಪ್ತ ವಯಸ್ಕರ ಸಾಕ್ಷ್ಯವನ್ನು ಮತ್ತು ಪಾದರಕ್ಷೆಗಳಿಲ್ಲದ ಸಂತ್ರಸ್ತರ ದೇಹಗಳ ಫೋಟೊಗಳನ್ನು ಸಹ ಪರಿಗಣಿಸಿದರು. “ಶರೀರಗಳನ್ನು ಪಾದರಕ್ಷೆಗಳಿಲ್ಲದೆ, ಅಪರಾಧದ ಸ್ಥಳದಿಂದ ಸ್ಥಳಾಂತರಿಸಲಾಗಿರುವುದು ಪಿತೂರಿಯನ್ನು ಸೂಚಿಸುತ್ತದೆ ಎಂದು ಅವರು ಹೇಳಿದ್ದಾರೆ.
ವಿಚಾರಣೆ ವೇಳೆ ಬಿಲ್ಕಿಸ್ ಎಲ್ಲ ಆರೋಪಿಗಳನ್ನು ಗುರುತು ಹಿಡಿದಿದ್ದಾರೆ. ಇದರಲ್ಲಿ ಹೆಚ್ಚಿನವರು ನನಗೆ ಗೊತ್ತಿರುವವರೇ. ಇವರು ನಮ್ಮ ಕುಟುಂಬದುಂದ ಹಾಲು ಖರೀದಿಸುತ್ತಿದ್ದು ಎಂದು ಆಕೆ ಹೇಳಿದ್ದಾರೆ.
ಆಕೆಯ ಕುಟುಂಬದ 17 ಸದಸ್ಯರು ಗಲಭೆ ಪೀಡಿತ ಪಟ್ಟಣದಿಂದ ಪಲಾಯನ ಮಾಡಲು ನಡೆದುಕೊಂಡು ಹೋಗುತ್ತಿದ್ದಾಗ ಅಹಮದಾಬಾದ್‌ನಿಂದ 250 ಕಿಮೀ ದೂರದಲ್ಲಿರುವ ರಣಧಿಕ್‌ಪುರದಲ್ಲಿ ಬಿಲ್ಕಿಸ್ ಅವರನ್ನು ಸಾಮೂಹಿಕ ಅತ್ಯಾಚಾರ ಮಾಡಿದ ಮೇಲೆ ಗಂಭೀರ ಹಲ್ಲೆ ನಡೆಸಿ ಸಾಯುವ ಸ್ಥಿತಿಗೆ ನೂಕಲಾಯಿತು ಎಂಬ ಪ್ರಕರಣದ ತನಿಖಾಧಿಕಾರಿಗಳ ವಾದವನ್ನು ಸಿಬಿಐ ನ್ಯಾಯಾಲಯ ಎತ್ತಿಹಿಡಿದಿತ್ತು.
ತನಿಖಾಧಿಕಾರಿಗಳ ಪ್ರಕಾರ, ಜನರ ಗುಂಪೊಂದು ಕತ್ತಿ ಮತ್ತು ದೊಣ್ಣೆಯಿಂದ ದಾಳಿ ನಡೆಸಿತ್ತು. ಇದರಲ್ಲಿ ಬಿಲ್ಕಿಸ್ ಕುಟುಂಬದ 8 ಮಂದಿ ಸಾವಿಗೀಡಾಗಿದ್ದರು. ಇದರಲ್ಲಿ ಅವರ ಮಗಳೂ ಇದ್ದಳು. 6 ಮಂದಿ ನಾಪತ್ತೆಯಾಗಿದದ್ದರು. 2002 ಮಾರ್ಚ್ 4ರಂದು ಬಿಲ್ಕಿಸ್ ಬರೀ ಲಂಗದಲ್ಲಿ ಬಂದಿದ್ದು ಆಕೆಗೆ ರಕ್ತಸ್ರಾವ ಆಗುತ್ತಿದ್ದು. ಆಕೆಯ ಕುಟುಂಬದ ಸದಸ್ಯರ ಹತ್ಯೆ ನಡೆದಿದ್ದು ಆಕೆ ಸಹಾಯಕ್ಕಾಗಿ ಬೇಡಿದ್ದಳು ಎಂದು ನ್ಯಾಯಾಲಯ ಹೇಳಿದೆ.ಬುಡಕಟ್ಟು ಜನಾಂಗದ ಮಹಿಳೆಯೊಬ್ಬರು ಆಕೆಗೆ ಮೈಮುಚ್ಚಲು ಬಟ್ಟೆ ನೀಡಿದ್ದರು. ಅಲ್ಲಿಂದ ಹೋಮ್ ಗಾರ್ಡ್ ಒಬ್ಬರ ಸಹಾಯದಿಂದ ಬಿಲ್ಕಿಸ್ ಲಿಮ್ಖೇದ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.
ಆರೋಪಿಗಳಿಗೆ ರಕ್ಷಣೆ ನೀಡಿದ್ದಕ್ಕಾಗಿ ಪೊಲೀಸ್ ಕಾನ್‌ಸ್ಟೆಬಲ್ ಸೋಮಾಭಾಯಿ ಗೋರಿ ಎಂಬವರಿಗೆ ಮೂರು ವರ್ಷಗಳ ಜೈಲು ಶಿಕ್ಷೆ ವಿಧಿಸಲಾಯಿತು. ಪ್ರಕರಣದಲ್ಲಿ ಶಿಕ್ಷೆಗೊಳಗಾದ ಪೊಲೀಸ್ ಸಿಬ್ಬಂದಿ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ ಎಂದು ಗುಜರಾತ್ ಸರ್ಕಾರ ಸುಪ್ರೀಂ ಕೋರ್ಟ್‌ನಲ್ಲಿ ಹೇಳಿತ್ತು. ನಿವೃತ್ತಿ ಹೊಂದಿದ ಮೂವರು ಸಿಬ್ಬಂದಿಗೆ ಪಿಂಚಣಿ ಕಡಿತ ಮತ್ತು 2007 ರಲ್ಲಿ ಐಪಿಎಸ್‌ಗೆ ಬಡ್ತಿ ಪಡೆದ ಆರ್‌ಎಸ್ ಭಗೋರಾ ಅವರಿಗೆ ಎರಡು ಶ್ರೇಣಿಯಿಂದ ಹಿಂಬಡ್ತಿ ನೀಡಲಾಗಿದೆ. ಆ ಸಮಯದಲ್ಲಿ ಅವರು ನಿವೃತ್ತಿಯಾಗಲಿದ್ದರು. ಭಗೋರಾ ಅವರ ವಿರುದ್ಧ ಸಾಕ್ಷ್ಯಾಧಾರಗಳನ್ನು ನಾಶಪಡಿಸಿದ ಆರೋಪ ಹೊರಿಸಲಾಗಿತ್ತು.
ಮಾರ್ಚ್ 3, 2002ರಂದು, ಭಗೋರಾ ಅವರು ಬಾನುವನ್ನು ಕಾನ್‌ಸ್ಟೆಬಲ್ ಸೋಮಾಭಾಯಿ ಅವರ ಬಳಿಗೆ ಕರೆತಂದಿದ್ದು ಹೇಳಿಕೆಯನ್ನು ದಾಖಲಿಸಿದರು. ಇದರಲ್ಲಿ ಅವರು ಉದ್ದೇಶಪೂರ್ವಕವಾಗಿ ಆರೋಪಿಗಳ ಎಲ್ಲಾ 12 ಹೆಸರುಗಳನ್ನು ತೆಗೆದುಹಾಕಿದರು. ನಂತರ, ಮಾರ್ಚ್ 6 ರಂದು ಜಿಲ್ಲಾಧಿಕಾರಿ ಜಯಂತಿ ರವಿ ಅವರು ಶಿಬಿರಕ್ಕೆ ಭೇಟಿ ನೀಡಿ ಮತ್ತೆ ಅವರ ಹೇಳಿಕೆಯನ್ನು ತೆಗೆದುಕೊಂಡರು. ಅದರಲ್ಲಿ ಎಲ್ಲಾ ಆರೋಪಿಗಳನ್ನು ಹೆಸರಿಸಲಾಗಿದೆ. ಕ್ರಮ ತೆಗೆದುಕೊಳ್ಳುವುದಕ್ಕಾಗಿ ರವಿ ಅವರು ಕಡತವನ್ನು ದಾಹೋದ್ ಎಸ್ಪಿಗೆ ರವಾನಿಸಿದ್ದು ಅವರು ಫೈಲ್ ಅನ್ನು ಮತ್ತೆ ಭಗೋರಾಗೆ ರವಾನಿಸಿದರು. ಪುನರಾವರ್ತಿತ ಜ್ಞಾಪನೆಗಳ ಹೊರತಾಗಿಯೂ, ಭಾಗೋರಾ ಜುಲೈ 2002 ರವರೆಗೆ ಏನನ್ನೂ ಮಾಡಲಿಲ್ಲ ಮತ್ತು ಅಂತಿಮವಾಗಿ ಪರಿಸಮಾಪ್ತಿ ವರದಿಯನ್ನು ಸಲ್ಲಿಸಿದರು. ಘಟನೆ ನಡೆದಿದ್ದು ನಿಜ ಆದರೆ ಆರೋಪಿಗಳನ್ನು ಪತ್ತೆ ಹಚ್ಚಲಾಗಿಲ್ಲ ಎಂದು ಹೇಳಿದರು. ಬಾಂಬೆ ಹೈಕೋರ್ಟ್ ತೀರ್ಪು ಪೊಲೀಸ್ ಅಧಿಕಾರಿಗಳ ಪಾತ್ರವನ್ನು ನಿಷ್ಠುರ ಎಂದು ಬಣ್ಣಿಸಿದೆ ಎಂದು ಬಿಲ್ಕಿಸ್ ಪರ ವಾದ ಮಂಡಿಸಿದ್ದ ಶೋಭಾ ಗುಪ್ತಾ 2019ರಲ್ಲಿ ಇಂಡಿಯನ್ ಎಕ್ಸ್ಪ್ರೆಸ್ಗೆ ಹೇಳಿದ್ದರು.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 2:00 pm, Tue, 16 August 22