ನವದೆಹಲಿ: 5ರಿಂದ 12 ವರ್ಷದೊಳಗಿನ ಮಕ್ಕಳಿಗೆ ಬಯಾಲಾಜಿಕಲ್ ಇ (Biological E) ಸಂಸ್ಥೆಯ ಕಾರ್ಬ್ವ್ಯಾಕ್ಸ್ (Corbevax) ಲಸಿಕೆಯ ತುರ್ತು ಬಳಕೆಗೆ ಅವಕಾಶ ಕೋರಿ ಅರ್ಜಿ ಸಲ್ಲಿಸಲಾಗಿದೆ. 12 ವರ್ಷದೊಳಗಿನ ಮಕ್ಕಳಿಗೆ ಕಾರ್ಬ್ವ್ಯಾಕ್ಸ್ ಕೊರೊನಾ ಲಸಿಕೆಯ ಅನುಮೋದನೆಗಾಗಿ ವಿಷಯ ತಜ್ಞರ ಸಮಿತಿಗೆ ಕಂಪನಿಯಿಂದ ಡೇಟಾವನ್ನು ಸಲ್ಲಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಇತ್ತೀಚೆಗಷ್ಟೆ ವಿಷಯ ತಜ್ಞರ ಸಮಿತಿಯು 12ರಿಂದ 18 ವರ್ಷ ವಯಸ್ಸಿನವರಿಗೆ ಕಾರ್ಬ್ವ್ಯಾಕ್ಸ್ ಕೊರೊನಾ ಲಸಿಕೆಯ ತುರ್ತು ಬಳಕೆಗೆ ಅನುಮತಿ ನೀಡಿತ್ತು.
ವರದಿಗಳ ಪ್ರಕಾರ, ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ (DCGI) ಶೀಘ್ರದಲ್ಲೇ ಕಾರ್ಬ್ವ್ಯಾಕ್ಸ್ ಲಸಿಕೆಗೆ ತುರ್ತು ಬಳಕೆಯ ಅನುಮೋದನೆ ನೀಡುವ ನಿರೀಕ್ಷೆಯಿದೆ. ಕಾರ್ಬ್ವ್ಯಾಕ್ಸ್ ಲಸಿಕೆಯನ್ನು 5ರಿಂದ 12 ವರ್ಷದೊಳಗಿನವರಿಗಾಗಿ ತಯಾರಿಸಲಾಗಿದೆ. ಈ ಲಸಿಕೆಗೆ ತೆರಿಗೆಗಳನ್ನು ಹೊರತುಪಡಿಸಿ 145 ರೂ. ಇರಲಿದೆ. ಇದು ಎರಡು ಡೋಸ್ನ ಕೊವಿಡ್ ಲಸಿಕೆಯಾಗಿದೆ. ಕೇಂದ್ರ ಸರ್ಕಾರವು ಈಗಾಗಲೇ ಸುಮಾರು 5 ಕೋಟಿ ಬಯೋಲಾಜಿಕಲ್ ಇ ಕಂಪನಿಯ ಕಾರ್ಬ್ವ್ಯಾಕ್ಸ್ ಕೊವಿಡ್ ಲಸಿಕೆಗಳನ್ನು ಖರೀದಿಸಿದೆ. ಅವುಗಳನ್ನು ಕೆಲವು ರಾಜ್ಯಗಳಿಗೆ ತಲುಪಿಸಿದೆ ಎಂದು ಮೂಲಗಳು ಎಎನ್‌ಐಗೆ ತಿಳಿಸಿವೆ.
ಭಾರತದ ಪ್ರಮುಖ ಲಸಿಕೆ ತಯಾರಕಾ ಸಂಸ್ಥೆಯಾದ ಬಯಾಲಾಜಿಕಲ್ ಇ ಕಳೆದ ವರ್ಷ ಸೆಪ್ಟೆಂಬರ್ 2021ರಲ್ಲಿ 2ನೇ ಹಂತ ಮತ್ತು 3ನೇ ಹಂತದ ಕ್ಲಿನಿಕಲ್ ಪ್ರಯೋಗಗಳಿಗೆ ಅರ್ಜಿ ಸಲ್ಲಿಸಿತ್ತು. ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 4,575 ಹೊಸ ಕೋವಿಡ್-19 ಪ್ರಕರಣಗಳು ವರದಿಯಾಗಿವೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ತಿಳಿಸಿದೆ.
ಕಳೆದ 24 ಗಂಟೆಗಳಲ್ಲಿ 18.69 ಲಕ್ಷಕ್ಕೂ ಹೆಚ್ಚು ಡೋಸ್ (18,69,103) ಕೊರೊನಾ ಲಸಿಕೆಗಳನ್ನು ನೀಡಲಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಇಂದು ಮಾಹಿತಿ ನೀಡಿದೆ. 12 ವರ್ಷ ಮೇಲ್ಪಟ್ಟ ಮಕ್ಕಳಿಗೆ ಹೈದರಾಬಾದ್ ಮೂಲದ ಫಾರ್ಮಾಸ್ಯುಟಿಕಲ್ ಕಂಪನಿ ಬಯೋಲಾಜಿಕಲ್ ಇ ಸಿದ್ಧಪಡಿಸಿರುವ ಕೊರೊನಾವೈರಸ್ ಲಸಿಕೆ ‘ಕಾರ್ಬ್ವ್ಯಾಕ್ಸ್’ ತುರ್ತು ಬಳಕೆಗೆ ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ (DCGI) ಅನುಮತಿ ನೀಡಿತ್ತು. ಕಾರ್ಬ್ವ್ಯಾಕ್ಸ್ ಭಾರತದ ಮೂರನೇ ಸ್ವದೇಶಿ ಕೋವಿಡ್-19 ಲಸಿಕೆಯಾಗಿದ್ದು, ಎರಡು ಡೋಸ್‌ಗಳಲ್ಲಿ ನೀಡಲಾಗುವುದು. ಇದು ಭಾರತದಲ್ಲಿ 12 ಮತ್ತು ಅದಕ್ಕಿಂತ ಮೇಲ್ಪಟ್ಟ ವಯಸ್ಸಿನ ಮಕ್ಕಳಲ್ಲಿ ಬಳಸಲು ಅನುಮೋದಿಸಲಾದ ಮೂರನೇ ಲಸಿಕೆಯಾಗಿದೆ.
ಕಾರ್ಬ್ವ್ಯಾಕ್ಸ್ ಲಸಿಕೆಯು 12 ರಿಂದ 18 ವಯಸ್ಸಿನವರಿಗೆ DCGI ಯ ವಿಷಯ ತಜ್ಞರ ಸಮಿತಿಯಿಂದ (SEC) ತುರ್ತು ಬಳಕೆಯ ಅಧಿಕಾರವನ್ನು (EUA) ಪಡೆದುಕೊಂಡಿತ್ತು. ಈ ಕಾರ್ಬ್ವ್ಯಾಕ್ಸ್ ಲಸಿಕೆ ಬೇರೆಲ್ಲ ಕೊವಿಡ್ ಲಸಿಕೆಗಳಿಗಿಂತ ಬಹಳ ಕಡಿಮೆ ದರದಲ್ಲಿ ಲಭ್ಯವಾಗುವುದರಿಂದ ಹೆಚ್ಚು ನಿರೀಕ್ಷೆ ಮೂಡಿಸಿದೆ. ಹೈದರಾಬಾದ್ನ ಬಯಾಲಾಜಿಕಲ್ ಇ ಕಂಪನಿಯ ಕಾರ್ಬ್ವ್ಯಾಕ್ಸ್ ಈಗಾಗಲೇ ಭಾರತದಲ್ಲಿ ಲಭ್ಯವಿರುವ ಕೊವ್ಯಾಕ್ಸಿನ್, ಕೋವಿಶೀಲ್ಡ್, ಸ್ಪುಟ್ನಿಕ್-ವಿ ಲಸಿಕೆಗಳಿಗಿಂತಲೂ ಅತ್ಯಂತ ಕಡಿಮೆ ದರದ ಕೊವಿಡ್ ಲಸಿಕೆಯಾಗಿದೆ. ಕಾರ್ಬ್ವ್ಯಾಕ್ಸ್ ಲಸಿಕೆಯ 1 ಡೋಸ್ಗೆ ತೆರಿಗೆಗಳನ್ನು ಹೊರತುಪಡಿಸಿ 145 ರೂ. ತಗುಲುತ್ತದೆ. ಬಯಾಲಾಜಿಕಲ್ ಇ ಕಂಪನಿ ಈಗಾಗಲೇ 250 ಮಿಲಿಯನ್ ಕಾರ್ಬ್ವ್ಯಾಕ್ಸ್ ಲಸಿಕೆಗಳನ್ನು ಉತ್ಪಾದನೆ ಮಾಡಿದೆ. ಕಾರ್ಬ್ವ್ಯಾಕ್ಸ್ ಲಸಿಕೆಯನ್ನು 28 ದಿನಗಳ ಅಂತರದಲ್ಲಿ ಎರಡು ಡೋಸ್‌ಗಳೊಂದಿಗೆ ಇಂಟ್ರಾಮಸ್ಕುಲರ್ ರೂಟ್ ಮೂಲಕ ನೀಡಲಾಗುತ್ತದೆ.
ಇದನ್ನೂ ಓದಿ: ಒಂದು ಡೋಸ್ ಲಸಿಕೆಗೆ ಕೇವಲ 200 ರೂಪಾಯಿ; ಭರವಸೆ ಮೂಡಿಸಿದ ಕಾರ್ಬ್ವ್ಯಾಕ್ಸ್ ಲಸಿಕೆಯತ್ತ ಸರ್ಕಾರದ ಗಮನ
Corbevax: 12ರಿಂದ 18 ವರ್ಷದೊಳಗಿನ ಮಕ್ಕಳಿಗೆ ಕಾರ್ಬ್ವ್ಯಾಕ್ಸ್ ಲಸಿಕೆ ನೀಡಲು ಅನುಮತಿ