ಮಹಾರಾಷ್ಟ್ರ ಮಾಜಿ ಮುಖ್ಯಮಂತ್ರಿ, ಬಿಜೆಪಿ ನಾಯಕ ದೇವೇಂದ್ರ ಫಡ್ನವೀಸ್ ಮುಂಬೈನಲ್ಲಿ ಪೊಲೀಸ್ ವಶಕ್ಕೆ
ಇಂದು ಬಿಜೆಪಿಯ ಧಡಕ್ ಮೋರ್ಚಾ ಆಜಾದ್ ಮೈದಾನದಲ್ಲಿ ಪ್ರತಿಭಟನೆ ನಡೆಸಿದೆ. ಇಲ್ಲಿ ಬಹುಸಂಖ್ಯೆಯಲ್ಲಿ ಬಿಜೆಪಿ ನಾಯಕರು, ಕಾರ್ಯಕರ್ತರು ಸೇರಿದ್ದರು. ಬಳಿಕ ಅಲ್ಲಿಂದ ಮೆಟ್ರೋ ಥಿಯೇಟರ್ವರೆಗೆ ಪ್ರತಿಭಟನಾ ಮೆರವಣಿಗೆ ನಡೆಯಿತು.
ಮಹಾರಾಷ್ಟ್ರ ಮಾಜಿ ಮುಖ್ಯಮಂತ್ರಿ, ಬಿಜೆಪಿ ನಾಯಕ ದೇವೇಂದ್ರ ಫಡ್ನವೀಸ್ರನ್ನು(Devendra fadnavis) ಪೊಲೀಸರು ಬಂಧಿಸಿದ್ದಾರೆ. ಇತ್ತೀಚೆಗೆ ಇ.ಡಿ.ಯಿಂದ ಬಂಧಿತರಾಗಿ, ಸದ್ಯ ನ್ಯಾಯಾಂಗ ಬಂಧನದಲ್ಲಿರುವ ಮಹಾರಾಷ್ಟ್ರ ಅಲ್ಪಸಂಖ್ಯಾತರ ಅಭಿವೃದ್ಧಿ ಸಚಿವ ನವಾಬ್ ಮಲಿಕ್ (Nawab Malik) ರಾಜೀನಾಮೆಗೆ ಆಗ್ರಹಿಸಿ ಇಂದು ಮುಂಬೈನ್ ಆಜಾದ್ ಮೈದಾನದಲ್ಲಿ, ಪ್ರತಿಪಕ್ಷ ನಾಯಕ ಫಡ್ನವೀಸ್ ನೇತೃತ್ವದಲ್ಲಿ ಬಿಜೆಪಿ ಪ್ರತಿಭಟನೆ ನಡೆಸುತ್ತಿತ್ತು. ಈ ಪ್ರತಿಭಟನೆಯಲ್ಲಿ ಸರ್ಕಾರ ಮತ್ತು ನವಾಬ್ ಮಲಿಕ್ ವಿರುದ್ಧ ದೊಡ್ಡ ಧ್ವನಿಯಲ್ಲಿ ಘೋಷಣೆ ಕೂಗಲಾಗುತ್ತಿತ್ತು. ಸ್ಥಳದಲ್ಲಿ ನೂಕುನುಗ್ಗಲು ಉಂಟಾಗಿತ್ತು. ಇದೇ ವೇಳೆ ಪೊಲೀಸರು ಫಡ್ನವೀಸ್ರನ್ನು ವಶಕ್ಕೆ ಪಡೆದು, ಪೊಲೀಸ್ ವಾಹನದಲ್ಲಿ ಕರೆದುಕೊಂಡು ಹೋಗಿದ್ದಾರೆ.
ಭೂಗತ ಪಾತಕಿ ದಾವೂದ್ ಇಬ್ರಾಹಿಂ ಸಹಚರರೊಂದಿಗೆ ಆಸ್ತಿ ವ್ಯವಹಾರ ಮಾಡಿದ್ದಾರೆ ಎಂಬ ಆರೋಪವನ್ನು ಎನ್ಸಿಪಿ ಮುಖಂಡ ನವಾಬ್ ಮಲಿಕ್ ಎದುರಿಸುತ್ತಿದ್ದು, ಅದಕ್ಕೆ ಸಂಬಂಧಪಟ್ಟಂತೆ ಹಲವು ಪುರಾವೆಗಳು ಸಿಕ್ಕ ಹಿನ್ನೆಲೆಯಲ್ಲಿ ಇ.ಡಿ.ಅರೆಸ್ಟ್ ಮಾಡಿದೆ. ಜೈಲು ಸೇರಿರುವ ನವಾಬ್ ಮಲಿಕ್ ರಾಜೀನಾಮೆ ನೀಡಬೇಕು, ಸರ್ಕಾರ ಕೂಡಲೇ ಅವರನ್ನು ಸಚಿವ ಸ್ಥಾನದಿಂದ ಕೆಳಗಿಳಿಸಬೇಕು ಎಂದು ಆಗ್ರಹಿಸಿ ದೇವೇಂದ್ರ ಫಡ್ನವೀಸ್ ಮತ್ತು ಇತರ ಪ್ರಮುಖ ನಾಯಕರ ನೇತೃತ್ವದಲ್ಲಿ ಬಿಜೆಪಿಯ ಸಾವಿರಾರು ಕಾರ್ಯಕರ್ತರು ಆಜಾದ್ ಮೈದಾನದಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಆದರೆ ಯಾರೆಷ್ಟೇ ಹೇಳಿದರೂ ನವಾಬ್ ಮಲಿಕ್ ರಾಜಿನಾಮೆ ನೀಡುವ ಪ್ರಶ್ನೆಯೇ ಇಲ್ಲ ಎಂದು ಎನ್ಸಿಪಿ ಮುಖ್ಯಸ್ಥ ಶರದ್ ಪವಾರ್ ಹೇಳಿದ್ದಾರೆ.
ಇಂದು ಬಿಜೆಪಿಯ ಧಡಕ್ ಮೋರ್ಚಾ ಆಜಾದ್ ಮೈದಾನದಲ್ಲಿ ಪ್ರತಿಭಟನೆ ನಡೆಸಿದೆ. ಇಲ್ಲಿ ಬಹುಸಂಖ್ಯೆಯಲ್ಲಿ ಬಿಜೆಪಿ ನಾಯಕರು, ಕಾರ್ಯಕರ್ತರು ಸೇರಿದ್ದರು. ಬಳಿಕ ಅಲ್ಲಿಂದ ಮೆಟ್ರೋ ಥಿಯೇಟರ್ವರೆಗೆ ಪ್ರತಿಭಟನಾ ಮೆರವಣಿಗೆ ನಡೆಯಿತು. ಇದೆಲ್ಲದಕ್ಕೂ ದೇವೇಂದ್ರ ಫಡ್ನವೀಸ್ ಅವರೇ ನೇತೃತ್ವ ವಹಿಸಿದ್ದರು. ಆದರೆ ಕೆಲವೇ ಹೊತ್ತಲ್ಲಿ ಮುಂಬೈ ಪೊಲೀಸರು ದೇವೇಂದ್ರ ಫಡ್ನವೀಸ್, ಬಿಜೆಪಿ ಮಹಾರಾಷ್ಟ್ರ ಅಧ್ಯಕ್ಷ ಚಂದ್ರಕಾಂತ್ ಪಾಟೀಲ್, ಶಾಸಕ ನಿತೇಶ್ ರಾಣೆ ಇತರರನ್ನು ಬಂಧಿಸಿ, ಕರೆದೊಯ್ದಿದ್ದಾರೆ.
ಕಾನೂನು ಸುವ್ಯವಸ್ಥೆ ಹದಗೆಡಿಸುವುದಿಲ್ಲ: ಇಂದು ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆ ಹಮ್ಮಿಕೊಂಡಿದ್ದರೂ ಕೂಡ ಕಾನೂನು-ಸುವ್ಯವಸ್ಥೆಯನ್ನು ಹದಗೆಡಿಸುವುದಿಲ್ಲ. ಪೊಲೀಸರಿಗೆ ಯಾವುದೇ ಕಾರಣಕ್ಕೂ ಪ್ರತಿರೋಧ ಒಡ್ಡುವುದಿಲ್ಲ ಎಂದು ಬಿಜೆಪಿ ಶಾಸಕ ಪ್ರಸಾದ್ ಲಾಡ್ ತಿಳಿಸಿದ್ದಾರೆ. ರಾಜ್ಯದಲ್ಲಿ 12ನೇ ತರಗತಿ ಪರೀಕ್ಷೆ ನಡೆಯುತ್ತಿದೆ. ಹೀಗಾಗಿ ನಾವು ಅವ್ಯವಸ್ಥೆ ಸೃಷ್ಟಿಸುವುದು ಬೇಡ. ಎಷ್ಟೇ ಜನರು ಪ್ರತಿಭಟನೆಗೆ ಸೇರಿದರೂ ಕಾನೂನು ಸುವ್ಯವಸ್ಥೆ ಹಾಳಾಗಬಾರದು ಎಂದು ದೇವೇಂದ್ರ ಫಡ್ನವೀಸ್ ಹೇಳಿದ್ದಾಗಿ ಪ್ರಸಾದ್ ಲಾಡ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಇದನ್ನೂ ಓದಿ: ಅಕ್ರಮ ಹಣ ವರ್ಗಾವಣೆ ಪ್ರಕರಣ: ಮಹಾರಾಷ್ಟ್ರದ ಸಚಿವ ನವಾಬ್ ಮಲಿಕ್ಗೆ ಮಾರ್ಚ್ 21ರವರೆಗೆ ನ್ಯಾಯಾಂಗ ಬಂಧನ
Published On - 3:20 pm, Wed, 9 March 22