ಅಕ್ರಮ ಹಣ ವರ್ಗಾವಣೆ ಪ್ರಕರಣ: ಮಹಾರಾಷ್ಟ್ರದ ಸಚಿವ ನವಾಬ್ ಮಲಿಕ್ಗೆ ಮಾರ್ಚ್ 21ರವರೆಗೆ ನ್ಯಾಯಾಂಗ ಬಂಧನ
Nawab Malik ಕಳೆದ ವಾರ ಮಲಿಕ್ ತನ್ನ ವಿರುದ್ಧದ ಪ್ರಕರಣವನ್ನು ರದ್ದುಗೊಳಿಸುವಂತೆ ಮತ್ತು ತನ್ನ ಬಂಧನವನ್ನು ಕಾನೂನುಬಾಹಿರ ಎಂದು ಘೋಷಿಸಲು ಇಡಿಗೆ ನಿರ್ದೇಶಿಸುವಂತೆ ಕೋರಿ ಬಾಂಬೆ ಹೈಕೋರ್ಟ್‌ಗೆ ಮನವಿ ಸಲ್ಲಿಸಿದ್ದರು.
ಮುಂಬೈ: ಗ್ಯಾಂಗ್ಸ್ಟರ್ ದಾವೂದ್ ಇಬ್ರಾಹಿಂಗೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಮಹಾರಾಷ್ಟ್ರದ ಸಚಿವ ಮತ್ತು ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷದ (NCP) ನಾಯಕ ನವಾಬ್ ಮಲಿಕ್ (Nawab Malik) ಅವರನ್ನು ಮಾರ್ಚ್ 21 ರವರೆಗೆ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ. ಈ ಹಿಂದೆ ಕೇಂದ್ರ ಏಜೆನ್ಸಿಯೊಂದಿಗೆ ಅವರ ವಿಸ್ತೃತ ಕಸ್ಟಡಿ ಅಂತ್ಯಗೊಂಡ ನಂತರ ಜಾರಿ ನಿರ್ದೇಶನಾಲಯ (ED) ನಿಂದ ಮಲಿಕ್ ಅವರನ್ನು ವಿಶೇಷ ಪಿಎಂಎಲ್ಎ (Prevention of Money Laundering Act) ನ್ಯಾಯಾಲಯದ ಮುಂದೆ ಹಾಜರುಪಡಿಸಲಾಯಿತು. ನ್ಯಾಯಾಲಯದ ವಿಚಾರಣೆ ವೇಳೆ ಮಹಾರಾಷ್ಟ್ರ ಸಚಿವರನ್ನು ನ್ಯಾಯಾಂಗ ಬಂಧನಕ್ಕೆ ಕಳುಹಿಸುವಂತೆ ಇಡಿ ಒತ್ತಾಯಿಸಿತ್ತು. ಕಳೆದ ವಾರ ಮಲಿಕ್ ತನ್ನ ವಿರುದ್ಧದ ಪ್ರಕರಣವನ್ನು ರದ್ದುಗೊಳಿಸುವಂತೆ ಮತ್ತು ತನ್ನ ಬಂಧನವನ್ನು ಕಾನೂನುಬಾಹಿರ ಎಂದು ಘೋಷಿಸಲು ಇಡಿಗೆ ನಿರ್ದೇಶಿಸುವಂತೆ ಕೋರಿ ಬಾಂಬೆ ಹೈಕೋರ್ಟ್‌ಗೆ ಮನವಿ ಸಲ್ಲಿಸಿದ್ದರು. ನಂತರ ನ್ಯಾಯಾಲಯವು ಕೇಂದ್ರ ಏಜೆನ್ಸಿಯಿಂದ ಪ್ರತಿಕ್ರಿಯೆಯನ್ನು ಕೋರಿದ್ದು ಪ್ರಕರಣವನ್ನು ಸೋಮವಾರಕ್ಕೆ ಮುಂದೂಡಿತ್ತು. ಫೆಬ್ರವರಿ 23 ರಂದು ಮಲಿಕ್ ಅವರನ್ನು ಬಂಧಿಸಿದಾಗ, ಅವರನ್ನು ಮಾರ್ಚ್ 3 ರವರೆಗೆ ಇಡಿ ಕಸ್ಟಡಿಗೆ ಕಳುಹಿಸಲಾಯಿತು. ಇದನ್ನು ಕಳೆದ ವಾರ ಮತ್ತೆ ಮಾರ್ಚ್ 7 ರವರೆಗೆ ವಿಸ್ತರಿಸಲಾಯಿತು.
62 ವರ್ಷದ ಸಚಿವರು ಜಮೀನಿನ ನೋಂದಣಿ ಮೌಲ್ಯವನ್ನು ಕಡಿಮೆ ಮಾಡುವ ಸಲುವಾಗಿ ಇಬ್ರಾಹಿಂ ಅವರಿಗೆ ಸೇರಿದ ಹಣದಿಂದ ಖರೀದಿಸಿದ ಆಸ್ತಿಗಳಲ್ಲಿ ನಕಲಿ ಬಾಡಿಗೆದಾರರನ್ನು ಪರಿಚಯಿಸುತ್ತಿದ್ದರು ಎಂದು ಕೇಂದ್ರ ಏಜೆನ್ಸಿ ಆರೋಪಿಸಿದೆ. ಬಂಧನದ ದಿನದಂದು, ಇಡಿ ಅಧಿಕಾರಿಗಳು ತಮ್ಮ ನಿವಾಸಕ್ಕೆ ಪ್ರವೇಶಿಸಿ ಬಲವಂತವಾಗಿ ತಮ್ಮ ಕಚೇರಿಗೆ ಕರೆದೊಯ್ದರು ಎಂದು ಮಲಿಕ್ ಆರೋಪಿಸಿದರು. ವಿಚಾರಣೆ ವೇಳೆ ಸಚಿವರು ಸಹಕರಿಸುತ್ತಿಲ್ಲ ಎಂಬ ವರದಿಯೂ ಬಂದಿತ್ತು.
ಎನ್ ಸಿಪಿ ನಾಯಕ ಆದಾಗ್ಯೂ, ಒತ್ತಡಕ್ಕೆ ಬಗ್ಗುವುದಿಲ್ಲ ಎಂದು ಇಡಿಯ ಆರೋಪಗಳ ವಿರುದ್ಧ ಹೋರಾಡುವ ಬಗ್ಗೆ ಸಾರ್ವಜನಿಕವಾಗಿ ಮಾತನಾಡಿದ್ದಾರೆ. ಫೆಬ್ರುವರಿ 23 ರಂದು ತನಿಖಾ ಏಜೆನ್ಸಿ ಬಂಧಿಸಿದ ನಂತರ ಮಲಿಕ್ ಅವರು “ಹೋರಾಟ ಮಾಡುವೆ, ಗೆಲ್ಲುವೆ ಮತ್ತು ಎಲ್ಲರನ್ನೂ ಬಹಿರಂಗಪಡಿಸುತ್ತೇನೆ” ಎಂದು ಟ್ವೀಟ್ ಮಾಡಿದ್ದರು.
ಮಲಿಕ್ ಬಂಧನದ ನಂತರ ಮಹಾರಾಷ್ಟ್ರದ ರಾಜಕೀಯ ಸನ್ನಿವೇಶವು ಉದ್ವಿಗ್ನವಾಗಿದೆ. ಬಿಜೆಪಿ ನಾಯಕರು ಸಚಿವರನ್ನು ವಜಾಗೊಳಿಸುವಂತೆ ಮಹಾ ವಿಕಾಸ್ ಅಘಾಡಿ (ಎಂವಿಎ) ಸರ್ಕಾರದ ಮೇಲೆ ನಿರಂತರವಾಗಿ ಒತ್ತಡವನ್ನು ಹೆಚ್ಚಿಸುತ್ತಿದ್ದಾರೆ. ಎನ್‌ಸಿಪಿಯು ಪಶ್ಚಿಮ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಮತ್ತು ಶಿವಸೇನೆಯೊಂದಿಗೆ ಮೈತ್ರಿ ಮಾಡಿಕೊಂಡಿದೆ.
ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರು ಮಲಿಕ್ ಅವರನ್ನು ತಮ್ಮ ರಾಜ್ಯ ಕ್ಯಾಬಿನೆಟ್‌ನಿಂದ ತೆಗೆದುಹಾಕುವ ಒತ್ತಾಯವನ್ನು ಕಡೆಗಣಿಸಿದ್ದು ಎಂವಿಎ ಆಡಳಿತ ಮಲಿಕ್ ಗೆ ಬೆಂಬಲವಾಗಿ ನಿಂತಿದೆ. ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರು ತಮ್ಮ ಪಕ್ಷದ ಸದಸ್ಯನನ್ನು ಬಿಜೆಪಿ ಗುರಿಯಾಗಿಸುತ್ತಿದೆ ಮತ್ತು ಅವರು “ಮುಸ್ಲಿಂ” ಎಂಬ ಕಾರಣಕ್ಕೆ ದಾವೂದ್ ಇಬ್ರಾಹಿಂ ಜತೆ ನಂಟು ಕಲ್ಪಿಸುತ್ತಿದೆ ಎಂದು ಹೇಳಿದ್ದಾರೆ.
Published On - 2:52 pm, Mon, 7 March 22