ಟಿಎಂಸಿ ಸೇರ್ಪಡೆಯಾಗುವಾಗ ದೀದಿ ‘ತ್ಯಾಗದ ಪರಾಕಾಷ್ಠೆ’ ನೆನಪಿಸಿಕೊಂಡ ಯಶವಂತ ಸಿನ್ಹಾ

1999ರಲ್ಲಿ ಕಂದಹಾರ್​ಗೆ ಇಂಡಿಯನ್ ಏರ್​ಲೈನ್ಸ್ ವಿಮಾನ ಅಪಹರಣವಾದಾಗ ಆಗ ರೈಲ್ವೆ ಸಚಿವೆ ಆಗಿದ್ದ ಮಮತಾ ಬ್ಯಾನರ್ಜಿ ದೊಡ್ಡ ತ್ಯಾಗಕ್ಕೆ ಸಿದ್ಧರಾಗಿದ್ದರು ಎಂಬುದನ್ನು ಆಗಿನ ಕೇಂದ್ರ ಸಚಿವ ಯಶವಂತ್ ಸಿನ್ಹಾ ಹೇಳಿದ್ದಾರೆ.

ಟಿಎಂಸಿ ಸೇರ್ಪಡೆಯಾಗುವಾಗ ದೀದಿ 'ತ್ಯಾಗದ ಪರಾಕಾಷ್ಠೆ' ನೆನಪಿಸಿಕೊಂಡ ಯಶವಂತ ಸಿನ್ಹಾ
ಮಮತಾ ಬ್ಯಾನರ್ಜಿ
Follow us
Srinivas Mata
|

Updated on:Mar 13, 2021 | 5:39 PM

“1999ರಲ್ಲಿ ಅಫ್ಗಾನಿಸ್ತಾನದ ಕಂದಹಾರ್​ಗೆ ಇಂಡಿಯನ್ ಏರ್​ಲೈನ್ಸ್​ನ ವಿಮಾನವನ್ನು ಭಯೋತ್ಪಾದಕರು ಅಪಹರಣ ಮಾಡಿದಾಗ ಆತಂಕದ ಸ್ಥಿತಿಯಿತ್ತು. ಆಗ ಕೇಂದ್ರ ಸಚಿವೆ ಆಗಿದ್ದ ಮಮತಾ ಬ್ಯಾನರ್ಜಿ ಅವರು, ತಮ್ಮನ್ನು ಒತ್ತೆಯಾಳಾಗಿ ನೀಡಿ, ಪ್ರಯಾಣಿಕರನ್ನು ಬಿಡಿಸಿಕೊಂಡು ಬನ್ನಿ ಎಂದಿದ್ದರು,” ಎಂಬುದಾಗಿ ಬಿಜೆಪಿಯ ಮಾಜಿ ನಾಯಕ- ಕೇಂದ್ರದ ಮಾಜಿ ಸಚಿವ ಯಶವಂತ್ ಸಿನ್ಹಾ ಶನಿವಾರ ಹೇಳಿದ್ದಾರೆ. ಸಂಪುಟ ಸಹೋದ್ಯೋಗಿ ಆಗಿ ಮಮತಾ ಬ್ಯಾನರ್ಜಿ ಅವರೊಂದಿಗೆ ಕಾರ್ಯ ನಿರ್ವಹಿಸಿದ ದಿನಗಳನ್ನು ಅವರು ನೆನಪು ಮಾಡಿಕೊಂಡಿದ್ದಾರೆ.

ಮಮತಾ ರಾಜಕೀಯ ಜೀವನದ ಆರಂಭದಿಂದಲೂ ಹೋರಾಟಗಾರ್ತಿ ಎಂದು ಬಣ್ಣಿಸಿರುವ ಸಿನ್ಹಾ, ಕೋಲ್ಕತ್ತಾದಲ್ಲಿ ಶನಿವಾರ ತೃಣಮೂಲ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ಆದರು. ಅಂದ ಹಾಗೆ 2018ನೇ ಇಸವಿಯಲ್ಲಿ ಯಶವಂತ್ ಸಿನ್ಹಾ ಬಿಜೆಪಿಯನ್ನು ತೊರೆದಿದ್ದು, ಈಗ, ತಮ್ಮ 83ನೇ ವಯಸ್ಸಿನಲ್ಲಿ ಮತ್ತೊಂದು ಪಕ್ಷಕ್ಕೆ ಸೇರ್ಪಡೆ ಆಗಿದ್ದಾರೆ.

ಅಟಲ್ ಬಿಹಾರಿ ವಾಜಪೇಯಿ ಸಂಪುಟದಲ್ಲಿ ಸಹೋದ್ಯೋಗಿಗಳು “ಅಟಲ್ ಬಿಹಾರಿ ವಾಜಪೇಯಿ ಪ್ರಧಾನಮಂತ್ರಿ ಆಗಿದ್ದ ಸಮಯದಲ್ಲಿ ಅವರೊಂದಿಗೆ (ಬ್ಯಾನರ್ಜಿ) ನಾನು ಕಾರ್ಯ ನಿರ್ವಹಿಸಿದ್ದೇನೆ. ಆಕೆಯ ಆರಂಭದ ದಿನದಿಂದಲೂ ಹೋರಾಟಗಾರ್ತಿ ಮತ್ತು ಈಗಲೂ ಹೋರಾಟಗಾರ್ತಿಯೇ,” ಎಂದು ಬಣ್ಣಿಸಿದ್ದಾರೆ.

“ಇವತ್ತು ನಾನು ಹೇಳುವುದಕ್ಕೆ ಬಯಸುತ್ತೇನೆ. ಕಂದಹಾರ್​ಗೆ ಇಂಡಿಯನ್ ಏರ್​ಲೈನ್ಸ್ ವಿಮಾನ ಅಪಹರಣ ಆಗಿತ್ತು. ಸಂಪುಟದಲ್ಲಿ ಚರ್ಚೆ ನಡೆಯುತ್ತಿತ್ತು. ಆಗ ಮಮತಾಜೀ ತಾವು ಒತ್ತೆಯಾಳಾಗಿ ಹೋಗಲು ಸಿದ್ಧ, ಅದರ ಬದಲಿಗೆ ಭಾರತೀಯ ಪ್ರಯಾಣಿಕರನ್ನು ಬಿಡುಗಡೆಗೊಳಿಸಿ ಎಂದು ಷರತ್ತು ಹಾಕುವುದಕ್ಕೆ ಹೇಳಿದ್ದರು. ಆ ತ್ಯಾಗ ಮಾಡುವುದಕ್ಕೆ ಆಕೆ ಸಿದ್ಧರಿದ್ದರು,” ಎಂದು ಸಿನ್ಹಾ ಹೇಳಿದ್ದಾರೆ.

ಯಶವಂತ್ ಸಿನ್ಹಾ ಟಿಎಂಸಿ ಸೇರ್ಪಡೆ ಯಶವಂತ್ ಸಿನ್ಹಾ ಟಿಎಂಸಿ ಸೇರ್ಪಡೆ ಆಗುವ ವೇಳೆಯಲ್ಲಿ ಹಿರಿಯ ನಾಯಕರಾದ ಡೆರೆಕ್ ಓ ಬ್ರಯಾನ್, ಸುದೀಪ್ ಬಂಡೋಪಾಧ್ಯಾಯ್ ಮತ್ತು ಸುಬ್ರತಾ ಮುಖರ್ಜಿ ಅವರು ಕೋಲ್ಕತ್ತಾದಲ್ಲಿ ಇರುವ ಪಕ್ಷದ ಮುಖ್ಯ ಕಚೇರಿಯಲ್ಲಿ ಹಾಜರಿದ್ದರು. ಅದಕ್ಕೂ ಮುನ್ನ ಕಾಳೀಘಾಟ್​ನಲ್ಲಿ ಇರುವ ಮಮತಾ ಬ್ಯಾನರ್ಜಿ ಅವರ ನಿವಾಸಕ್ಕೆ ಯಶವಂತ್ ಸಿನ್ಹಾ ಭೇಟಿ ನೀಡಿದ್ದರು.

ನೇಪಾಳದ ಕಟ್ಮಂಡುವಿನ ತ್ರಿಭುವನ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ 1999ರಲ್ಲಿ ಇಂಡಿಯನ್ ಏರ್​ಲೈನ್ಸ್ ಐಸಿ814 ವಿಮಾನವನ್ನು ಕಂದಹಾರ್​ಗೆ ಅಪಹರಿಸಲಾಗಿತ್ತು. ಆಗ ಭಾರತದ ಪ್ರಧಾನಿ ಆಗಿದ್ದವರು ಅಟಲ್ ಬಿಹಾರಿ ವಾಜಪೇಯಿ. ಅವರ ಸಂಪುಟದಲ್ಲಿ ಮಮತಾ ಬ್ಯಾನರ್ಜಿ ರೈಲ್ವೆ ಸಚಿವೆ ಆಗಿದ್ದರು. ಭಾರತವು ಬಂಧಿಸಿದ್ದ ಕಟ್ಟರ್ ಉಗ್ರಗಾಮಿಗಳನ್ನು ಆ ವೇಳೆ ಬಿಡುಗಡೆ ಮಾಡಿ, ವಿಮಾನದಲ್ಲಿದ್ದ ಪ್ರಯಾಣಿಕರನ್ನು ಒತ್ತೆಯಿಂದ ಬಿಡಿಸಲಾಗಿತ್ತು. ಸರ್ಕಾರದ ಈ ನಿರ್ಧಾರಕ್ಕೆ ಭಾರೀ ಟೀಕೆ ವ್ಯಕ್ತವಾಗಿತ್ತು. ಭಯೋತ್ಪಾದಕರಾದ ಮುಷ್ತಾಕ್ ಅಹ್ಮದ್ ಝರ್ಗರ್, ಅಹ್ಮದ್ ಒಮರ್ ಸಯೀದ್ ಶೇಕ್ ಮತ್ತು ಮಸೂದ್ ಅಜರ್​ನನ್ನು ಬಿಡುಗಡೆ ಮಾಡಿದ ಮೇಲೆ ಆ ಬಿಕ್ಕಟ್ಟು ಅಂತ್ಯ ಕಂಡಿತು.

ಇಲ್ಲಿಯವರೆಗಿನದು ಸುದ್ದಿಯ ಭಾಗವಾಯಿತು. ಆದರೆ ಕಳೆದ ಕೆಲವು ವರ್ಷಗಳಿಂದಲೇ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಟೀಕಾಕಾರರಾಗಿ ಯಶವಂತ ಸಿನ್ಹಾ ಗುರುತಿಸಿಕೊಂಡಿದ್ದಾರೆ. ಇಷ್ಟು ಸಮಯ ವಿಮಾನ ಅಪಹರಣದ ಬಗ್ಗೆ ಮಾತೇ ಆಡದೆ ಸುಮ್ಮನಿದ್ದವರು ಸಿಮ್ಹಾ. 22 ವರ್ಷಗಳ ನಂತರ ನೆನಪಿಸಿಕೊಳ್ಳುತ್ತಿರುವುದು, ಅದೂ ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆ ಹತ್ತಿರ ಇರುವಾಗ ಹಾಗೂ ಟಿಎಂಸಿ ಸೇರ್ಪಡೆ ಆಗುವಾಗ ಸಿನ್ಹಾ ಅವರು ದೀದಿಯ ತ್ಯಾಗ ನೆನಪಿಸಿಕೊಳ್ಳುತ್ತಿರುವುದು ರಾಜಕಾರಣದ ಭಾಗ ಅಷ್ಟೇ ಎಂಬ ಟೀಕೆ ಬರುವಂತೆ ಮಾಡಿದೆ.

ಇದನ್ನೂ ಓದಿ: West Bengal Elections 2021| ಬಿಜೆಪಿ ಜನರ ಧ್ವನಿ ಹತ್ತಿಕ್ಕುತ್ತಿದೆ; ಟಿಎಂಸಿಗೆ ಸೇರ್ಪಡೆಗೊಂಡ ಬಿಜೆಪಿ ಮಾಜಿ ಕೇಂದ್ರ ಸಚಿವ ಯಶ್ವಂತ್ ಸಿನ್ಹಾ ಆರೋಪ

Published On - 5:17 pm, Sat, 13 March 21